ಸೋಮವಾರ, ಆಗಸ್ಟ್ 15, 2022
21 °C
2021ರ ಏಪ್ರಿಲ್‌ನಿಂದ ಜಾರಿಯಾಗುವ ಸಾಧ್ಯತೆ

ಹೊಸ ವೇತನ ನಿಯಮ: ಪಿಎಫ್‌, ಗ್ರ್ಯಾಚುಟಿ ಹೆಚ್ಚಳ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉದ್ಯೋಗಿಗಳ ವೇತನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಕರಡು ನಿಯಮ ಸಿದ್ಧಪಡಿಸಿದ್ದು, 2021ರ ಏಪ್ರಿಲ್‌ನಿಂದ ಅದು ಜಾರಿಗೆ ಬರುವ ನಿರೀಕ್ಷೆ ಇದೆ. ಇದು ಜಾರಿಗೆ ಬಂದ ನಂತರ ಭವಿಷ್ಯ ನಿಧಿ (ಪಿ.ಎಫ್‌.) ಮತ್ತು ಗ್ರ್ಯಾಚುಟಿ ಕೊಡುಗೆ ಪ್ರಮಾಣಗಳಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.

ಕರಡು ನಿಯಮದ ಪ್ರಕಾರ, ಉದ್ಯೋಗಿಯ ತಿಂಗಳ ವೇತನದಲ್ಲಿ ಭತ್ಯೆಗಳ ಪ್ರಮಾಣವು ಒಟ್ಟು ವೇತನದ ಶೇಕಡ 50ರಷ್ಟನ್ನು ಮೀರುವಂತಿಲ್ಲ. ಅಲ್ಲಿಗೆ ಮೂಲ ವೇತನವು ಶೇ 50ರಷ್ಟು ಅಥವಾ ಅದಕ್ಕಿಂತ ಹೆಚ್ಚಿರಬೇಕಾಗುತ್ತದೆ. ಇದಕ್ಕೆ ಅನುಗುಣವಾಗಿ ಕಂಪನಿಗಳು ಉದ್ಯೋಗಿಗಳ ವೇತನದಲ್ಲಿ ಹೊಂದಾಣಿಕೆ ಮಾಡುವುದರಿಂದ ಭವಿಷ್ಯ ನಿಧಿ ಮತ್ತು ಗ್ರ್ಯಾಚುಟಿ ಕೊಡುಗೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಹೀಗಾಗಿ, ಉದ್ಯೋಗಿಯ ಕೈಗೆ ಸಿಗಲಿರುವ ವೇತನದ ಮೊತ್ತ ಕಡಿಮೆ ಆದರೂ ನಿವೃತ್ತಿಯ ನಂತರ ಪಡೆಯಲಿರುವ ಒಟ್ಟಾರೆ ಮೊತ್ತದಲ್ಲಿ ಏರಿಕೆ ಆಗಲಿದೆ.

‘ಉದ್ಯೋಗಿಗಳ ಭವಿಷ್ಯದ ದೃಷ್ಟಿಯಿಂದ ಹೊಸ ನಿಯಮವು ಹೆಚ್ಚು ಅನುಕೂಲ ತರಲಿದೆ. ದೀರ್ಘಾವಧಿಯಲ್ಲಿ ಗರಿಷ್ಠ ಮಟ್ಟದ ಸಾಮಾಜಿಕ ಭದ್ರತೆ ಸಿಗಲಿದೆ’ ಎನ್ನುವುದು ಬ್ಯಾಂಕಿಂಗ್‌ ಮತ್ತು ಹಣಕಾಸು ತಜ್ಞ ಯು.ಪಿ. ಪುರಾಣಿಕ್‌ ಅವರ ಅಭಿಪ್ರಾಯ.

‘ಬಹಳಷ್ಟು ಖಾಸಗಿ ಸಂಸ್ಥೆಗಳು, ಮುಖ್ಯವಾಗಿ ಐ.ಟಿ., ಬಿ.ಟಿ. ವಲಯದ ಕಂಪನಿಗಳು, ನೌಕರರಿಗೆ ಕೈತುಂಬ ಸಂಬಳ ನೀಡುತ್ತಿದ್ದರೂ ಅವರ ಮೂಲ ವೇತನ ತುಂಬಾ ಕಡಿಮೆ ಇದ್ದು, ನೌಕರರು ನಿವೃತ್ತಿ ನಂತರ ಪಡೆಯುವ ಮೊತ್ತ ಕೂಡ ಕಡಿಮೆ ಇರುತ್ತದೆ. ಗ್ರ್ಯಾಚುಟಿ ಮಿತಿ ₹ 20 ಲಕ್ಷ ಇದ್ದರೂ ಈ ಮಟ್ಟ ತಲುಪುವವರ ಸಂಖ್ಯೆ ಬಹಳ ಕಡಿಮೆ. ಮೂಲ ವೇತನ ಹೆಚ್ಚಿಸಿ, ಉಳಿದ ಭತ್ಯೆಗಳನ್ನು ಕಡಿಮೆ ಮಾಡುವುದರಿಂದ ಉದ್ಯೋಗ
ದಾತರ ಪಿ.ಎಫ್‌. ಮತ್ತು ಗ್ರ್ಯಾಚುಟಿ ಕೊಡುಗೆ ಹೆಚ್ಚಾಗುತ್ತದೆ ಹಾಗೂ ನೌಕರರು ಈ ನಿಧಿಗಳಿಗೆ ಕೊಡುವ ಮೊತ್ತವೂ ಹೆಚ್ಚಾಗುತ್ತದೆ. ಇದರಿಂದ ನೌಕರರ ಕೈಗೆ ಸಿಗುವ ಸಂಬಳ (take home salary) ಕಡಿಮೆ ಆದರೂ, ನಿವೃತ್ತಿ ನಂತರ ದೊಡ್ಡ ಮೊತ್ತ ಪಡೆಯಬಹುದು. ನೌಕರರಿಗೆ ಸಾಮಾಜಿಕ ಭದ್ರತೆ ಇರುತ್ತದೆ. ಪಿಂಚಣಿ ಇಲ್ಲದ ಈ ಕಾಲದಲ್ಲಿ ನೌಕರರು ನಿವೃತ್ತಿಯ ನಂತರ ಹೆಚ್ಚಿನ ಮೊತ್ತ ಪಡೆದಲ್ಲಿ, ಜೀವನದ ಸಂಜೆಯನ್ನು ನಿರಾಳವಾಗಿ ಕಳೆಯಬಹುದು’ ಎಂದು ಪುರಾಣಿಕ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು