ಬುಧವಾರ, ಮೇ 5, 2021
23 °C

‘ಡಿಜಿಟಲ್ ಆರೋಗ್ಯ ಪಾಸ್‌ಪೋರ್ಟ್’ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕುರಿತು ಭಾರತ ಸೇರಿದಂತೆ ವಿಶ್ವದಾದ್ಯಂತ ಸಮೀಕ್ಷೆ ನಡೆಸಿದ    ಸೆನ್ಸಸ್‌ವೈಡ್‌ನ ಅಧ್ಯಯನವು ಜಾಗತಿಕ ಪ್ರವಾಸೋದ್ಯಮದ ಪಾಲಿಗೆ ಉತ್ತೇಜನಕಾರಿಯಾಗಿದೆ. ವಿದೇಶ ಪ್ರಯಾಣದ ಮೇಲಿನ ನಿರ್ಬಂಧಗಳು ತೆರವಾದ ಆರು ವಾರಗಳಲ್ಲಿಯೇ ಅಂತರರಾಷ್ಟ್ರೀಯ ಪ್ರಯಾಣ ಕೈಗೊಳ್ಳಲು ಆಸಕ್ತಿ ತೋರಿಸಿದ ವಿವಿಧ ದೇಶಗಳ ಪ್ರಯಾಣಿಕರ ಜಾಗತಿಕ ಸರಾಸರಿ ಶೇ 41ಕ್ಕೆ ಹೋಲಿಸಿದರೆ, ಶೇ 47ರಷ್ಟು ಭಾರತದ ಪ್ರಯಾಣಿಕರು ಒಲವು ಹೊಂದಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿನ ಶೇ 93ರಷ್ಟು ಜನರು, ಭವಿಷ್ಯದ ಪ್ರಯಾಣಗಳಲ್ಲಿ ಡಿಜಿಟಲ್ ಆರೋಗ್ಯ ಪಾಸ್‌ಪೋರ್ಟ್‌ ಬಳಸುವುದಕ್ಕೆ ತಮ್ಮದೇನೂ ಅಭ್ಯಂತರ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಮಾನ ಪ್ರಯಾಣಿಕರ ಗುರುತು, ಅವರ ’ಕೋವಿಡ್-19’ ಪರೀಕ್ಷಾ ಫಲಿತಾಂಶದ ದೃಢೀಕರಣ ಮತ್ತು ಲಸಿಕೆ ಹಾಕಿಸಿಕೊಂಡ ವಿವರಗಳು ಸುರಕ್ಷಿತ  ಆ್ಯಪ್‌ನಲ್ಲಿ ಲಭ್ಯ ಇರುವ  ಡಿಜಿಟಲ್ ಆರೋಗ್ಯ ಪಾಸ್‌ಪೋರ್ಟ್‌ನ ಪ್ರಯೋಜನಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಮತ್ತು ಸರ್ಕಾರಗಳು ಕಾರ್ಯೋನ್ಮುಖವಾಗಿರುವಾಗ, ಅಂತರರಾಷ್ಟ್ರೀಯ ಪ್ರವಾಸೋದ್ಯಮವು ಚೇತರಿಸಿಕೊಳ್ಳಲು ಡಿಜಿಟಲ್ ಆರೋಗ್ಯ ಪಾಸ್‌ಪೋರ್ಟ್‌ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಭಾರತದ ವಿಮಾನ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.

‘ಪ್ರವಾಸೋದ್ಯಮದ ಭವಿಷ್ಯ ಆಶಾದಾಯಕವಾಗಿ ಕಾಣಿಸುತ್ತದೆ. ಈ ಅಧ್ಯಯನವು ಪ್ರವಾಸೋದ್ಯಮದ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಒದಗಿಸುತ್ತದೆ‘ ಎಂದು ಅಮೆಡಿಯಸ್‌ ಏಷ್ಯಾ ಪೆಸಿಫಿಕ್ ವಲಯದ ಸಂಶೋಧನೆ ಹಾಗೂ ಅಭಿವೃದ್ಧಿ ಮುಖ್ಯಸ್ಥ ಮಣಿ ಗಣೇಶನ್ ಅವರು ಹೇಳಿದ್ದಾರೆ.

ಭವಿಷ್ಯದ ವಿದೇಶ ಪ್ರಯಾಣಗಳಲ್ಲಿ ಡಿಜಿಟಲ್ ಆರೋಗ್ಯ ಪಾಸ್‌ಪೋರ್ಟ್‌ ಬಳಸಿಕೊಳ್ಳುವುದಕ್ಕೆ ಭಾರತದ ಬಹುತೇಕ ಪ್ರಯಾಣಿಕರ ಆಕ್ಷೇಪವೇನು (ಶೇ 92ರಷ್ಟು) ಇಲ್ಲದಿರುವುದೂ ಈ ಅಧ್ಯಯನದಲ್ಲಿ ತಿಳಿದು ಬಂದಿದೆ. ಪ್ರವಾಸ ಉದ್ದೇಶಕ್ಕೆ ವಿದೇಶಗಳಿಗೆ ಭೇಟಿ ನೀಡುವುದಕ್ಕೆ ಭಾರತೀಯ ಪ್ರಯಾಣಿಕರಲ್ಲಿ ಈಗಲೂ ಉತ್ಸಾಹ ಗರಿಷ್ಠ ಮಟ್ಟದಲ್ಲಿ ಇದೆ. ವಿದೇಶ ಪ್ರಯಾಣದ ಮೇಲಿನ ನಿರ್ಬಂಧಗಳು ತೆರವಾದ 6 ವಾರಗಳಲ್ಲಿಯೇ ಅಂತರರಾಷ್ಟ್ರೀಯ ಪ್ರಯಾಣ ಕೈಗೊಳ್ಳುವ ಬಗ್ಗೆ  ಸರಿಸುಮಾರು ಅರ್ಧದಷ್ಟು ಜನರು (ಶೇ 47) ಒಲವು ತೋರಿಸಿದ್ದಾರೆ.

ಕಳೆದ ಮೂರು ತ್ರೈಮಾಸಿಕಗಳಲ್ಲಿ  ಶೇ 79ರಷ್ಟು ಭಾರತದ ಪ್ರವಾಸಿಗರು ತಮ್ಮ ಪ್ರಯಾಣ ಆರೋಗ್ಯದ ಡೇಟಾಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಂಗ್ರಹಿಸಿ ಇಡಲು ಒಲವು ಹೊಂದಿರುವುದನ್ನು ಈ ಅಧ್ಯಯನ ಬಹಿರಂಗಪಡಿಸಿದೆ. ವಿಳಂಬ ಮಾಡದೆ ವಿದೇಶ ಪ್ರಯಾಣ ಕೈಗೊಳ್ಳಲು, ಇತರರ ಜತೆಗೆ ಮುಖಾಮುಖಿ ಸಂವಾದಕ್ಕೆ ಆಸ್ಪದವಿಲ್ಲದೆ ವಿಮಾನ ನಿಲ್ದಾಣಗಳಲ್ಲಿನ ತಪಾಸಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಈ ಡಿಜಿಟಲ್ ಸ್ವರೂಪದ ಆರೋಗ್ಯ ಮಾಹಿತಿಯು ನೆರವಾಗಲಿದೆ.

ಭಾರತದ 1,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಈ ಅಂತರರಾಷ್ಟ್ರೀಯ ಅಧ್ಯಯನವು,  ಡಿಜಿಟಲ್ ಆರೋಗ್ಯ ಪಾಸ್‌ಪೋರ್ಟ್‌ ಸೌಲಭ್ಯವನ್ನು ತ್ವರಿತವಾಗಿ ಜಾರಿಗೆ ತರಲು ಪ್ರಾಧಿಕಾರಗಳು ಮತ್ತು ವ್ಯವಹಾರಗಳಿಗೆ ವಿಶ್ವದಾದ್ಯಂತ ಸಾಕಷ್ಟು ಉತ್ತೇಜನ ಇರುವುದನ್ನು  ಸೂಚಿಸುತ್ತದೆ.  ಡಿಜಿಟಲ್ ಆರೋಗ್ಯ ಪಾಸ್‌ಪೋರ್ಟ್‌ ಸೌಲಭ್ಯವು ಸಹಜ ನಿಯಮವಾಗಿ ಜಾರಿಗೆ ಬಂದರೆ ತಾವು ಸಂತಸಪಡುವುದಾಗಿ ಶೇ 57 ರಷ್ಟು ಜನರು ಹೇಳಿಕೊಂಡಿದ್ದಾರೆ.

ಡಿಜಿಟಲ್ ಪಾಸ್‌ಪೋರ್ಟ್‌ಗೆ ಅಸಾಧಾರಣ ಬೆಂಬಲ ದೊರೆತಿರುವುದರ ಹೊರತಾಗಿಯೂ, ಮಾಹಿತಿ ಸುರಕ್ಷತೆ ಮತ್ತು ವೈಯಕ್ತಿಕ ಮಾಹಿತಿಗೆ ಧಕ್ಕೆಯಾಗುವ ಬಗ್ಗೆ ಜನರಲ್ಲಿ ಅನೇಕ ಆತಂಕಗಳು ಇರುವುದೂ ಸಮೀಕ್ಷೆಯಲ್ಲಿ ಕಂಡುಬಂದಿದೆ.

ತಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಂಗ್ರಹಿಸಲಾಗುವ ಮಾಹಿತಿಯ ಸುರಕ್ಷತೆ ಬಗ್ಗೆ ಶೇ 34ರಷ್ಟು ಜನರು ಕಳವಳ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ಮಾಹಿತಿಯನ್ನು ಎಲ್ಲಿ ಮತ್ತು ಹೇಗೆ ಹಂಚಿಕೊಳ್ಳಲಾಗುತ್ತದೆ ಎನ್ನುವುದರ ಕುರಿತು ಪಾರದರ್ಶಕತೆ ಕೊರತೆ  ಇರುವ ಮತ್ತು ಸಂಗ್ರಹಿಸಲಾದ ಮಾಹಿತಿ ಮೇಲೆ ನಿಯಂತ್ರಣ ಇಲ್ಲದಿರುವುದರ ಬಗ್ಗೆ ಶೇ 28ರಷ್ಟು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು