ಮಂಗಳವಾರ, ಮೇ 18, 2021
23 °C
ಕಾರ್ಯಪಡೆಯ ವರದಿ ಸಲ್ಲಿಕೆ

ಹೊಸ ಸಂಹಿತೆ: ಆದಾಯ, ಕಂಪನಿ ತೆರಿಗೆ ಅಗ್ಗ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹೊಸ ನೇರ ತೆರಿಗೆ ಸಂಹಿತೆ (ಡಿಟಿಸಿ) ಸಿದ್ಧಪಡಿಸಲು ರಚಿಸಲಾಗಿದ್ದ ಕಾರ್ಯಪಡೆಯು ತೆರಿಗೆ ವಿಷಯಗಳಲ್ಲಿ ದೂರಗಾಮಿ ಪರಿಣಾಮಬೀರಬಹುದಾದ ತನ್ನ ವರದಿಯನ್ನು ಸೋಮವಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಒಂದು ವೇಳೆ ಕೇಂದ್ರ ಸರ್ಕಾರವು ಈ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಂಡರೆ, ವೈಯಕ್ತಿಕ ಆದಾಯ ತೆರಿಗೆ ದರಗಳು ಗಮನಾರ್ಹವಾಗಿ ಕಡಿಮೆಯಾಗಲಿವೆ. ಆದಾಯದ ಮೇಲಿನ ಸರ್ಚಾರ್ಜ್‌ ರದ್ದಾಗಲಿದೆ, ಕಂಪನಿಗಳು ತಮ್ಮ ಲಾಭಾಂಶಕ್ಕೆ ತೆರಿಗೆ ಸಲ್ಲಿಸುವ ಅಗತ್ಯ ಇರಲಾರದು.

ವೈಯಕ್ತಿಕ ಆದಾಯ, ಕಾರ್ಪೊರೇಟ್‌ ವರಮಾನ ತೆರಿಗೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿ ಇರುವ ನಿಯಮಗಳಿಗೆ ಅನುಗುಣವಾಗಿ ಈ ವರದಿ ಸಿದ್ಧಪಡಿಸಲಾಗಿದೆ.

ಸದ್ಯಕ್ಕೆ ಜಾರಿಯಲ್ಲಿ ಇರುವ ಆದಾಯ ತೆರಿಗೆ ಸ್ವರೂಪದಲ್ಲಿ ಹಲವಾರು ಬದಲಾವಣೆಗಳನ್ನು ಸೂಚಿಸಲಾಗಿದೆ. ನೇರ ತೆರಿಗೆಯ ಸ್ವರೂಪವನ್ನು ಗಮನಾರ್ಹವಾಗಿ ಸರಳಗೊಳಿಸಿದೆ.

ಎರಡು ಸಂಪುಟಗಳಲ್ಲಿ ವರದಿ ಸಲ್ಲಿಸಲಾಗಿದೆ. ತೆರಿಗೆ ದರ ಇಳಿಸುವ, ತೆರಿಗೆ ಹಂತಗಳ ಸರಳೀಕರಣ, ತೆರಿಗೆ ಸಲ್ಲಿಕೆ ಪ್ರಕ್ರಿಯೆ ಸುಲಭಗೊಳಿಸುವ, ತೆರಿಗೆ ವ್ಯಾಜ್ಯಗಳ ಸಂಖ್ಯೆ ಕಡಿಮೆ ಮಾಡುವ ಶಿಫಾರಸುಗಳನ್ನು ವರದಿ ಒಳಗೊಂಡಿದೆ. ಆದಾಯ ತೆರಿಗೆಯ ಹೊರೆ ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸರ್ಚಾರ್ಜ್‌ಗೆ ಆಕ್ಷೇಪ: ಆದಾಯದ ಮೇಲೆ ಸರ್ಚಾರ್ಜ್‌ ವಿಧಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಮಿತಿಯು, ಒಂದು ವೇಳೆ ಅನಿವಾರ್ಯವಾಗಿ ವಿಧಿಸಿದರೂ ಅದು ತಾತ್ಕಾಲಿಕ ನೆಲೆಯಲ್ಲಿ ಇರಬೇಕು ಎಂದು ಸೂಚಿಸಿದೆ.

ಈ ಬಾರಿಯ ಬಜೆಟ್‌ನಲ್ಲಿ ₹ 2 ಕೋಟಿ ಮತ್ತು ₹ 5 ಕೋಟಿ ವರಮಾನಕ್ಕೆ ಕ್ರಮವಾಗಿ ಶೇ 25 ಮತ್ತು ಶೇ 37ರಷ್ಟು ಸರ್ಜಾರ್ಜ್‌ ವಿಧಿಸಲಾಗಿದೆ. ಇದು ಅತಿ ಶ್ರೀಮಂತರ ಪಾಲಿಗೆ ಹೊರೆಯಾಗಿ ಪರಿಣಮಿಸಿದೆ.

ಸದ್ಯಕ್ಕೆ ಬಳಕೆಯಲ್ಲಿ ಇರುವ ಆದಾಯ ತೆರಿಗೆ ಕಾಯ್ದೆಯ ಬದಲಿಗೆ ಹೊಸ ನೇರ ತೆರಿಗೆ ಸಂಹಿತೆಯನ್ನು ಮುಂದಿನ ಹಣಕಾಸು ವರ್ಷದಿಂದ (2020–21) ಜಾರಿಗೆ ತರಲು ಉದ್ದೇಶಿಸಲಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು