ಸೋಮವಾರ, ಜನವರಿ 27, 2020
27 °C
ಪುರವಣಿ

ಪ್ರಶ್ನೋತ್ತರ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

ಎಲ್.ವಿ. ಜಯದೇವ್, ತುಮಕೂರು

ನಾನು ಹಿಂದೆ ಹಾಸನದಲ್ಲಿದ್ದಾಗ, ಹಾಸನ ಡಿ.ಸಿ.ಸಿ. ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದಿದ್ದೆ. ನಂತರ ನಾನು ತುಮಕೂರಿಗೆ ಬಂದೆ. 10 ವರ್ಷಗಳಿಂದ ಹಾಸನಕ್ಕೆ ಹೋಗಲಾಗಲಿಲ್ಲ. ಹಿಂದಿನ ವರ್ಷ ಹಾಸನಕ್ಕೆ ಹೋದಾಗ ಬ್ಯಾಂಕಿನಲ್ಲಿ ವಿಚಾರಿಸಿದಾಗ ಆ ಉಳಿತಾಯ ಖಾತೆಯಿಂದ ಹಣ ಹಿಂದೆ ತೆಗೆಯುವಂತಿಲ್ಲ ಎಂದರು. ಹಣ ಪಡೆಯುವ ವಿಚಾರದಲ್ಲಿ ಸಲಹೆ ನೀಡಿ.

ಉತ್ತರ: 10 ವರ್ಷಗಳಿಂದ ಹಣ ಜಮೆ ಆಗದಿರುವ ಖಾತೆಯನ್ನು Non Operative Account ಆಗಿ ಪರಿವರ್ತಿಸಿ ನಂತರ ಭಾರತೀಯ ರಿಸರ್ವ್  ಬ್ಯಾಂಕ್‌ಗೆ, ಬ್ಯಾಂಕುಗಳು ಕಳಿಸುತ್ತವೆ.

ನೀವು ಖಾತೆ ವಿವರ ನೀಡಿ ಹಾಸನ ಡಿ.ಸಿ.ಸಿ. ಬ್ಯಾಂಕಿಗೆ ಪತ್ರ ಬರೆಯಿರಿ. ಅವರು ಆರ್‌ಬಿಐಗೆ ಕಳಿಸಿದ್ದರೆ ವಾಪಸ್‌ ತರಿಸಲು ಬರುತ್ತದೆ. ನಿಮ್ಮ ತುಮಕೂರು ಬ್ಯಾಂಕ್ ಹೆಸರು, ಖಾತೆ ನಂಬರ್, IFSC ಕೋಡ್ ತಿಳಿಸಿ. ಈ ಖಾತೆಗೆ, ಆರ್‌ಬಿಐ ಹಣ  ಹಿಂತಿರುಗಿಸಿದ ಮೇಲೆ ಹಣ ವರ್ಗಾಹಿಸಲು ಹೇಳಿ. ಡಿ.ಸಿ.ಸಿ. ಬ್ಯಾಂಕ್ ಹಾಸನಕ್ಕೆ Speed Post ಅಥವಾ Reg Post ನಲ್ಲಿ ಪತ್ರ ಕಳಿಸಿರಿ. ನಿಮ್ಮ ಪ‍ತ್ರದೊಂದಿಗೆ ಹಾಸನ ಡಿ.ಸಿ.ಸಿ. ಬ್ಯಾಂಕಿನಲ್ಲಿ ಪಡೆದ ಪಾಸ್ ಬುಕ್, ಚೆಕ್‌ ಬುಕ್ ಕಳುಹಿಸಿರಿ. ಪಾಸ್ ಬುಕ್ ಜೆರಾಕ್ಸ್ ನಿಮ್ಮೊಡನಿರಲಿ.

 

ಕೆ.ಎ. ಕುಲಕರ್ಣಿ, ವಿಜಯಪುರ

ನಾನು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ. ತಾ. 8–1–20 ಬುಧವಾರ ನೀವು ಬೋರೇಗೌಡರಿಗೆ ಆದಾಯ ತೆರಿಗೆ ವಿಚಾರದಲ್ಲಿ ನೀಡಿದ ಸಲಹೆಯಲ್ಲಿ ಅವರ ವಾರ್ಷಿಕ ಆದಾಯ  ₹ 7,83,310 ರಲ್ಲಿ ನೇರವಾಗಿ ₹ 5 ಲಕ್ಷ ಕಳೆದು ₹ 5 ಲಕ್ಷ ದಾಟಿದ ಮಿತಿಗೆ ಶೇ 20ರಷ್ಟು ತೆರಿಗೆ ಸಲ್ಲಿಸಲು ತಿಳಿಸಿದ ಮಾಹಿತಿ ಸರಿ ಇರುವುದಿಲ್ಲ. ಓರ್ವ ವ್ಯಕ್ತಿಯ ವಾರ್ಷಿಕ ಆದಾಯ ₹ 5 ಲಕ್ಷ ದಾಟಿದಲ್ಲಿ ಆತ ₹ 2.50 ಲಕ್ಷದಿಂದಲೇ ಆದಾಯ ತೆರಿಗೆ ಕೊಡಬೇಕಾಗುತ್ತದೆ. ಮುಂದಿನ ಬುಧವಾರ ಬೋರೇಗೌಡರಿಗೆ ₹ 2.50 ಲಕ್ಷದಿಂದಲೇ ಆದಾಯ ತೆರಿಗೆ ಕೊಡಲು ತಿಳಿಸಿರಿ.

ಉತ್ತರ: ನೀವು ಬೋರೇಗೌಡರ ಪ್ರಶ್ನೆಯನ್ನು ಸರಿಯಾಗಿ ಗಮನಿಸಿಲ್ಲ ಎಂದು ಭಾವಿಸುವೆ. ಅವರ ವಯಸ್ಸು 88. ಅವರು ಅತೀ ಹಿರಿಯ ನಾಗರಿಕರು (Super Senior citizen). ಅವರು ಆದಾಯ ತೆರಿಗೆ ಕಾನೂನಿನ್ವಯ ₹ 5 ಲಕ್ಷ ದಾಟಿದ ಮಿತಿಗೆ, ₹ 10 ಲಕ್ಷ ತನಕ ಶೇ 20ರಂತೆ ತೆರಿಗೆ ಸಲ್ಲಿಸಬೇಕು ಹಾಗೂ ನೀವು ತಿಳಿಸಿದಂತೆ ₹ 2.50 ಲಕ್ಷದಿಂದಲೇ ತೆರಿಗೆ ಕೊಡುವ ಅವಶ್ಯಕತೆ ಇಲ್ಲ. ಇನ್ನೂ ನಿಮಗೆ ಸಂಶಯ ಅಥವಾ ಸಂದೇಹವಿರುವಲ್ಲಿ ನಿಮ್ಮ ಮನೆಗೆ ಸಮೀಪದ ಚಾರ್ಟ್‌ರ್ಡ್ ಅಕೌಂಟೆಂಟ್ ಸಂಪರ್ಕಿಸಿ.

ಇದೇ ವಿಚಾರದಲ್ಲಿ ಇನ್ನೂ ಕೆಲವರು ನನಗೆ ದೂರವಾಣಿ ಮುಖಾಂತರ ಸಂದೇಹ ವ್ಯಕ್ತಪಡಿಸಿದ್ದಾರೆ. ಹಿಂದಿನ ವರ್ಷದ ಬಜೆಟ್ಟಿನಲ್ಲಿ ಆದಾಯ ತೆರಿಗೆ ಮಿತಿ ₹ 5 ಲಕ್ಷಕ್ಕೆ ಏರಿಸಿದರೂ, ವ್ಯಕ್ತಿಗಳು ತೆರಿಗೆ ಕೊಡುವ ಆದಾಯ (Taxable Income) ₹ 5 ಲಕ್ಷ ದಾಟಿದರೂ ಕ್ರಮವಾಗಿ, 60 ವಯಸ್ಸಿನ ತನಕದ ವ್ಯಕ್ತಿಗಳು ₹ 2.50 ಲಕ್ಷದಿಂದಲೂ, 60ರಿಂದ 80 ವಯಸ್ಸಿನ (Senior citizen) ವ್ಯಕ್ತಿಗಳು ₹ 3 ಲಕ್ಷ ದಿಂದಲೂ ಆದಾಯ ತೆರಿಗೆ ಸಲ್ಲಿಸತಕ್ಕದ್ದು. ಆದರೆ ಅತೀ ಹಿರಿಯ ನಾಗರಿಕರ ಮಿತಿ ಮೊದಲೇ  ₹  5 ಲಕ್ಷ ಇರುವುದರಿಂದ ಈ ಕಾನೂನು ಅವರಿಗೆ ಅನ್ವಯಿಸುವುದಿಲ್ಲ.

ಕುಲಕರ್ಣಿ ಅವರ ಪ್ರಶ್ನೆಯಿಂದ ಹಲವರಿಗೆ ಉತ್ತರ ಸಿಕ್ಕಿದಂತಾಗಿದೆ. ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು