ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಪಿಂಚಣಿ ನಿಧಿ ಐಪಿಒಗಳಲ್ಲಿ ಹೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಪಿಂಚಣಿ ನಿಧಿ ನಿರ್ವಹಣೆ ಮಾಡುವವರಿಗೆ (‍ಪಿಎಫ್‌ಎಂ) ಪಿಂಚಣಿ ಹಣವನ್ನು ಬೇರೆ ಬೇರೆ ಕಂಪನಿಗಳ ಷೇರುಗಳಲ್ಲಿ ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ) ಮೂಲಕವೂ ತೊಡಗಿಸಲು ಅವಕಾಶ ಸಿಗಲಿದೆ. ಅಲ್ಲದೆ, ಈಗ ಅವಕಾಶ ಇರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಕಂಪನಿಗಳ ಷೇರುಗಳಲ್ಲಿ ಹಣವನ್ನು ತೊಡಗಿಸಲು ಸಾಧ್ಯವಾಗಲಿದೆ.

ಪಿಂಚಣಿ ನಿಧಿಗಳಲ್ಲಿ ಹಣ ತೊಡಗಿಸುವವರ ಸಂಖ್ಯೆಯನ್ನು ಒಂದು ಕೋಟಿಯಷ್ಟು ಹೆಚ್ಚಿಸಬೇಕು ಎಂಬ ಗುರಿಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಹೊಂದಿದೆ. ಹಾಲಿ ಆರ್ಥಿಕ ವರ್ಷದ ಅಂತ್ಯದೊಳಗೆ ಈ ಗುರಿ ತಲುಪಬೇಕು ಎಂಬುದು ಅದರ ಉದ್ದೇಶ. ‘ಸಾಂಕ್ರಾಮಿಕದ ಅವಧಿಯಲ್ಲಿ ಪಿಂಚಣಿ ಬಗ್ಗೆ ಜನರ ಆಸಕ್ತಿ ಹೆಚ್ಚಾಗಿದೆ’ ಎಂದು ಪಿಎಫ್‌ಆರ್‌ಡಿಎ ಅಧ್ಯಕ್ಷ ಸುಪ್ರತಿಮ್ ವಂದ್ಯೋಪಾಧ್ಯಾಯ ವರದಿಗಾರರಿಗೆ ತಿಳಿಸಿದರು.

ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದಾದ ಮೊತ್ತವನ್ನು ವಿನಿಯೋಗಿಸುವ ವಿಚಾರದಲ್ಲಿ ಪಿಎಫ್‌ಎಂಗಳಿಗೆ ಈಗ ಕೆಲವು ನಿರ್ಬಂಧಗಳು ಇವೆ. ಅವರು ₹ 5 ಸಾವಿರ ಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಗಳ, ಆಪ್ಷನ್ಸ್ ಆ್ಯಂಡ್‌ ಫ್ಯೂಚರ್ಸ್‌ ವಿಭಾಗದಲ್ಲಿ ವಹಿವಾಟು ನಡೆಸುವ ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡಬಹುದು.

ಇದರಿಂದಾಗಿ ನಿಧಿ ನಿರ್ವಹಣೆ ಮಾಡುವವರಿಗೆ ಹೆಚ್ಚಿನ ಕಡೆಗಳಲ್ಲಿ ಹೂಡಿಕೆ ಮಾಡಲು ಆಗುತ್ತಿಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಆರಂಭವಾದಾಗಿನಿಂದ ನಿಧಿ ನಿರ್ವಹಣೆ ಮಾಡುವವರು ಈಕ್ವಿಟಿ ಹೂಡಿಕೆಗಳ ಮೇಲೆ ವಾರ್ಷಿಕ ಸರಾಸರಿ ಶೇ 11.31ರಷ್ಟು (ಸಿಎಜಿಆರ್) ಲಾಭ ತಂದುಕೊಟ್ಟಿದ್ದಾರೆ. ‘ನಿರ್ಬಂಧಗಳ ಕಾರಣದಿಂದಾಗಿ ಅವೆನ್ಯು ಸೂಪರ್‌ಮಾರ್ಕೆಟ್‌ನಂತಹ ಕಂಪನಿಗಳಲ್ಲಿ ಹೂಡಿಕೆ ಮಾಡಲು ನಿಧಿ ನಿರ್ವಾಹಕರಿಗೆ ಸಾಧ್ಯವಾಗಲಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ನಾವು ನಿರ್ಬಂಧಗಳು ಕಡಿಮೆ ಇರುವ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಿದ್ದೇವೆ’ ಎಂದು ವಂದ್ಯೋಪಾಧ್ಯಾಯ ತಿಳಿಸಿದರು. ಹೊಸ ನಿಯಮಗಳ ಅನ್ವಯ ನಿಧಿ ನಿರ್ವಾಹಕರು ಪಿಂಚಣಿ ನಿಧಿಯಲ್ಲಿನ ಹಣವನ್ನು ಐಪಿಒಗಳಲ್ಲಿ ಕೂಡ ಹೂಡಿಕೆ ಮಾಡಬಹುದು. ರಾಷ್ಟ್ರೀಯ ಷೇರುಪೇಟೆ ಹಾಗೂ ಮುಂಬೈ ಷೇರುಪೇಟೆಯ ಮುಂಚೂಣಿ 200 ಕಂಪನಿಗಳ ಷೇರುಗಳಲ್ಲಿ ಕೂಡ ತೊಡಗಿಸಬಹುದು.

‘ಈಕ್ವಿಟಿಯಿಂದ ಸಿಗುವ ಲಾಭದ ಪ್ರಮಾಣ ಹೆಚ್ಚಿರುವ ಕಾರಣ ಅಲ್ಲಿ ಹೂಡಿಕೆ ಜಾಸ್ತಿ ಆಗಬೇಕು’ ಎಂದು ವಂದ್ಯೋಪಾಧ್ಯಾಯ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು