ನಾನು ವೃತ್ತಿಯಲ್ಲಿ ಕಾಲೇಜಿನ ಪ್ರಾಧ್ಯಾಪಕಿ. ನನಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಇಬ್ಬರೂ ಕ್ರಮವಾಗಿ 10 ಹಾಗೂ 15 ವರ್ಷ ವಯಸ್ಸಿನವರಾಗಿದ್ದಾರೆ. ಮಕ್ಕಳ ಹೆಸರಲ್ಲಿ ಮುಂದಿನ ಭವಿಷ್ಯಕ್ಕಾಗಿ ನನ್ನ ಸಂಪಾದನೆಯ ಒಂದಿಷ್ಟು ಮೊತ್ತ ಉಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಅವರಿಗೆ ಉಳಿತಾಯ, ಆರ್ಥಿಕ ವಿಷಯಗಳ ಬಗ್ಗೆ ಹೇಗೆ ತಿಳಿಹೇಳಬಹುದು. ಈ ಬಗ್ಗೆ ಮಾರ್ಗದರ್ಶನ ನೀಡಲು ಕೋರಿಕೆ.
ನಿಮ್ಮ ಮಕ್ಕಳು ಇನ್ನೂ ಬಾಲ್ಯದ ಹಂತದಲ್ಲೇ ಇದ್ದಾರೆ ಹಾಗೂ ಮುಂದಿನ 10-15 ವರ್ಷ ಅವರ ಶೈಕ್ಷಣಿಕ ಅವಧಿ ಇದೆ. ಇದರಿಂದ ಅವರ ಶಿಕ್ಷಣದ ವಿವಿಧ ಹಂತಗಳಲ್ಲಿ ಹಣದ ಅಗತ್ಯ ಇದ್ದೇ ಇರುತ್ತದೆ. ಇದಕ್ಕಾಗಿ ಸರಳ ಹಾಗೂ ಸುಲಭದ ಕೆಲವು ವಿಧಾನ ಹಾಗೂ ನೀವು ಈಗಾಗಲೇ ತಿಳಿದಿರಬಹುದಾದ ಹೂಡಿಕೆಗಳನ್ನು ಮಾಡುವ ಮೂಲಕ ಮುಂದುವರಿಯಬಹುದು.
ಮೊದಲ ಹಂತದಲ್ಲಿ ಮಕ್ಕಳ ಹೆಸರಿನಲ್ಲಿ ಪ್ರತ್ಯೇಕವಾದ ಬ್ಯಾಂಕ್ ಖಾತೆ ತೆರೆಯಿರಿ. ಹೆಚ್ಚುವರಿ ಮೊತ್ತವನ್ನು ಆ ಖಾತೆಗೆ ವರ್ಗಾಯಿಸಿ. ಮಕ್ಕಳ ಹೆಸರಲ್ಲಿ ರೆಕರಿಂಗ್ ಡೆಪಾಸಿಟ್ ಮಾಡಬಹುದು. ಉದ್ದೇಶಿತ ಹಣದ ಅಗತ್ಯಕ್ಕಾಗಿ ನಿಶ್ಚಿತ ಠೇವಣಿ ಇಡಬಹುದು. ಮಕ್ಕಳ ಹೆಸರಿನಲ್ಲಿ ವಿಮೆ ಪಡೆಯಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲೂ ಹೂಡಿಕೆ ಮಾಡಬಹುದು. ಈ ಎಲ್ಲ ಹೂಡಿಕೆಗಳಿಗೆ ಆರ್ಥಿಕ ಅಪಾಯ ಇರದ ಕಾರಣ ಸಹಜವಾಗಿ ಶೇ 6ರಿಂದ ಶೇ 8ರಷ್ಟು ಬಡ್ಡಿ ಸಿಗುತ್ತದೆ.
ಹೆಣ್ಣು ಮಕ್ಕಳಿಗಾಗಿ ಚಿನ್ನದ ಬಾಂಡ್ ಅಥವಾ ನಾಣ್ಯ ಖರೀದಿಸಬಹುದು. ಇದರ ಮಾರುಕಟ್ಟೆ ಮೌಲ್ಯ ವರ್ಧಿಸಿದಂತೆ ಮಾರಾಟ ಮಾಡಿದಾಗ ಲಾಭವಾಗುತ್ತದೆ ಅಥವಾ ಸ್ವಂತ ಅಗತ್ಯಕ್ಕೂ ಯಾವುದೇ ಪಾವತಿ ಮಾಡದೆ ಉಪಯೋಗಿಸಿಕೊಳ್ಳಬಹುದು. ಅಲ್ಲದೆ, ಪ್ರತ್ಯೇಕವಾಗಿ ಹೆಣ್ಣುಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು.
ನೀವು ಬ್ಯಾಂಕ್ ವ್ಯವಹಾರ ನಡೆಸುವಾಗ ಮಕ್ಕಳನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ. ಅಲ್ಲಿನ ವಿವಿಧ ಸೇವೆ, ಉಳಿತಾಯ ಯೋಜನೆ ಬಗ್ಗೆ ಅವರಿಗೂ ಮಾಹಿತಿ ನೀಡಿ. ಆರ್ಥಿಕ ಸ್ವಾವಲಂಬನೆ ಬಗ್ಗೆ ಇಂದಿನ ಬೋಧನಾ ಕ್ರಮದಲ್ಲಿ ಯಾವ ವಿಚಾರಗಳೂ ಇಲ್ಲದ ಕಾರಣ ದಿನನಿತ್ಯದ ವ್ಯಾವಹಾರಿಕ ಅನುಭವವೇ ಮುಂದೆ ಅವರಿಗೆ ಹೆಚ್ಚಿನ ತಿಳಿವಳಿಕೆಗೆ ಸಹಕಾರಿಯಾಗುತ್ತದೆ.
ಮಕ್ಕಳಲ್ಲಿ ಉಳಿತಾಯದ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಅರಿವು ಮೂಡಿಸುವ ಪ್ರಯತ್ನ ಮಾಡಿ. ಇದು ಅವರ ಮುಂದಿನ ಬದುಕಿಗೆ ನೆರವಾಗಲಿದೆ. ಹಣದ ದುಂದುವೆಚ್ಚವನ್ನು ತಡೆಯುವಂತೆ ಮಾಡುತ್ತದೆ. ಉಳಿತಾಯವು ಭವಿಷ್ಯದ ಬಳಕೆಗಾಗಿ ಹಣವನ್ನು ಮೀಸಲಿಡುವುದು ಮಾತ್ರವಲ್ಲದೆ ಯಾವುದೇ ನಿಖರ ಉದ್ದೇಶವನ್ನು ಆರ್ಥಿಕ ದೃಷ್ಟಿಯಿಂದ ಸಾಫಲ್ಯಗೊಳಿಸುವಲ್ಲಿ ಸಹಕಾರಿಯಾಗುತ್ತದೆ. ಅವರಿಗೆ ನಿಗದಿತ ಉಳಿತಾಯದ ಬಗ್ಗೆ ಮನವರಿಕೆ ಮಾಡಿಕೊಡಿ. ಇದು ಅವರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಹಾಗೂ ಹೆತ್ತವರ ಕಾಳಜಿಯನ್ನು ತೋರಿಸಿಕೊಡುತ್ತದೆ.
ನಾನು ಸಾರ್ವಜನಿಕ ವಲಯದ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ಐದು ವರ್ಷದ ಹಿಂದೆ ನಿವೃತ್ತಿ ಹೊಂದಿದ್ದೇನೆ. ಮಾಸಿಕ ₹50 ಸಾವಿರ ಪಿಂಚಣಿ ಪಡೆಯುತ್ತಿದ್ದೇನೆ. ನಾನು ಉದ್ಯೋಗದಲ್ಲಿದ್ದಾಗ ಒಂದು ನಿವೇಶನ ಖರೀದಿಸಿದ್ದೆವು. ಈಗ ಅದರಲ್ಲಿ ಮನೆ ಕಟ್ಟುವ ಯೋಚನೆ ಮಾಡಿದ್ದೇವೆ. ಬ್ಯಾಂಕ್ ಸಾಲ ಕೂಡ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಮಾಡುವವರಿದ್ದೇವೆ. ಆದರೆ, ಬಡ್ಡಿ ಪಾವತಿ ನಿಯಂತ್ರಿಸುವ ಉದ್ದೇಶದಿಂದ ನಾನು ನನ್ನ ಉಳಿತಾಯದ ಮೊತ್ತವನ್ನೇ ಉಪಯೋಗಿಸುತ್ತಿದ್ದೇನೆ.
ಮನೆ ನಿರ್ಮಾಣಕ್ಕೆ ಸುಮಾರು ₹50 ಲಕ್ಷದಿಂದ ₹60 ಲಕ್ಷ ವೆಚ್ಚವಾಗಲಿದೆ. ಅರ್ಧದಷ್ಟು ಮೊತ್ತ ನನ್ನ ಉಳಿತಾಯ ಖಾತೆಯಿಂದ ನಗದು ಮೂಲಕ ಹಂತ ಹಂತದಲ್ಲಿ ಹಿಂಪಡೆಯುವವನಿದ್ದೇನೆ. ಇತ್ತೀಚೆಗೆ ಬ್ಯಾಂಕ್‌ಗೆ ಭೇಟಿ ನೀಡಿದಾಗ ನಗದು ಪಡೆದಾಗ ತೆರಿಗೆ ಕಡಿತ ಮಾಡಬೇಕಾಗುವ ವಿಚಾರ ತಿಳಿಸಿರುತ್ತಾರೆ. ಈ ಕಡಿತ ಆಗದ ರೀತಿ ಅಥವಾ ಆ ಮೊತ್ತ ಹಿಂಪಡೆಯುವ ಬಗೆ ಏನಾದರೂ ಇದೆಯೇ. ನನ್ನ ಪೆನ್ಶನ್ ಮೊತ್ತವು ತೆರಿಗೆಗೊಳಪಡುವುದಿಲ್ಲ. ಹೀಗಿರುವಾಗ, ಬ್ಯಾಂಕ್‌ನಿಂದ ನಮ್ಮದೇ ಹಣ ಹಿಂಪಡೆಯುವಾಗ ಈ ತೆರಿಗೆ ನಮಗೆ ಅನಿವಾರ್ಯವೇ. ಈ ಬಗ್ಗೆ ಮಾಹಿತಿ ನೀಡಿ.
ನೀವು ಪ್ರಶ್ನೆಯಲ್ಲಿ ನೀಡಿರುವ ಮಾಹಿತಿಯಂತೆ ನಿಮ್ಮ ಆದಾಯ, ತೆರಿಗೆಗೊಳಪಡುವುದಿಲ್ಲ ಎಂದು ತಿಳಿಸಿರುತ್ತೀರಿ. ಆದರೆ, ಗರಿಷ್ಠ ವಿನಾಯಿತಿ ಮೊತ್ತಕ್ಕಿಂತ ಪೆನ್ಶನ್ ಅಧಿಕ ಇರುವ ಕಾರಣ, ತೆರಿಗೆ ಅನ್ವಯಿಸದಿದ್ದರೂ ಈ ಸಂಬಂಧಿತ ತೆರಿಗೆ ರಿಟರ್ನ್ಸ್ ಸಲ್ಲಿಸಿರಬಹುದೆಂದು ಊಹಿಸಿ ಇಲ್ಲಿ ಉತ್ತರಿಸಲಾಗಿದೆ.
ಬ್ಯಾಂಕ್ ಖಾತೆಯಿಂದ ಹಣ ನಗದೀಕರಿಸುವಾಗ ಕೆಲವೆಲ್ಲ ಆದಾಯ ತೆರಿಗೆ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ. ಸಾಮಾನ್ಯವಾಗಿ ವಾರ್ಷಿಕವಾಗಿ ₹1 ಕೋಟಿಗೂ ಅಧಿಕ ಮೊತ್ತವನ್ನು ನಗದೀಕರಿಸಿದಾಗ ತೆರಿಗೆ ಕಟಾಯಿಸಲಾಗುತ್ತದೆ.
ಆದರೆ, ಯಾವುದೇ ವ್ಯಕ್ತಿ ಕಳೆದ ಯಾವುದೇ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಈ ಮಿತಿಯನ್ನು ₹20 ಲಕ್ಷದಿಂದಲೇ ತೆರಿಗೆ ಕಟಾವಿಗೆ ಪರಿಗಣಿಸಲಾಗುತ್ತದೆ. ಈ ಮಿತಿಗಿಂತ ಹೆಚ್ಚಿನ ಮೊತ್ತಕ್ಕೆ ಆದರೆ ₹1 ಕೋಟಿಯೊಳಗಿನ ಮೊತ್ತಕ್ಕೆ ಶೇ 2ರ ದರದಲ್ಲಿ ತೆರಿಗೆ ಕಡಿತ ಮಾಡಲಾಗುತ್ತದೆ. ತೆರಿಗೆ ಕಡಿತದ ಜವಾಬ್ದಾರಿ, ಹಣ ಪಡೆಯುವ ಗ್ರಾಹಕರಿಗಿಂತ ಬ್ಯಾಂಕ್‌ಗಳಿಗೆ ಇದೆ. ಹೀಗಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ವಿವರವನ್ನು ಬ್ಯಾಂಕ್‌ಗೂ ಮಾಹಿತಿಗಾಗಿ ನೀಡಿ. ಪರ್ಯಾಯವಾಗಿ ನೀವು ಇನ್ನೊಂದು ಬೇರೆ ಬ್ಯಾಂಕ್ ಖಾತೆ ತೆರೆದು ₹20 ಲಕ್ಷಕ್ಕಿಂತ ಅಧಿಕ ಮೊತ್ತ ಅದಕ್ಕೆ ವರ್ಗಾಯಿಸಿ ನಗದೀಕರಿಸಬಹುದು. ಒಂದು ವೇಳೆ ಇದು ಅಸಾಧ್ಯವಾದರೆ ಕಟಾವಾದ ತೆರಿಗೆಯನ್ನು ಯಾವುದೇ ತೆರಿಗೆಗೊಳಪಡುವ ಆದಾಯವಿಲ್ಲದಿದ್ದರೆ ಸಂಪೂರ್ಣ ಹಿಂಪಡೆಯುವ ಅವಕಾಶ ಇದ್ದೇ ಇದೆ. ಇದಕ್ಕಾಗಿ ಮುಂದಿನ ಜುಲೈ ತಿಂಗಳೊಳಗೆ ತೆರಿಗೆ ರಿಟರ್ನ್ಸ್ ಸಲ್ಲಿಸಿ.
ವ್ಯಾಪಾರ ಸಂಬಂಧಿ ನಗದು ವ್ಯವಹಾರಗಳಿಗೆ ಹೆಚ್ಚಿನ ನಿಯಮಗಳಿವೆ. ಆದರೆ, ವೈಯಕ್ತಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೆಲವು ಸೀಮಿತ ನಿಯಮಗಳಿವೆ. ಆದರೆ, ಯಾವುದೇ ಮೊತ್ತ ಪಾವತಿಸುವುದಾದರೂ ಪ್ರತಿ ಸನ್ನಿವೇಶಕ್ಕೆ ಸಂಬಂಧಿಸಿ, ಪ್ರತಿದಿನ ಅಥವಾ ಪ್ರತಿ ಬಿಲ್ ಸಂದಾಯವಾಗುವ ಸಂದರ್ಭದಲ್ಲಿ ₹2 ಲಕ್ಷಕ್ಕೂ ಮೀರಿದ ನಗದು ಮೊತ್ತ ಪಡೆಯುವಂತಿಲ್ಲ ಎಂಬುದು ಸೆಕ್ಷನ್ 269 ಎಸ್‌ಟಿ ಹೇಳುತ್ತದೆ. ಇದು ವ್ಯವಹಾರದಲ್ಲಿರುವ ಆದರೆ ನಮ್ಮಿಂದ ಹಣ ಪಡೆಯುವ ವ್ಯಕ್ತಿಗಳನ್ನು ಉದ್ದೇಶಿಸಿ ಈ ಕಾನೂನಡಿ ನಿರ್ಬಂಧ ಹೇರಲಾಗಿದೆ. ಆದರೆ, ಪಾವತಿಸುವವರಿಗೂ ಅದರ ಅರಿವು ಇದ್ದರೆ ಒಳಿತು. ಅದಕ್ಕೆ ಸಂಬಂಧಿತ ಸಮಾನ ಮೊತ್ತದ ದಂಡ, ಹಣ ಸ್ವೀಕರಿಸುವವರಿಗೆ ಹೇರುವ ಅವಕಾಶ ಕಾನೂನಿನಡಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.