ಶುಕ್ರವಾರ, ಜೂನ್ 5, 2020
27 °C
ಕೋವಿಡ್‌: ಕೇಂದ್ರ ಸರ್ಕಾರದ ಉಪಕ್ರಮಗಳ ವಿವರ ಪ್ರಕಟಿಸಿದ ಸಚಿವೆ ನಿರ್ಮಲಾ

ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್‌ನ ಮೂರನೇ ಕಂತಿನಲ್ಲಿ ರೈತರಿಗೆ ಒತ್ತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ಪಿಡುಗಿನಿಂದ ತತ್ತರಿಸಿರುವ ದೇಶಕ್ಕೆ ಕೇಂದ್ರವು ನೀಡಲು ಉದ್ದೇಶಿಸಿರುವ ಪರಿಹಾರ ಕ್ರಮಗಳ ಮೂರನೇ ಕಂತಿನ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಪ್ರಕಟಿಸಿದ್ದಾರೆ. ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳು ಮೂರನೇ ಕಂತಿನ ಕೇಂದ್ರದಲ್ಲಿವೆ. ಒಟ್ಟು ₹ 1.63 ಲಕ್ಷ ಕೋಟಿಯ ಯೋಜನೆಗಳನ್ನು ಪ್ರಕಟಿಸಲಾಗಿದೆ. 

ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳಿಗೆ ಒಟ್ಟು ಎಂಟು ಉಪಕ್ರಮಗಳನ್ನು ನಿರ್ಮಲಾ ಪ್ರಕಟಿಸಿದ್ದಾರೆ. ಆಡಳಿತ ಸುಧಾರಣೆಯ ಮೂರು ಕ್ರಮಗಳನ್ನು ಜಾರಿಗೆ ತರುವ ಬಗ್ಗೆಯೂ ಅವರು ಮಾತನಾಡಿದ್ದಾರೆ.  

ಎಂಟು ಉಪಕ್ರಮಗಳು

1. ಕೃಷಿ ಮೂಲಸೌಕರ್ಯವನ್ನು ಬಲಪಡಿಸುವುದಕ್ಕಾಗಿ ₹ 1 ಲಕ್ಷ ಕೋಟಿ ನಿಧಿ. ಕೋಲ್ಡ್‌ ಸ್ಟೋರೇಜ್‌ ಸೌಲಭ್ಯಗಳು, ಆಹಾರ ಸಂಗ್ರಹ ಕೇಂದ್ರಗಳು ಮುಂತಾದವುಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಸ್ಟಾರ್ಟ್‌ ಅಪ್‌ಗಳು, ಮಾರಾಟಗಾರರಿಗೆ ಅನುಕೂಲ ಆಗಲಿದೆ. 

2.ಆಹಾರ ಸಿದ್ಧಪಡಿಸುವ ಸಣ್ಣ ಗಾತ್ರದ ಸಂಸ್ಥೆಗಳ ನೆರವಿಗೆ ₹10 ಸಾವಿರ ಕೋಟಿಯ ಯೋಜನೆ. ಆರೋಗ್ಯ ಮತ್ತು ಕ್ಷೇಮ, ಪೌಷ್ಟಿಕತೆ, ಗಿಡಮೂಲಿಕೆ, ಸಾವಯವ ಉತ್ಪನ್ನಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತವೆ. ಎರಡು ಲಕ್ಷ ಘಟಕಗಳಿಗೆ ಪ್ರಯೋಜನ ದೊರೆಯಲಿದೆ. ಇಂತಹ ಉತ್ಪನ್ನಗಳನ್ನು ಬ್ರಾಂಡ್‌ಗಳಾಗಿ ಬೆಳೆಸಿ, ಜಾಗತಿಕ ಮಾರುಕಟ್ಟೆ ಪಡೆಯುವುದು ಉದ್ದೇಶ. ಮಹಿಳಾ ಉದ್ಯಮಿಗಳು ಮತ್ತು ಮಹಿಳಾ ಕಾರ್ಮಿಕರಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. 

3. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಮೀನುಗಾರಿಕಾ ದೋಣಿ ಖರೀದಿ ಮತ್ತು ಬಂದರುಗಳ ಅಭಿವೃದ್ಧಿಗೆ ₹20 ಸಾವಿರ ಕೋಟಿ. ದೋಣಿಗಳಿಗೆ ವಿಮೆ ಸೌಲಭ್ಯವೂ ಇದರಲ್ಲಿ ಸೇರುತ್ತದೆ. ಹೊಸ ದೋಣಿಗಳು ಮತ್ತು ಬಂದರು ನಿರ್ಮಾಣದಿಂದಾಗಿ ವಾರ್ಷಿಕ 70 ಲಕ್ಷ ಟನ್‌ ಮೀನು ಹೆಚ್ಚುವರಿಯಾಗಿ ದೊರೆಯಲಿವೆ. ₹20 ಸಾವಿರ ಕೋಟಿಯ ಪೈಕಿ ₹9 ಸಾವಿರ ಕೋಟಿಯನ್ನು ದೋಣಿ, ಬಂದರು ಮತ್ತು ಮಂಡಿಗಳಿಗಾಗಿ ವೆಚ್ಚ ಮಾಡಲಾಗುವುದು. 55 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ನಿರ್ಮಲಾ  ಹೇಳಿದ್ದಾರೆ. 

4. ಕಾಲು–ಬಾಯಿ ರೋಗಕ್ಕೆ ಲಸಿಕೆ: ಜಾನುವಾರುಗಳಿಗೆ ಶೇ ನೂರರಷ್ಟು ಲಸಿಕೆ ಹಾಕಿಸುವುದಕ್ಕಾಗಿ ₹13,343 ಕೋಟಿಯ ಯೋಜನೆ ಹಾಕಿಕೊಳ್ಳಲಾಗಿದೆ. 53 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗುವುದು. ಜನವರಿವರೆಗೆ 1.5 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿದೆ. ಲಾಕ್‌ಡೌನ್‌ ತೆರವಾದ ಬಳಿಕ ಯೋಜನೆ ಮುಂದುವರಿಯಲಿದೆ. 

5. ಪಶು ಸಂಗೋಪನೆಯ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿ. ಅದಕ್ಕಾಗಿ ₹15 ಸಾವಿರ ಕೋಟಿ ವಿನಿಯೋಗ. ಹೈನುಗಾರಿಕೆ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವ ಗುರಿ ಹಾಕಿಕೊಳ್ಳಲಾಗಿದೆ.

6. ಗಿಡಮೂಲಿಕೆ ಕೃಷಿಗೆ ₹4,000 ಕೋಟಿ ನೆರವು. 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗಿಡಮೂಲಿಕೆ ಬೆಳೆಯುವುದು ಉದ್ದೇಶ. ಗಂಗಾ ನದಿಯ ಎರಡೂ ದಂಡೆಗಳಲ್ಲಿ ಗಿಡಮೂಲಿಕೆ ಕಾರಿಡಾರ್‌ ರೂಪಿಸುವ ಗುರಿ

7. ಜೇನು  ಹುಳ ಸಾಕಣೆ ಕ್ಷೇತ್ರಕ್ಕೆ ₹500 ಕೋಟಿ. ಹಿತ್ತಲಿಂದ ಜಗದಗಲಕ್ಕೆ (ಲೋಕಲ್‌ ಟು ಗ್ಲೋಬಲ್‌) ಉಪಕ್ರಮದ ಭಾಗ ಇದು. 

8. ಲಾಕ್‌ಡೌನ್‌ ಅವಧಿಯಲ್ಲಿ ಅಸ್ತವ್ಯಸ್ತಗೊಂಡಿರುವ ಪೂರೈಕೆ ಸರಪಣಿ ಸುಧಾರಣೆಗೆ ₹500 ಕೋಟಿ. ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಗೆ ಸೀಮಿತವಾಗಿ ಈ ಯೋಜನೆ ಜಾರಿಯಲ್ಲಿ ಇತ್ತು. ಈಗ ಇತರ ತರಕಾರಿಗಳನ್ನೂ ಇದರಲ್ಲಿ ಸೇರಿಸಲು ಉದ್ದೇಶಿಸಲಾಗಿದೆ. ಉತ್ಪನ್ನಗಳ ಸಾಗಾಟಕ್ಕೆ ಶೇ 50 ಮತ್ತು ಸಂಗ್ರಹಕ್ಕೆ ಶೇ 50ರಷ್ಟು ಸಹಾಯಧನ ದೊರೆಯಲಿದೆ. 

  ಮೂರು ಸುಧಾರಣೆಗಳು

1. ಆರೂವರೆ ದಶಕ ಹಳೆಯದಾದ, ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ. ಏಕದಳ ಧಾನ್ಯಗಳು, ಖಾದ್ಯತೈಲ, ಎಣ್ಣೆ ಬೀಜ, ದ್ವಿದಳ ಧಾನ್ಯಗಳು, ಈರುಳ್ಳಿ ಮತ್ತು ಆಲೂಗಡ್ಡೆ ಸೇರಿ ವಿವಿಧ ಉತ್ಪನ್ನಗಳನ್ನು ನಿಯಂತ್ರಣದಿಂದ ಹೊರಗೆ ಇರಿಸುವುದು ಇದರ ಉದ್ದೇಶ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಈ ಉತ್ಪನ್ನಗಳ ಮೇಲಿನ ಸಂಗ್ರಹ ಮಿತಿಯು ರದ್ದಾಗಲಿದೆ. ರಾಷ್ಟ್ರೀಯ ವಿಕೋಪ, ಬರಗಾಲದಂತಹ ಸಂದರ್ಭದಲ್ಲಿ ಮಾತ್ರ ಮಿತಿ ಹೇರುವುದಕ್ಕೆ ಅವಕಾಶ ಇರುತ್ತದೆ.

ಸಂಸ್ಕರಣೆಗಾರರು ಅಥವಾ ಉತ್ಪನ್ನಗಳ ಮೌಲ್ಯವರ್ಧಿತ ಸರಪಣಿಯ ಭಾಗವಾಗಿರುವವರಿಗೆ ಸಂಗ್ರಹ ಮಿತಿ ಇರುವುದಿಲ್ಲ. 

 2. ಮಾರಾಟದ ಆಯ್ಕೆಯನ್ನು ರೈತರಿಗೇ ನೀಡುವುದಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ನೀತಿಯ‌ನ್ನು ಬದಲಾಯಿಸಲಾಗುವುದು. 

ಎಪಿಎಂಸಿಯಲ್ಲಿ ಪರವಾನಗಿ ಪಡೆದಿರುವವರಿಗೆ ಮಾತ್ರ ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಈಗ ಅವಕಾಶ ಇದೆ. ಬೇರೆ ಯಾವುದೇ ಕೈಗಾರಿಕಾ ಉತ್ಪನ್ನಕ್ಕೆ ಇಂತಹ ನಿರ್ಬಂಧ ಇಲ್ಲ. ಸಂಗ್ರಹಕ್ಕೆ ಇರುವ ಮಿತಿ ಕೂಡ ರೈತರಿಗೆ ಪ್ರತಿಕೂಲವೇ ಆಗಿದೆ. ಇಂತಹ ನಿರ್ಬಂಧಗಳು ಕೃಷಿ ಉತ್ಪನ್ನಗಳ ಮುಕ್ತ ಸಾಗಾಟಕ್ಕೆ ತಡೆ ಒಡ್ಡುತ್ತವೆ. ಪರಿಣಾಮವಾಗಿ ರೈತರಿಗೆ ಕಡಿಮೆ ಬೆಲೆ ದೊರೆಯುತ್ತಿದೆ ಎಂದು ನಿರ್ಮಲಾ ವಿವರಿಸಿದ್ದಾರೆ. 

ರೈತರಿಗೆ ಆಯ್ಕೆಗಳನ್ನು ಒದಗಿಸಿಕೊಡಲು, ಆಕರ್ಷಕ ಬೆಲೆ ದೊರಕಿಸಲು, ಉತ್ಪನ್ನಗಳ ಅಂತರ ರಾಜ್ಯ ಮುಕ್ತ ಸಾಗಾಟಕ್ಕೆ ಅನುಕೂಲ ಮಾಡಿಕೊಡಲು, ಇ–ವ್ಯಾಪಾರಕ್ಕೆ ಅವಕಾಶ ನೀಡಲು ಕೇಂದ್ರವು ಕಾನೂನು ರೂಪಿಸಲಿದೆ.

3. ಕೃಷಿ ಉತ್ಪನ್ನ ಬೆಲೆ ಬೆಂಬಲ ವ್ಯವಸ್ಥೆ– ಬೆಳೆಗೆ ಯಾವ ಬೆಲೆ ದೊರೆಯಲಿದೆ ಎಂಬುದನ್ನು ರೈತರಿಗೆ ತಿಳಿಸುವ ವ್ಯವಸ್ಥೆ ಈಗ ಇಲ್ಲ. ತಮ್ಮ ಉತ್ಪನ್ನಕ್ಕೆ ಯಾವ ಬೆಲೆ ದೊರೆಯಲಿದೆ ಎಂಬುದನ್ನು ರೈತರು ಅರಿತುಕೊಳ್ಳುವ ವ್ಯವಸ್ಥೆಗೆ ಬೇಕಾದ ಕಾನೂನಾತ್ಮಕ ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಸರ್ಕಾರ ರೂಪಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು