ಚಿಲ್ಲರೆ ಹಣದುಬ್ಬರ ಹೆಚ್ಚಳ ವಾಹನ ಮಾರಾಟ ಕುಸಿತ

ಶನಿವಾರ, ಮೇ 25, 2019
33 °C

ಚಿಲ್ಲರೆ ಹಣದುಬ್ಬರ ಹೆಚ್ಚಳ ವಾಹನ ಮಾರಾಟ ಕುಸಿತ

Published:
Updated:

ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಏಪ್ರಿಲ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇ 2.92ರಷ್ಟು ಹೆಚ್ಚಳಗೊಂಡಿದ್ದರೆ, ಪ್ರಯಾಣಿಕರ ವಾಹನ ಮಾರಾಟವು ಶೇ 17ರಷ್ಟು ಕಡಿಮೆಯಾಗಿದೆ.

ಹಣದುಬ್ಬರ ಏರಿಕೆ ಮತ್ತು ಕಾರ್‌ ಮಾರಾಟ ಕುಸಿತವು ದೇಶಿ ಆರ್ಥಿಕತೆ ಪಾಲಿಗೆ ಪ್ರತಿಕೂಲತೆ ತಂದೊಡ್ಡಿವೆ.

ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ (ಸಿಪಿಐ) ಚಿಲ್ಲರೆ ಹಣದುಬ್ಬರವು, ಮಾರ್ಚ್‌ ತಿಂಗಳಲ್ಲಿ ಶೇ 2.86 ಮತ್ತು ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ಶೇ 4.58ರಷ್ಟು ದಾಖಲಾಗಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ತಿಳಿಸಿದೆ. ಆಹಾರ ಪದಾರ್ಥಗಳ ಹಣದುಬ್ಬರವು ಮಾರ್ಚ್‌ ತಿಂಗಳ ಶೇ 0.3 ರಿಂದ ಶೇ 1.1ಕ್ಕೆ ಏರಿಕೆಯಾಗಿದೆ.

ಕಾರ್‌ ಮಾರಾಟ ಕುಸಿತ: ಕಾರ್‌ಗಳ ಮಾರಾಟವು ಶೇ 20ರಷ್ಟು ಮತ್ತು ದ್ವಿಚಕ್ರ ಹಾಗೂ ಟ್ರ್ಯಾಕ್ಟರ್‌ಗಳ ಮಾರಾಟವುಶೇ 16ರಷ್ಟು ಕುಸಿತವಾಗಿರುವುದು ನಗರ ಮತ್ತು ಗ್ರಾಮೀಣ ಪ್ರದೇಶದ ಸಂಕಷ್ಟದ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ.

2018–19ರ ಹಣಕಾಸು ವರ್ಷದಲ್ಲಿ ವಿಮಾನ ಪ್ರಯಾಣಿಕರ ಹೆಚ್ಚಳವು ಆರು ವರ್ಷಗಳಲ್ಲಿಯೇ ಕಡಿಮೆ ಇರುವುದರ ಬೆನ್ನಲ್ಲೇ, ವಾಹನ ಮಾರಾಟ ಕುಸಿತಗೊಂಡಿರುವುದು ವರದಿಯಾಗಿದೆ. ಭಾರತದಲ್ಲಿನ ದೇಶಿ ವಿಮಾನ ಯಾನ ರಂಗವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರ ಹೊರತಾಗಿಯೂ ಹಿಂದಿನ ವರ್ಷ ದೇಶಿ ವಿಮಾನ ಪ್ರಯಾಣಿಕರ ಸಂಖ್ಯೆ ಕುಸಿದಿದೆ.

ಬಡ್ಡಿ ದರ ಕಡಿತ: ಆರ್ಥಿಕ ಬೆಳವಣಿಗೆಗೆ ಪುನಶ್ಚೇತನ ನೀಡಲು ಬಯಸಿರುವ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು, ಜೂನ್‌ 6ರ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಹಣಕಾಸು ನೀತಿಯಡಿ ಅಲ್ಪಾವಧಿ ಬಡ್ಡಿ ದರ ಪರಿಷ್ಕರಿಸಲು ‘ಸಿಪಿಐ’ ಆಧರಿಸಿದ ಹಣದುಬ್ಬರವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುತ್ತದೆ. ಚಿಲ್ಲರೆ ಹಣದುಬ್ಬರವು ಈಗಲೂ ಆರ್‌ಬಿಐ ನಿಗದಿಪಡಿಸಿದ ಶೇ 4ರ ಮಟ್ಟಕ್ಕಿಂತ ಕಡಿಮೆ ಇದೆ. ಹೀಗಾಗಿ ಬಡ್ಡಿ ದರ ಕಡಿತ ಮಾಡಲಿದೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ. ಒಂದು ವೇಳೆ ಶೇ 0.25ರಷ್ಟು ರೆಪೊ ದರ ಕಡಿತ ಮಾಡಿದರೆ ಅದು ಒಂಬತ್ತು ವರ್ಷಗಳ ಕನಿಷ್ಠ ಮಟ್ಟಕ್ಕೆ (ಶೇ 5.75) ಇಳಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !