ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾದಾರರ ಪಾಲಿನ ರಕ್ಷಕ ಸೆಕ್ಷನ್ 45

Last Updated 17 ಆಗಸ್ಟ್ 2020, 4:54 IST
ಅಕ್ಷರ ಗಾತ್ರ
ADVERTISEMENT
""

ಜೀವ ವಿಮೆ ಪಾಲಿಸಿ (ಲೈಫ್ ಇನ್ಶೂರೆನ್ಸ್) ಖರೀದಿಸುವಾಗ, ‘ಇನ್ಶೂರೆನ್ಸ್ ಕಂಪನಿಗಳು ಸಂಕಷ್ಟ ಕಾಲದಲ್ಲಿ ನಿಜಕ್ಕೂ ಕ್ಲೇಮ್ ನೀಡುತ್ತವೆಯೇ’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಲೈಫ್ ಇನ್ಶೂರೆನ್ಸ್, ಅದರಲ್ಲೂ ಟರ್ಮ್ ಲೈಫ್ ಇನ್ಶೂರೆನ್ಸ್ ಇದ್ದಲ್ಲಿ ಕ್ಲೇಮ್‌ನ ಮೊತ್ತ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ, ಇನ್ಶೂರೆನ್ಸ್ ಕಂಪನಿಗಳು ಕ್ಲೇಮ್ ನೀಡುತ್ತವೆಯೇ ಎಂಬ ಅನುಮಾನ ಜನರಲ್ಲಿ ಸಹಜವಾಗಿಯೇ ಮೂಡುತ್ತದೆ. ಇನ್ಶೂರೆನ್ಸ್ ಕ್ಲೇಮ್‌ಗಳು ತಿರಸ್ಕೃತ ಆಗದಂತೆ ಹೇಗೆ ಎಚ್ಚರಿಕೆ ವಹಿಸಬೇಕು? ಸಕಾರಣ ಇಲ್ಲದೆ ಕ್ಲೇಮ್ ತಿರಸ್ಕಾರ ಮಾಡಿದಾಗ ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.

ಪ್ರಮೋದ್ ಬಿ.ಪಿ.

ಏನಿದು ವಿಮಾ ಕಾಯ್ದೆಯ ಸೆಕ್ಷನ್ 45: ನಿಮ್ಮ ಇನ್ಶೂರೆನ್ಸ್ ಬಾಂಡ್‌ನ ಕೊನೆಯಲ್ಲಿ 1938ರ ಇನ್ಶೂರೆನ್ಸ್ ಕಾಯ್ದೆಯ ಬಗ್ಗೆ ಉಲ್ಲೇಖವಿರುತ್ತದೆ. ಇನ್ಶೂರೆನ್ಸ್ ಪಡೆದಿರುವ ಮತ್ತು ಪಡಯುವ ಪ್ರತಿಯೊಬ್ಬ ವ್ಯಕ್ತಿಗೂ ಈ ಬಗ್ಗೆ ತಿಳಿದಿರಲೇಬೇಕು. ಹೌದು, ವಿಮಾ ಕಾಯ್ದೆಯ ಸೆಕ್ಷನ್ 45ರ ಪ್ರಕಾರ, ಪಾಲಿಸಿ ನೀಡಿದ ದಿನದಿಂದ ಮೂರು ವರ್ಷಗಳ ಬಳಿಕ ವಿಮಾ ಕಂಪನಿ ಯಾವುದೇ ಕಾರಣಕ್ಕೂ ಇನ್ಶೂರೆನ್ಸ್ ಕ್ಲೇಮ್ ನಿರಾಕರಿಸುವಂತಿಲ್ಲ.

ವಂಚನೆಯ ಉದ್ದೇಶ ಪ್ರಶ್ನಿಸಬಹುದು: ಪಾಲಿಸಿ ಪಡೆದಿರುವ ವ್ಯಕ್ತಿಯು ವಂಚನೆಯ ಉದ್ದೇಶದಿಂದ ತಪ್ಪು ಮಾಹಿತಿ ನಮೂದಿಸಿದ್ದಾನೆ ಎಂಬ ಅನುಮಾನ ವಿಮಾ ಕಂಪನಿಗೆ ಬಂದರೆ, ಅದಕ್ಕೆ ಪೂರಕವಾದ ದಾಖಲೆಗಳಿದ್ದರೆ, ಪಾಲಿಸಿ ಪಡೆದಿರುವ ವ್ಯಕ್ತಿ ಅಥವಾ ಪಾಲಿಸಿಗೆ ಸಂಬಂಧಿಸಿದ ನಾಮಿನಿಯನ್ನು ವಿಮಾ ಕಂಪನಿ ಮೂರು ವರ್ಷಗಳ ಒಳಗಾಗಿ ಪ್ರಶ್ನಿಸಬಹುದು. ಪಾಲಿಸಿ ಪಡೆದಿರುವ ವ್ಯಕ್ತಿ ಅಥವಾ ನಾಮಿನಿ ಆಗಿರುವವರು ತಮಗೆ ತಪ್ಪು ಮಾಹಿತಿ ನೀಡುವ ಯಾವುದೇ ದುರುದ್ದೇಶ ಇರಲಿಲ್ಲ ಎನ್ನುವುದನ್ನು ಸಾಬೀತುಪಡಿಸಿದರೆ ವಿಮಾ ಕಂಪನಿ ಇನ್ಶೂರೆನ್ಸ್ ಪಾಲಿಸಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಲೇಮ್‌ಗಳನ್ನು ರದ್ದು ಮಾಡಲು ಅವಕಾಶವಿಲ್ಲ.

ವಿಮಾ ಕಂಪನಿ ಪಾಲಿಸಿ ನಿರಾಕರಿಸಿದರೆ ಏನಾಗುತ್ತದೆ: ನೀವು ತಪ್ಪು ಮಾಹಿತಿ ನೀಡಿದ್ದೀರಿ, ಉದ್ದೇಶಪೂರ್ವಕವಾಗಿ ಕೆಲವು ಮಾಹಿತಿ ತಡೆ ಹಿಡಿದಿದ್ದೀರಿ ಎಂಬ ಕಾರಣ ನೀಡಿ ಒಂದೊಮ್ಮೆ ವಿಮಾ ಕಂಪನಿ ಪಾಲಿಸಿ ನಿರಾಕರಿಸಿದರೆ ಈವರೆಗೆ ಪಾವತಿಯಾಗಿರುವ ಎಲ್ಲಾ ಪ್ರೀಮಿಯಂ ಮೊತ್ತವನ್ನು ಇನ್ಶೂರೆನ್ಸ್ ಕಂಪನಿ ಪಾಲಿಸಿದಾರನಿಗೆ ಅಥವಾ ನಾಮನಿರ್ದೇಶನವಾಗಿರುವ ವ್ಯಕ್ತಿಗೆ ಹಿಂದಿರುಗಿಸಬೇಕಾಗುತ್ತದೆ. ಪಾಲಿಸಿ ನಿರಾಕರಣೆಯ 3 ತಿಂಗಳ ಒಳಗಾಗಿ ಸಂಪೂರ್ಣ ಹಣ ನೀಡಬೇಕಾಗುತ್ತದೆ.

ಪರಿಪೂರ್ಣ ಮಾಹಿತಿ ನೀಡಿ: ಇನ್ಶೂರೆನ್ಸ್ ಪಾಲಿಸಿಯನ್ನು ವಿಮಾ ಕಂಪನಿ ಮೊದಲ ಮೂರು ವರ್ಷಗಳ ಒಳಗಾಗಿ ಪ್ರಶ್ನಿಸದಂತೆ ಮತ್ತು ನಿರಾಕರಿಸದಂತೆ ಮಾಡಲು ನೀವು ಅರ್ಜಿಯಲ್ಲಿ ಸರಿಯಾದ ಮಾಹಿತಿ ಒದಗಿಸಬೇಕು. ನಿಮ್ಮ ವಯಸ್ಸು, ಉದ್ಯೋಗ, ಆದಾಯ, ಆರೋಗ್ಯ ಸ್ಥಿತಿ, ಕುಟುಂಬದ ಹಿನ್ನೆಲೆ ಮತ್ತಿತರ ಮಾಹಿತಿಯಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ನೀವು ಯಾವುದಾದರೂ ಪಾಲಿಸಿ ಪಡೆದಿದ್ದರೆ ಅದರ ವಿವರಗಳನ್ನು ಬರೆಯಬೇಕು. ನಾಮಿನಿಯ ವಯಸ್ಸು, ವಿಳಾಸ ಮತ್ತಿತರ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು. ಸಾಧ್ಯವಾದಷ್ಟು ಎಲ್ಲಾ ಮಾಹಿತಿಯನ್ನು ನೀವೇ ಭರ್ತಿ ಮಾಡಬೇಕು. ಒಂದೊಮ್ಮೆ ಇನ್ಶೂರೆನ್ಸ್ ಏಜೆಂಟ್ ನಿಮ್ಮ ಅರ್ಜಿ ಭರ್ತಿ ಮಾಡಿದರೆ ಅದರಲ್ಲಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎನ್ನುವುದನ್ನು ನೋಡಿದ ನಂತರವೇ ಸಹಿ ಮಾಡಬೇಕು. ಪಾಲಿಸಿ ದಾಖಲೆ ಪಡೆದ ನಂತರದಲ್ಲಿ ಏನಾದರೂ ತಪ್ಪುಗಳು ಕಂಡಬಂದರೆ ಕೂಡಲೇ ಅದನ್ನುಸರಿಪಡಿಸಿಕೊಳ್ಳಬೇಕು.

ಒಂದೇ ದಿನದಲ್ಲಿ ವಾರದ ಗಳಿಕೆ ಮಾಯ!

ಆಗಸ್ಟ್ 14ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. ಶುಕ್ರವಾರದ ವಹಿವಾಟಿನಲ್ಲಿ, ಇಡೀ ವಾರದ ಗಳಿಕೆಯನ್ನು ಸೂಚ್ಯಂಕಗಳು ಕಳೆದುಕೊಂಡಿವೆ. 37,877 ಅಂಶಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 0.4ರಷ್ಟು ಕುಸಿದಿದೆ. 11,178 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ, ಶೇ 0.3ರಷ್ಟು ತಗ್ಗಿದೆ. ಆದರೆ ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 1.7ರಷ್ಟು ಹೆಚ್ಚಳ ಕಂಡಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಂದಗತಿ, ಮಾರುಕಟ್ಟೆ ಜಿಗಿದ ಸಂದರ್ಭದಲ್ಲಿ ಹೆಚ್ಚಾದ ಲಾಭ ಗಳಿಕೆಯ ಉದ್ದೇಶ, ಅಮೆರಿಕ- ಚೀನಾ ನಡುವೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಮಾತುಕತೆ ವಿಚಾರದಲ್ಲಿ ಅಸ್ಪಷ್ಟತೆ, ಹಣದುಬ್ಬರ ದರದ ಹೆಚ್ಚಳದಿಂದ ಬಡ್ಡಿ ದರ ಕಡಿತದ ಸಾಧ್ಯತೆ ಕ್ಷೀಣಿಸಿರುವುದು ಸೇರಿದಂತೆ ಹಲವು ಅಂಶಗಳು ಗೂಳಿಯ ಓಟಕ್ಕೆ ಕಡಿವಾಣ ಹಾಕಿದವು.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ವಲಯ ಶೇ 4.8ರಷ್ಟು, ಲೋಹ ವಲಯ ಶೇ 3.8ರಷ್ಟು, ಫಾರ್ಮಾ ವಲಯ ಶೇ 2.7ರಷ್ಟು, ರಿಯಲ್ ಎಸ್ಟೇಟ್ ಮತ್ತು ವಾಹನ ಉತ್ಪಾದನೆ ತಲಾ ಶೇ 1.6ರಷ್ಟು, ಐ.ಟಿ. ವಲಯ ಶೇ 0.1ರಷ್ಟು ಜಿಗಿದಿವೆ. ಬ್ಯಾಂಕ್ ಶೇ 0.3ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.2ರಷ್ಟು, ಮೂಲಸೌಕರ್ಯ ಶೇ 0.3ರಷ್ಟು, ಹಣಕಾಸು ವಲಯ ಶೇ 0.6ರಷ್ಟು, ಎಫ್‌ಎಂಸಿಜಿ ಶೇ 0.9ರಷ್ಟು ಮತ್ತು ಇಂಧನ ವಲಯ ಶೇ 0.7ರಷ್ಟು ಕುಸಿದಿವೆ.

ವಾರದ ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 10.5ರಷ್ಟು, ಜೀ ಎಂಟರ್‌ಟೇನ್ಮೆಂಟ್ ಶೇ 7.5ರಷ್ಟು, ಎಲ್ ಆ್ಯಂಡ್‌ ಟಿ ಶೇ 7.2ರಷ್ಟು, ಅದಾನಿ ಪೋರ್ಟ್ಸ್ ಶೇ 6.8ರಷ್ಟು, ಸಿಪ್ಲಾ ಶೇ 6ರಷ್ಟು, ಟೆಕ್ ಮಹಿಂದ್ರಾ ಶೇ 6ರಷ್ಟು, ಟಾಟಾ ಮೋಟರ್ಸ್ ಶೇ 4.6ರಷ್ಟು, ಹಿಂಡಾಲ್ಕೋ ಶೇ 3.8ರಷ್ಟು, ಭಾರ್ತಿ ಇನ್ಫ್ರಾಟೆಲ್ ಶೇ 3.8ರಷ್ಟು ಮತ್ತು ಹಿರೋ ಮೋಟರ್ಸ್ಶೇ 3.6 ರಷ್ಟು ಹೆಚ್ಚಳ ಕಂಡಿವೆ.

ಐಷರ್ ಮೋಟರ್ಸ್ ಶೇ 7.7ರಷ್ಟು, ಏರ್‌ಟೆಲ್ ಶೇ 5.8ರಷ್ಟು, ಬಜಾಜ್ ಫೈನಾನ್ಸ್ ಶೇ 3.9ರಷ್ಟು, ಬಜಾಜ್ ಫಿನ್‌ಸರ್ವ್ ಶೇ 3.85ರಷ್ಟು, ಬ್ರಿಟಾನಿಯಾ ಶೇ 3ರಷ್ಟು, ಎಚ್‌ಡಿಎಫ್‌ಸಿ ಲೈಫ್ ಶೇ 3.1ರಷ್ಟು, ಕೋಟಕ್ ಮಹಿಂದ್ರಾ ಬ್ಯಾಂಕ್ ಶೇ 2.6ರಷ್ಟು, ನೆಸ್ಲೆ ಇಂಡಿಯಾ ಶೇ 2.5ರಷ್ಟು, ಟಿಸಿಎಸ್ ಶೇ 2.2ರಷ್ಟು ಮತ್ತು ಒಎನ್‌ಜಿಸಿ ಶೇ 2ರಷ್ಟು ಕುಸಿತ ಕಂಡಿವೆ.

ಲಾಭಾಂಶ ಪ್ರಕಟ: ಬಾಲಕೃಷ್ಣ ಇಂಡಸ್ಟ್ರೀಸ್ ಪ್ರತಿ ಷೇರಿಗೆ ₹ 3 ಲಾಭಾಂಶ ಪ್ರಕಟಿಸಿದೆ. ಪಾಲಿ ಪ್ಲೆಕ್ಸ್ ₹ 32 ಲಾಭಾಂಶ ಘೋಷಣೆ ಮಾಡಿದೆ.

ಮುನ್ನೋಟ: ಈ ವಾರ ಎಚ್‌ಎಎಲ್, ಜೀ, ಸಿಎಸ್‌ಬಿ ಬ್ಯಾಂಕ್, ಮುತ್ತೂಟ್ ಫೈನಾನ್ಸ್, ಎಚ್‌ಸಿಜಿ, ಪಿಎನ್‌ಬಿ, ಯೂನಿಯನ್ ಬ್ಯಾಂಕ್ ಸೇರಿದಂತೆ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಷೇರುಪೇಟೆಯಲ್ಲಿ ಈ ವಾರವೂ ಅನಿಶ್ಚಿತತೆ ಮುಂದುವರಿಯಲಿದೆ. ಕಂಪನಿಗಳಿಗೆ ಮುಂದಿನ ಎರಡರಿಂದ ಮೂರು ತ್ರೈಮಾಸಿಕ ಅವಧಿಗಳ ನಿರ್ವಹಣೆಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿವೆ. ಸಾಲ ನೀಡಿಕೆ ವಿಚಾರದಲ್ಲಿ ಸಾಕಷ್ಟು ಒತ್ತಡಗಳನ್ನು ಅರ್ಥ ವ್ಯವಸ್ಥೆ ಎದುರಿಸಬೇಕಿದೆ. ಇದರ ಜತೆಗೆ ಜಾಗತಿಕ ವಿದ್ಯಮಾನಗಳು, ಮತ್ತು ದೇಶದ ಅರ್ಥವ್ಯವಸ್ಥೆಯಲ್ಲಾಗುವ ಬೆಳವಣಿಗೆಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿವೆ. ಈ ವಾರದ ಅವಧಿಯಲ್ಲೂ ಮಾರುಕಟ್ಟೆ ಏರಿಳಿತ ಆಧರಿಸಿ ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾಗುವ ನಿರೀಕ್ಷೆಯಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT