ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪ್ಯ ಮಾಹಿತಿ ಹಂಚಿಕೊಂಡು ಭಾರತದಲ್ಲಿ ಬಿಯರ್ ದರ ನಿಗದಿ ಮಾಡುತ್ತಿದ್ದ ಕಂಪನಿ ಕೂಟ!

Last Updated 11 ಡಿಸೆಂಬರ್ 2020, 16:25 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಲ್ಸ್‌ಬರ್ಗ್‌, ಸ್ಯಾಬ್‌ಮಿಲ್ಲರ್ ಮತ್ತು ಭಾರತದ ಯುನೈಟೆಡ್ ಬ್ರೀವರಿಸ್‌ (ಯುಬಿ) ಕಂಪನಿಯ ಹಿರಿಯ ಅಧಿಕಾರಿಗಳು ಗೋಪ್ಯವಾದ ವಾಣಿಜ್ಯ ಮಾಹಿತಿಯನ್ನು ಹಂಚಿಕೊಂಡು ಭಾರತದಲ್ಲಿ ಹನ್ನೊಂದು ವರ್ಷಗಳ ಕಾಲ ಬಿಯರ್‌ ದರವನ್ನು ನಿಗದಿ ಮಾಡುತ್ತಿದ್ದರು ಎಂದು ತನಿಖಾ ವರದಿಯೊಂದು ಹೇಳಿದೆ.

ಕೇಂದ್ರ ಸ್ಪರ್ಧಾ ಆಯೋಗವು (ಸಿಸಿಐ) 2018ರಲ್ಲಿ ಈ ಮೂರು ಬಿಯರ್‌ ತಯಾರಿಕಾ ಕಂಪನಿಗಳ ಕಚೇರಿಗಳ ಮೇಲೆ ದಾಳಿ ನಡೆಸಿ, ವಿಚಾರಣೆ ಆರಂಭಿಸಿತ್ತು. ಈ ಮೂರು ಬಿಯರ್‌ ತಯಾರಿಕಾ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಶೇಕಡ 88ರಷ್ಟು ಪಾಲು ಹೊಂದಿವೆ.

ಈ ವರದಿಯನ್ನು ಸಿಸಿಐನ ಹಿರಿಯ ಅಧಿಕಾರಿಗಳು ಪರಿಶೀಲಿಸಿ, ಕಂಪನಿಗಳಿಗೆ ವಿಧಿಸಬೇಕಿರುವ ದಂಡದ ಪ್ರಮಾಣ ತೀರ್ಮಾನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನಿಖಾ ತಂಡ ಸಿದ್ಧಪಡಿಸಿದ ವರದಿಯನ್ನು ಸಿಸಿಐ ಸದಸ್ಯರು ಒಪ್ಪದಿರುವ ಸಾಧ್ಯತೆಯೂ ಇದೆ.

ಕಂಪನಿಗಳ ಅಧಿಕಾರಿಗಳ ನಡುವಿನ ಮಾತುಕತೆ, ವಾಟ್ಸ್‌ಆ್ಯಪ್‌ ಸಂದೇಶಗಳು ಹಾಗೂ ಇ–ಮೇಲ್‌ ಮೂಲಕ ನಡೆದ ಮಾತುಕತೆಗಳು ತನಿಖಾ ವರದಿಯಲ್ಲಿ ಅಡಕವಾಗಿವೆ. ಈ ಕಂಪನಿಗಳು ಒಟ್ಟಾಗಿ ಕಾಲಕಾಲಕ್ಕೆ ಕಾರ್ಯತಂತ್ರ ರೂಪಿಸಿ, ‘ಹಲವು ರಾಜ್ಯಗಳಲ್ಲಿ’ ಬೆಲೆ ಹೆಚ್ಚಳದ ಆಗ್ರಹವನ್ನು ಮಂಡಿಸುತ್ತಿದ್ದವು. ತಾವೇ ಒಂದು ಕೂಟವನ್ನು ರಚಿಸಿಕೊಂಡಿದ್ದರ ಪರಿಣಾಮವಾಗಿ ಕಂಪನಿಗಳಿಗೆ ರಾಜ್ಯಗಳ ಅಧಿಕಾರಿಗಳ ಎದುರು ಪ್ರಬಲವಾಗಿ ಚೌಕಾಶಿ ನಡೆಸಲು ಸಾಧ್ಯವಾಗುತ್ತಿತ್ತು ಎಂದು ಸಿಸಿಐ ಹೇಳಿದೆ.

ಅಖಿಲ ಭಾರತ ಬಿಯರ್ ತಯಾರಕರ ಸಂಘವನ್ನು (ಎಐಬಿಎ) ಈ ಕಂಪನಿಗಳು ಒಟ್ಟಾಗಿ ಬೆಲೆಯನ್ನು ನಿರ್ಧರಿಸಲು ವೇದಿಕೆಯನ್ನಾಗಿ ಬಳಸಿಕೊಂಡಿದ್ದವು. ‘ನಾವು ಸಿಕ್ಕಿಬೀಳದಂತೆ ನೋಡಿಕೊಳ್ಳಬೇಕು’ ಎಂದು ಎಐಬಿಎ ಮಹಾನಿರ್ದೇಶಕ 2016ರಲ್ಲಿ ಇ–ಮೇಲ್ ಮೂಲಕ ಮೂರೂ ಕಂಪನಿಗಳ ಅಧಿಕಾರಿಗಳಲ್ಲಿ ಹೇಳಿದ್ದರು.

‘ತಾವು ಎಐಬಿಎ ಮೂಲಕ ಒಟ್ಟಾಗಿ ನಡೆಸುತ್ತಿರುವ ಪ್ರಯತ್ನವು ಸ್ಪರ್ಧೆಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು’ ಎಂದು ವರದಿ ಹೇಳಿದೆ. ಈ ಕಂಪನಿಗಳ ಒಕ್ಕೂಟವು 2007ರಿಂದ 2018ರವರೆಗೆ ಅಸ್ತಿತ್ವದಲ್ಲಿ ಇತ್ತು ಎಂದು ಅದು ಹೇಳಿದೆ.

ಸಿಸಿಐ ಸಂಸ್ಥೆಯು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿಲ್ಲ. ಎಐಬಿಎ ಮತ್ತು ಕಾರ್ಲ್ಸ್‌ಬರ್ಗ್‌ ಪ್ರತಿಕ್ರಿಯೆಗೆ ನಿರಾಕರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT