ಶನಿವಾರ, ಫೆಬ್ರವರಿ 4, 2023
28 °C

ಒಪಿಎಸ್‌ ಮರುಜಾರಿ ಭವಿಷ್ಯದ ತೆರಿಗೆದಾರರಿಗೆ ಹೊರೆ: ನೀತಿ ಆಯೋಗದ ಉಪಾಧ್ಯಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಿವೃತ್ತ ಸರ್ಕಾರಿ ನೌಕರರಿಗೆ ಕೆಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೇರಿ, ‘ವೆಚ್ಚಗಳಲ್ಲಿ ವಿವೇಕ ಹಾಗೂ ಸುಸ್ಥಿರ ಬೆಳವಣಿಗೆಗೆ ಉತ್ತೇಜನ ನೀಡಬೇಕಿರುವ ಹೊತ್ತಿನಲ್ಲಿ ಈ ಕ್ರಮವು ಭವಿಷ್ಯದ ತೆರಿಗೆದಾರರ ಮೇಲೆ ಹೊರೆ ಹೆಚ್ಚಿಸಲಿದೆ’ ಎಂದು ಹೇಳಿದ್ದಾರೆ.

‘ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಮತ್ತೆ ಜಾರಿಗೆ ಬರುತ್ತಿರುವ ಬಗ್ಗೆ ನಾನು ತುಸು ಚಿಂತಿತನಾಗಿದ್ದೇನೆ. ಏಕೆಂದರೆ, ಈ ಯೋಜನೆಗೆ ಬೇಕಿರುವ ಹಣವನ್ನು ಮುಂದಿನ ತೆರಿಗೆದಾರರು ಪಾವತಿಸಬೇಕಾಗುತ್ತದೆ’ ಎಂದು ಬೇರಿ ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಒಪಿಎಸ್‌ ವ್ಯವಸ್ಥೆಯಲ್ಲಿ ಪಿಂಚಣಿ ಹಣವನ್ನು ಸರ್ಕಾರವೇ ಪಾವತಿಸುತ್ತದೆ. ಇದನ್ನು 2004ರಿಂದ ರದ್ದುಗೊಳಿಸಲಾಗಿದೆ. ರಾಜಸ್ಥಾನ ಮತ್ತು ಚತ್ತೀಸಗಡ ರಾಜ್ಯಗಳು ಒಪಿಎಸ್ ಜಾರಿಗೆ ತೀರ್ಮಾನಿಸಿವೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ, ಮತ್ತೆ ಅಧಿಕಾರಕ್ಕೆ ಬಂದರೆ ಒಪಿಎಸ್ ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಎಎಪಿ ನೇತೃತ್ವದ ಸರ್ಕಾರ ಇರುವ ಪಂಜಾಬ್, ಒಪಿಎಸ್‌ ಮರುಜಾರಿಗೆ ಈಚೆಗೆ ಅನುಮೋದನೆ ನೀಡಿದೆ. ಜಾರ್ಖಂಡ್ ರಾಜ್ಯ ಕೂಡ ಒಪಿಎಸ್ ಜಾರಿಗೆ ಒಪ್ಪಿದೆ.

ಸರ್ಕಾರಿ ಪಿಂಚಣಿಯನ್ನು ತುಸು ಭಿನ್ನವಾಗಿ ಕಾಣಬೇಕು. ಒಪಿಎಸ್‌ಗೆ ಮರಳುವ ಘೋಷಣೆಯು ಈಗ ಅಧಿಕಾರದಲ್ಲಿ ಇರುವ ಪಕ್ಷಕ್ಕೆ ಅನುಕೂಲ ಮಾಡಿಕೊಡಬಹುದು. ಆದರೆ ಅದರ ಆರ್ಥಿಕ ಹೊರೆಯನ್ನು ಹೊರಬೇಕಿರುವುದು ಮುಂದೆ ಅಧಿಕಾರಕ್ಕೆ ಬರುವವರು ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು