ಸೋಮವಾರ, ಜನವರಿ 27, 2020
27 °C

ಸುಧಾರಿಸಲಿದೆ ಬ್ಯಾಂಕ್‌ಗಳ ಸ್ಥಿತಿ: ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ವಿಶ್ವಾಸ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬ್ಯಾಂಕಿಂಗ್‌ ಉದ್ಯಮದ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವು ಹಣಕಾಸು ವರ್ಷದ ಅಂತ್ಯಕ್ಕೆ ಸುಧಾರಿಸಲಿದೆ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಅಧ್ಯಕ್ಷ ರಜನೀಶ್‌ ಕುಮಾರ್‌ ತಿಳಿಸಿದ್ದಾರೆ.

‘2020ರ ಮಾರ್ಚ್‌ 31ರ ವೇಳೆಗೆ ಬಹುತೇಕ ಎಲ್ಲಾ ಬ್ಯಾಂಕ್‌ಗಳ ಸ್ಥಿತಿಯೂ ಸುಧಾರಿಸಲಿದೆ’ ಎಂದು ಹೇಳಿದ್ದಾರೆ.

‘ಮೂಲಸೌಕರ್ಯ ಮತ್ತು ಗ್ರಾಹಕರ ಸಾಲ ನೀಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಹೇಳಿಕೊಳ್ಳುವಂತಹ ಮಟ್ಟದಲ್ಲಿ ಗ್ರಾಹಕ ಬೇಡಿಕೆ ಕುಸಿತ ಕಂಡಿಲ್ಲ’ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) 92ನೇ ವಾರ್ಷಿಕ ಸಮಾವೇಶದಲ್ಲಿ ಅವರು ಹೇಳಿದ್ದಾರೆ.

ವ್ಯವಸ್ಥೆಯಲ್ಲಿ ಬಂಡವಾಳದ ಕೊರತೆ ಇಲ್ಲ ಎಂದಿರುವ ಅವರು, ‘ಕಾರ್ಪೊರೇಟ್‌ ವಲಯವು ಸಾಕಷ್ಟು ಪ್ರಮಾಣದಲ್ಲಿ ಸಾಲ ಪಡೆಯುತ್ತಿಲ್ಲ. ತಮ್ಮ ಸಾಮರ್ಥ್ಯವನ್ನೂ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ದೂರಸಂಪರ್ಕ ವಲಯಕ್ಕೆ ಸಾಲ ನೀಡುವುದು ಸುರಕ್ಷಿತವಲ್ಲ. ಸರ್ಕಾರವೇ ಸ್ಪೆಕ್ಟ್ರಂ ಹರಾಜು ಹಾಕುವುದರಿಂದ ಸುರಕ್ಷಿತ ಎಂದು ಪತ್ರದಲ್ಲಿ ಇರಲಿದೆ. ಆದರೆ, ವಾಸ್ತವದಲ್ಲಿ ಸಂಪೂರ್ಣವಾಗಿ ಅಸುರಕ್ಷಿತವಾಗಿದೆ. ಹೀಗಾಗಿ ಸಾಲ ನೀಡುವುದಕ್ಕೂ ಮುನ್ನ ಮರುಪಾವತಿ ಆಗುವುದೇ ಎನ್ನುವುದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಬಡ್ಡಿದರ ಕಡಿತ: ರೆಪೊ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಕುರಿತು ಮಾತನಾಡಿದ ಅವರು, ‘ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಇಳಿಕೆ ಮಾಡದೇ ಸಾಲದ ಬಡ್ಡಿದರಗಳಲ್ಲಿ ಇಳಿಕೆ ಮಾಡಲು ಆಗುವುದಿಲ್ಲ. ಆದರೆ, ಒಂದು ನಿರ್ದಿಷ್ಟ ಮಿತಿಯಾಚೆಗೆ ಠೇವಣಿಗಳ ಮೇಲಿನ  ಬಡ್ಡಿದರಗಳಲ್ಲಿ ಕಡಿಮೆ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.

ಉಳಿತಾಯ ಖಾತೆಗಳಲ್ಲಿನ ಠೇವಣಿಗೆ ಸದ್ಯ ಶೇ 3 ರಿಂದ ಶೇ 4 ರವರೆಗೆ ಬಡ್ಡಿದರ ಇದೆ. ಸಾಲಗಳ ಮೇಲಿನ ಬಡ್ಡಿದರವು ಶೇ 8 ಮತ್ತು ಅದಕ್ಕಿಂತಲೂ ಅಧಿಕ ಪ್ರಮಾಣದಲ್ಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು