ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ 2024–25ನೇ ಆರ್ಥಿಕ ವರ್ಷ: ಏನೆಲ್ಲ ಬದಲಾವಣೆ?

Published 30 ಮಾರ್ಚ್ 2024, 23:51 IST
Last Updated 30 ಮಾರ್ಚ್ 2024, 23:51 IST
ಅಕ್ಷರ ಗಾತ್ರ

ಏಪ್ರಿಲ್‌ 1ರಿಂದ 2024–25ನೇ ಆರ್ಥಿಕ ವರ್ಷ ಆರಂಭವಾಗಲಿದೆ. ಇದರ ಜೊತೆಯಲ್ಲಿಯೇ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಹಲವು ಬದಲಾವಣೆಗಳು ಜಾರಿಯಾಗಲಿವೆ. ಅವುಗಳ ಮೇಲೊಂದು ಪಕ್ಷಿನೋಟ ಇಲ್ಲಿದೆ.

ಎನ್‌ಪಿಎಸ್‌ಗೆ ಆಧಾರ್ ದೃಢೀಕರಣ

ಎನ್‌ಪಿಎಸ್‌ ಖಾತೆಗೆ ಲಾಗಿನ್‌ ಆಗುವ ನಿಯಮಗಳು ಬದಲಾವಣೆಯಾಗಲಿವೆ. ಬಳಕೆದಾರರು ಲಾಗಿನ್‌ ಆಗಲು ಐ.ಡಿ ಹಾಗೂ ಪಾಸ್‌ವರ್ಡ್‌ ಜೊತೆಗೆ ಆಧಾರ್‌ ಕಾರ್ಡ್‌ ಆಧಾರಿತ ದೃಢೀಕರಣವನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಕಡ್ಡಾಯಗೊಳಿಸಿದೆ.

ಇ–ವಿಮಾ ಪಾಲಿಸಿ

ಏಪ್ರಿಲ್‌ 1ರಿಂದ ವಿಮಾ ಪಾಲಿಸಿಗಳ ಡಿಜಿಟಲೀಕರಣಕ್ಕೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಸೂಚಿಸಿದೆ. ಲೈಫ್‌, ಹೆಲ್ತ್‌ ಹಾಗೂ ಸಾಮಾನ್ಯ ವಿಭಾಗದಲ್ಲಿ ಇ–ಪಾಲಿಸಿ ಸೇವೆ ಕಡ್ಡಾಯವಾಗಲಿದೆ.

ಫಾಸ್ಟ್ಯಾಗ್‌ಗೆ ಕೆವೈಸಿ ಕಡ್ಡಾಯ  

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಮಾರ್ಚ್‌ 31ರೊಳಗೆ ಫಾಸ್ಟ್ಯಾಗ್‌ ಕೆವೈಸಿ ಪೂರ್ಣಗೊಳಿಸಲು ಹೆದ್ದಾರಿ ಬಳಕೆದಾರರಿಗೆ ಗಡುವು ನೀಡಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಏಪ್ರಿಲ್‌ 1ರಿಂದ ಫಾಸ್ಟ್ಯಾಗ್‌ ಖಾತೆ ನಿಷ್ಕ್ರಿಯವಾಗಲಿದೆ. ಖಾತೆಯಲ್ಲಿ ಹಣವಿದ್ದರೂ ಬಳಕೆ ಕಷ್ಟಸಾಧ್ಯ.  

ಎಸ್‌ಬಿಐ ನಿರ್ವಹಣಾ ಶುಲ್ಕ ಏರಿಕೆ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ವಿವಿಧ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕವನ್ನು ₹75 ಹೆಚ್ಚಿಸಿದೆ.

ಕ್ರೆಡಿಟ್‌ ಕಾರ್ಡ್‌ ನಿಯಮ ಬದಲಾವಣೆ

ಎಸ್‌ಬಿಐನ ಕ್ರೆಡಿಟ್‌ ಕಾರ್ಡ್‌ ಮೂಲಕ ಬಾಡಿಗೆ ಪಾವತಿಸಿದರೆ ರಿವಾರ್ಡ್‌ ಪಾಯಿಂಟ್‌ ಸಿಗುವುದಿಲ್ಲ. ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ತ್ರೈಮಾಸಿಕದಲ್ಲಿ ಕನಿಷ್ಠ ₹35 ಸಾವಿರ ಖರ್ಚು ಮಾಡಿದರೆ ಆ ಅವಧಿಯಲ್ಲಿ ವಿಮಾನ ನಿಲ್ದಾಣದ ಲಾಂಜ್‌ಗೆ ಒಮ್ಮೆ ಉಚಿತ ಪ್ರವೇಶ ಸಿಗಲಿದೆ. ಯೆಸ್‌ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ತ್ರೈಮಾಸಿಕದಲ್ಲಿ ಕನಿಷ್ಠ ₹10 ಸಾವಿರ ಖರ್ಚು ಮಾಡಿದರೆ ದೇಶೀಯ ವಿಮಾನ ನಿಲ್ದಾಣದ ಲಾಂಜ್‌ ಪ್ರವೇಶ ಸಿಗಲಿದೆ. 

ಕಾರುಗಳು ತುಟ್ಟಿ

ಟೊಯೊಟ ಕಿರ್ಲೋಸ್ಕರ್ ಮೋಟರ್‌ ಕಾರುಗಳ ಬೆಲೆಯು ಶೇ 0.5ರಿಂದ ಶೇ 2.5ರಷ್ಟು ಹಾಗೂ ಕಿಯಾ ಇಂಡಿಯಾ ಕಂಪನಿಯ ಕಾರುಗಳ ಬೆಲೆಯು ಶೇ 3ರಷ್ಟು ಹೆಚ್ಚಳವಾಗಲಿದೆ.

ವಿಮಾ ನಿಯಮ ಬದಲಾವಣೆ

ಐಆರ್‌ಡಿಎಐ ಸೂಚನೆ ಅನ್ವಯ ಏಪ್ರಿಲ್‌ 1ರಿಂದ ವಿಮಾ ಪಾಲಿಸಿಗಳ ಸರೆಂಡರ್‌ ನಿಯಮಗಳಲ್ಲಿ ಬದಲಾವಣೆಯಾಗಲಿದೆ.

ಮೂರು ವರ್ಷದೊಳಗೆ ಪಾಲಿಸಿಯನ್ನು ಸರೆಂಡರ್‌ ಮಾಡಿದರೆ ಪಾಲಿಸಿದಾರರಿಗೆ ಮುಖಬೆಲೆಗಿಂತ ಕಡಿಮೆ ಮೊತ್ತ ಲಭಿಸುತ್ತದೆ. ನಾಲ್ಕು ಮತ್ತು ಏಳನೇ ವರ್ಷದಲ್ಲಿ ಸರೆಂಡರ್‌ ಮಾಡಿದರೆ ಮೌಲ್ಯವು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT