ಶುಕ್ರವಾರ, ಫೆಬ್ರವರಿ 26, 2021
20 °C

ಎಂಎಸ್‌ಎಂಇ ಉದ್ಯಮ ಸಲಹೆ

ಮದನ್‌ ಪದಕಿ Updated:

ಅಕ್ಷರ ಗಾತ್ರ : | |

prajavani

- ಉದಯ್, ಮಂಗಳೂರು

ಪ್ರಶ್ನೆ: ಎರಡನೇ ತಲೆಮಾರಿನ ಉದ್ಯಮಿಯಾದ ನಾನು ಆಹಾರ ಸಂಸ್ಕರಣೆ ಉದ್ಯಮ  ನಡೆಸುತ್ತಿದ್ದೇನೆ. ನನ್ನ ತಂದೆಯವರು ಈ ಉದ್ಯಮವನ್ನು 30 ವರ್ಷಗಳ ಹಿಂದೆ ಸ್ಥಾಪಿಸಿದ್ದರು. ಉದ್ಯಮದ ವಹಿವಾಟನ್ನು ನಾನು ದ್ವಿಗುಣಗೊಳಿಸಿದ್ದು, ಕೊಲ್ಲಿ ರಾಷ್ಟ್ರಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇನೆ. ಆಧುನೀಕರಣದ ಉದ್ದೇಶಕ್ಕಾಗಿ ಯಂತ್ರಗಳನ್ನು ಖರೀದಿಸಲು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ನಾನು ₹ 2 ಕೋಟಿ ಸಾಲ ಪಡೆದಿರುತ್ತೇನೆ. ಲಾಕ್‌ಡೌನ್ ಕಾರಣದಿಂದಾಗಿ ನಾನು ಬ್ಯಾಂಕಿಗೆ ಮಾಸಿಕ ಕಂತನ್ನು ಪಾವತಿಸಲು ಅಸಮರ್ಥನಾಗಿದ್ದೇನೆ. ಬ್ಯಾಂಕ್ ಈಗ ನಮ್ಮ ಕಂಪನಿಯ ಖಾತೆಯನ್ನು ವಸೂಲಾಗದ ಸಾಲ (ಎನ್‌ಪಿಎ) ಎಂದು ವರ್ಗೀಕರಿಸಿದೆ. ಈ ಹಿನ್ನೆಲೆಯಲ್ಲಿ ನಾನು ತೆಗೆದುಕೊಳ್ಳಬೇಕಾದ ಕ್ರಮಗಳೇನು?

ಮಾರ್ಚ್ 1 ರಿಂದ ಮೇ 31 ರ ಅವಧಿಗೆ ನಿಯಮಿತ ಮರುಪಾವತಿ ಹೊಂದಿರುವ ಬ್ಯಾಂಕ್ ಸಾಲ ಖಾತೆಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಸಿಕ ಕಂತುಗಳನ್ನು ಪಾವತಿ ಮಾಡಲು (ಇಎಂಐ) ವಿನಾಯಿತಿ ನೀಡುವ ಮೂಲಕ ಉದ್ದಿಮೆಗಳಿಗೆ ಪರಿಹಾರ ಒದಗಿಸಿದೆ. ಖಾತೆಯೊಂದನ್ನು ‘ಎನ್‌ಪಿಎ’ ಎಂದು ವರ್ಗೀಕರಿಸಲು ಅವಶ್ಯವಿರುವ 90 ದಿನಗಳ ಅವಧಿಯು ಈ ವಿನಾಯಿತಿಯ ಅವಧಿಯನ್ನು ಒಳಗೊಳ್ಳುವುದಿಲ್ಲ.

ಮಾರ್ಚ್ 1, 2020 ರಲ್ಲಿ ಇರುವಂತೆ ನಿಮ್ಮ ಸಾಲ ಖಾತೆಯು ನಿಯಮಿತ ಮರುಪಾವತಿ ಹೊಂದಿದ್ದಲ್ಲಿ, ನಿಮ್ಮ ಸಾಲವನ್ನು ರಿಷೆಡ್ಯೂಲ್ ಮಾಡುವಂತೆ ನಿಮ್ಮ ಬ್ಯಾಂಕನ್ನು ಕೋರಲು ನಿಮಗೆ ಅವಕಾಶವಿದೆ. ಮೇಲಾಗಿ ಬ್ಯಾಂಕುಗಳು ಅಂತಹ ಮಾಹಿತಿಯನ್ನು ಸಾಲ ಮಾಹಿತಿ  ಸಂಗ್ರಹಿಸುವ ಕಂಪನಿಗಳಿಗೆ ನೀಡುವಂತಿಲ್ಲ. ಹೀಗಾಗಿ ನಿಮ್ಮ ಕ್ರೆಡಿಟ್ ರೇಟಿಂಗ್ ಯಾವುದೇ ರೀತಿಯಲ್ಲಿ ಬಾಧಕವಾಗುವುದಿಲ್ಲ.

***

- ಚಿತ್ರಾ, ಬೆಳಗಾವಿ

ಪ್ರಶ್ನೆ: ನಾಲ್ಜು ಉಪಾಧ್ಯಾಯರ ಸಹಯೋಗದೊಂದಿಗೆ ನಾನು ಆನ್‌ಲೈನ್ ಟ್ಯೂಷನ್ ಸೇವೆಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇನೆ. ಇದಕ್ಕಾಗಿ ನಾನು ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್, ಸಾಫ್ಟ್‌ವೇರ್‌  ಖರೀದಿಸಬೇಕಾಗಿದೆ ಮತ್ತು ಅಂತರ್ಜಾಲ ಸಂಪರ್ಕವನ್ನು ಪಡೆದುಕೊಳ್ಳಬೇಕಾಗಿದೆ. ನಾನು ‘ಸಿಜಿಟಿಎಂಎಸ್‌ಇ’ (CREDIT GUARANTEE FUND TRUST FOR MICRO AND SMALL ENTERPRISES) ಎಂದು ವರ್ಗೀಕರಿಸುವ ಸಾಲವನ್ನು ಪಡೆಯಲು ಅರ್ಹಳೆ. ಈ ರೀತಿಯ ಸಾಲ ಪಡೆಯಲು ಮಾನದಂಡಗಳೇನು?

ಹೊಸದಾಗಿ ಸ್ಥಾಪನೆಗೊಳ್ಳುವ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ತಯಾರಿಕಾ ಮತ್ತು ಸೇವಾ ಕ್ಷೇತ್ರದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಮಾತ್ರ ‘ಸಿಜಿಟಿಎಂಎಸ್ಇ’ ಸಾಲ ಪಡೆಯಲು ಅರ್ಹವಾಗಿರುತ್ತವೆ. ಶಿಕ್ಷಣ ಸಂಸ್ಥೆಗಳು, ಕೃಷಿ, ಸ್ವಸಹಾಯ ಗುಂಪುಗಳು, ತರಬೇತಿ ಸಂಸ್ಥೆಗಳನ್ನು ಈ ಯೋಜನೆಯು ಒಳಗೊಳ್ಳುವುದಿಲ್ಲ. ನಿಮ್ಮ ಟ್ಯೂಷನ್ ಸೇವೆಯನ್ನು ಸೇವಾ ಕ್ಷೇತ್ರದ ಉದ್ಯಮವೆಂದು ಪರಿಗಣಿಸಿ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಸಾಲ ಸೌಲಭ್ಯ ನೀಡುವ ಸಾಧ್ಯತೆಗಳನ್ನು ನಿಮ್ಮ ಬ್ಯಾಂಕಿನೊಂದಿಗೆ ಚರ್ಚಿಸಿ. ಈ ಯೋಜನೆಯಡಿ ₹ 10 ಲಕ್ಷದಿಂದ ₹ 1 ಕೋಟಿಯವರೆಗೂ ಸಾಲ ಪಡೆಯಬಹುದಾಗಿದೆ. ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್ ನಿರ್ವಹಿಸುವ ಸ್ಟ್ಯಾಂಡ್‌ ಅಪ್ ಇಂಡಿಯಾ ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ ಈ ಸಾಲಕ್ಕೆ ಖಾತರಿ ಪಡೆಯಬಹುದಾಗಿದೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ನೀಡುವ ₹ 10 ಲಕ್ಷದವರೆಗಿನ ಸಾಲಕ್ಕೆ ಬ್ಯಾಂಕುಗಳು ಯಾವುದೇ ಜಾಮೀನು ಪಡೆಯುವಂತಿಲ್ಲ.

***

- ವಿನಯ್, ಹಂಪೆ

ಪ್ರಶ್ನೆ: ನಾನು ಒಬ್ಬ ಟೂರ್ ಆಪರೇಟರ್ ಆಗಿದ್ದು, ಐವರು ನೌಕರರನ್ನು ಹೊಂದಿದ್ದೇನೆ. ನನ್ನ ವಹಿವಾಟು ಈಗ ಸಂಪೂರ್ಣವಾಗಿ ಕುಸಿದುಹೋಗಿದೆ. ಪ್ರವಾಸೋದ್ಯಮವು ಪುನಃ   ಪ್ರಾರಂಭವಾಗುವುದರ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಈ ವಿಷಮ ಪರಿಸ್ಥಿತಿಯಲ್ಲಿ ನನ್ನ ಕುಟುಂಬವನ್ನು ನಾನು ಹೇಗೆ ನಿಭಾಯಿಸುವುದು.

ಪ್ರವಾಸೋದ್ಯಮವು ಹೆಚ್ಚು ಜನರಿಗೆ ಉದ್ಯೋಗ ನೀಡುತ್ತದೆ ಮತ್ತು ಕೋವಿಡ್‌ನಿಂದಾಗಿ ಈ ಕ್ಷೇತ್ರವು ತೀವ್ರವಾಗಿ ಬಾಧಿತವಾಗಿದೆ. ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಪ್ರವಾಸೋದ್ಯಮವು ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಡುವ ಕ್ಷೇತ್ರಗಳಲ್ಲೊಂದು.

ಹೋಟೆಲ್‌ಗಳು ಮತ್ತು ಇತರೆ ಪ್ರವಾಸಿ ಸೌಕರ್ಯಗಳಿಗೆ ಸಂಬಂಧಿಸಿದಂತೆ ಸುರಕ್ಷತೆ ಕುರಿತು ರಾಜ್ಯಗಳು ಹೊಸ ನೀತಿ  ರೂಪಿಸಿವೆ. ಪ್ರಾರಂಭದಲ್ಲಿ, ರಾಜ್ಯದ ಮತ್ತು ಸುತ್ತ-ಮುತ್ತ ಸ್ಥಳಗಳಿಂದ ಹೆಚ್ಚಿನ ಪ್ರವಾಸಿಗರನ್ನು ನಿರೀಕ್ಷಿಸಲಾಗಿದೆ. ಆದರೆ ಈ ವ್ಯವಸ್ಥೆ ಜಾರಿಯಾಗಲೂ ಸಹ ಸಮಯ ತಗಲುತ್ತದೆ.

ಕೋವಿಡ್ ನಂತರದ ಜಗತ್ತಿಗೆ ಹೊಂದಿಕೆಯಾಗುವ ಬದಲೀ ಉದ್ಯಮದ ಮಾದರಿ ಮತ್ತು ರೂಪುರೇಷೆಗಳನ್ನು ನೀವು ಅಂತರ್ಜಾಲದ ಮೂಲಕ ತಿಳಿದುಕೊಂಡು, ನಿಮ್ಮ ವಹಿವಾಟನ್ನು ಸೂಕ್ತವಾಗಿ ಮಾರ್ಪಾಡು ಮಾಡಬಹುದಾಗಿದೆ. ನೀವು ಬ್ಯಾಂಕ್ ಸಾಲವನ್ನು ಪಡೆದಿದ್ದಲ್ಲಿ, ಮಾರ್ಚ್ 1, 2020 ರಂದು ಬಾಕಿ ಇರುವ ಮೊತ್ತದ ಶೇಕಡಾ 20ರಷ್ಟು ಹಣವನ್ನು ನಿಮ್ಮ ತುರ್ತು ಅವಶ್ಯಕತೆಗಳಿಗಾಗಿ ಪಡೆಯಬಹುದಾಗಿದೆ.

***

‘ಕೋವಿಡ್-19’ ಪಿಡುಗಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳು ‌ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಗ್ಲೋಬಲ್‌ ಅಲಯನ್ಸ್‌ ಫಾರ್‌ ಮಾಸ್‌ ಎಂಟರ್‌ಪ್ರಿನ್ಯೂಅರ್‌ಶಿಪ್‌ (ಜಿಎಎಂಇ) ಸಹ ಸ್ಥಾಪಕ ಮದನ್‌ ಪದಕಿ ಅವರು ಉದ್ಯಮಿಗಳು ಎದುರಿಸುತ್ತಿರುವ ಬಿಕ್ಕಟ್ಟಿಗೆ ಇಲ್ಲಿ ಪರಿಹಾರ ಸೂಚಿಸುತ್ತಾರೆ. ಪ್ರಶ್ನೆ, ಸಲಹೆಗಳಿಗೆ  ಸಹಾಯವಾಣಿ (73977 79520) ಮತ್ತು ಇ–ಮೇಲ್‌ gamesupportnetwork@massentrepreneurship.org ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು