ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಆನ್‌,ಆಫ್‌ ಸೌಲಭ್ಯ: ಆರ್‌ಬಿಐ ಸೂಚನೆ

ಗ್ರಾಹಕರ ಕೈಯಲ್ಲೇ ನಿಯಂತ್ರಣ
Last Updated 16 ಜನವರಿ 2020, 2:38 IST
ಅಕ್ಷರ ಗಾತ್ರ

ಮುಂಬೈ : ಡಿಜಿಟಲ್‌ ವಹಿವಾಟಿನ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಹತ್ವದ ಕ್ರಮ ಕೈಗೊಂಡಿದೆ. ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಕ್ರಿಯ (ಆನ್‌) ಮತ್ತು ಸ್ಥಗಿತ (ಆಫ್‌) ಮಾಡುವ ಅವಕಾಶವನ್ನು ಗ್ರಾಹಕರಿಗೆ ನೀಡಬೇಕು ಎಂದು ಬ್ಯಾಂಕುಗಳು ಮತ್ತು ಕಾರ್ಡ್‌ ವಿತರಣಾ ಸಂಸ್ಥೆಗಳಿಗೆ ಆರ್‌ಬಿಐ ಬುಧವಾರ ಸೂಚಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ನಡೆಯುವ ವಹಿವಾಟಿನ ಪ್ರಮಾಣ ಮತ್ತು ಮೌಲ್ಯ ಹತ್ತಾರು ಪಟ್ಟು ಹೆಚ್ಚಳವಾಗಿದೆ. ಜನರು ವಂಚನೆಗೆ ಒಳಗಾಗುವ ಪ್ರಕರಣಗಳೂ ಹೆಚ್ಚುತ್ತಿವೆ. ಹಾಗಾಗಿ, ಎಟಿಎಂಗಳು ಮತ್ತು ಪಾಯಿಂಟ್‌ ಆಫ್‌ ಸೇಲ್‌ ಯಂತ್ರಗಳಲ್ಲಿ (ಪಿಒಎಸ್‌–ಮಳಿಗೆಗಳಲ್ಲಿ ಕಾರ್ಡ್ ಮೂಲಕ ಹಣ ಸ್ವೀಕರಿಸಲು ಬಳಸುವ ಸಾಧನ) ಮಾತ್ರ ಬಳಸಲು ಬಳಕೆದಾರರಿಗೆ ಅವಕಾಶ ಕೊಡುವ ರೀತಿಯಲ್ಲಿ ಎಲ್ಲ ರೀತಿಯ ಕಾರ್ಡ್‌ಗಳನ್ನು ರೂಪಿಸಬೇಕು ಎಂದೂ ಆರ್‌ಬಿಐ ಹೇಳಿದೆ.

ಕಾರ್ಡ್‌ ಬಳಸದೆ ವಹಿವಾಟು (ದೇಶಿ ಮತ್ತು ಅಂತರರಾಷ್ಟ್ರೀಯ), ಕಾರ್ಡ್‌ ಬಳಸಿ ವಹಿವಾಟು (ಅಂತರ ರಾಷ್ಟ್ರೀಯ) ಮತ್ತು ಚಿಪ್‌ ಕಾರ್ಡ್‌ ಅಥವಾ ಕಾಂಟ್ಯಾಕ್ಟ್‌ಲೆಸ್‌ ವಹಿವಾಟುಗಳಲ್ಲಿ ತಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ಗ್ರಾಹಕರಿಗೆ ಕಾರ್ಡ್‌ ವಿತರಣೆದಾರರು ನೀಡಬೇಕು ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.

ಕಾರ್ಡ್‌ ವಹಿವಾಟಿನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಒಂದು, ಕಾರ್ಡ್‌ ನೀಡಿ ವಹಿವಾಟು ನಡೆಸುವುದು ಮತ್ತು ಇನ್ನೊಂದು ಕಾರ್ಡ್‌ ನೀಡದೆಯೇ ವಹಿವಾಟು ನಡೆಸುವುದು. ಇತ್ತೀಚೆಗೆ ಕಾಂಟ್ಯಾಕ್ಟ್‌ಲೆಸ್‌ ಕಾರ್ಡ್‌ ವಹಿವಾಟು ಕೂಡ ಚಾಲ್ತಿಗೆ ಬಂದಿದೆ. ಇದು ರೇಡಿಯೊ ತರಂಗಾಂತರ ತಂತ್ರಜ್ಞಾನದ ಮೂಲಕ ನಡೆಯುತ್ತದೆ. ಪಿಒಎಸ್‌ ಯಂತ್ರದ ಮುಂದೆ ಕಾರ್ಡ್‌ ಅನ್ನು ಹಿಡಿಯುವ ಮೂಲಕ ಹಣ ಪಾವತಿ ಸಾಧ್ಯವಾಗುತ್ತದೆ.

ಕಾರ್ಡ್‌ಗಳನ್ನು ಸಕ್ರಿಯ, ಸ್ಥಗಿತಗೊಳಿಸುವ, ಅಂತರರಾಷ್ಟ್ರೀಯ ವಹಿವಾಟು, ಪಿಒಎಸ್‌, ಎಟಿಎಂ, ಆನ್‌ಲೈನ್‌, ಚಿಪ್‌ಕಾರ್ಡ್‌ ವಹಿವಾಟುಗಳಿಗೆ ಮಿತಿ ಹಾಕಿಕೊಳ್ಳುವ ಅವಕಾಶವೂ ಗ್ರಾಹಕರಿಗೆ ಇರಬೇಕು. ಈ ಬದಲಾವಣೆಗಳನ್ನು ಮಾಡಿಕೊಳ್ಳಲು ವಿವಿಧ ಆಯ್ಕೆಗಳನ್ನೂ ನೀಡಬೇಕು. ದಿನದ ಯಾವುದೇ ಹೊತ್ತಿನಲ್ಲಿ (24x7) ಈ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶ ಇರಬೇಕು ಎಂದು ಹೇಳಲಾಗಿದೆ.

ಬದಲಾವಣೆಗಳನ್ನು ಮಾಡಿಕೊಳ್ಳುವ ವಿವಿಧ ಆಯ್ಕೆಗಳಲ್ಲಿ ಮೊಬೈಲ್‌ ಆ್ಯಪ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಎಟಿಎಂ ಅಥವಾ ಐವಿಆರ್‌ (ಸಂವಹನಾತ್ಮಕ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆ) ಸೇರಿರಬೇಕು.

ಈಗಾಗಲೇ ಬಳಕೆಯಲ್ಲಿ ಇರುವ ಕಾರ್ಡ್‌ಗಳು ಯಾವ ಮಟ್ಟದ ಅಪಾಯವನ್ನು ಎದುರಿಸುತ್ತಿವೆ ಎಂಬುದರ ಆಧಾರದಲ್ಲಿ ಕಾರ್ಡ್‌ಗಳ ವಹಿವಾಟಿನ ಮೇಲೆ ನಿರ್ಬಂಧ ಹೇರುವ ನಿರ್ಧಾರವನ್ನು ಕಾರ್ಡ್‌ ನೀಡಿಕೆ ಸಂಸ್ಥೆಗಳು ಕೈಗೊಳ್ಳಬಹುದು ಎಂದೂ ಆರ್‌ಬಿಐ ತಿಳಿಸಿದೆ.

ಹೊಸ ನಿಯಮಗಳು

*ಮಾರ್ಚ್‌ 16ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ

*ಬಳಕೆ ಆಗಿಲ್ಲ ಎಂಬ ಕಾರಣಕ್ಕೆ ಕಾರ್ಡ್‌ ಒಮ್ಮೆ ಸ್ಥಗಿತಗೊಂಡರೆ, ಗ್ರಾಹಕರು ಮತ್ತೆ ಅರ್ಜಿ ಸಲ್ಲಿಸಿ ಈ ಸೇವೆಯನ್ನು ಸಕ್ರಿಯ ಮಾಡಿಕೊಳ್ಳಬಹುದು

*ಕಾರ್ಡ್‌ನ ಸ್ಥಿತಿಯಲ್ಲಿ ಆಗುವ ಯಾವುದೇ ಬದಲಾವಣೆಯ ಬಗ್ಗೆ ಗ್ರಾಹಕರಿಗೆ ಎಸ್‌ಎಂಎಸ್‌, ಈಮೇಲ್‌ ಮೂಲಕ ಮಾಹಿತಿ ನೀಡಬೇಕು

*ಮೊದಲೇ ಪಾವತಿ ಮಾಡಲಾದ ಉಡುಗೊರೆ ಕಾರ್ಡ್‌ಗಳು, ಸಾರ್ವಜನಿಕ ಸಾರಿಗೆಯಲ್ಲಿ ಬಳಕೆಯಾಗುವ ಕಾರ್ಡ್‌ಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ

*ಹೊಸ ನಿಯಮಗಳನ್ನು ಗ್ರಾಹಕರಿಗೆ ತಿಳಿಸುವುದಕ್ಕಾಗಿ ಕಾರ್ಡ್‌ ವಿತರಕ ಸಂಸ್ಥೆಗಳು ವ್ಯಾಪಕ ಪ್ರಚಾರ ನೀಡಬೇಕು

*ದೇಶದಲ್ಲಿ 80 ಕೋಟಿ ಡೆಬಿಟ್‌ ಕಾರ್ಡ್‌, 5 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಲ್ಲಿವೆ

*ಅರ್ಥವ್ಯವಸ್ಥೆಯನ್ನು ಡಿಜಿಟಲೀಕರಿಸುವ ಪ್ರಯತ್ನದ ಭಾಗವಾಗಿ ಕಾರ್ಡ್‌ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ

ಬಳಸದಿದ್ದರೆ ಸ್ಥಗಿತ

ಆನ್‌ಲೈನ್‌, ಅಂತರರಾಷ್ಟ್ರೀಯ ವಹಿವಾಟು ಮತ್ತು ಕಾಂಟ್ಯಾಕ್ಟ್‌ಲೆಸ್‌ ವಹಿವಾಟಿಗೆ ಒಮ್ಮೆಯೂ ಬಳಕೆ ಆಗದ ಕಾರ್ಡ್‌ಗಳನ್ನು ಸ್ಥಗಿತ ಮಾಡುವುದು ಕಡ್ಡಾಯ. ಇಂತಹ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಆನ್‌ಲೈನ್‌ ವಹಿವಾಟು ಸ್ಥಗಿತವಾಗುತ್ತದೆ. ಆದರೆ, ಕಾರ್ಡ್‌ದಾರರು ಎಟಿಎಂ ಮೂಲಕ ಹಣ ಪಡೆಯುವುದಕ್ಕೆ ಅವಕಾಶ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT