ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರೇಡ್‌ಮಾರ್ಕ್‌ ಉಲ್ಲಂಘಿಸಿದ ಪತಂಜಲಿ: ₹50 ಲಕ್ಷ ಠೇವಣಿ ಇಡಲು ಕೋರ್ಟ್‌ ಸೂಚನೆ

Published 10 ಜುಲೈ 2024, 14:29 IST
Last Updated 10 ಜುಲೈ 2024, 14:29 IST
ಅಕ್ಷರ ಗಾತ್ರ

‌ಮುಂಬೈ: ಟ್ರೇಡ್‌ಮಾರ್ಕ್‌ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ನ್ಯಾಯಾಲಯದಲ್ಲಿ ₹50 ಲಕ್ಷ ಮೊತ್ತವನ್ನು ಠೇವಣಿ ಇಡುವಂತೆ ಪತಂಜಲಿ ಆಯುರ್ವೇದ್‌ ಲಿಮಿಟೆಡ್‌ಗೆ, ಬಾಂಬೆ ಹೈಕೋರ್ಟ್ ಸೂಚಿಸಿದೆ. 

ಪತಂಜಲಿ ಕಂಪನಿಯು ಕರ್ಪೂರ ಉತ್ಪನ್ನಗಳ ಮಾರಾಟಕ್ಕೆ ನಮ್ಮ ಕಂಪನಿಯ ಟ್ರೇಡ್‌ಮಾರ್ಕ್‌ ಅನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಮಂಗಳಂ ಆರ್ಗಾನಿಕ್ಸ್‌ ಕಂಪನಿಯು ಹೈಕೋರ್ಟ್‌ನ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌, 2023ರ ಆಗಸ್ಟ್‌ 30ರಂದು ನೀಡಿದ್ದ ಮಧ್ಯಂತರ ಆದೇಶದಲ್ಲಿ ತಡೆಯಾಜ್ಞೆ ನೀಡಿತ್ತು.

ಆದರೆ, ಈ ಆದೇಶ ಉಲ್ಲಂಘಿಸಿರುವ ಪತಂಜಲಿಯು ಉತ್ಪನ್ನಗಳನ್ನು ಮಾರಾಟ ಮಾಡಿದೆ ಎಂದು ಮಂಗಳಂ ಕಂಪನಿಯು ದೂರಿತ್ತು.  

ಜುಲೈ 8ರಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ಐ. ಚಾಗ್ಲಾ ನೇತೃತ್ವದ ಏಕಸದಸ್ಯ ಪೀಠವು, ‘ಟ್ರೇಡ್‌ಮಾರ್ಕ್‌ ಉಲ್ಲಂಘಿಸಿರುವ ಬಗ್ಗೆ ಜೂನ್‌ನಲ್ಲಿ ಪತಂಜಲಿ ಕಂಪನಿಯು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ. ಆದರೂ, ಮತ್ತೆ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಬಳಿಕ ಜುಲೈ 19ಕ್ಕೆ ವಿಚಾರಣೆಯನ್ನು ಮುಂದೂಡಿದರು. ‌

₹49.57 ಲಕ್ಷ ಮೌಲ್ಯದ ಉತ್ಪನ್ನ ಮಾರಾಟ: ತಡೆಯಾಜ್ಞೆ ಬಳಿಕವೂ ₹49.57 ಲಕ್ಷ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿರುವುದಾಗಿ ಪತಂಜಲಿ ಕಂಪನಿಯ ನಿರ್ದೇಶಕ ರಜನೀಶ್‌ ಮಿಶ್ರಾ ಅವರು, ಜೂನ್‌ನಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು.  

ಬೇಷರತ್ತಾಗಿ ಕ್ಷಮೆಯಾಚಿಸಿದ್ದ ಅವರು, ನ್ಯಾಯಾಲಯದ ಆದೇಶಕ್ಕೆ ಬದ್ಧರಾಗಿ ಇರುವುದಾಗಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT