ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರದ ಬಗ್ಗೆ ಅಪಪ್ರಚಾರ: ಧರ್ಮೇಂದ್ರ ಪ್ರಧಾನ್‌

Last Updated 10 ಫೆಬ್ರುವರಿ 2021, 12:38 IST
ಅಕ್ಷರ ಗಾತ್ರ

ನವದೆಹಲಿ: ‘ಪೆಟ್ರೋಲ್‌ ಮತ್ತು ಡೀಸೆಲ್‌ ದರ ಅಂತರರಾಷ್ಟ್ರೀಯ ದರ ವ್ಯವಸ್ಥೆ ಆಧರಿಸಿ ನಿರ್ಧಾರವಾಗುತ್ತಿದೆ. ಹೀಗಿರುವಾಗ, ಇಂಧನ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ತಪ್ಪು’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಕಳೆದ 300 ದಿನಗಳ ಅವಧಿಯಲ್ಲಿ, ಸುಮಾರು 60 ಬಾರಿ ಇಂಧನ ದರ ಏರಿಕೆ ಆಗಿದೆ. ಏಳು ಬಾರಿ ಪೆಟ್ರೋಲ್‌ ದರ, 21 ಬಾರಿ ಡೀಸೆಲ್‌ ದರ ಇಳಿಕೆ ಆಗಿದೆ. 250 ದಿನಗಳ ಅವಧಿಯಲ್ಲಿ ಇಂಧನ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಹೀಗಾಗಿ, ಇಂಧನ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಪ್ರಚಾರ ಮಾಡುವುದು ತಪ್ಪು ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕ ಹೆಚ್ಚಿಸಿದ್ದರೆ, ರಾಜ್ಯಗಳು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಹೆಚ್ಚಿಸಿವೆ. ಕೇಂದ್ರ ಸರ್ಕಾರವು ದರದಲ್ಲಿ ಇಳಿಕೆಯನ್ನೂ ಮಾಡಿದೆ ಎಂದಿದ್ದಾರೆ.

‘ನಮ್ಮ ದೇಶದಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ತಮ್ಮ ಪಾಲಿನ ತೆರಿಗೆ ಸಂಗ್ರಹದ ಬಗ್ಗೆ ಜಾಗರೂಕರಾಗಿರುತ್ತವೆ. ಪ್ರತಿಯೊಬ್ಬರೂ ತಮ್ಮದೇ ಆದ ಬದ್ಧತೆ, ಅಭಿವೃದ್ಧಿಯ ಆದ್ಯತೆಗಳು ಇರುತ್ತವೆ. ಅದಕ್ಕಾಗಿ ಈ ಮಾರ್ಗದಿಂದ ಸಂಪನ್ಮೂಲಗಳು ಬೇಕಾಗುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪೆಟ್ರೋಲಿಯಂ ಉತ್ಪನಗಳ ಮೇಲಿನ ತೆರಿಗೆಯಿಂದ ಉತ್ತಮ ವರಮಾನ ಸಂಗ್ರಹವಾಗುತ್ತಿದೆ’ ಎಂದು ಪ್ರಧಾನ್ ಹೇಳಿದ್ದಾರೆ.

2010ರ ಜೂನ್‌ನಲ್ಲಿ ಪೆಟ್ರೋಲ್ ದರವನ್ನು, 2014ರ ಅಕ್ಟೋಬರ್‌ನಲ್ಲಿ ಡೀಸೆಲ್‌ ದರವನ್ನು ಅಂತರರಾಷ್ಟ್ರೀಯ ಮಾರುಕಟ್ಟೆ ಜೊತೆ ಜೋಡಿಸಲಾಯಿತು. ಆ ಬಳಿಕ ಕಚ್ಚಾತೈಲ ದರ ಮತ್ತು ಇತರೆ ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ದರವನ್ನು ನಿಗದಿ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (ಒಎಂಸಿ) ತೀರ್ಮಾನಿಸಿದವು.

ಅಂತರರಾಷ್ಟ್ರೀಯ ದರ ಮತ್ತು ರೂಪಾಯಿ–ಡಾಲರ್‌ ವಿನಿಮಯ ದರಕ್ಕೆ ಅನುಗುಣವಾಗಿ ಕಂಪನಿಗಳು ಕೇವಲ ದರದಲ್ಲಿ ಏರಿಕೆಯನ್ನಷ್ಟೇ ಮಾಡಿಲ್ಲ, ಇಳಿಕೆಯನ್ನೂ ಮಾಡಿವೆ.

‘ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು 2017ರ ಅಕ್ಟೋಬರ್‌ 4ರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರಿಗೆ ₹ 2 ರಷ್ಟು ಇಳಿಕೆ ಮಾಡಿದೆ. ಆ ಬಳಿಕ 2018ರ ಅಕ್ಟೋಬರ್ 5ರಿಂದ ಕೇಂದ್ರವು ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರಿಗೆ ₹ 1.5ರಷ್ಟು ಕಡಿಮೆ ಮಾಡಿತು. ಇಷ್ಟೇ ಅಲ್ಲದೆ, ತೈಲ ಮಾರಾಟ ಕಂಪನಿಗಳು ಸಹ ಪ್ರತಿ ಲೀಟರ್‌ ದರವನ್ನು ₹ 1ರಷ್ಟು ತಗ್ಗಿಸಿವೆ’ ಎಂದು ಅವರು ವಿವರಿಸಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ಅನ್ನು ಪ್ರತಿ ಲೀಟರಿಗೆ ₹ 2.50ರಷ್ಟು ಕಡಿಮೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಮನವಿ ಮಾಡಿತ್ತು. ಅದರಂತೆ 18 ರಾಜ್ಯ ಸರ್ಕಾರಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ವ್ಯಾಟ್‌ ಕಡಿಮೆ ಮಾಡಿವೆ ಎಂದು ಅವರು ಹೇಳಿದ್ದಾರೆ.

ನಿಲ್ಲದ ದರ ಏರಿಕೆ: ಬೆಂಗಳೂರಿನಲ್ಲಿ ಬುಧವಾರ ಪೆಟ್ರೋಲ್‌ ದರ ಒಂದು ಲೀಟರಿಗೆ 31 ಪೈಸೆ ಹೆಚ್ಚಾಗಿ ₹ 90.53ರಂತೆ ಹಾಗೂ ಡೀಸೆಲ್‌ ದರ 27 ಪೈಸೆ ಹೆಚ್ಚಾಗಿ ₹ 82.40 ರಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT