ಮಂಗಳವಾರ, ಫೆಬ್ರವರಿ 25, 2020
19 °C
15ನೇ ಹಣಕಾಸು ಯೋಜನೆಯ ಪ್ರತಿ ₹100ಕ್ಕೆ ₹40 ಮಾತ್ರ ಹಂಚಿಕೆ

ತೆರಿಗೆ ಆದಾಯ ಹಂಚಿಕೆ: ರಾಜ್ಯಕ್ಕೆ ಹೆಚ್ಚು ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 15ನೇ ಹಣಕಾಸು ಆಯೋಗದಡಿ ಕೇಂದ್ರಕ್ಕೆ ಸಂಗ್ರಹಿಸಿ ಕೊಡುವ ತೆರಿಗೆ ಆದಾಯದಲ್ಲಿ ಪ್ರತಿ ₹100ರಲ್ಲಿ ₹40 ಮಾತ್ರ ರಾಜ್ಯಕ್ಕೆ ವಾಪಸ್‌ ಸಿಗಲಿದೆ. 14ನೇ ಹಣಕಾಸು ಆಯೋಗದಡಿ ₹53 ಹಿಂದಕ್ಕೆ ಸಿಗುತ್ತಿತ್ತು.

15ನೇ ಹಣಕಾಸು ಆಯೋಗದ ವರದಿಯನ್ನು ಮೌಲ್ಯಮಾಪನಕ್ಕೆ ಒಳಪಡಿಸಿದಾಗ ತೆರಿಗೆ ಆದಾಯದ ಪಾಲಿನಲ್ಲಿ ರಾಜ್ಯ ಹೆಚ್ಚು ನಷ್ಟ ಅನುಭವಿಸಲಿದೆ. ರಾಜಸ್ಥಾನ, ಗುಜರಾತ್‌ ರಾಜ್ಯಗಳಿಗೆ ಹೆಚ್ಚಿನ ಲಾಭವಾಗಲಿದೆ. ವಿಶೇಷ ಅನುದಾನ ಹಂಚಿಕೆಯಲ್ಲೂ ಕರ್ನಾಟಕಕ್ಕೆ ಕಡಿಮೆ ಆಗಲಿದ್ದು, ತೆರಿಗೆ ಹಂಚಿಕೆ ಕೊರತೆಯನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ಆದಾಯ ಹಂಚಿಕೆಯ ಹೊಸ ಸೂತ್ರದ ಪ್ರಕಾರ, ಉತ್ತರ ಪ್ರದೇಶ ₹100ಕ್ಕೆ ₹256 ಪಡೆದರೆ, ಬಿಹಾರ ₹100ಕ್ಕೆ ₹300 ಪಡೆಯುತ್ತದೆ. ಅಲ್ಲದೆ, ಈಶಾನ್ಯ ರಾಜ್ಯಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆಯಾ
ಗುತ್ತದೆ. ಮಹಾರಾಷ್ಟ್ರಕ್ಕೆ ₹30 ಹಂಚಿಕೆಯಾಗಲಿದೆ. ಹಲವು ದಶಕಗಳಿಂದಲೂ ‘ಬಿಮಾರು’ (ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ) ಹೆಚ್ಚು ಹಂಚಿಕೆ ಮಾಡಿ, ದಕ್ಷಿಣ ರಾಜ್ಯಗಳಿಗೆ ಕಡಿಮೆ ತೆರಿಗೆ ಆದಾಯ ಹಂಚಿಕೆ ಮಾಡಲಾಗುತ್ತಿದೆ. ಈ ತಾರತಮ್ಯವನ್ನು ವಿರೋಧಿಸುತ್ತಾ ಬಂದಿದ್ದರೂ, ಅದೇ ಪರಂಪರೆ ಮುಂದುವರಿದಿದೆ.

15ನೇ ಹಣಕಾಸು ಆಯೋಗದ ಅವಧಿ 2020 ಏಪ್ರಿಲ್‌ 1ರಿಂದ ಆರಂಭವಾಗಿ 2025 ಮಾರ್ಚ್‌ 31ರ ವರೆಗೆ ಇರಲಿದ್ದು, ಅಲ್ಲಿಯವರೆಗೆ ರಾಜ್ಯ ಈ ನಷ್ಟವನ್ನು ಅನುಭವಿಸಲೇಬೇಕಾಗಿದೆ. ಅಂಕಿ–ಅಂಶಗಳ ಪ್ರಕಾರ, ರಾಜ್ಯಕ್ಕೆ ನಿಗದಿ ಮಾಡಿದ ತೆರಿಗೆ ಆದಾಯ ₹39,806 ಕೋಟಿಯಿಂದ (2019–20 ಬಜೆಟ್‌ ಅಂದಾಜು) ₹38,134 ಕೋಟಿಗೆ ತಗ್ಗಿಸಲಾಗಿದೆ (2019–20 ಪರಿಷ್ಕೃತ ಅಂದಾಜು). ಕೇಂದ್ರ ಸರ್ಕಾರ ಅಗತ್ಯ ಪ್ರಮಾಣದ ತೆರಿಗೆ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗದ ಕಾರಣ, ಈ ವರ್ಷ ರಾಜ್ಯಕ್ಕೆ ₹28,591 ಕೋಟಿ ಸಿಗಬಹುದು. ಕಳೆದ ವರ್ಷದ ಬಜೆಟ್‌ ಅಂದಾಜಿಗಿಂತ ₹11,215 ಕೋಟಿ ಕಡಿಮೆ ಆಗಲಿದೆ.

‘ಕೇಂದ್ರದ ಅನುದಾನ ಕಡಿಮೆಯಾಗಲು ರಾಜ್ಯ ಸರ್ಕಾರವೇ ಕಾರಣ. ಪ್ರತಿ ಬಾರಿ ಆಯೋಗಕ್ಕೆ ಮನವಿ ಪತ್ರ ಸಲ್ಲಿಸುವಾಗ, ಹೆಚ್ಚು ಅನುದಾನಕ್ಕೆ ಒತ್ತಡ ಹೇರುತ್ತಿಲ್ಲ. ಹೊಸ ಹಂಚಿಕೆಯ ಸೂತ್ರದ ಅನ್ವಯ ಹೆಚ್ಚು ಅನುದಾನಕ್ಕೆ ಕೋರಿಕೆ ಸಲ್ಲಿಸಿದ್ದರೆ ಕರ್ನಾಟಕಕ್ಕೂ ಇತರ ರಾಜ್ಯಗಳಂತೆ ಹೆಚ್ಚು ಅನುದಾನ ಸಿಗುತ್ತಿತ್ತು’ ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ಆರ್‌.ಎಸ್‌.ದೇಶಪಾಂಡೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು