ಭಾನುವಾರ, ಮೇ 29, 2022
31 °C

ತೆರಿಗೆ ಉಳಿತಾಯದ ಸಪ್ತ ಮಾರ್ಗ

ಅರ್ಚಿತ್ ಗುಪ್ತಾ Updated:

ಅಕ್ಷರ ಗಾತ್ರ : | |

Prajavani

ಪ್ರ ತಿ ತಿಂಗಳ ಸಂಬಳ ಬಂದಾಗಲೆಲ್ಲ ತೆರಿಗೆ ಹೆಸರಿನಲ್ಲಿ ಇಂತಿಷ್ಟು ಹಣ ಕಡಿತವಾಗುತ್ತಿದೆ. ಅದನ್ನು ನೋಡಿದಾಗಲೆಲ್ಲ ಉದ್ಯೋಗಿಗಳಿಗೆ  ಬೇಜಾರಾಗದೆ ಇರದು. ಸಂಬಳದಲ್ಲಿ ತೆರಿಗೆ ಕಡಿತವಾಗುತ್ತಿದೆ. ಏನಪ್ಪ ಮಾಡೋದು ಅಂತ ತಲೆಕೆರೆದುಕೊಳ್ಳುವವರಿಗೆ ತೆರಿಗೆ ಉಳಿತಾಯ ಮಾಡುವ ಏಳು ಮಾರ್ಗೋಪಾಯಗಳ ಕುರಿತು ಇಲ್ಲಿ ಮಾಹಿತಿ ಇದೆ.

ವ್ಯಕ್ತಿಯೊಬ್ಬ ಯಾವುದಾದರೂ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರುವಾಗ ಸಂಬಳಕ್ಕೆ (ಸ್ಯಾಲರಿ ಪ್ಯಾಕೇಜ್) ಹೆಚ್ಚು ಆದ್ಯತೆ ನೀಡುತ್ತಾನೆ. ಅದು ಸಹಜವೂ ಹೌದು. ಒಟ್ಟು ಸಂಬಳದಲ್ಲಿ ಮನೆಗೆ ಕೊಂಡೊಯ್ಯುವ ಹಣದ ಬಗ್ಗೆಯಷ್ಟೇ ನೀವು ಗಮನಹರಿಸದೆ ಅದರ ಹೊರತಾಗಿಯೂ ನೀವು ಯೋಚಿಸಬೇಕಾಗುತ್ತದೆ. ಹೆಚ್ಚು ಸಂಬಳ ಇದ್ದಾಗ ಬೇರೆ ಬೇರೆ ರೀತಿಯಲ್ಲಿ  ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆ ಪಾವತಿಸುವ ಸಂಬಳದಾರರು ತಮ್ಮ ಕಂಪನಿಯಿಂದ ಹಲವಾರು ರೀತಿಯಲ್ಲಿ ತೆರಿಗೆ ವಿನಾಯ್ತಿಯನ್ನು ಪಡೆಯಬಹುದು. ಏಳು ಸಲಹೆಗಳ ಪಟ್ಟಿ ಇಲ್ಲಿದೆ.

ತೆರಿಗೆ ಸ್ನೇಹಿ ಸಂಬಳಕ್ಕೆ ಕೇಳಿಕೊಳ್ಳಿ

ಎಲ್ಲ ಕಂಪನಿ ಹಾಗೂ ಉದ್ಯೋಗಿಗಳ ನಡುವೆ ಸಂಬಳ ಸ್ವರೂಪವು (ಸ್ಯಾಲರಿ ಸ್ಟ್ರಕ್ಚರ್) ವಿಭಿನ್ನವಾಗಿರುತ್ತದೆ. ಕೆಲವರಿಗೆ ಹೆಚ್ಚು ಎಚ್‌ಆರ್‌ಎ (HRA) ಇರುತ್ತದೆ. ಇನ್ನೂ ಕೆಲವರಿಗೆ ಕಡಿಮೆ ಎಚ್‌ಆರ್‌ಎ ಇರುತ್ತದೆ. ಸ್ವಂತ ಮನೆ ಇಲ್ಲದವರಿಗೆ ಹೆಚ್ಚು ಎಚ್‌ಆರ್‌ಎ ಅವಶ್ಯಕತೆ ಇರುತ್ತದೆ. ಸ್ವಂತ ಮನೆ ಇದ್ದವರಿಗೆ ಅದರ ಅವಶ್ಯಕತೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವಶ್ಯಕತೆ ಇರುವವರು ತಮ್ಮ ಸ್ಯಾಲರಿ ಸ್ಟ್ರಕ್ಚರ್ ಅನ್ನು ಅಗತ್ಯಗಳಿಗೆ ಅನುಸಾರವಾಗಿ ರಿಸ್ಟ್ರಕ್ಚರ್ (ಮರು ರಚನೆ) ಮಾಡಿಸಿಕೊಂಡರೆ ಅನುಕೂಲ. ಇದರಿಂದ ತೆರಿಗೆ ಉಳಿತಾಯ ಮಾಡಬಹುದು. ಹಾಗೆ ಉಳಿತಾಯ ಮಾಡಿದ ಹಣವು ಉದ್ಯೋಗಿಗಳು ಕೆಲಸದಿಂದ ನಿವೃತ್ತರಾದ ಬಳಿಕ ಹೂಡಿಕೆ ಮಾಡಬಹುದು. ಇದಕ್ಕೆ ತೆರಿಗೆ ವಿನಾಯ್ತಿಯೂ ಇದೆ.

ಲೀವ್ ಟ್ರಾವೆಲ್ ಅಲೋವೆನ್ಸ್ (ಎಲ್‌ಟಿಎ)

ಉದ್ಯೋಗಿಗಳು ಪ್ರತಿವರ್ಷವೂ ನಿರ್ದಿಷ್ಟ ಸಂಖ್ಯೆಯ ಪಿಎಲ್‌ಗೆ (ಪ್ರಿವಿಲೇಜ್ಡ್ ಲೀವ್ – ಸವಲತ್ತು ರಜೆ) ಅರ್ಹರಾಗಿರುತ್ತಾರೆ. ರಜೆಯಲ್ಲಿ ಪ್ರಯಾಣ ಮಾಡಿದ ಸಾರಿಗೆ ಭತ್ಯೆಯನ್ನು ಕಂಪನಿ ವತಿಯಿಂದ ರಿಕವರಿ ಮಾಡಿಕೊಳ್ಳಬಹುದು. ಲೀವ್ ಟ್ರಾವೆಲ್ ಅಲೋವೆನ್ಸ್ (ಎಲ್‌ಟಿಎ) ಸೌಲಭ್ಯದಡಿ ಈ ಅವಕಾಶವಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (5)ರ ಪ್ರಕಾರ ಎಲ್‌ಟಿಎ ದಾಖಲೆಗಳನ್ನು ತೋರಿಸಿ ತೆರಿಗೆ ವಿನಾಯ್ತಿ ಪಡೆಯಬಹುದು.

ನಾಲ್ಕು ವರ್ಷಗಳಿಗೊಮ್ಮೆ ಸೌಲಭ್ಯದಡಿ ನೀವು ಅಗತ್ಯ ದಾಖಲೆಗಳನ್ನು ಒದಗಿಸಿ ಕ್ಲೇಮ್ ಮಾಡಿಕೊಳ್ಳಬಹುದು. ಈ ಸೌಲಭ್ಯ ಪಡೆಯಲು ಮೂಲ ದಾಖಲೆಗಳನ್ನು ಒದಗಿಸುವುದು ಕಡ್ಡಾಯ. ಇದಕ್ಕೆ ಇಂತಿಷ್ಟೇ ಹಣದ ಮಿತಿ ಎಂಬುದಿಲ್ಲ. ಭಾರತದೊಳಗೆ ಮಾತ್ರ ಸಂಚಾರ ನಡೆಸಿದ್ದರೆ ಈ ಸೌಲಭ್ಯಗೆ ನೀವು ಅರ್ಹರು. ಸಾರಿಗೆ ಖರ್ಚು ವೆಚ್ಚವನ್ನು ಮಾತ್ರ ಕ್ಲೇಮ್ ಮಾಡಿಕೊಳ್ಳಬಹುದು. ಸಂಚಾರದ ವೇಳೆಯ ಊಟ ಹಾಗೂ ವಸತಿ ಖರ್ಚು ಇದಕ್ಕೆ ಅನ್ವಯವಾಗುವುದಿಲ್ಲ.

ಎನ್‌ಪಿಎಸ್ ಸೌಲಭ್ಯ ಬಳಸಿಕೊಳ್ಳಿ

ಸೆಕ್ಷನ್ 80 ಸಿಸಿಡಿ (2)ರ ಪ್ರಕಾರ, ಕಂಪನಿ ನೀಡುವ ಮೂಲ ವೇತನದ (ಬೇಸಿಕ್ ಸ್ಯಾಲರಿ) ಶೇಕಡ 10ರವರೆಗೆ ಕ್ಲೇಮ್ ಮಾಡಿಕೊಳ್ಳಬಹುದು. ಎನ್‌ಪಿಎಸ್ ನೋಂದಣಿಯಾದವರು ಸೆಕ್ಷನ್ 80 ಸಿಸಿಸಿ ಮತ್ತು 80 ಸಿಸಿಡಿ (1ಬಿ) ಪ್ರಕಾರ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ವೈದ್ಯಕೀಯ ವಿಮೆ

ತಿಂಗಳಿಗೆ ಅಥವಾ ಒಟ್ಟಾರೆಯಾಗಿ ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವೈದ್ಯಕೀಯ ವಿಮೆ ಸೌಲಭ್ಯವನ್ನು ಮಾಡಿಸುತ್ತವೆ. ಉದ್ಯೋಗಿಯ ಇಚ್ಛೆಯನುಸಾರ ಆತನ ತಂದೆ ತಾಯಿಗೂ ವಿಮೆ ಅನ್ವಯಿಸುವಂತೆ ವ್ಯವಸ್ಥೆ ಮಾಡಲಾಗುತ್ತದೆ. ತಂದೆ- ತಾಯಿಗೆ ಮಾಡಿಸಿದ ವಿಮೆಗೆ ಹೆಚ್ಚುವರಿ ಹಣವನ್ನು ಉದ್ಯೋಗಿಯ ಸಂಬಳದಿಂದ ಕಡಿತ ಮಾಡಲಾಗುತ್ತದೆ. ಇದರ ದಾಖಲೆಗಳನ್ನು ನೀಡಿ ತೆರಿಗೆ ವಿನಾಯ್ತಿ ಪಡೆದುಕೊಳ್ಳಬಹುದು.

ನಗದು ರೂಪದಲ್ಲಿ ವಿಮೆ ಕಂತು ಪಾವತಿಸಿದ್ದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಪ್ರಕಾರ ಉದ್ಯೋಗಿಗೆ ವಿನಾಯ್ತಿ ಸೌಲಭ್ಯ ಅನ್ವಯವಾಗುವುದಿಲ್ಲ.

ಫುಡ್ ಕೂಪನ್ಸ್, ವೋಚರ್ಸ್ ಇತ್ಯಾದಿ

ಉದ್ಯೋಗದಾತರು ಉದ್ಯೋಗಿಗಳಿಗೆ ಮೀಲ್ ಕೂಪನ್ಸ್ (ಸೊಡೆಕ್ಸೊ) ಅಥವಾ ಇದೇ ಬಗೆಯ ವೋಚರ್‌ಗಳನ್ನು ನೀಡಬಹುದು. ಇದು ಪೇಪರ್ ರೂಪದ ಹಣವಾಗಿದ್ದು, ಇದನ್ನು ಉದ್ಯೋಗಿಗಳು ಆಫೀಸ್ ಕ್ಯಾಂಟೀನ್, ರೆಸ್ಟೊರಂಟ್ ಬಿಲ್ ಪಾವತಿ, ದಿನಸಿ ಖರೀದಿ ಸೇರಿದಂತೆ ಮುಂತಾದೆಡೆ ಬಳಸಬಹುದು. ಇದಕ್ಕೆ ಶೇಕಡ 100ಕ್ಕೆ 100ರಷ್ಟು ತೆರಿಗೆ ವಿನಾಯ್ತಿ ಇದೆ. ಕೆಲಸದ ಅವಧಿಯಲ್ಲಿ ಕಾಫಿ, ಟೀ, ಸ್ನ್ಯಾಕ್ಸ್ ಮತ್ತು ಆಹಾರವನ್ನು ಕೆಲಸದ ಅವಧಿಯಲ್ಲಿ ಖರೀದಿಸಿದರೆ ಅದಕ್ಕೂ ಸಹ ತೆರಿಗೆ ವಿನಾಯ್ತಿ ಇದೆ. ಆದರೆ, ಊಟ ಮೊತ್ತ ₹ 50 ಮೀರಿರಬಾರದು.

ದಿನಪತ್ರಿಕೆ, ಮೊಬೈಲ್‌ ಬಿಲ್ ಇತ್ಯಾದಿ

ಸದ್ಯದ ಪರಿಸ್ಥಿತಿ ಹಾಗೂ ವಯಸ್ಸಿನಲ್ಲಿ ಒಂದು ನಿರ್ದಿಷ್ಟ ಪದವಿ ಮತ್ತು ಅನುಭವವು ವೃತ್ತಿಯಲ್ಲಿ ಯಶಸ್ವಿ ಹೊಂದಲು ಸಾಲದು. ಕಾಲಕಾಲಕ್ಕೆ ಸ್ವತಃ ಬದಲಾವಣೆ ಅಳವಡಿಸಿಕೊಳ್ಳುವುದು  ಬಹುಮುಖ್ಯವಾದದ್ದು. ಇದಕ್ಕೆ ಪೂರಕವಾದ ದಿನ ಪತ್ರಿಕೆ, ಹಣ ಪಾವತಿಸಿ ವೀಕ್ಷಿಸಬೇಕಾದ ಜಾಲತಾಣಗಳು, ಪುಸ್ತಕ ಹಾಗೂ ನಿಯತಕಾಲಿಕೆಗಳಿಗೆ ಮಾಡಿದ ವೆಚ್ಚವನ್ನು ತೆರಿಗೆ ವಿನಾಯ್ತಿ ಸೌಲಭ್ಯದಡಿ ಕ್ಲೇಮ್ ಮಾಡಿಕೊಳ್ಳಬಹುದು. ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಉದ್ಯೋಗದಾತ ಸಂಸ್ಥೆಗೆ ಸಲ್ಲಿಸಬೇಕು. ಮೊಬೈಲ್‌ ಹಾಗೂ ಡೇಟಾ ಪ್ಯಾಕ್‌ಗೆ ಬಳಸಿದ ಹಣದ ದಾಖಲೆಗಳನ್ನು ತೆರಿಗೆ ವಿನಾಯ್ತಿಗೆ ಸಲ್ಲಿಸಬಹುದು.

₹ 50 ಸಾವಿರದವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್

2018ರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಸಂಬಳದಾರರಿಗೆ ವೈಯಕ್ತಿಕವಾಗಿ ₹ 40,000 ವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅದರನ್ವಯ ವೈದ್ಯಕೀಯ ಭತ್ಯೆ ₹ 15,000, ಸಾರಿಗೆ ಭತ್ಯೆ ₹ 19,200 ಅನ್ನು ದಾಖಲೆಗಳನ್ನು ಒದಗಿಸಿ ತೆರಿಗೆಯಲ್ಲಿ ಕಡಿತ ಮಾಡಬಹುದಾಗಿತ್ತು.  2019ರ ಬಜೆಟ್ ಅನ್ವಯ ತೆರಿಗೆ ವಿನಾಯ್ತಿ ಮಿತಿಯು 2019-20ರ ಆರ್ಥಿಕ ವರ್ಷದಲ್ಲಿ ₹ 50,000ಕ್ಕೆ ಏರಿಸಲಾಗಿದೆ.

ಹೂಡಿಕೆ ಸಂಬಂಧಿತ ದಾಖಲೆ ಸಲ್ಲಿಸಿ

ಎಲ್ಲ ಹೂಡಿಕೆ ಸಂಬಂಧಿತ ದಾಖಲೆಗಳನ್ನು  ಉದ್ಯೋಗಿಗಳು ತಾವು ಕೆಲಸ ಮಾಡುವ ಕಂಪನಿಗೆ ಅಥವಾ ಉದ್ಯೋಗದಾತನಿಗೆ ಸಲ್ಲಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಉದ್ಯೋಗಿಯು ಹೂಡಿಕೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವುದರಿಂದ ಮೂಲದಲ್ಲಿಯೇ ತೆರಿಗೆ ಕಡಿತವನ್ನು  ವ್ಯವಸ್ಥಿತವಾಗಿ ಉದ್ಯೋಗಿಗೆ ಅನುಕೂಲವಾಗುವಂತೆ ನಿರ್ವಹಿಸಬಹುದು.

ಈ ಸಪ್ತ ಸೂತ್ರಗಳನ್ನು ಪಾಲಿಸುವುದರಿಂದ ತೆರಿಗೆ ಸಂಬಂಧಿತ ತಲೆನೋವು ನಿವಾರಿಸಿಕೊಳ್ಳಬಹುದು.

(ಲೇಖಕ; ಕ್ಲಿಯರ್ ತೆರಿಗೆ ಕಂಪನಿಯ ಸಿಇಒ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು