ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂಡಿಕೆದಾರರ ಸಂಪತ್ತು: ಒಂದೇ ದಿನ ಕರಗಿದ ಮೊತ್ತ ₹5.49 ಲಕ್ಷ ಕೋಟಿ

Published : 6 ಸೆಪ್ಟೆಂಬರ್ 2024, 14:48 IST
Last Updated : 6 ಸೆಪ್ಟೆಂಬರ್ 2024, 14:48 IST
ಫಾಲೋ ಮಾಡಿ
Comments

ಮುಂಬೈ: ವಿದೇಶಿ ಬಂಡವಾಳ ಹೊರಹರಿವು, ಐ.ಟಿ, ತೈಲ ಮತ್ತು ಅನಿಲ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಶುಕ್ರವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಶೇ 1ಕ್ಕಿಂತ ಹೆಚ್ಚು ಕುಸಿತ ಕಂಡಿವೆ.

ಷೇರು ಸೂಚ್ಯಂಕದ ಇಳಿಕೆಯಿಂದ ಹೂಡಿಕೆದಾರರು ಸಂಪತ್ತು ಒಂದೇ ದಿನ ₹5.49 ಲಕ್ಷ ಕೋಟಿ ಕರಗಿದೆ. ಬಿಎಸ್‌ಇ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹460 ಲಕ್ಷ ಕೋಟಿಯಾಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 1,017 ಅಂಶ (ಶೇ 1.24) ಇಳಿಕೆಯಾಗಿ, 81,183ಕ್ಕೆ ಅಂತ್ಯಗೊಂಡಿತು. ವಹಿವಾಟಿನ ವೇಳೆ 1,219 ಅಂಶ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 292 ಅಂಶ (ಶೇ 1.17) ಕಡಿಮೆಯಾಗಿ, 24,852ಕ್ಕೆ ಕೊನೆಗೊಂಡಿತು.

ಸೆನ್ಸೆಕ್ಸ್‌ ಗುಚ್ಛದಲ್ಲಿ ಎಸ್‌ಬಿಐ ಶೇ 4ರಷ್ಟು ಷೇರಿನ ಮೌಲ್ಯ ಇಳಿದಿದೆ. ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ರಿಲಯನ್ಸ್‌ ಇಂಡಸ್ಟ್ರಿಸ್‌, ಎಕ್ಸಿಸ್‌ ಬ್ಯಾಂಕ್‌ ಮತ್ತು ಐಟಿಸಿ ಷೇರಿನ ಮೌಲ್ಯ ಇಳಿಕೆಯಾಗಿದೆ. ಬಜಾಜ್‌ ಫೈನಾನ್ಸ್, ಏಷ್ಯನ್‌ ಪೇಂಟ್ಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಏಷ್ಯನ್‌ ಮಾರುಕಟ್ಟೆಯಲ್ಲಿ ಸೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ ನಡೆದ ವಹಿವಾಟಿನಲ್ಲಿ ₹688 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಜಾಗತಿಕ ಬ್ರೆಂಟ್‌ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಶೇ 0.14ರಷ್ಟು ಏರಿಕೆಯಾಗಿ, 72.99 ಡಾಲರ್‌ಗೆ (₹6,110) ತಲುಪಿದೆ.

ಅಮೆರಿಕದ ಉದ್ಯೋಗ ದತ್ತಾಂಶದ ಕುರಿತು ಹೂಡಿಕೆದಾರರಲ್ಲಿ ಉಂಟಾದ ಚಂಚಲತೆಯಿಂದ ಲಾಭ ಗಳಿಕೆಗಾಗಿ ಷೇರುಗಳ ಮಾರಾಟಕ್ಕೆ ಮುಂದಾದರು. ಇದರಿಂದ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ. ಇದು ದೇಶದ ಷೇರುಪೇಟೆಯ ಮೇಲೂ ಪರಿಣಾಮ ಬೀರಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ನಿರುದ್ಯೋಗ ದರ ಇಳಿಕೆ: ಅಮೆರಿಕದಲ್ಲಿ ನಿರುದ್ಯೋಗ ದರ ಶೇ 4.3 ರಿಂದ ಶೇ 4.2ಕ್ಕೆ ಇಳಿದಿದೆ. ಆಗಸ್ಟ್‌ ತಿಂಗಳಲ್ಲಿ 1.42 ಲಕ್ಷ ಉದ್ಯೋಗ ಸೇರ್ಪಡೆಯಾಗಿವೆ. ಇದು ಜುಲೈನಲ್ಲಿ 89 ಸಾವಿರದಷ್ಟಿತ್ತು ಎಂದು ಅಮೆರಿಕದ ಕಾರ್ಮಿಕ ಇಲಾಖೆ ತಿಳಿಸಿದೆ. ಆರ್ಥಿಕ ತಜ್ಞರು ಉದ್ಯೋಗ ಪ್ರಮಾಣವು 1.65 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಇದು ಅದಕ್ಕಿಂತ ಇದು ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT