ಜೆಟ್‌ ಏರ್‌ವೇಸ್‌ ಪುನಶ್ಚೇತನಕ್ಕೆ ಕ್ರಮ

ಸೋಮವಾರ, ಏಪ್ರಿಲ್ 22, 2019
29 °C
ನೆರವು ನೀಡಲು ಬ್ಯಾಂಕ್‌ಗಳು ಬದ್ಧ: ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್

ಜೆಟ್‌ ಏರ್‌ವೇಸ್‌ ಪುನಶ್ಚೇತನಕ್ಕೆ ಕ್ರಮ

Published:
Updated:
Prajavani

ನವದೆಹಲಿ: ತೀವ್ರ ಸ್ವರೂಪದ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆಜೆಟ್‌ ಏರ್‌ವೇಸ್‌ ಪುನಶ್ಚೇತನಕ್ಕೆ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮುಂದಾಗಿವೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೇತೃತ್ವದಲ್ಲಿನ ಇತರ ಬ್ಯಾಂಕ್‌ಗಳು ಸಂಸ್ಥೆಯ ಆಡಳಿತ ಮಂಡಳಿ ಬದಲಿಸುವ ಮೂಲಕ ಪುನಶ್ಚೇತನ ಪ್ರಕ್ರಿಯೆ ಕಾರ್ಯಗತಗೊಳಿಸಲು ಉದ್ದೇಶಿಸಿವೆ.

ಸಂಸ್ಥೆಯು ಸಾಲದ ಭಾರಕ್ಕೆ ಕುಸಿದು ತನ್ನೆಲ್ಲ ವಿಮಾನಗಳ ಹಾರಾಟ ನಿಲ್ಲಿಸುವುದು ದೇಶಿ ವಿಮಾನಯಾನ ರಂಗದ ಪಾಲಿಗೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಪುನಶ್ಚೇತನದ ಕ್ರಮಗಳನ್ನು ಚರ್ಚಿಸುವ ಸಂಬಂಧ ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌, ವಾಯುಯಾನ ಕಾರ್ಯದರ್ಶಿ ಪ್ರದೀಪ್‌ ಸಿಂಗ್‌ ಖರೋಲಾ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಬುಧವಾರ ಇಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿದ್ದರು.

‘ಹಿಂದೊಮ್ಮೆ ದೇಶದ ಎರಡನೆ ಅತಿದೊಡ್ಡ ವಿಮಾನಯಾನ ಸಂಸ್ಥೆ
ಯಾಗಿದ್ದ ಜೆಟ್‌ ಏರ್‌ವೇಸ್‌ನಲ್ಲಿನ ಸದ್ಯದ ವಿದ್ಯಮಾನಗಳನ್ನು ಬ್ಯಾಂಕ್‌ಗಳಲ್ಲಿ ಪ್ರಮುಖ ಪಾಲುದಾರನಾಗಿರುವ ಕೇಂದ್ರ ಸರ್ಕಾರಕ್ಕೆ ವಿವರಿಸಲಾಯಿತು. ಪರಿಹಾರ ಕೊಡುಗೆ ಬಗ್ಗೆ ಚರ್ಚಿಸಲಾಗಿಲ್ಲ. ದಿವಾಳಿ ಪ್ರಕ್ರಿಯೆಗೆ ಒಳಪಡಿಸುವುದು ಕೊನೆಯ ಆಯ್ಕೆಯಾಗಿರಲಿದೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರು ಹೇಳಿದ್ದಾರೆ.

ಪುನಶ್ಚೇತನದ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ, ವಿಮಾನ ಯಾನ ಸಂಸ್ಥೆಯ ಸದ್ಯದ ಆಡಳಿತ ಮಂಡಳಿ ಬದಲಿಸಲು ಬ್ಯಾಂಕ್‌ ಮುಖ್ಯಸ್ಥರು ಒಲವು ಹೊಂದಿದ್ದಾರೆ. ಸದ್ಯದ ನಿರ್ದೇಶಕ ಮಂಡಳಿಯಿಂದ ಸಂಸ್ಥೆಯನ್ನು ಸಾಲದ ಸುಳಿಯಿಂದ ಮೇಲೆತ್ತಲು ಸಾಧ್ಯವಿಲ್ಲ ಎನ್ನುವುದು ಬ್ಯಾಂಕ್‌ಗಳ ನಿಲುವು ಆಗಿದೆ.

ಜೆಟ್‌ ಏರ್‌ವೇಸ್‌ನಲ್ಲಿನ ತನ್ನ ಶೇ 24ರಷ್ಟು ಪಾಲು ಬಂಡವಾಳ ಖರೀದಿಸಲು ಇತಿಹಾದ್‌ ಸಂಸ್ಥೆಯು ಎಸ್‌ಬಿಐಗೆ ಕೇಳಿಕೊಂಡಿದೆ ಎಂದೂ ವರದಿಯಾಗಿದೆ.

ವೃತ್ತಿನಿರತರ ವಶಕ್ಕೆ ಒಲವು: ‘ಇತಿಹಾದ್‌ ಏರ್‌ವೇಸ್‌ ಸಂಸ್ಥೆಯ ಆಡಳಿತ ಮಂಡಳಿ ಜತೆಗೆ ಮಾತುಕತೆ ನಡೆಯುತ್ತಿದೆ. ಸಂಸ್ಥೆಯಿಂದ ಹೊರನಡೆಯಲು ಅವರು ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅನ್ಯರ ಹಸ್ತಕ್ಷೇಪ ಇಲ್ಲದೇ ವೃತ್ತಿನಿರತರ ವಶಕ್ಕೆ ಕೊಡುವುದರ ಬಗ್ಗೆ ಅವರು ಒಲವು ಹೊಂದಿದ್ದಾರೆ’ ಎಂದೂ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ಬಡ್ಡಿ ಪಾವತಿ ಸುಸ್ತಿ, ಪೈಲಟ್‌ಗಳಿಗೆ ವೇತನ ವಿಳಂಬದ ಕಾರಣಕ್ಕೆ ಸಂಸ್ಥೆಯು ಸದ್ಯಕ್ಕೆ ಒಂದು ಮೂರಾಂಶದಷ್ಟು ವಿಮಾನಗಳ ಸೇವೆಯನ್ನಷ್ಟೇ ನೀಡುತ್ತಿದೆ.

ಮಾರ್ಚ್‌ ತಿಂಗಳಾಂತ್ಯಕ್ಕೆ ವೇತನ ಪಾವತಿಸದಿದ್ದರೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದೂ ಸಂಸ್ಥೆಯ ಪೈಲಟ್‌ಗಳು ಬೆದರಿಕೆ ಒಡ್ಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !