ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಗೆ ಇಲ್ಲದ ಬ್ಯಾಂಕಿಂಗ್‌ ವ್ಯವಸ್ಥೆ

ನಗದು ರೂಪದಲ್ಲಿ ವ್ಯವಹಾರ
Last Updated 6 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

‌ರಾಮನಗರ: ನಿತ್ಯ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ ರಾಜ್ಯದ ರೇಷ್ಮೆಗೂಡು ಮಾರುಕಟ್ಟೆಗಳು ಇನ್ನೂ ನಗದು ಕೇಂದ್ರಿತ ವ್ಯವಹಾರ ನಡೆಸುತ್ತಿದ್ದು, ಬ್ಯಾಂಕಿಂಗ್ ವ್ಯವಸ್ಥೆಯು ಇಲ್ಲಿ ಮರೀಚಿಕೆಯಾಗಿದೆ.

ರಾಜ್ಯದಲ್ಲಿ ಕೃಷಿ ಪೂರಕ ಚಟುವಟಿಕೆಗಳಲ್ಲಿ ರೇಷ್ಮೆ ಉದ್ಯಮ ಪ್ರಮುಖವಾಗಿದೆ. ರೈತರು ಬೆಳೆದು ತಂದ ಗೂಡುಗಳನ್ನು ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತಿದೆ. ಈಚೆಗೆ ಆನ್‌ಲೈನ್‌ ಹರಾಜು ಪ್ರಕ್ರಿಯೆ ವ್ಯವಸ್ಥೆ ಜಾರಿಗೆ ಬಂದಿದೆ. ಹೀಗೆ ಹರಾಜಾದ ಗೂಡಿನ ಹಣವನ್ನು ರೈತರಿಗೆ ನಗದು ರೂಪದಲ್ಲಿ ನೀಡಲಾಗುತ್ತಿದೆ. ಆರ್‌ಟಿಜಿಎಸ್ ಮೂಲಕ ರೈತರ ಬ್ಯಾಂಕ್‌ ಖಾತೆಗಳಿಗೆ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎನ್ನುವುದು ರೇಷ್ಮೆ ಬೆಳೆಗಾರರ ಆರೋಪ.

ರಾಜ್ಯದಲ್ಲಿ ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮಾರುಕಟ್ಟೆಗಳಲ್ಲಿ ಅತಿಹೆಚ್ಚು ಗೂಡು ಖರೀದಿ ನಡೆಯುತ್ತದೆ. ಈ ಎರಡು ಮಾರುಕಟ್ಟೆಯಲ್ಲಿಯೇ ದಿನಕ್ಕೆ ದ್ವಿತಳಿ ಹಾಗೂ ಮಿಶ್ರತಳಿ ಸೇರಿ ಸುಮಾರು 65 ರಿಂದ 70 ಟನ್‌ನಷ್ಟು ಗೂಡು ಮಾರಾಟ ಆಗುತ್ತಿದೆ. ಇದಲ್ಲದೆ ಚನ್ನಪಟ್ಟಣ, ಕನಕಪುರ, ಕೊಳ್ಳೇಗಾಲ, ಕೋಲಾರ, ಚಿಂತಾಮಣಿ ಸೇರಿದಂತೆ ರಾಜ್ಯದ ವಿವಿಧೆಡೆ 50 ಮಾರುಕಟ್ಟೆಗಳಿವೆ. ಎಲ್ಲ ಲೆಕ್ಕ ಹಾಕಿದರೆ ದಿನಕ್ಕೆ ಸರಾಸರಿ ₹10 ಕೋಟಿಯಷ್ಟು ವಹಿವಾಟು ನಡೆಯುವುದಾಗಿ ಮಾರುಕಟ್ಟೆ ಅಧಿಕಾರಿಗಳು ಹೇಳುತ್ತಾರೆ.

ನಗದು ರೂಪದಲ್ಲಿ ವ್ಯವಹಾರ ನಡೆಯುವುದರಿಂದ ಹಲವು ತೊಂದರೆಗಳಾಗುತ್ತಿವೆ. ರಾಮನಗರ, ಶಿಡ್ಲಘಟ್ಟದಲ್ಲಿನ ಮಾರುಕಟ್ಟೆಗಳಿಗೆ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬೀದರ್, ಬಾಗಲಕೋಟೆ, ವಿಜಯಪುರ ಮೊದಲಾದ ಜಿಲ್ಲೆಗಳಿಂದಲೂ ರೈತರು ಗೂಡು ಹೊತ್ತು ತರುತ್ತಾರೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದಲೂ ಇಲ್ಲಿನ ಮಾರುಕಟ್ಟೆಗಳಿಗೆ ಗೂಡು ಬರುತ್ತದೆ.

ಹಣ ‍ಪಾವತಿ ವಿಳಂಬ: ಹೀಗೆ ಗೂಡು ತಂದವರಿಗೆ ರೀಲರ್‌ಗಳು ಸಕಾಲದಲ್ಲಿ ಹಣ ಪಾವತಿ ಮಾಡದೇ ಸತಾಯಿಸುತ್ತಾರೆ. ಹರಾಜಿನಲ್ಲಿ ಹೇಳಿದ್ದಕ್ಕಿಂತ ಕಡಿಮೆ ದುಡ್ಡು ಕೊಡುತ್ತಾರೆ. ಕೆಲವೊಮ್ಮೆ ಇಂತಿಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬುದು ರೇಷ್ಮೆ ಬೆಳೆಗಾರರ ಆರೋಪ.

ದೂರದ ಊರುಗಳಿಂದ ಬಂದ ಬೆಳೆಗಾರರು ತಮ್ಮೊಡನೆ ಸಾವಿರಾರು ರೂಪಾಯಿ ನಗದು ಕೊಂಡೊಯ್ಯಬೇಕಾಗುತ್ತದೆ. ಹೀಗೆ ಹಣದ ಜೊತೆಗೆ ಬಸ್‌, ರೈಲುಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಬೆಳೆಗಾರರು ಹಣ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ.

ಬ್ಯಾಂಕ್‌ಗಳ ಹಿಂದೇಟು?: ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಶಾಖೆಗಳನ್ನು ತೆರೆಯಲು ರಾಷ್ಟ್ರೀಕೃತ, ವಾಣಿಜ್ಯ ಬಾಂಕುಗಳು ಮುಂದೆ ಬರುತ್ತಿಲ್ಲ.

‘ವರ್ಷದ 363 ದಿನ ಈ ಮಾರುಕಟ್ಟೆ ತೆರೆದಿದ್ದು, ಅಷ್ಟೂ ದಿನ ಸೇವೆ ಒದಗಿಸಲು ಆಗದು. ಗೂಡು ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್‌ ವ್ಯವಹಾರ ಕೇವಲ ನಗದು ವರ್ಗಾವಣೆಗೆ ಸೀಮಿತ ಆಗುವುದರಿಂದ ಬ್ಯಾಂಕ್‌ಗಳಿಗೆ ನಷ್ಟ. ಠೇವಣಿಯೂ ಬಾರದು ಎನ್ನುವ ಕಾರಣಕ್ಕೆ ಹಿಂದೇಟು ಹಾಕುತ್ತಿವೆ’ ಎಂದು ಬ್ಯಾಂಕೊಂದರ ಸಿಬ್ಬಂದಿ ಹೇಳುತ್ತಾರೆ.

ಚೆಕ್‌ ಬೌನ್ಸ್‌ ಪ್ರಕರಣಗಳೇ ಹೆಚ್ಚು!

ಎರಡು ವರ್ಷಗಳ ಹಿಂದೆ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕೆಲವು ತಿಂಗಳು ಚೆಕ್‌ ಮೂಲಕ ವಹಿವಾಟು ವ್ಯವಸ್ಥೆಯು ಜಾರಿಯಲ್ಲಿ ಇತ್ತು. ಈ ವೇಳೆ ರೀಲರ್‌ಗಳು ನೀಡಿದ ಸಾಕಷ್ಟು ಚೆಕ್‌ಗಳು ಬೌನ್ಸ್ ಆಗಿ ರೈತರು ಅವರನ್ನು ಹುಡುಕಿಕೊಂಡು ಅಲೆಯುವಂತಾಗಿತ್ತು.

ಮಾರುಕಟ್ಟೆ ಅಧಿಕಾರಿಗಳು ತಮಗೆ ಸಂಬಂಧ ಇಲ್ಲ ಎಂಬಂತೆ ಕೈಚೆಲ್ಲಿದ್ದರು. ಕೆಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದವು. ಇದರಿಂದಾಗಿ ರೈತರು ಚೆಕ್‌ ಸ್ವೀಕರಿಸಲು ಹಿಂದೇಟು ಹಾಕಿದರು. ಮತ್ತೆ ನಗದು ವ್ಯವಹಾರ ಜಾರಿಗೆ ಬಂದಿತು.

ಪ್ರಾಯೋಗಿಕ ವ್ಯವಸ್ಥೆ ಜಾರಿಗೆ ಯತ್ನ

‘ರಾಮನಗರದ ಗೂಡು ಮಾರುಕಟ್ಟೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಶಾಖೆ ಆರಂಭಕ್ಕೆ ಸರ್ಕಾರ ಸೂಚಿಸಿದ್ದು, ಸದ್ಯದಲ್ಲಿಯೇ ಹಣಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು’ ಎಂದು ರಾಮನಗರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಉಪ ನಿರ್ದೇಶಕ ಮುನ್ಶಿಬಸಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೊದಲು 50 ರೀಲರ್‌ಗಳನ್ನು ಆಯ್ದು ಅವರ ಖಾತೆಯಿಂದ ಹಣ ವರ್ಗಾವಣೆ ಮಾಡಲಾಗುವುದು. ಇದರ–ಸಾಧಕ ಬಾಧಕಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT