ಮಂಗಳವಾರ, ಜನವರಿ 26, 2021
28 °C

Pv Web Exclusive: ಸುಖಮಯ ಜೀವನಕ್ಕೆ ಇರಲಿ ಆರ್ಥಿಕ ಶಿಸ್ತು

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಉಳಿತಾಯ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಮನೆ ಕಟ್ಟಲು, ಶಿಕ್ಷಣ,  ಮದುವೆ, ವೈದ್ಯಕೀಯ ತುರ್ತು, ಮುಪ್ಪಿನಲ್ಲಿ ನೆಮ್ಮದಿಯಾಗಿ ಬಾಳಲು ಆಸರೆಯಾಗುವುದು ಕೂಡಿಟ್ಟ ಹಣವೇ.

ಕೋವಿಡ್‌–19 ತಂದಿತ್ತ ವೈದ್ಯಕೀಯ ತುರ್ತುಪರಿಸ್ಥಿತಿಯು ಉಳಿತಾಯಕ್ಕೇ ಹೆಚ್ಚಿನ ಗಮನ ನೀಡುತ್ತಿದ್ದವರ ನಿದ್ದೆ ಕೆಡಿಸಿರುವುದು ವಾಸ್ತವವೇ. ಇನ್ನು ಅಲ್ಪ ಸ್ವಲ್ಪ ಕೂಡಿಟ್ಟವರಂತೂ ‘ಛೇ, ವ್ಯರ್ಥ ಖರ್ಚು ಮಾಡದೆ, ಇನ್ನೂ ಸ್ವಲ್ಪ ಉಳಿಸಬಹುದಿತ್ತು’ ಎಂದು ಹಲುಬಿದ್ದೂ ಇದೆ. ಇನ್ನು ಉದ್ಯೋಗ ಕಳೆದುಕೊಂಡವರು, ವೇತನ ಕಡಿತದ ಬಿಸಿ ಅನುಭವಿಸಿದವರಿಗಂತೂ ಉಳಿತಾಯದ ಮಹತ್ವ ಏನು ಎನ್ನುವುದು ಬಹಳ ಚೆನ್ನಾಗಿ ಅರಿವಿಗೆ ಬಂದಿದೆ.

ಸಾಂಕ್ರಾಮಿಕದಿಂದಾಗಿ ಮುಂದಿನ ದಿನಗಳಲ್ಲಿ ಜನರು ಉಳಿತಾಯಕ್ಕೆ ಹೆಚ್ಚು ಗಮನ ನೀಡುತ್ತಾರೆ ಎನ್ನುವುದು ಹಲವರ  ಅಭಿಪ್ರಾಯ. ಆದರೆ, ಉಳಿತಾಯ ಮಾಡಲು ಆದಾಯದ ಮೂಲ ಬೇಕಲ್ಲಾ!? ಏಕೆಂದರೆ, ಕೋವಿಡ್‌ನಿಂದಾಗಿ ಬಹಳಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ವೇತನ ಕಡಿತ ಅಥವಾ ವೇತನ ಪಾವತಿ ವಿಳಂಬ ಸಮಸ್ಯೆ ಎದುರಿಸುತ್ತಿರುವವರೂ ಹಲವರಿದ್ದಾರೆ. ನಿತ್ಯದ ಖರ್ಚು, ಗೃಹ, ವಾಹನ ಸಾಲದ ಕಂತು ಇತ್ಯಾದಿ ಒಳಗೊಂಡು ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಉಳಿಸುವ ಮಾತೆಲ್ಲಿ?

ಕೌಟುಂಬಿಕ ಉಳಿತಾಯದಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ ಎನ್ನುವುದು ಲೋಕಲ್‌ ಸರ್ಕಲ್ಸ್‌ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ. 9 ತಿಂಗಳ ಅವಧಿಯಲ್ಲಿ ಆಗಿರುವ ಸಮಸ್ಯೆಗಳಿಂದ ಇನ್ನೂ ಹೊರಬರಲು ಬಹಳಷ್ಟು ಜನರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದೆ.

ಕೌಟುಂಬಿಕ ಉಳಿತಾಯದ ಕುರಿತಾಗಿ 8,240 ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಇವರಲ್ಲಿ ಶೇ 68ರಷ್ಟು ಮಂದಿ ಕೋವಿಡ್‌–19 ಸಾಂಕ್ರಾಮಿಕದ 8 ತಿಂಗಳ ಅವಧಿಯಲ್ಲಿ ತಮ್ಮ ಕುಟುಂಬದ ಉಳಿತಾಯ ಇಳಿಕೆ ಆಗಿದೆ ಎಂದು ಹೇಳಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ 2020–21ರಲ್ಲಿ ತಮ್ಮ ಗಳಿಕೆಯಲ್ಲಿ ಇಳಿಕೆ ಕಂಡುಬರಲಿದೆ ಎನ್ನುವುದು ಶೇ 15ರಷ್ಟು ಕುಟುಂಬಗಳ ಅಭಿಪ್ರಾಯವಾಗಿದೆ. ಹಬ್ಬದ ಅವಧಿಯಲ್ಲಿ ಗ್ರಾಹಕರ ವೆಚ್ಚ ಮಾಡುವ ಪ್ರವೃತ್ತಿ, ಮುಂಬರುವ ನಾಲ್ಕು ತಿಂಗಳುಗಳಿಗೆ ಮಾಡಿಕೊಂಡಿರುವ ಹೂಡಿಕೆಯ ಯೋಜನೆಗಳು ಹಾಗೂ ಗಳಿಕೆ ಮತ್ತು ಉಳಿತಾಯ ಕುರಿತಾದ ನಿರೀಕ್ಷೆಗಳ ಆಧಾರದ ಮೇಲೆ ಈ ಮಾಹಿತಿ ನೀಡಿದೆ.

ಆರ್ಥಿಕ ಶಿಸ್ತು ಅತ್ಯಗತ್ಯ: ‘ಜೀವನ ಸುಖಮಯವಾಗಿರಬೇಕಾದರೆ ಪ್ರತಿ ವ್ಯಕ್ತಿಯೂ ಆರ್ಥಿಕ ಶಿಸ್ತನ್ನು ಪ್ರಾರಂಭದಿಂದಲೇ ಅಳವಡಿಸಿಕೊಳ್ಳಬೇಕು. ಇದನ್ನೇ ಆರ್ಥಿಕ ತಜ್ಞರು ಪ್ಲಾನಿಂಗ್‌ ಎಂದು ಕರೆಯುತ್ತಾರೆ. ಬರೀ ಪ್ಲಾನಿಂಗ್‌ ಇದ್ದರೆ ಸಾಲದು, ಅದರಂತೆ ನಡೆದುಕೊಳ್ಳುವುದು ಬಹುಮುಖ್ಯ’ ಎನ್ನುತ್ತಾರೆ ಬ್ಯಾಂಕಿಂಗ್‌, ಹಣಕಾಸು ತಜ್ಞ ಯು.ಪಿ. ಪುರಾಣಿಕ್‌.

‘ಬಹಳಷ್ಟು ಆದಾಯ ಇರುವವರು ಮಾತ್ರ ಉಳಿತಾಯ ಮಾಡಬಹುದು ಎನ್ನುವುದು ತಪ್ಪು ಕಲ್ಪನೆ. ಹಣ ಉಳಿಸಲು ದೃಢ ಸಂಕಲ್ಪ ಹಾಗೂ ಸ್ವಲ್ಪ ಮಟ್ಟಿನ ತ್ಯಾಗಮಯ ಪ್ರವೃತ್ತಿ ಅಗತ್ಯ. ಈ ರೀತಿಯ ಶಿಸ್ತು ಮನುಷ್ಯನನ್ನು ಸ್ವಾವಲಂಬನೆಯತ್ತ ಕರೆದೊಯ್ಯುತ್ತದೆ. ಜೊತೆಗೆ ಒತ್ತಡದಿಂದ ಹೊರಗುಳಿಸುತ್ತದೆ. ಆರ್ಥಿಕ ಶಿಸ್ತು ಅವಳವಡಿಸಿಕೊಳ್ಳಲು ಹಾಗು ಪ್ಲಾನಿನಂತೆ ನಡೆದುಕೊಳ್ಳಲು ಉಳಿತಾಯದ ಗೀಳು ಪ್ರತಿ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿರಬೇಕು’ ಎನ್ನುವುದು ಅವರ ಅಭಿಪ್ರಾಯ.

‘ಆದಾಯದಲ್ಲಿ ಒಂದಿಷ್ಟು ತೆಗೆದಿಟ್ಟು ಉಳಿದುದನ್ನು ಮಾತ್ರ ಖರ್ಚು ಮಾಡುವುದು ಜಾಣತನ. ಖರ್ಚು ಮಾಡಿದ ನಂತರ ಉಳಿಸುವುದು, ತೆರೆನಿಂತ ಮೇಲೆ ಸಮುದ್ರ ಸ್ನಾನ ಮಾಡಿದಂತೆ! ಉಳಿತಾಯ ಮಾಡಿ ಖರ್ಚು ಮಾಡುವುದರಿಂದ ಬೇಡವಾದ ಖರ್ಚಿಗೆ ಹಾಗೂ ದುರಭ್ಯಾಸಗಳಿಗೆ ಕಡಿವಾಣ ಹಾಕಬಹುದು. ಹೀಗೆ ಉಳಿಸಿದ ಹಣವನ್ನು ಎಲ್ಲಿ, ಹೇಗೆ ಹೂಡಿಕೆ ಮಾಡಬೇಕು ಎನ್ನುವುದು ಮುಖ್ಯ. ಉಳಿತಾಯದಲ್ಲಿ ಭದ್ರತೆ ಹಾಗೂ ಉತ್ತಮ ವರಮಾನ ಇರಬೇಕು. ಪಿಂಚಣಿ ಎನ್ನುವ ಪರಿಕಲ್ಪನೆ ಮಾಯವಾಗಿದೆ. ಹೀಗಾಗಿ, ಜೀವನದ ಪಯಣದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸ್ವಂತ ಮನೆ, ವಾಹನ, ಇಳಿವಯಸ್ಸಿನಲ್ಲಿ ಜೀವಿಸಲು ಕ್ರಮಬದ್ಧವಾದ ವರಮಾನ ಬರುವಂತೆ, ಆರೋಗ್ಯಕ್ಕೆ ಸಂಬಂಧಿಸಿದ ಖರ್ಚು ಇವುಗಳನ್ನೆಲ್ಲಾ ಕಾಲಕಾಲಕ್ಕೆ ನಿಭಾಯಿಸಲು ಉಳಿತಾಯ ಅತ್ಯವಶ್ಯಕ.

‘ವ್ಯಕ್ತಿಯ ಪರಿಸರ, ಆದಾಯ, ಅನುಕೂಲಕ್ಕೆ ತಕ್ಕಂತೆ, ಅಲ್ಪಾವಧಿ, ಮಧ್ಯಮ ಹಾಗೂ ದೀರ್ಘಾವಧಿ ಪ್ಲಾನ್‌ ಅಳವಡಿಸಿಕೊಳ್ಳಬೇಕಾಗುತ್ತದೆ. ನಿವೇಶನ, ಮನೆ, ವಾಹನ ಹೊಂದಲು, ಮಕ್ಕಳ ವಿದ್ಯಾಬ್ಯಾಸ, ಮದುವೆ ವಿಚಾರದಲ್ಲಿ ದೀರ್ಘಾವಧಿಯ ಆರ್‌.ಡಿ. (10 ವರ್ಷಗಳ) ಮಾಡಿದಲ್ಲಿ ಇಂತಹ ಹೂಡಿಕೆ ಚಕ್ರಬಡ್ಡಿಯಲ್ಲಿ ಬೆಳೆದು ಸಕಾಲದಲ್ಲಿ ದೊರೆಯುತ್ತದೆ. ಇನ್ನು ಗೃಹ ಸಾಲ ಮಾಡಿ ಮನೆ ಕೊಳ್ಳುವುದಾದಲ್ಲಿ ಆರ್‌.ಡಿ ಬದಲಾಗಿ ಈ ಮೊತ್ತ ಗೃಹ ಸಾಲಕ್ಕೆ ತುಂಬಬಹುದು. ಆದಾಯ ತೆರಿಗೆಗೆ ಒಳಗಾಗುವವರು ವಾರ್ಷಿಕ ಆರ್‌.ಡಿ ಮಾಡಿ, ಪಿಪಿಎಫ್‌ ಅಥವಾ ಬ್ಯಾಂಕ್‌ ಠೇವಣಿಯಲ್ಲಿ ವರ್ಷಾಂತ್ಯಕ್ಕೆ ವಿನಿಯೋಗಿಸಬಹುದು. ತೆರಿಗೆಗೆ ಒಳಗಾಗದಿರುವಲ್ಲಿ ಹೀಗೆ ಉಳಿಸುವ ಹಣ ದೀರ್ಘಾವಧಿ 10 ವರ್ಷಗಳ ಆರ್‌.ಡಿ ಮಾಡಬಹುದು. ತೆರಿಗೆ ಉಳಿಸಲು ಹಾಗೂ ಜೀವನದ ಸಂಜೆಯಲ್ಲಿ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳೂ ಹಣ ಪಡೆಯಲು ಪ್ರತಿಯೊಬ್ಬ ವ್ಯಕ್ತಿ ಎನ್‌ಪಿಎಸ್‌ ಮಾಡಬೇಕು. ಅಕಾಲ ಮರಣಕ್ಕೆ ತುತ್ತಾದಾಗ, ಕುಟುಂಬಕ್ಕೆ ನೆರವಾಗಲು ಜೀವ ವಿಮೆಯ ಅಗತ್ಯವಿದೆ. ಶೇ 10ರಷ್ಟು ಇಲ್ಲಿ ಹೂಡಬೇಕು. ಸಣ್ಣ ವಯಸ್ಸಿನಲ್ಲಿ ಟರ್ಮ್‌ ಇನ್ಶುರೆನ್ಸ್‌ ಮಾಡಿದಲ್ಲಿ ಕನಿಷ್ಠ ಪ್ರೀಮಿಯಂನಲ್ಲಿ ಗರಿಷ್ಠ ಮೊತ್ತ ಪಡೆಯಬಹುದು. ಪ್ರತಿ ವರ್ಷ 5 ರಿಂದ 10 ಗ್ರಾಂ ಬಂಗಾರದ ನಾಣ್ಯ ಕೊಂಡರೆ, ಮಕ್ಕಳ ಮದುವೆ ಕಾಲಕ್ಕೆಅನುಕೂಲವಾಗುತ್ತದೆ. ಷೇರು–ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ಅವರೇ ಜಾಹೀರಾತು ಕೊಡುವಂತೆ ಮಾರ್ಕೆಟ್‌ ರಿಸ್ಕ್‌ ಇರುತ್ತದೆ. ದೊಡ್ಡ ಆದಾಯವಿದ್ದು, ಏರುಪೇರು ಆದರೂ ಸಹಿಸುವ ಸಾಧ್ಯತೆ ಉಳ್ಳವರು ಇಲ್ಲಿ ಹೂಡಿಕೆ ಮಾಡಬಹುದು. ಸಣ್ಣ ಮತ್ತು ಮಧ್ಯಮ ವರ್ಗದ ಜನರು ಸಿಪ್‌ ಮೂಲಕ ಅಲ್ಪಸ್ವಲ್ಪ ಹೂಡಿಕೆ ಮಾಡುವುದು’ ಸೂಕ್ತ ಎನ್ನುತ್ತಾರೆ ಅವರು.

‘ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯಬಾರದು ಎನ್ನುವುದು ಮುಖ್ಯ. ಮನೆ ಸಾಲ–ವಿದ್ಯಾಭ್ಯಾಸ ಸಾಲ ಇವೆರಡೂ ಸಾಲವಾದರೂ ಹೂಡಿಕೆಗೆ ಸಮನಾಗಿದೆ. ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲ ಇಡಬೇಡಿ ಎನ್ನುವಂತೆ ಬೇರೆ ಬೇರೆ ಮಾರ್ಗಗಳಲ್ಲಿ ಹೂಡಿಕೆ ಮಾಡಿ. ಬೋನಸ್‌, ಡಿಎ, ವಾರ್ಷಿಕ ಇನ್ಕ್ರಿಮೆಂಟ್‌ ಬಂದಾಗ ಕನಿಷ್ಠ ಶೇ 50ರಷ್ಟು ಮಕ್ಕಳ ಹಾಗೂ ನಿಮ್ಮ ಇಳಿವಯಸ್ಸಿನ ಸಲುವಾಗಿ ಆರ್‌.ಡಿ ಮಾಡುತ್ತಾ ಬನ್ನಿ. ಈ ರೀತಿಯ ಆರ್ಥಿಕ ಶಿಸ್ತು ಪಾಲನೆಯಿಂದ ಹಂಗಿಲ್ಲದ ಜೀವನ ನಿಮ್ಮದಾಗುತ್ತದೆ’ ಎನ್ನುತ್ತಾರೆ ಪುರಾಣಿಕ್‌ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು