ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ: ರೈತರಿಗೆ ಸಂತಸ, ಮಿಲ್‌ಗೆ ಆತಂಕ

ಕಲಬುರ್ಗಿ ತೊಗರಿಗೆ ಭೌಗೋಳಿಕ ವಿಶೇಷ ಮಾನ್ಯತೆಯ ಗರಿ
Last Updated 26 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಅತ್ಯಧಿಕವಾಗಿ ಬೆಳೆಯುವ ತೊಗರಿಗೆಭಾರತ ಸರ್ಕಾರದ ಅಂಗ ಸಂಸ್ಥೆ ‘ಜಿಯಾಲಾಜಿಕಲ್‌ ಇಂಡಿಕೇಶನ್‌ ರಿಜಿಸ್ಟ್ರಿ’ಯು ‘ಭೌಗೋಳಿಕ ವಿಶೇಷ’ ಮಾನ್ಯತೆ (ಜಿಐ) ನೀಡಿದ್ದರಿಂದ ತೊಗರಿಗೆ ಬೇಡಿಕೆ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ. ಮತ್ತೊಂದೆಡೆ ಬಹುರಾಷ್ಟ್ರೀಯ ಕಂಪನಿಗಳು ತೊಗರಿಬೇಳೆ ಸಂಸ್ಕರಣೆ ಉದ್ಯಮಕ್ಕೆ ಕೈಹಾಕುವ ಸಂಭವ ಇರುವುದರಿಂದ ಜಿಲ್ಲೆಯ ದಾಲ್‌ಮಿಲ್‌ ಉದ್ಯಮಿಗಳಲ್ಲಿ ಆತಂಕ ಮಡುಗಟ್ಟಿದೆ.

ಕಲಬುರ್ಗಿ ಜಿಲ್ಲೆಯ 3.70 ಲಕ್ಷ ಹೆಕ್ಟೇರ್‌ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್ ಸೇರಿದಂತೆ ಒಟ್ಟು 4.50 ಲಕ್ಷ ಹೆಕ್ಟೇರ್‌ನಲ್ಲಿ ಉತ್ಕೃಷ್ಟ ಮಟ್ಟದ ತೊಗರಿ ಬೆಳೆಯಲಾಗುತ್ತದೆ.

ಜಿಐ ಮಾನ್ಯತೆ ಸಿಕ್ಕಿರುವುದರಿಂದ ಸಹಜವಾಗಿ ಈ ಭಾಗದ ತೊಗರಿಯನ್ನು ಅಂತರರಾಷ್ಟ್ರೀಯ ಬ್ರಾಂಡ್‌ ಆಗಿ ಗುರುತಿಸಲಾಗುತ್ತದೆ. ಹೀಗಾಗಿ, ಗುಣಮಟ್ಟದ ತೊಗರಿಗೆ ಬೇಡಿಕೆ ಕುದುರುವುದರಿಂದ ಬೆಲೆ ಹೆಚ್ಚಳವಾದರೆ ರೈತರಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ.

ದೊಡ್ಡ ಕಂಪನಿಗಳು ಹೆಚ್ಚಿನ ಬಂಡವಾಳ ಹೂಡಿ ಅತ್ಯಾಧುನಿಕ ಯಂತ್ರಗಳನ್ನು ತೊಗರಿ ಸಂಸ್ಕರಣೆ ಪ್ರಕ್ರಿಯೆಗೆ ಬಳಸಿಕೊಳ್ಳಬಹುದು. ಮಿಲ್‌ಗಳಲ್ಲಿ ತೊಗರಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಸಂಸ್ಕರಿಸಲು ಏಳು ದಿನ ಬೇಕು. ಕಂಪನಿಗಳು ಸುಧಾರಿತ ಯಂತ್ರಗಳನ್ನು ಬಳಸಿದರೆ 24 ಗಂಟೆಗಳಲ್ಲೇ ಸಂಸ್ಕರಿಸಬಹುದು.

‘ಹೀಗಾದರೆ ಸ್ಥಳೀಯ ದಾಲ್‌ಮಿಲ್‌ಗಳು ದೊಡ್ಡ ಕಂಪನಿಗಳ ಜೊತೆಗೆ ಸ್ಪರ್ಧಿಸಲಾಗದೇ ಬಾಗಿಲು ಹಾಕುವ ಸಂದರ್ಭ ಎದುರಾಗಬಹುದು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ’ ಗುಲಬರ್ಗಾ ದಾಲ್‌ ಮಿಲ್‌ ಅಸೋಸಿಯೇಷನ್‌ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ.

‘ತೊಗರಿ ಬೇಳೆ ಸಂಸ್ಕರಣೆ ಉದ್ಯಮವನ್ನು ಕೇಂದ್ರ ಸರ್ಕಾರ ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳ ಪಟ್ಟಿಯಿಂದ ಕೃಷಿ ಆಧಾರಿತ ಉದ್ಯಮಗಳ ಪಟ್ಟಿಗೆ ಸೇರಿಸಬೇಕು. ಇದರಿಂದ ಮಿಲ್‌ಗಳಿಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ದೊರೆಯಲಿದೆ. ಇದು, ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧೆಗೆ ಅಣಿಯಾಗಲು ಸಹಕಾರಿಯಾಗಲಿದೆ’ ಎನ್ನುತ್ತಾರೆ ಅವರು.

ಉತ್ತಮ ಇಳುವರಿ: ‘ಜಿಲ್ಲೆಯಲ್ಲಿ ಈ ಬಾರಿ ಶೇ 99ರಷ್ಟು ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, ಉತ್ತಮ ಇಳುವರಿ ನಿರೀಕ್ಷೆ ಇದೆ. ಜಿಐ ಮಾನ್ಯತೆ ಸಿಕ್ಕಿರುವುದು ರೈತರು ಹಾಗೂ ಕೃಷಿ ವಿಜ್ಞಾನಿಗಳಲ್ಲಿ ಹೆಮ್ಮೆ ತಂದಿದೆ’ ಎನ್ನುತ್ತಾರೆಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗೂರ.

ಕಲಬುರ್ಗಿ ತೊಗರಿ ವಿಶೇಷ ಏನು?
ಕಲಬುರ್ಗಿ ತೊಗರಿಗೆ ಭೌಗೋಳಿಕ ಮಾನ್ಯತೆ ಪಡೆಯುವ ಸಂದರ್ಭದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಲಬುರ್ಗಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಕಾಲೇಜಿನ ವಿಜ್ಞಾನಿಗಳು ಮಾನ್ಯತೆ ನೀಡುವ ಪ್ರಾಧಿಕಾರದ ಎದುರು ಇದರ ವಿಶೇಷಣಗಳ ಪಟ್ಟಿ ಮಾಡಿದ್ದರು.

ಕಲಬುರ್ಗಿ ಸೀಮೆಯ ಕೃಷಿ ಭೂಮಿಯ ತಳದಲ್ಲಿ ಸುಣ್ಣದ ಕಲ್ಲು ಸಿಗುತ್ತದೆ. ವಿಶೇಷವಾಗಿ ಚಿಂಚೋಳಿ, ಸೇಡಂ, ಚಿತ್ತಾಪುರ, ಶಹಾಬಾದ್‌ ಭಾಗದಲ್ಲಿ ಸುಣ್ಣದ ಕಲ್ಲು ಹೆಚ್ಚು. ಇದರಿಂದಾಗಿ ತೊಗರಿ ಬೆಳೆಗೆ ಸಹಜವಾಗಿ ಹೆಚ್ಚಿನ ಕ್ಯಾಲ್ಸಿಯಂ, ಪೊಟ್ಯಾಶಿಯಂ ಪ್ರಮಾಣ ದೊರೆಯುತ್ತದೆ. ಇದರಿಂದ ತೊಗರಿಯಲ್ಲಿ ನೈಸರ್ಗಿಕವಾಗಿಯೇ ಪೋಷಕಾಂಶಗಳು ಇರುತ್ತವೆ. ಅಲ್ಲದೇ, ಕಲಬುರ್ಗಿ ತೊಗರಿ ಬೇಳೆಯಿಂದ ತಯಾರಿಸಿದ ಪಲ್ಯ ಹಾಗೂ ಸಾಂಬಾರ್‌ ಬೇಗ ಕೆಡುವುದಿಲ್ಲ. ಇಷ್ಟು ಉತ್ತಮ ಗುಣಮಟ್ಟದ ತೊಗರಿ ರಾಜ್ಯದ ಬೇರೆಡೆ ಸಿಗುವುದಿಲ್ಲ ಎಂದು ಪ್ರತಿಪಾದಿಸಿದ್ದರು.

*
ದಾಲ್‌ಮಿಲ್‌ಗಳು ಈಗಾಗಲೇ ಸಂಕಷ್ಟದಲ್ಲಿವೆ. ದೊಡ್ಡ ಕಂಪನಿಗಳು ಈ ಕ್ಷೇತ್ರಕ್ಕೆ ಬಂದರೆ ನಮ್ಮ ಪರಿಸ್ಥಿತಿ ಕಠಿಣವಾಗಲಿದೆ.
-ಶಿವಶರಣಪ್ಪ ನಿಗ್ಗುಡಗಿ, ಅಧ್ಯಕ್ಷ, ಗುಲಬರ್ಗಾ ದಾಲ್‌ ಮಿಲ್‌ ಅಸೋಸಿಯೇಷನ್‌

*
ಅಂತರರಾಷ್ಟ್ರೀಯಮಟ್ಟದ ಬ್ರ್ಯಾಂಡ್‌ ಆಗಲು ಈ ಮಾನ್ಯತೆ ಸಹಕಾರಿ. ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾದರೆ ರೈತರಿಗೂ ಉತ್ತಮ ಬೆಲೆ ಸಿಗಲಿದೆ.
-ಮಾರುತಿ ಮಾನ್ಪಡೆ, ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT