ಗುರುವಾರ , ಮಾರ್ಚ್ 23, 2023
28 °C

ಚಿಲ್ಲರೆ ಹಣದುಬ್ಬರ ತುಸು ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆಹಾರ ಉತ್ಪನ್ನಗಳ ಬೆಲೆ ತುಸು ಕಡಿಮೆ ಆದ ಕಾರಣ, ದೇಶದ ಚಿಲ್ಲರೆ ಹಣದುಬ್ಬರ ದರವು ಆಗಸ್ಟ್‌ ತಿಂಗಳಿನಲ್ಲಿ ಅಲ್ಪ ಇಳಿಕೆ ಕಂಡಿದ್ದು, ಶೇಕಡ 6.69ಕ್ಕೆ ತಲುಪಿದೆ. ಆದರೆ, ಆಹಾರ ಮತ್ತು ಇಂಧನ ಹೊರತುಪಡಿಸಿದ ಇತರ ವಸ್ತುಗಳ ಹಣದುಬ್ಬರವು ಶೇ 5.8ರ ಮಟ್ಟದಲ್ಲೇ ಮುಂದುವರಿದಿದೆ.

ಇದರಿಂದಾಗಿ, ಮುಂದಿನ ತಿಂಗಳು ನಡೆಯಲಿರುವ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ರೆಪೊ ದರ ತಗ್ಗಿಸುವುದು ಕಷ್ಟವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಟ್ಟು ಆಹಾರ ಉತ್ಪನ್ನಗಳ ಹಣದುಬ್ಬರ ಪ್ರಮಾಣವು ಆಗಸ್ಟ್‌ ತಿಂಗಳಲ್ಲಿ ಶೇ 9.05ರಷ್ಟು ಇತ್ತು. ಇದು ಜುಲೈನಲ್ಲಿ ಇದ್ದ ಶೇ 9.62ರ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ. ಆದರೆ, ತರಕಾರಿಗಳ ಬೆಲೆಯಲ್ಲಿ ಆಗಸ್ಟ್‌ನಲ್ಲಿ ಶೇ 11.41ರಷ್ಟು, ಹೆಚ್ಚಳ ಆಗಿದೆ.

‘ಚಿಲ್ಲರೆ ಹಣದುಬ್ಬರ ಪ್ರಮಾಣವು ತುಸು ತಗ್ಗಿರುವುದು ಒಳ್ಳೆಯದೇ ಆಗಿದ್ದರೂ, ಅದರ ಪ್ರಮಾಣವು ಆರ್‌ಬಿಐ ನಿಗದಿ ಮಾಡಿರುವ ಶೇ 6ಕ್ಕಿಂತ ಹೆಚ್ಚೇ ಇದೆ ಎಂಬುದನ್ನು ಗಮನಿಸಬೇಕು. ಸರ್ಕಾರವು ಆರ್ಥಿಕ ಚಟುವಟಿಕೆಗಳಿಗೆ ಹಂತ ಹಂತವಾಗಿ ಅವಕಾಶ ನೀಡಿದ್ದರೂ ಆಹಾರೇತರ ಮತ್ತು ಇಂಧನೇತರ ವಸ್ತುಗಳ‌ ಹಣದುಬ್ಬರವು ಶೇ 5.8ರಷ್ಟು ಇರುವುದು, ಆಹಾರ ವಸ್ತುಗಳ ಬೆಲೆ ಏರಿಕೆ ಪ್ರಮಾಣವು ಶೇ 9ಕ್ಕಿಂತ ಜಾಸ್ತಿ ಇರುವುದು ಕಳವಳ ಮೂಡಿಸುವ ಸಂಗತಿ’ ಎಂದು ಹೂಡಿಕೆ ಸಲಹೆ ಕಂಪನಿ ‘ಮಿಲ್‌ವುಡ್‌ ಕೇನ್‌ ಇಂಟರ್‌ನ್ಯಾಷನಲ್‌’ನ ಸಿಇಒ ನಿಶ್ ಭಟ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು