ಸೋಮವಾರ, ಆಗಸ್ಟ್ 2, 2021
23 °C

ಆಹಾರ ಉತ್ಪಾದನೆಗೆ ಹೊಸ ತಂತ್ರಜ್ಞಾನ

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Deccan Herald

ಆ ಹಾರ ಕೊರತೆ ಇಲ್ಲದ ಸಮಾಜ ನಿರ್ಮಾಣವಾಗಬೇಕೆಂದರೆ, 2050ರ ವೇಳೆಗೆ ಆಹಾರ ಉತ್ಪಾದನೆ ಶೇ 50ರಷ್ಟು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕಾಗಿ ವಿಜ್ಞಾನಿಗಳು, ಆರ್ಥಿಕ ತಜ್ಞರು ಹೊಸ ಬೇಸಾಯ ಪದ್ಧತಿಗಳ ಕಡೆಗೆ ದೃಷ್ಟಿ ಹಾಯಿಸಿದ್ದಾರೆ. ಪೆಟ್ಟಿಗೆ ಬೇಸಾಯ, ಉಪ್ಪು ನೀರಿನ ಬೆಳೆ, ಪೊರೆ ವ್ಯವಸಾಯದಂತಹ ಹಲವು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗುತ್ತಿದ್ದಾರೆ. ಅಂತಹ ಕೆಲವು ಕೃಷಿ ತಂತ್ರಜ್ಞಾನಗಳು ಇಲ್ಲಿವೆ.

ಪಾಲಿಮರ್‌ ಬೇಸಾಯ

ಜಪಾನ್‌ನ ಮೊಬಿಲ್‌ ರಿಸರ್ಚ್‌ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆಯ ಸಂಶೋಧಕರು ಹೈಡ್ರೊಜೆಲ್‌ನಿಂದ ಹೊಸ ಪೊರೆಯೊಂದನ್ನು ತಯಾರಿಸಿದ್ದಾರೆ. ಇದಕ್ಕೆ ಅತಿ ಸೂಕ್ಷ್ಮವಾದ ರಂಧ್ರಗಳು ಇರುತ್ತವೆ. ಹೀಗಾಗಿ ಇದು ನೀರು ಮತ್ತು ಪೋಷಕಾಂಶಗಳನ್ನು ಒಳಕ್ಕೆ ಹೀರಿಕೊಳ್ಳುತ್ತದೆ. ಈ ಪೊರೆಗಳನ್ನು ಟ್ರೇಗಳ ಮೇಲೆ ಹಾಸಿ ಬೀಜಗಳನ್ನು ಬಿತ್ತಿದರೆ, ಗಿಡ ಮೊಳಕೆಯೊಡುತ್ತದೆ. ಈಗಾಗಲೇ ಜಪಾನ್‌ನ 150 ಪ್ರದೇಶಗಳಲ್ಲಿ ಮತ್ತು ಚೀನಾದ ಒಂದು ಪ್ರಾಂತ್ಯದಲ್ಲಿ ಈ ರೀತಿ ಕೃಷಿವಿಧಾನಗಳನ್ನು ಜಾರಿಗೆ ತರಲಾಗಿದೆ.

ವಿಶೇಷವೇನು?

l ಸಾಂಪ್ರದಾಯಿಕ ಬೇಸಾಯ ಪದ್ಧತಿಗಳಿಗೆ ಹೋಲಿಸಿದರೆ ನೀರಿನ ಬಳಕೆ ಪ್ರಮಾಣ ಶೇ 90ರಷ್ಟು ಕಡಿಮೆ.

l ಪೊರೆಯಲ್ಲಿರುವ ಅತಿಸೂಕ್ಷ್ಮ ರಂಧ್ರಗಳು ಬ್ಯಾಕ್ಟೀರಿಯಾ, ವೈರಸ್‌ಗಳ ದಾಳಿ ತಡೆಯುತ್ತವೆ.

l ಹಾನಿಕಾರಕ ಔಷಧಿಗಳು ಗಿಡದ ಒಳಗೆ ಸೇರದಂತೆ ತಡೆಯುತ್ತದೆ.

l ಮಣ್ಣಿನ ಅಗತ್ಯ ಇಲ್ಲದಿರುವುದರಿಂದ, ಮರುಭೂಮಿಯಲ್ಲೂ ಗಿಡ ಬೆಳೆಸಬಹುದು.

ಸಮುದ್ರ ಜಲವೇ ಆಧಾರ

ಸಮುದ್ರದಲ್ಲಿ ನೀರಿಗೆ ಕೊರತೆಯಿಲ್ಲ. ವಾತಾವರಣದಲ್ಲಿ ಸೂರ್ಯರಶ್ಮಿಗೂ ಕೊರತೆಯಿಲ್ಲ. ಆದರೆ, ಸಮುದ್ರದ ನೀರು ನಿರುಪಯುಕ್ತ. ಈ ಸಮಸ್ಯೆಗೆ ಪರಿಹಾರವಾಗಿ ರೂಪುಗೊಂಡಿದ್ದೇ ಸಮುದ್ರ ಜಲ ಗ್ರೀನ್‌ ಹೌಸ್ ಬೇಸಾಯ. ಸಮುದ್ರ ನೀರು ಮತ್ತು ಸೂರ್ಯರಶ್ಮಿಯನ್ನು ಒಟ್ಟಿಗೆ ಬಳಸಿಕೊಂಡು, ಮರುಭೂಮಿ ಮತ್ತು ಮರಳು ಹೆಚ್ಚಾಗಿರುವ ಪ್ರದೇಶಗಳಲ್ಲೂ ಬೇಸಾಯ ಮಾಡುವುದು ಈ ತಂತ್ರಜ್ಞಾನದ ಉದ್ದೇಶವಾಗಿದೆ.

ಹೇಗೆ ಮಾಡುತ್ತಾರೆ?

ಸಮುದ್ರದ ಸನಿಹದಲ್ಲಿರುವ ತೀರ ಪ್ರಾಂತ್ಯಗಳು ಮತ್ತು ಮರಳಿನ ಪ್ರಮಾಣ ಹೆಚ್ಚಾಗಿರುವ ಪ್ರದೇಶಗಳಲ್ಲಿ, ದೊಡ್ಡ ಗೋದಾಮಿನಂತಹ ಗಾಜಿನ ಮನೆಯನ್ನು (ಗ್ರೀನ್‌ ಹೌಸ್‌) ನಿರ್ಮಿಸಲಾಗುತ್ತದೆ. ಅಲ್ಲಿಗೆ ಪಂಪ್‌ಗಳ ಸಹಾಯದಿಂದ ಸಮುದ್ರ ನೀರು ಪೂರೈಕೆ ಮಾಡಲಾಗುತ್ತದೆ. ಒಂದು ಬದಿಯ ಗೋಡೆ ಜೇನುಗೂಡಿನ ತಟ್ಟೆಯಂತೆ ಇರುತ್ತದೆ. ಇದರ ಮೇಲೆ ಸಮುದ್ರದ ನೀರು ಜಾರುವ ಹಾಗೆ ಮಾಡಲಾಗುತ್ತದೆ. ಇದು ಆವಿ ರೂಪದಲ್ಲಿ ಕೋಣೆಯ ಒಳಗೆ ಪ್ರವೇಶಿಸುತ್ತದೆ. ಇದರಿಂದ ಕೋಣೆಯ ಒಳಗೆ ತಂಪಾದ ವಾತಾವರಣ ನಿರ್ಮಾಣವಾಗಿ ಗಿಡಗಳು ಬೆಳೆಯಲು ನೆರವಾಗುತ್ತದೆ. ಅಲ್ಲದೇ ಎಲೆಗಳು ಬೇಗ ಒಣಗದೇ ಗಿಡದ ಫಲವತ್ತತೆ ಹೆಚ್ಚಿಸುತ್ತವೆ.

ಅದೇ ರೀತಿ,  ತಂಪು ಹೆಚ್ಚಾದಂತೆಲ್ಲಾ ಆವಿ ರೂಪದ ನೀರು ಮಂಜಿನ ರೂಪದಲ್ಲಿ ಕೋಣೆಯ ಒಳಗೆ ಸುರಿಯುತ್ತದೆ. ಈ ನೀರನ್ನು ಒಂದೆಡೆ ಸಂಗ್ರಹಿಸಿ ಗಿಡಗಳಿಗೆ ಪೂರೈಕೆ ಮಾಡಲಾಗುತ್ತದೆ. ಈ ನೀರಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಗಿಡಕ್ಕೆ ಬೇಕಾಗುವ ಪೋಷಕಾಂಶಗಳನ್ನು ಬೆರೆಸಲಾಗುತ್ತದೆ. ಇದರಿಂದ ಇಳುವರಿ ಕೂಡ ಹೆಚ್ಚುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ.

ಪೆಟ್ಟಿಗೆಯಲ್ಲಿ ಕೃಷಿ

ದೊಡ್ಡ ಕಂಟೇನರ್ ಇದ್ದರೆ ಸಾಕು, ಮಣ್ಣಿನ ಅಗತ್ಯವಿಲ್ಲ. ಸೂರ್ಯರಶ್ಮಿ ಅಗತ್ಯವಿಲ್ಲ, ಮಳೆ ಸುರಿಯಬೇಕಾದ ಅವಶ್ಯಕತೆಯೂ ಇಲ್ಲ. ಎಂತಹ ಸ್ಥಳದಲ್ಲೂ, ಎಂತಹ ಕಾಲದಲ್ಲೂ ಬೆಳೆ ಬೆಳೆಯಬಹುದು. ಹೈಡ್ರೊಫೋನಿಕ್‌ ತಂತ್ರಜ್ಞಾನದ ಸಹಾಯದಿಂದ ಈ ರೀತಿಯ ಬೆಳೆ ಬೆಳೆಯಲು ಸಾಧ್ಯ. ಅಮೆರಿಕದ ಹಲವು ಪಟ್ಟಣಗಳಲ್ಲಿ ಈ ರೀತಿಯ ಬೇಸಾಯ ಪದ್ಧತಿ ಈಗ ಸದ್ದು ಮಾಡುತ್ತಿದೆ. ಸ್ವ್ಕೇರ್ ರೂಟ್ ಎಂಬ ಸಂಸ್ಥೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ನೀರಿನ ಮೂಲಕವೇ ಗಿಡಗಳಿಗೆ ನೀರುಣಿಸಿ ಬೆಳೆ ತೆಗೆಯುವುದು ಈ ತಂತ್ರಜ್ಞಾನದ ವೈಶಿಷ್ಟ್ಯ.

ವಿಧಾನ ಏನು?

ಸುಮಾರು 320 ಚದರ ಅಡಿ ವಿಸ್ತೀರ್ಣದ ಕಂಟೇರ್‌ನಂತಹ ಪೆಟ್ಟಿಗೆಯಲ್ಲಿ ಉದ್ದುದ್ದ ಅಳವಡಿಸಿರುವ ರ‍್ಯಾಕ್‌ಗಳಲ್ಲಿ ಗಿಡಗಳನ್ನು ನೆಟ್ಟು, ಪೋಷಕಾಂಶಗಳಿಂದ ಕೂಡಿರುವ ನೀರನ್ನು ಹರಿಸಲಾಗುತ್ತದೆ. ಒಂದು ಗಿಡಕ್ಕೆ ನೀರು ಹಾಯಿಸಿದರೆ ಸಾಕು ಎಲ್ಲ ಗಿಡಗಳಿಗೂ ಹರಿಯುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಕೇವಲ 38 ಲೀಟರ್‌ನಿಂದಲೇ ಗಿಡಗಳಿಗೆ ಒಂದು ದಿನ ನೀರುಣಿಸಬಹುದು. 

ಇನ್ನು, ಗಿಡ ಬೆಳೆಯಲು ಸೂರ್ಯರಶ್ಮಿ ಅಗತ್ಯ. ಈ ಕೆಲಸವನ್ನು ಎಲ್‌ಇಡಿ ಲೈಟ್‌ಗಳು ನೋಡಿಕೊಳ್ಳುತ್ತವೆ. ನೀಲಿ ಮತ್ತು ಗುಲಾಬಿ ಬಣ್ಣದ ಎಲ್‌ಇಡಿ ದೀಪಗಳ ಬೆಳಕಿನಿಂದ ಗಿಡಗಳಲ್ಲಿ ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಯುತ್ತದೆ.  ಪೆಟ್ಟಿಗೆ ಒಳಗೆ ಆಮ್ಲಜನಕ, ತೇವಾಂಶ, ಉಷ್ಣಾಂಶಗಳನ್ನು ಆಗಾಗ್ಗೆ ನಿಯಂತ್ರಿಸುತ್ತ, ತರಕಾರಿ ಮತ್ತು ಹಣ್ಣುಗಳ ರುಚಿ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

ಸೆನ್ಸರ್‌ಗಳು ನೀಡುವ ಮಾಹಿತಿ ಆಧರಿಸಿ ಕಂಪ್ಯೂಟರ್‌ಗಳು ವಾತಾವರಣವನ್ನು ನಿಯಂತ್ರಿಸುತ್ತಿರುತ್ತವೆ. ಎಲ್ಲ ಚೆನ್ನಾಗಿದೆ. ಆದರೆ, ಒಂದು ಪೆಟ್ಟಿಗೆಯಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆ ಬೆಳೆಯಲು ಸಾಧ್ಯ ಎಂಬ ಅನುಮಾನ ಬರಬಹುದು. ಎರಡು ಎಕರೆ ಪ್ರದೇಶದಲ್ಲಿ ಬೆಳೆಯಬಹುದಾದ ಬೆಳೆಯನ್ನು ಇಲ್ಲಿ ಬೆಳೆಯಲು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು