ಸೋಮವಾರ, ಫೆಬ್ರವರಿ 24, 2020
19 °C

ಆರ್‌ಬಿಐ ಹಣಕಾಸು ನೀತಿ: ರೆಪೊ ದರ ಯಥಾಸ್ಥಿತಿ, 2020–21ರ ಜಿಡಿಪಿ ಅಂದಾಜು ಶೇ 6

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಗುರುವಾರ ಆರನೇ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೊ ದರ (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಯಥಾಸ್ಥಿತಿ ಕಾಯ್ದುಕೊಂಡಿದೆ.  

ಕೇಂದ್ರ ಬಜೆಟ್‌ ಮಂಡನೆಯಾದ ಬಳಿಕ ಆರ್‌ಬಿಐ ಹಣಕಾಸು ನೀತಿ ಪ್ರಕಟಣೆ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದಿದೆ. ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚಿಸುವ ದೃಷ್ಟಿಯಿಂದ ಯಾವುದೇ ನಿರ್ಧಾರಗಳು ಬಜೆಟ್‌ನಲ್ಲಿ ಹೊರಬಿದ್ದಿಲ್ಲ. ಆರ್ಥಿಕತೆ ಚೇತರಿಕೆಗೆ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ (ರೆಪೊ) ದರಗಳನ್ನು ಕಡಿತಗೊಳಿಸುವ ನಿರೀಕ್ಷೆ ಇತ್ತಾದರೂ, ಆರ್‌ಬಿಐ ಹಿಂದಿನ ದರದಲ್ಲಿ ಯಾವುದೇ ಬದಲಾವಣೆ ಘೋಷಿಸದೆ ಶೇ 5.15 ಮುಂದುವರಿಸಿದೆ. 

ಅದರಂತೆ, ರಿವರ್ಸ್‌ ರೆಪೊ ದರದಲ್ಲೂ ಬದಲಾವಣೆಯಾಗದೆ ಶೇ 4.90 ಮುಂದುವರಿದಿದೆ. ಹಣಕಾಸು ನೀತಿ ಸಮಿತಿಯ ಎಲ್ಲ ಆರು ಸದಸ್ಯರು ನಿರ್ಧಾರದ ಪರವಾಗಿಯೇ ಮತ ನೀಡಿದ್ದಾರೆ. 

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷರಾಗಿರುವ ಹಣಕಾಸು ನೀತಿ ಸಮಿತಿಯು ದೇಶದ ಆರ್ಥಿಕ ಪರಿಸ್ಥಿತಿಯ ಕುರಿತು ಸಮಾಲೋಚನೆ ನಡೆಸಿ ಆರ್ಥಿಕತೆ ಉತ್ತೇಜನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡಿದೆ. 2020–21ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಪರಿಷ್ಕರಿಸಿ, ಶೇ 5.5–6ರಷ್ಟು ಇರಲಿದೆ ಎಂದು ಅಂದಾಜಿಸಿದೆ. ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಅಂದಾಜಿನಲ್ಲಿ (ಶೇ 5) ಬದಲಾವಣೆ ಮಾಡಿಲ್ಲ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಿಡಿಪಿ ಶೇ 5.9–6.3 ಇರಲಿದೆ ಎಂದು ಅಂದಾಜಿಸಿತ್ತು. ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 6 ತಲುಪಲಿದೆ ಎಂದು ಅಂದಾಜಿಸಿದೆ.

ಹಣದುಬ್ಬರವು ಆರ್‌ಬಿಐನ ನಿರೀಕ್ಷೆಯನ್ನೂ ಮೀರಿ (ಶೇ 6) ಬೆಳೆದಿದೆ ಹಾಗೂ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 7.3ಕ್ಕೆ ಗರಿಷ್ಠ ಏರಿಕೆ ಕಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು