ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಕಾಫಿಗೆ ಬೇಡಿಕೆ ಕುಸಿತ: ಆಘಾತ ತಂದ ಏಜೆನ್ಸಿಗಳ ನಿರ್ಧಾರ

Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಚೇತರಿಕೆ ಹಾದಿಯಲ್ಲಿದ್ದ ಕಾಫಿ ಧಾರಣೆ ಕೆಲವು ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದು ಕಾಫಿ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಖರೀದಿ ಏಜೆನ್ಸಿಗಳಲ್ಲಿ (ಕ್ಯೂರಿಂಗ್‌) ಬೆಳೆಗಾರರು ದಾಸ್ತಾನು ಮಾಡಿದ್ದ ಹಿಂದಿನ ವರ್ಷದ ಉತ್ಪನ್ನಕ್ಕೆ ನಿರೀಕ್ಷಿತ ಬೆಲೆ ದೊರೆಯುತ್ತಿಲ್ಲ. ಇದರಿಂದ ರಾಜ್ಯದ ಬೆಳೆಗಾರರು ಕಂಗಾಲಾಗಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಕುಸಿದಿರುವ ಪರಿಣಾಮ ದಾಸ್ತಾನು ಮಾಡಿಕೊಂಡಿದ್ದ ಕಾಫಿಯನ್ನು ಖರೀದಿ ಏಜೆನ್ಸಿಗಳು ಬೆಳೆಗಾರರಿಗೇ ವಾಪಸ್‌ ನೀಡುತ್ತಿವೆ. ಚಿಕ್ಕಮಗಳೂರು, ಕೊಡಗು ಹಾಗೂ ಹಾಸನದ ಬೆಳೆಗಾರರಿಗೆ ನಷ್ಟದ ಭೀತಿ ಎದುರಾಗಿದೆ.

ದೊಡ್ಡ ಹಾಗೂ ಕೆಲವು ಸಣ್ಣ ಬೆಳೆಗಾರರು ಕ್ಯೂರಿಂಗ್‌ಗಳಲ್ಲಿ ಕಾಫಿ ದಾಸ್ತಾನು ಮಾಡುತ್ತಾರೆ. ಜತೆಗೆ, ಸಣ್ಣ ವ್ಯಾಪಾರಸ್ಥರೂ ಏಜೆನ್ಸಿಯಲ್ಲಿ ಕಾಫಿ ಇಟ್ಟಿರುತ್ತಾರೆ. ಧಾರಣೆ ಹೆಚ್ಚಾದ ಸಂದರ್ಭಗಳಲ್ಲಿ ಅಂದಿನ ದರಕ್ಕೆ ಬಿಲ್‌ ಹಾಕಿಸಿ, ಮಾರಾಟ ಮಾಡುತ್ತಾರೆ. ಈಗ ಅದೇ ಮುಳುವಾಗಿದೆ.

‘ಕ್ಯೂರಿಂಗ್‌ಗಳಲ್ಲಿ ಇಟ್ಟಿರುವ ಕಾಫಿಗೆ ಬಿಲ್‌ ಮಾಡಿಸಿಕೊಳ್ಳಬೇಕು. ಹೊಸ ಹಾಗೂ ಹಳೆ ಉತ್ಪನ್ನದ ನಡುವೆ (ತಲಾ 50 ಕೆ.ಜಿ ಚೀಲಕ್ಕೆ) ₹1,500 ವ್ಯತ್ಯಾಸವಾಗುವ ಸಾಧ್ಯತೆಯಿದೆ. ತಕ್ಷಣವೇ ಬೆಳೆಗಾರರು ತಮ್ಮ ನಿರ್ಧಾರ ತಿಳಿಸಬೇಕು. ನಿರ್ಧಾರ ತಿಳಿಸದಿದ್ದರೆ ವ್ಯತ್ಯಾಸದ ಬೆಲೆಯಲ್ಲಿ ಬಿಲ್‌ ಮಾಡಿಸಬಹುದು ಎಂದೇ ಭಾವಿಸುತ್ತೇವೆ. ಈಗಿರುವ ಧಾರಣೆಗೆ ಬಿಲ್‌ ಹಾಕಿಸಲು ಒಪ್ಪಿಗೆ ಇಲ್ಲದವರ ಕಾಫಿಯನ್ನು ಪ್ರತ್ಯೇಕವಾಗಿ ಇಡಲಾಗುವುದು. ಆ ಉತ್ಪನ್ನವನ್ನು ಖರೀದಿಸುವುದಿಲ್ಲ. ಬೆಳೆಗಾರರಿಗೆ ವಾಪಸ್ ಕೊಡಲಾಗುವುದು’ ಎಂದು ಹಲವು ಕಾಫಿ ಕ್ಯೂರಿಂಗ್‌ಗಳು ಬೆಳೆಗಾರರಿಗೆ ಸಂದೇಶ ಕಳುಹಿಸುತ್ತಿವೆ. 

ಕಳೆದ ವರ್ಷದ ಕಾಫಿ ಹಂಗಾಮಿನಲ್ಲಿ ಅರೇಬಿಕಾ, ರೋಬಸ್ಟಾ ಕಾಫಿ ಧಾರಣೆ ನಾಗಾಲೋಟದಲ್ಲಿ ಏರಿಕೆ ಕಂಡಿತ್ತು. 50 ಕೆ.ಜಿ ತೂಕದ ರೊಬಸ್ಟಾ ಪಾರ್ಚಿಮೆಂಟ್‌ ಬೆಲೆ ₹10 ಸಾವಿರಕ್ಕೆ ತಲುಪಿತ್ತು. ಕಾಫಿ ಇತಿಹಾಸದಲ್ಲಿ ರೊಬಸ್ಟಾ ಪಾರ್ಚಿಮೆಂಟ್‌ಗೆ ಸಿಕ್ಕಿದ ಗರಿಷ್ಠ ಬೆಲೆ ಇದಾಗಿತ್ತು. ಅರೇಬಿಕಾ ಕಾಫಿ ಪಾರ್ಚಿಮೆಂಟ್‌ ಸಹ ₹16,200ಕ್ಕೆ ಮುಟ್ಟಿತ್ತು. ಈಗ ಅದೇ ಅರೇಬಿಕಾ ಕಾಫಿ ಚೀಲಕ್ಕೆ ₹10,800 ಮಾತ್ರ ದರವಿದೆ. ಹಿಂದಿನ ದರಕ್ಕೆ ಹೋಲಿಸಿದರೆ ಪ್ರತಿ ಚೀಲದ ಮೇಲೆ ₹5,400 ಇಳಿಕೆ ಕಂಡಿದೆ.  

‘ಮೂರು ವರ್ಷಗಳಿಂದ ಬ್ರಿಜಿಲ್‌, ವಿಯೆಟ್ನಾಂ ಹಾಗೂ ಇಂಡೋನೆಷ್ಯಾದಲ್ಲಿ ಹಿಮಪಾತ, ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿತ್ತು. ಈ ವರ್ಷ ಬೆಳೆಗೆ ವಾತಾವರಣ ಪೂರಕವಾಗಿದ್ದು, ಗರಿಷ್ಠಮಟ್ಟದಲ್ಲಿ ಉತ್ಪನ್ನ ಬರುವ ನಿರೀಕ್ಷೆಯಿದೆ. ರಫ್ತು ಪ್ರಮಾಣವೂ ಕುಸಿದಿದೆ. ಈಗಾಗಲೇ ಕಾಫಿ ಕೊಯ್ಲು ಆರಂಭವಾಗಿದ್ದು ಹೊಸ ಉತ್ಪನ್ನ ಮಾರುಕಟ್ಟೆಗೆ ಬಂದರೆ ಮತ್ತಷ್ಟು ಬೆಲೆ ಕುಸಿಯುವ ಸಾಧ್ಯತೆಯಿದೆ. ಕಾಫಿ ದಾಸ್ತಾನು ಮಾಡಿಕೊಂಡಿದ್ದ ಖರೀದಿ ಏಜೆನ್ಸಿಗಳಿಗೂ ನಷ್ಟದ ಭೀತಿ ಎದುರಾಗಿದೆ’ ಎಂದು ಮಾರಾಟ ಪ್ರತಿನಿಧಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT