ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಉತ್ಸವ | ಕೃಷಿ ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ ಕೊಡಿ: ಶೋಭಾ ಕರಂದ್ಲಾಜೆ

Last Updated 22 ಸೆಪ್ಟೆಂಬರ್ 2021, 13:03 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಹರಿಸಿದರೆ ಮಾತ್ರ ವಿದೇಶಿ ಮಾರುಕಟ್ಟೆಗಳನ್ನು ತಲುಪಲು ಸಾಧ್ಯ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗವಾಗಿ ಆಯೋಜಿಸಿರುವ ವಾಣಿಜ್ಯ ಉತ್ಸವದಲ್ಲಿ ಮಾತನಾಡಿದ ಅವರು, ‘ಆಹಾರ ಧಾನ್ಯ ಉತ್ಪಾದನೆ ದೇಶಿ ಬಳಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಧಾನ್ಯಗಳು ಹಾಳಾಗದಂತೆ ಕಾಪಾಡಲು ಸಂಸ್ಕರಣೆ ಕೆಲಸ ‌ಆಗಬೇಕು. ಸೂಕ್ತ ಮಾರುಕಟ್ಟೆ ಒದಗಿಸಬೇಕು. ಧಾನ್ಯಕ್ಕೆ ಬೇಡಿಕೆ ಇರುವ ದೇಶಗಳಿಗೆ ರಫ್ತು ಮಾಡಬೇಕು. ಆಗ ಮಾತ್ರ ರೈತರ ಆದಾಯ ದುಪ್ಪಟ್ಟು ಮಾಡಲು ಸಾಧ್ಯ’ ಎಂದರು.

ರಾಜ್ಯದಲ್ಲಿ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯಡಿ ರಫ್ತು ಮಾಡಲು ಗಮನ ಹರಿಸಬೇಕಿದೆ. ಆಯಾ ಜಿಲ್ಲೆಗಳ ನಿರ್ದಿಷ್ಟ ಉತ್ಪನ್ನಕ್ಕೆ ಸಂಸ್ಕರಣೆ, ದಾಸ್ತಾನು, ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆ ಮಾಡಿ ಅದನ್ನು ಬೇರೆ ದೇಶಗಳಿಗೆ ತಲುಪಿಸುವ ಯೋಜನೆ ರೂಪಿಸಬೇಕಿದೆ. ಮಂಡ್ಯದ ಬೆಲ್ಲವನ್ನು, ಚಾಮರಾಜನಗರದ ಅರಿಸಿನವನ್ನು ರಾಸಾಯನಿಕ ಇಲ್ಲದೇ ತಯಾರಿಸಿದರೆ ಅದನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಬಹುದು ಎಂದರು.

ಪರೀಕ್ಷೆ ಮತ್ತು ಪ್ರಮಾಣಪತ್ರ, ಸಹಯೋಗ ಹಾಗೂ ಸಂಸ್ಕರಣೆ ಬಗ್ಗೆ ಗಮನ ಹರಿಸಿದರೆ ಕೃಷಿ ಉತ್ಪನ್ನಗಳ ರಫ್ತು ಗಣನೀಯವಾಗಿ ಹೆಚ್ಚಿಸಬಹುದು ಎಂದು ಕೃಷಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ ಅಭಿಪ್ರಾಯಪಟ್ಟರು.

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಅಧ್ಯಕ್ಷ ಎಂ. ಅಂಗಮುತ್ತು, ನಬಾರ್ಡ್‌ನ ಚೀಫ್‌ ಜನರಲ್ ಮ್ಯಾನೇಜರ್‌ ನೀರಜ್‌ ಕುಮಾರ್‌ ವರ್ಮಾ, ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ಹಾಗೂ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT