ಶುಕ್ರವಾರ, ಆಗಸ್ಟ್ 12, 2022
21 °C
₹10 ಸಾವಿರ ಮೇಲ್ಪಟ್ಟು ಹಣ ಪಡೆಯಲು ಒಟಿಪಿ

ಎಸ್‌ಬಿಐ ಎಟಿಎಂನಲ್ಲಿ ಹಣ ಪಡೆಯಲು ಮೊಬೈಲ್‌ ಬೇಕೇಬೇಕು: ಇಂದಿನಿಂದ ಹೊಸ ನಿಯಮ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಎಸ್‌ಬಿಐ ಎಟಿಎಂನ ಟ್ಯಾಬ್ಲೊ–ಸಂಗ್ರಹ ಚಿತ್ರ

ಬೆಂಗಳೂರು: ಇಂದಿನಿಂದ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಗ್ರಾಹಕರು ಎಟಿಎಂ ಮೂಲಕ ₹10 ಸಾವಿರಕ್ಕಿಂದ ಹೆಚ್ಚಿನ ಹಣ ತೆಗೆಯುವುದಾದರೆ, ಮೊಬೈಲ್‌ನ್ನು ಜೊತೆಗೆ ಒಯ್ಯುವುದು ಮರೆಯಬಾರದು. ಖಾತೆಯೊಂದಿಗೆ ಸಂಪರ್ಕಿಸಲಾಗಿರುವ ಮೊಬೈಲ್‌ ಸಂಖ್ಯೆ ಇಲ್ಲವಾದರೆ ಹಣ ತೆಗೆಯಲು ಸಾಧ್ಯವೇ ಇಲ್ಲ!

ಎಟಿಎಂ ವಹಿವಾಟಿಗೆ ಹೆಚ್ಚಿನ ಸುರಕ್ಷತೆ ಕಲ್ಪಿಸಲು ಎಸ್‌ಬಿಐ ಸೆಪ್ಟೆಂಬರ್‌ 18ರಿಂದ ಒಂದು ಬಾರಿ ರಹಸ್ಯ ಸಂಖ್ಯೆ (ಒಟಿಪಿ) ಬಳಸುವ ಸೌಲಭ್ಯವನ್ನು ಕಡ್ಡಾಯ ಅನುಷ್ಠಾನಗೊಳಿಸಿದೆ. ಎಟಿಎಂ ವಹಿವಾಟಿಗೆ ಸಂಬಂಧಿಸಿದ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗ್ರಾಹಕರ ಹಿತರಕ್ಷಿಸಲು ಬ್ಯಾಂಕ್‌ಗಳು ಹಲವು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುತ್ತಿವೆ.

ಗ್ರಾಹಕರು ಎಟಿಎಂನಿಂದ ₹10 ಸಾವಿರಕ್ಕಿಂತ ಹೆಚ್ಚು ಮೊತ್ತದ ನಗದು ತೆಗೆಯುವಾಗ ಬ್ಯಾಂಕ್‌ ಖಾತೆಯೊಂದಿಗೆ ನೋಂದಾಯಿಸಲಾಗಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನೆಯಾಗುತ್ತದೆ. ಅದನ್ನು  ಎಟಿಎಂ ಪರದೆಯಲ್ಲಿ ನಮೂದಿಸಿದರೆ ಮಾತ್ರ ಅಲ್ಲಿಂದ ಹಣ ಪಡೆಯಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಹಣ ಪಡೆಯುವ ಪ್ರಕ್ರಿಯೆ ರದ್ದುಗೊಳ್ಳುತ್ತದೆ.

ಈವರೆಗೆ ಎಸ್‌ಬಿಐನ ಎಲ್ಲ ಎಟಿಎಂಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಗಿನ 8 ಗಂಟೆಯವರೆಗೆ ಜಾರಿಯಲ್ಲಿದ್ದ ಒಟಿಪಿ ಆಧಾರಿತ ಹಣ ಪಡೆಯುವ ಸೌಲಭ್ಯವು ಇಂದಿನಿಂದ ದಿನ 24 ಗಂಟೆಗಳೂ ಅನ್ವಯವಾಗಲಿದೆ. ಈ ಬಗ್ಗೆ ಎಸ್‌ಬಿಐ ಮಂಗಳವಾರವೇ ಟ್ವೀಟ್‌ ಮಾಡಿದೆ.

ಈ ಸುರಕ್ಷತಾ ಕ್ರಮದಿಂದಾಗಿ ಕಾರ್ಡ್‌ ಸ್ಕಿಮ್ಮಿಂಗ್‌, ಅನಧಿಕೃತ ಹಣ ಪಡೆಯುವಿಕೆ, ಕಾರ್ಡ್‌ ಕ್ಲೋನಿಂಗ್‌ನಂತಹ ವಂಚನೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗಾಗಿ, ಎಸ್‌ಬಿಐ ಖಾತೆದಾರರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಬ್ಯಾಂಕ್‌ಗಳಲ್ಲಿ ಕೂಡಲೇ ಅಪ್‌ಡೇಟ್ ಮಾಡುವುದು ಅಥವಾ ನೋಂದಣಿ ಮಾಡಿಸುವುದು ಅನಿವಾರ್ಯವಾಗಿದೆ.

ಎಸ್‌ಬಿಐ ಗ್ರಾಹಕರು ಬೇರೆ ಬ್ಯಾಂಕ್‌ಗಳ ಎಟಿಎಂ ಬಳಸುವಾಗ ಒಟಿಪಿ ಸುರಕ್ಷತೆಯ ಈ ಸೌಲಭ್ಯ ಕಾರ್ಯನಿರ್ವಹಿಸುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು