ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಬಲ್ಯ ಸಾಧಿಸಬೇಡಿ: ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ನೌಕರರ ಸಂಘಟನೆ ಎಚ್ಚರಿಕೆ

ಸ್ವಾಯತ್ತೆ ಕುರಿತ ಗವರ್ನರ್‌ ವಿರಳ್‌ ವಿ. ಆಚಾರ್ಯ ಹೇಳಿಕೆ ಬೆಂಬಲಿಸಿ ಪ್ರಕಟಣೆ
Last Updated 30 ಅಕ್ಟೋಬರ್ 2018, 6:04 IST
ಅಕ್ಷರ ಗಾತ್ರ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸ್ವಾಯತ್ತೆಯನ್ನು ಕಡೆಗಣಿಸಬೇಡಿ.ಸಂಸ್ಥೆಯ ಮೇಲೆ ಪ್ರಾಬಲ್ಯ ಸಾಧಿಸಬೇಡಿ ಎಂದು ಆರ್‌ಬಿಐ ನೌಕರರ ಸಂಘಟನೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಆರ್‌ಬಿಐ ಸ್ವಾಯತ್ತೆಯನ್ನು ಕೇಂದ್ರ ಸರ್ಕಾರ ಗೌರವಿಸದಿದ್ದರೆ ಹಣಕಾಸು ಮಾರುಕಟ್ಟೆ ಕುಸಿತ ಅನುಭವಿಸಲಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್‌ ವಿರಳ್‌ ವಿ. ಆಚಾರ್ಯ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಬೆಂಬಲ ಸೂಚಿಸಿ ಪ್ರಕಟಣೆ ಬಿಡುಗಡೆ ಮಾಡಿರುವ ನೌಕರರ ಸಂಘಟನೆ, ಆರ್‌ಬಿಐಯನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುವಂತೆ ತಜ್ಞರು ಸರ್ಕಾರವನ್ನು ಮನವೊಲಿಸಬೇಕು ಎಂದು ಹೇಳಿದೆ.

‘ಆಚಾರ್ಯ ಅವರು ಹಠಾತ್ ಆಗಿ ಹೇಳಿಕೆ ನೀಡಿಲ್ಲ. ದೀರ್ಘ ಕಾಲದ ಅಸಮಾಧಾನವನ್ನು ಹೊರಹಾಕಿದ್ದಾರೆ. ಆರ್‌ಬಿಐ ಮತ್ತು ಸರ್ಕಾರಗಳ ನಡುವಣ ತಿಕ್ಕಾಟ ಕೇವಲ ಈಗಿನ ಸರ್ಕಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಸರ್ಕಾರಗಳು ತಮ್ಮ ಅವಧಿಯಲ್ಲಿ ಆರ್‌ಬಿಐ ಮೇಲೆ ಒತ್ತಡ ಹೇರುತ್ತವೆ’ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ಆರ್‌ಬಿಐ ಜತೆ ಮುನಿಸಿಕೊಂಡಿದ್ದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಆರ್‌ಬಿಐ ಇಲ್ಲದೆಯೇ ಮುಂದುವರಿಯುವುದಾಗಿ ಹಿಂದೊಮ್ಮೆ ಹೇಳಿದ್ದರು ಎಂಬುದನ್ನು ಮಾಜಿ ಗವರ್ನರ್ ಡಿ.ಸುಬ್ಬ ರಾವ್ ಸ್ಮ‌ರಿಸಿದ್ದರು. ಆದರೂ ಆರ್‌ಬಿಐ ಅಸ್ತಿತ್ವಕ್ಕೆ ಏನೂ ಧಕ್ಕೆಯಾಗಿಲ್ಲ ಎಂಬುದನ್ನೂ ರಾವ್ ಹೇಳಿದ್ದರು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಆರ್‌ಬಿಐನ ಅಸಮಾಧಾನ ಈಗ ವಿಸ್ತಾರಗೊಂಡಿದೆ. ಸರ್ಕಾರ ಮತ್ತು ಹಣಕಾಸು ಸಚಿವಾಲಯದ ಒತ್ತಡದ ಬಗ್ಗೆ ಆಚಾರ್ಯ ಅವರು ಮಾತನಾಡಿದ್ದಾರೆ. ಆರ್‌ಬಿಐಯನ್ನು ದುರ್ಬಲಗೊಳಿಸುವುದು ವಿಪತ್ತಿಗೆ ಕಾರಣವಾಗಲಿದೆ. ಸರ್ಕಾರ ಮತ್ತು ಆರ್‌ಬಿಐ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಹೊರತಾಗಿ ಆರ್‌ಬಿಐ ಮೇಲೆ ದಬ್ಬಾಳಿಕೆ ನಡೆಸಿದರೆ ದೇಶ ಬೆಲೆ ತೆರಬೇಕಾದೀತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದಿದ್ದಎ.ಡಿ. ಶ್ರಾಫ್‌ ಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ್ದವಿರಳ್‌ ವಿ. ಆಚಾರ್ಯ, ‘ಕೇಂದ್ರ ಬ್ಯಾಂಕಿನ ಸ್ವಾತಂತ್ರವನ್ನು ಗೌರವಿಸದ ಸರ್ಕಾರವು ಶೀಘ್ರದಲ್ಲೇ ಅಥವಾ ನಂತರದ ದಿನಗಳಲ್ಲಿ ಆರ್ಥಿಕ ಕುಸಿತವನ್ನು ಅನುಭವಿಸಬೇಕಾಗುತ್ತದೆ. ಇದು ಹಣಕಾಸು ಸಂಕಷ್ಟವನ್ನು ತಂದೊಡ್ಡಲಿದ್ದು, ಇದರಿಂದಾಗಿ ಪ್ರಮುಖ ಹಣಕಾಸು ನಿಯಂತ್ರಣ ಸಂಸ್ಥೆ ದುರ್ಬಲಗೊಳ್ಳಲಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT