ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ: ವಹಿವಾಟಿಗೆ ಹೊರೆ

Last Updated 9 ಫೆಬ್ರುವರಿ 2021, 18:43 IST
ಅಕ್ಷರ ಗಾತ್ರ

ಬೆಂಗಳೂರು: ಪೆಟ್ರೋಲ್ ಬೆಲೆಯು ಬೆಂಗಳೂರಿನಲ್ಲಿ ಮಂಗಳವಾರ ₹ 90ರ ಗಡಿ ದಾಟಿದೆ. ಲೀಟರ್‌ ಪೆಟ್ರೋಲ್ ಗರಿಷ್ಠ ₹ 90.22ಕ್ಕೆ ಮಾರಾಟವಾಗಿದೆ. ಡೀಸೆಲ್‌ ಬೆಲೆಯಲ್ಲಿ ಕೂಡ ಹೆಚ್ಚಳ ಆಗಿದ್ದು, ₹ 82.13ಕ್ಕೆ ತಲುಪಿದೆ. ಇಂಧನ ಬೆಲೆಯಲ್ಲಿ ಆಗಿರುವ ಹೆಚ್ಚಳವು ಹಣದುಬ್ಬರ ಹೆಚ್ಚಾಗುವ ಸಾಧ್ಯತೆಯನ್ನು ಹುಟ್ಟುಹಾಕಿದೆ.

ತೈಲ ಬೆಲೆ ಏರಿಕೆಯು ಉದ್ಯಮಗಳ ಮೇಲೆ ಹಣಕಾಸಿನ ಒತ್ತಡವನ್ನು ಸೃಷ್ಟಿಸಿದೆ. ರಾಜಕೀಯ ಪಕ್ಷಗಳಿಂದ ಪ್ರತಿಭಟನೆಗೆ ಕೂಡ ಕಾರಣವಾಗಿದೆ.

ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ₹ 15ರಷ್ಟು ಹೆಚ್ಚಳ ಆಗಿದೆ. ಇದೇ ಅವಧಿಯಲ್ಲಿ ಡೀಸೆಲ್ ಬೆಲೆಯು ಸರಿಸುಮಾರು ₹ 14ರಷ್ಟು ಹೆಚ್ಚಳ ಕಂಡಿದೆ. ‘ಬೆಲೆ ಹೆಚ್ಚಳದ ಕಾರಣ ದಿಂದಾಗಿ ಗ್ರಾಹಕರು ತಮ್ಮ ವಾಹನಗ ಳಿಗೆ ಇಂಧನ ತುಂಬಿಸಿಕೊಳ್ಳುವ ಪ್ರಮಾಣ ತಗ್ಗಿದೆ. ಬೆಂಗಳೂರಿನಲ್ಲಿ ಎರಡು ತಿಂಗಳ ಹಿಂದೆ ಆಗುತ್ತಿದ್ದ ವಹಿವಾಟಿಗೆ ಹೋಲಿಸಿದರೆ ಪೆಟ್ರೋಲ್ ಮಾರಾಟ ದಲ್ಲಿ ಶೇಕಡ 30ರಷ್ಟು ಇಳಿಕೆ ಕಂಡು ಬಂದಿದೆ’ ಎಂದು ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಿತಕರ ಮಟ್ಟದಲ್ಲಿ ಇದ್ದಾಗ ಮಾತ್ರ ಬಂಕ್‌ಗಳಲ್ಲಿ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಆದರೆ, ಈಗ ಬೆಲೆಯು ಏರುಗತಿಯಲ್ಲಿ ಸಾಗಿ ರುವ ಕಾರಣ, ಬಳಕೆಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದರು.

‘ಉದ್ಯಮ ನಡೆಸುವುದು ಕಷ್ಟ’: ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿ, ಸಿದ್ಧ ಉತ್ಪನ್ನಗಳಿಗೆ ಬೇಡಿಕೆ ಇಳಿಮುಖ ವಾಗಿರುವುದರಿಂದ ಉದ್ಯಮ ವಲಯ ವು ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ, ಸಾಗಣೆ ವೆಚ್ಚದಲ್ಲಿಯೂ ಹೆಚ್ಚಳ ಆಗಲಿದ್ದು, ಉದ್ಯಮದ ಮೇಲೆ ಇನ್ನಷ್ಟು ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ವಾಣಿಜ್ಯೋದ್ಯಮಿಗಳು ಹೇಳಿದ್ದಾರೆ.

‘ಸರ್ಕಾರಗಳು ತಮ್ಮ ಬೊಕ್ಕಸ ಭರ್ತಿ ಮಾಡಿಕೊಳ್ಳುವುದರತ್ತ ಗಮನ ನೀಡು ತ್ತಿವೆ. ಕಚ್ಚಾ ತೈಲ ದರ ಬ್ಯಾರಲ್‌ಗೆ 120 ಡಾಲರ್‌ ಇದ್ದಾಗ ಪೆಟ್ರೋಲ್‌ ಒಂದು ಲೀಟರ್‌ಗೆ ₹ 48ಕ್ಕೆ ಸಿಗುತ್ತಿತ್ತು. ಈಗ ಕಚ್ಚಾ ತೈಲ ದರ ಬ್ಯಾರಲ್‌ಗೆ 60 ಡಾಲರ್‌ ಇದೆ, ಪೆಟ್ರೋಲ್‌ ದರ ₹ 90ನ್ನು ದಾಟಿದೆ’ ಎಂದುಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಪೆರಿಕಲ್‌ ಎಂ. ಸುಂದರ್‌ ಹೇಳಿದರು.

‘ತಯಾರಿಕಾ ವೆಚ್ಚದಲ್ಲಿ ಆಗುವ ಏರಿಕೆಯನ್ನು ಈಗಿನ ಸಂದರ್ಭದಲ್ಲಿ ಪೂರ್ತಿಯಾಗಿ ಗ್ರಾಹಕರಿಗೆ ವರ್ಗಾಯಿಸುವುದು ಕಷ್ಟ. ಕೈಗಾರಿಕೆಗಳ ಹಿತವನ್ನೂ ಗಮನದಲ್ಲಿಟ್ಟುಕೊಂಡು ಸುಂಕ ತಗ್ಗಿಸುವ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಗಮನ ಹರಿಸಬೇಕು’ ಎಂದು ಅವರು ಆಗ್ರಹಿಸಿದರು.

ಎಂಎಸ್‌ಎಂಇ ವಲಯದ ಉದ್ದಿಮೆಗಳು ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಈಗಾಗಲೇ ತೊಂದರೆಗೆ ಒಳಗಾಗಿವೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯು ಇವುಗಳನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಿದೆ. ಇಂಧನ ದರ ಹೆಚ್ಚಾಗುತ್ತಿರುವುದರಿಂದ ಸರಕು ಸಾಗಣೆ ವೆಚ್ಚ ಈಗಾಗಲೇ ಏರಿಕೆ ಆಗಿದ್ದು, ಮುಂದೆ ಇನ್ನಷ್ಟು ಜಾಸ್ತಿ ಆಗಲಿದೆ. ಹೀಗಾದರೆ ಉದ್ಯಮ ನಡೆಸುವುದು ಕಷ್ಟವಾಗಲಿದೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ. ಅರಸಪ್ಪ ಆತಂಕ ವ್ಯಕ್ತಪಡಿಸಿದರು.

ಸಾರಿಗೆ ಸಂಸ್ಥೆಗಳಿಗೆ ಹೊರೆ

ಬೆಂಗಳೂರು: ನಷ್ಟದಲ್ಲಿ ಮುಳುಗಿರುವ ಸಾರಿಗೆ ಸಂಸ್ಥೆಗಳ ಮೇಲೆ ಡೀಸೆಲ್‌ ದರ ಹೆಚ್ಚಳದ ಬರೆ ಬೀಳಲಿದೆ. ಸಾರಿಗೆ ಸಂಸ್ಥೆಗಳು ತೈಲ ಕಂಪನಿಗಳಿಂದ ಸಗಟು ಡೀಸೆಲ್‌ ಖರೀದಿಸುತ್ತವೆ. 15 ದಿನಗಳಿಗೊಮ್ಮೆ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಫೆ.1ರಿಂದ ಲೀಟರ್‌ಗೆ ₹ 75 ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಮುಂದಿನ ದರದಲ್ಲಿ ಆಗುವ ವ್ಯತ್ಯಾಸ ಎಷ್ಟು ಎಂಬುದು ಫೆ.15ರ ನಂತರ ಗೊತ್ತಾಗಲಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ದಿನಕ್ಕೆ 480 ಕಿಲೋ ಲೀಟರ್, ಬಿಎಂಟಿಸಿ ಬಸ್‌ಗಳಿಗೆ 250 ಕಿಲೋ ಲೀಟರ್ ಡೀಸೆಲ್ ಬಳಕೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೋವಿಡ್‌ ನಂತರ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದ ಸ್ಥಿತಿಗೆ ಸಾರಿಗೆ ಸಂಸ್ಥೆಗಳು ಬಂದಿವೆ. ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್‌ಗೆ ಮಾರಾಟ ತೆರಿಗೆ ವಿನಾಯಿತಿ ಕೋರಿ ರಾಜ್ಯ ಸರ್ಕಾರಕ್ಕೆ ಕೆಎಸ್‌ಆರ್‌ಟಿಸಿ ಮೂಲಕ ಸಾರಿಗೆ ಸಂಸ್ಥೆಗಳು ಈ ಹಿಂದೆಯೇ ಮನವಿ ಸಲ್ಲಿಸಿದ್ದವು. ಈಗ ಮತ್ತೆ ದರ ಏರಿಕೆಯಾದರೆ ಕಷ್ಟ ಹೆಚ್ಚಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.


ಮತ್ತಷ್ಟು ಸಂಕಷ್ಟಕ್ಕೆ ಲಾರಿ ಮಾಲೀಕರು

ಕೋವಿಡ್‌ ಕಾರಣದಿಂದ ಬಾಡಿಗೆ ಇಲ್ಲದೆ ಪರದಾಡುತ್ತಿರುವ ಲಾರಿ ಮಾಲೀಕರನ್ನು ಡೀಸೆಲ್ ದರ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

‘ಕೋವಿಡ್ ಸಂಕಷ್ಟದ ಕಾರಣ ಎಲ್ಲಾ ಲಾರಿಗಳಿಗೂ ಬಾಡಿಗೆ ಸಿಗುತ್ತಿಲ್ಲ. ಈಗ ಡೀಸೆಲ್‌ ಏರಿಕೆ ಆಗಿರುವುದನ್ನು ನೋಡಿದರೆ ಲಾರಿಗಳನ್ನು ರಸ್ತೆಗೆ ಇಳಿಸುವುದು ಹೇಗೆ ಎಂಬ ಯೋಚನೆ ಕಾಡುತ್ತಿದೆ’ ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಹೇಳಿದರು.

‘ಬಾಡಿಗೆ ಸಿಗುವುದೇ ಕಷ್ಟವಾಗಿರುವಾಗ ಬಾಡಿಗೆ ಜಾಸ್ತಿ ಮಾಡುವ ಸ್ಥಿತಿಯಲ್ಲೂ ಇಲ್ಲ. ಒಂದು ಕಿಲೋ ಮೀಟರ್‌ಗೆ ₹ 30 ಡೀಸೆಲ್‌ ವೆಚ್ಚ ತಗಲುತ್ತಿದೆ. ನಿರ್ವಹಣೆ ಸೇರಿ ₹ 40 ಖರ್ಚಾಗಲಿದೆ. ಡೀಸೆಲ್ ದರ ಏರಿಕೆಯಿಂದ ವೆಚ್ಚ ಈಗ ಮತ್ತಷ್ಟು ಜಾಸ್ತಿಯಾಗಲಿದೆ. ಅಷ್ಟು ಬಾಡಿಗೆ ಕೇಳಿದರೆ ಕೊಡುವವರು ಯಾರು? ಸರ್ಕಾರಗಳಿಗೆ ಈ ಸಮಸ್ಯೆಗಳು ಅರ್ಥವಾಗುತ್ತಿಲ್ಲವೇ’ ಎಂದು ಅವರು ಪ್ರಶ್ನಿಸಿದರು. ‘ಡೀಸೆಲ್ ದರ ಏರಿಕೆ ಖಂಡಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಭೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

***

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಮಾತ್ರವಲ್ಲದೆ ಧಾನ್ಯಗಳು, ಎಣ್ಣೆ ಕಾಳುಗಳು ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಬಡವರು, ರೈತರು ಮತ್ತು ಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಇದನ್ನು ಪ್ರಶ್ನಿಸುವವರು ಯಾರೂ ಇಲ್ಲ. ರೈತರು ಇತ್ತೀಚಿನ ದಿನಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ಬಳಸುತ್ತಾರೆ. ಡೀಸೆಲ್ ಬಳಕೆ ಹೆಚ್ಚಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ಹೊಡೆತ ಬಿದ್ದಿದೆ. ಇಂತಹ ಕೆಟ್ಟ ಪರಿಸ್ಥಿತಿ ಎಂದೂ ಇರಲಿಲ್ಲ.

ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

***

ಪೆಟ್ರೋಲ್‌, ಡೀಸೆಲ್‌ ಮೂಲಕ ಹೆಚ್ಚಿನ ಆದಾಯ ಸಂಗ್ರಹ ಆಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಸೇರಿ ಇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲೂ ತೆರಿಗೆ ಕಡಿಮೆ ಮಾಡುತ್ತಿಲ್ಲ. ಕಾಂಗ್ರೆಸ್‌ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.

ಎನ್.ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT