ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಏರಿದ ಪೆಟ್ರೋಲ್, ಡೀಸೆಲ್‌ ದರ: ಮುಂಬೈನಲ್ಲಿ ₹111 ದಾಟಿದ ಲೀಟರ್ ಪೆಟ್ರೋಲ್

Last Updated 23 ಮಾರ್ಚ್ 2022, 3:23 IST
ಅಕ್ಷರ ಗಾತ್ರ

ನವದೆಹಲಿ: ಸುಮಾರು ನಾಲ್ಕೂವರೆ ತಿಂಗಳ ನಂತರ ಮಂಗಳವಾರ ಪೆಟ್ರೋಲ್, ಡೀಸೆಲ್ ಬೆಲೆಯು ದೆಹಲಿಯಲ್ಲಿ ಲೀಟರಿಗೆ ತಲಾ 80 ಪೈಸೆ ಏರಿಕೆಯಾಗಿತ್ತು. ದರ ಏರಿಕೆಯು ಬುಧವಾರವೂ ಮುಂದುವರಿದಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಮತ್ತೆ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ.

ಮಂಗಳವಾರ ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ಲೀಟರ್‌ಗೆ ತಲಾ 84 ಪೈಸೆಯಷ್ಟು ಆಗಿದೆ. ಹೀಗಾಗಿ, ನಿನ್ನೆಯಿಂದ ಲೀಟರ್‌ಗೆ ಒಟ್ಟು 1.64 ರೂಪಾಯಿ ಏರಿಕೆ ಆದಂತಾಗಿದೆ. ಪರಿಷ್ಕರಣೆ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 102.26 ರೂಪಾಯಿ ಹಾಗೂ ಡೀಸೆಲ್ ದರವು ಲೀಟರಿಗೆ 86.58 ರೂಪಾಯಿ ಆಗಿದೆ. ರಾಜ್ಯದಿಂದ ರಾಜ್ಯಕ್ಕೆ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮೌಲ್ಯವರ್ಧಿತ ತೆರಿಗೆ ಹಾಗೂ ಸಾಗಣೆ ವೆಚ್ಚ ಆಧರಿಸಿ ತೈಲ ಬೆಲೆಯಲ್ಲಿ ಬದಲಾವಣೆ ಇರುತ್ತದೆ.

ದೆಹಲಿಯಲ್ಲಿ ಇಂದು ಪ್ರತಿ ಲೀಟರ್‌ ಪೆಟ್ರೋಲ್‌ ದರ ₹97.01 ಮತ್ತು ಡೀಸೆಲ್‌ ದರ ₹88.27 ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹111.67 ಮತ್ತು ಡೀಸೆಲ್‌ ದರ ₹95.85, ಚೆನ್ನೈನಲ್ಲಿ ಪೆಟ್ರೋಲ್‌ ದರ ₹102.91, ಡೀಸೆಲ್‌ಗೆ ₹92.95 ಹಾಗೂ ಕೋಲ್ಕತ್ತದಲ್ಲಿ ಪೆಟ್ರೋಲ್‌ ₹106.34 ಮತ್ತು ಡೀಸೆಲ್‌ಗೆ ₹91.42 ಆಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾದಾಗಿನಿಂದ ತೈಲೋತ್ಪನ್ನಗಳ ದರ ಬದಲಾವಣೆ ಮಾಡಿರಲಿಲ್ಲ. ಈಗಿನ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಪ್ರಮಾಣವು ಮತ್ತಷ್ಟು ಜಾಸ್ತಿ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ನಿಗದಿ ಮಾಡುವ ವ್ಯವಸ್ಥೆಯು 2017ರ ಜೂನ್‌ನಲ್ಲಿ ಜಾರಿಗೆ ಬಂತು. ಆದರೆ, 2021ರ ನವೆಂಬರ್ 4ರಿಂದ ಬೆಲೆಯಲ್ಲಿ ಬದಲಾವಣೆ ಮಾಡಿರಲಿಲ್ಲ.

ರಷ್ಯಾ–ಉಕ್ರೇನ್ ಕದನ ಆರಂಭವಾದ ನಂತರದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 13 ವರ್ಷಗಳ ಗರಿಷ್ಠ ಮಟ್ಟವಾದ 140 ಡಾಲರ್‌ಗೆ ತಲುಪಿತ್ತು. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಮಂಗಳವಾರ 113 ಡಾಲರ್‌ ಆಗಿದೆ.

ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದರೂ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸದೆ ಇದ್ದುದರಿಂದ ಆಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಬೇಕು ಎಂದಾದರೆ ಈ ಎರಡು ತೈಲೋತ್ಪನ್ನಗಳ ಬೆಲೆಯನ್ನು ಲೀಟರಿಗೆ ₹ 25 ಹೆಚ್ಚಿಸಬೇಕಾಗುತ್ತದೆ ಎಂದು ಉದ್ಯಮದ ಮೂಲಗಳು ಹೇಳಿವೆ. ಆದರೆ ತೈಲ ಮಾರಾಟ ಕಂಪನಿಗಳು ಬೆಲೆ ಏರಿಕೆಯನ್ನು ಒಂದೇ ಬಾರಿಗೆ ಮಾಡುವುದಿಲ್ಲ, ದಿನಕ್ಕೆ ₹1ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಆಗಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT