ಗುರುವಾರ , ಆಗಸ್ಟ್ 22, 2019
27 °C
ಗ್ರಾಹಕರ ದೂರು ಆಧರಿಸಿ, ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆಗೆ ಅಧಿಕಾರಿಗಳಿಂದ ಕಾರ್ಯತಂತ್ರ

ಜಿಎಸ್‌ಟಿ: ರೆಸ್ಟೊರೆಂಟ್ಸ್ ಮೇಲೆ ನಿಗಾ

Published:
Updated:

ನವದೆಹಲಿ: ಸಣ್ಣ ಪ್ರಮಾಣದ ರೆಸ್ಟೊರೆಂಟ್ಸ್‌ಗಳು ಮತ್ತು ಗ್ರಾಹಕರ ಜತೆ ನೇರ ವಹಿವಾಟು ನಡೆಸುವ ಸಂಸ್ಥೆಗಳು (ಬಿಟುಸಿ) ಸರಕು ಮತ್ತು ಸೇವಾ ತೆರಿಗೆ ವಂಚನೆ ಮಾಡುತ್ತಿರುವುದನ್ನು ತಡೆಯಲು ಜಿಎಸ್‌ಟಿ ಅಧಿಕಾರಿಗಳು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ರೆಸ್ಟೊರೆಂಟ್ಸ್‌ಗಳು ಮತ್ತು ‘ಬಿಟುಸಿ’ ಸಂಸ್ಥೆಗಳು ಗ್ರಾಹಕರಿಂದ ತೆರಿಗೆ ಸಂಗ್ರಹಿಸಿದರೂ ಅದನ್ನು ಸರ್ಕಾರಕ್ಕೆ ಪಾವತಿಸದಿರುವುದು ಪತ್ತೆಯಾಗಿದೆ. ಅನೇಕ ಗ್ರಾಹಕರು ಈ ಸಂಬಂಧ ಮೊಬೈಲ್‌ ಆ್ಯಪ್‌ Iris Peridot  ಡೌನ್‌ಲೋಡ್‌ ಮಾಡಿಕೊಂಡು ದೂರು ಸಲ್ಲಿಸಿದ್ದಾರೆ.

ರೆಸ್ಟೊರೆಂಟ್ಸ್‌ನ ಜಿಎಸ್‌ಟಿ ಗುರುತು ಸಂಖ್ಯೆ (ಜಿಎಸ್‌ಟಿಐಎನ್‌) ಸ್ಕ್ಯಾನ್‌ ಮಾಡಿ, ಸಂಸ್ಥೆಯು ರಿಟರ್ನ್ಸ್‌ ಸಲ್ಲಿಸಿರುವುದನ್ನು ಆ್ಯಪ್‌ನಲ್ಲಿ ಪರೀಕ್ಷಿಸಿ ದೂರು ಸಲ್ಲಿಸಲಾಗುತ್ತಿದೆ. ಗ್ರಾಹಕರ ಈ  ದೂರುಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಅವುಗಳನ್ನು  ತಕ್ಷಣವೇ ತೆರಿಗೆ ಇಲಾಖೆಗೆ ರವಾನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾರ್ಡ್‌ವೇರ್‌, ಪೀಠೋಪಕರಣ ಮತ್ತು ಎಲೆಕ್ಟ್ರಿಕಲ್‌ ಸರಕುಗಳ ವಹಿವಾಟು ನಡೆಸುವ ‘ಬಿಟುಸಿ’ ಸಂಸ್ಥೆಗಳ ವಿರುದ್ಧವೂ ಇದೇ ಬಗೆಯ ದೂರುಗಳು ದಾಖಲಾಗಿವೆ.

ದೂರುಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ತೆರಿಗೆ ವಂಚನೆ ಪ್ರಮಾಣ ಪತ್ತೆಹಚ್ಚಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತೆರಿಗೆ ಇಲಾಖೆಯು ಮುಂದಾಗಿದೆ. 

ವಾರ್ಷಿಕ  ₹ 1.50 ಕೋಟಿ ವಹಿವಾಟು ನಡೆಸುವ ಸಣ್ಣ ಪ್ರಮಾಣದ ವಹಿವಾಟು ಉದ್ದಿಮೆಗಳು ’ರಾಜಿ ತೆರಿಗೆ’ ಆಯ್ಕೆ ಮಾಡಿಕೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ರಿಟರ್ನ್ಸ್‌ ಸಲ್ಲಿಸುತ್ತವೆ. ಇಂತಹ ಉದ್ದಿಮೆಗಳು ಗ್ರಾಹಕರಿಂದ ಜಿಎಸ್‌ಟಿ ವಸೂಲಿ ಮಾಡುವಂತಿಲ್ಲ. ಇವುಗಳು ತಮ್ಮ ಸರಕುಪಟ್ಟಿ ಮೇಲೆ, ತಾವು ರಾಜಿ ತೆರಿಗೆ ಆಯ್ಕೆ ಮಾಡಿಕೊಂಡಿರುವುದರಿಂದ ತಮ್ಮ ಪೂರೈಕೆ ಮೇಲೆ ಜಿಎಸ್‌ಟಿ ವಿಧಿಸುವಂತಿಲ್ಲ ಎಂದು ಮುದ್ರಿಸಿರಬೇಕಾಗುತ್ತದೆ.

ರಾಜಿ ತೆರಿಗೆಯಡಿ (ಕಂಪೋಸಿಷನ್‌ ಸ್ಕೀಮ್‌) ವರ್ತಕರು ಮತ್ತು ಸರಕುಗಳ ತಯಾರಕರು ತಮ್ಮ ವಹಿವಾಟು ಆಧರಿಸಿ ಶೇ 1ರಷ್ಟು ಜಿಎಸ್‌ಟಿ ಮತ್ತು ರೆಸ್ಟೊರೆಂಟ್ಸ್‌ ಹಾಗೂ ಸೇವೆ ಒದಗಿಸುವವರು  ಕ್ರಮವಾಗಿ ಶೇ 5 ಮತ್ತು ಶೇ 6ರಷ್ಟು ತೆರಿಗೆ ಪಾವತಿಸುತ್ತಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹದಲ್ಲಿ ಶೇ 20ರಷ್ಟು ಪ್ರಗತಿ ಸಾಧಿಸುವ ಗುರಿ ತಲುಪಲು  ‘ಬಿಟುಸಿ’ ವಲಯದಲ್ಲಿನ ತೆರಿಗೆ ವಂಚನೆಯನ್ನು ಗಮನಾರ್ಹವಾಗಿ ತಗ್ಗಿಸಬೇಕಾಗಿದೆ. ಇನ್‌ಪುಟ್‌ ಕ್ರೆಡಿಟ್‌ ಪಡೆಯುವುದಕ್ಕೆ ನಿರ್ಬಂಧ ವಿಧಿಸಿರುವುದು ರೆಸ್ಟೊರೆಂಟ್ಸ್‌ ಮತ್ತು ರಿಯಲ್‌ ಎಸ್ಟೇಟ್‌ ವಲಯಗಳಿಗೆ ಪ್ರತಿಕೂಲವಾಗಿ ಪರಿಣಮಿಸಿದೆ. ಇದನ್ನು ಬಹು ಎಚ್ಚರಿಕೆಯಿಂದ ಪರಾಮರ್ಶಿಸಬೇಕಾಗಿದೆ ಎಂದು ತೆರಿಗೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

Post Comments (+)