ಸೋಮವಾರ, ಮೇ 23, 2022
21 °C

15 ಸಾವಿರ ಟನ್‌ ಕೆಂಪು ಈರುಳ್ಳಿ ಆಮದು: ಬಿಡ್‌ ಕರೆದ ನಾಫೆಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನವೆಂಬರ್‌ 20ರ ಒಳಗಾಗಿ 15 ಸಾವಿರ ಟನ್‌ ಕೆಂಪು ಈರುಳ್ಳಿ ಪೂರೈಸುವಂತೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು (ನಾಫೆಡ್‌) ಆಮದುದಾರರನ್ನು ಕೇಳಿದೆ.

ಯಾವುದೇ ದೇಶದಿಂದಲಾದರೂ ಕೆ.ಜಿಗೆ ₹ 50ರ ದರದಲ್ಲಿ 40 ರಿಂದ 60 ಎಂಎಂ ಗಾತ್ರದ ಕೆಂಪು ಈರುಳ್ಳಿ ಖರೀದಿಸಿ ನೀಡುವಂತೆ ಆಮದುದಾರರಿಗೆ ಹೇಳಿದೆ. ನವೆಂಬರ್ 4 ಬಿಡ್‌ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ಅದು ತಿಳಿಸಿದೆ.

ದೇಶಿ ಮಾರುಕಟ್ಟೆಯಲ್ಲಿ ಲಭ್ಯತೆ ಹೆಚ್ಚಿಸಲು ಮತ್ತು ಬೆಲೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ನಾಫೆಡ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್‌.ಕೆ. ಸಿಂಗ್‌ ತಿಳಿಸಿದ್ದಾರೆ.

ಪ್ರಮಾಣ, ಗುಣಮಟ್ಟ ಮತ್ತು ಪೂರೈಕೆ ದಿನಾಂಕದ ಆಧಾರದ ಮೇಲೆ ಬಿಡ್‌ ಪರಿಗಣಿಸಲಾಗುವುದು. ಅತಿ ಹೆಚ್ಚಿನ ಜನರು ಬಿಡ್‌ನಲ್ಲಿ ಭಾಗವಹಿಸುವಂತೆ ಮಾಡಲು ಕನಿಷ್ಠ 1 ಸಾವಿರ ಟನ್‌ಗೆ ಬಿಡ್‌ ಸಲ್ಲಿಸಬಹುದಾಗಿದೆ. ಈ ಹಿಂದೆ ಕನಿಷ್ಠ ಬಿಡ್‌ ಪ್ರಮಾಣ 2 ಸಾವಿರ ಟನ್‌ ಇತ್ತು ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಪರವಾಗಿ ‘ನಾಫೆಡ್‌’ ಈರುಳ್ಳಿ ಕಾಪು ದಾಸ್ತಾನು ಮಾಡುತ್ತದೆ. ದಾಸ್ತಾನು ನಿಧಾನವಾಗಿ ಖಾಲಿಯಾಗುತ್ತಿದ್ದು, ಆಮದು ಮಾಡಿಕೊಳ್ಳುವ ಮೂಲಕ ದೇಶಿ ಮಾರುಕಟ್ಟೆಗೆ ಈರುಳ್ಳಿ ಪೂರೈಸಲು ಅದು ಮುಂದಾಗಿದೆ.

ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಅತಿಯಾದ ಮಳೆಯಿಂದಾಗಿ ಮುಂಗಾರು ಬೆಳೆಗೆ ಹಾನಿಯಾಗಿದೆ. ಹೀಗಾಗಿ ಕೆಲವು ಪ್ರದೇಶಗಳಲ್ಲಿ ಈರುಳ್ಳಿ ದರ ಕೆ.ಜಿಗೆ 80 ರಿಂದ 100ರವರೆಗೂ ಗರಿಷ್ಠ ಮಟ್ಟದಲ್ಲಿದೆ. ಪೂರೈಕೆ ಹೆಚ್ಚಿಸುವ ಮೂಲಕ ಬೆಲೆ ತಗ್ಗಿಸಲು ಹೆಚ್ಚುವರಿಯಾಗಿ ದಾಸ್ತಾನು ಮಾಡಿದ್ದ 1 ಲಕ್ಷ ಟನ್‌ ಈರುಳ್ಳಿಯಲ್ಲಿ 37 ಸಾವಿರ ಟನ್‌ ಅನ್ನು ಆಯ್ದ ಮಂಡಿಗಳು ಮತ್ತು ರಿಟೇಲ್‌ ಮಾರುಕಟ್ಟೆಗಳ ಮೂಲಕ ವಿತರಿಸಿದೆ.

ರಫ್ತು ನಿಷೇದ ಹಾಗೂ ವರ್ತಕರಿಗೆ ದಾಸ್ತಾನು ಮಿತಿ ಹೇರಿರುವುದರಿಂದ ಹಬ್ಬದ ಅವಧಿಯಲ್ಲಿ ಈರುಳ್ಳಿ ದರ ಇಳಿಕೆ ಆಗುವ ನಿರೀಕ್ಷೆ ಮಾಡಲಾಗಿದೆ.

ಈರುಳ್ಳಿ ಆಮದು

7 ಸಾವಿರ ಟನ್‌ - ಈಗಾಗಲೇ ಆಮದಾಗಿರುವುದು

25 ಸಾವಿರ ಟನ್‌ - ದೀಪಾವಳಿ ವೇಳೆಗೆ ಆಮದಾಗಲಿರುವ ಪ್ರಮಾಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು