ವಾಷಿಂಗ್ಟನ್: ಭಾರತದಿಂದ ಅಮೆರಿಕಕ್ಕೆ ಆಮದಾಗುವ ಎಲ್ಲ ಸರಕುಗಳ ಮೇಲೆ ಆಗಸ್ಟ್ 1ರಿಂದ ಶೇಕಡ 25ರಷ್ಟು ಸುಂಕ ವಿಧಿಸಲಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಹೇಳಿದ್ದಾರೆ.

ಜಗತ್ತಿನ ಐದನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯನ್ನು ಹೊಂದಿರುವ ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಆಗಸ್ಟ್ 1ರಿಂದ ಒಂದಿಷ್ಟು ದಂಡವನ್ನು ಕೂಡ ತೆರಬೇಕಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಆದರೆ, ದಂಡದ ಕುರಿತಾಗಿ ಅವರು ಹೆಚ್ಚಿನ ವಿವರಣೆ ನೀಡಿಲ್ಲ.

ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ಅಮೆರಿಕದ ತಂಡವೊಂದು ಆಗಸ್ಟ್ 25ಕ್ಕೆ ಭಾರತಕ್ಕೆ ಬರಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ ನಂತರದಲ್ಲಿ ಟ್ರಂಪ್ ಅವರ ಈ ದಿಢೀರ್ ಪ್ರಕಟಣೆ ಬಂದಿದೆ. ಅಮೆರಿಕವು ಮುಂದಿರಿಸಿರುವ ಬೇಡಿಕೆಗಳಿಗೆ ಭಾರತವು ಒಪ್ಪುವಂತೆ ಮಾಡಲು ಸುಂಕವನ್ನು ಒತ್ತಡ ತಂತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

‘ಭಾರತವು ನಮ್ಮ ಸ್ನೇಹಿತ. ಆದರೆ, ವರ್ಷಗಳಿಂದ ನಾವು ಭಾರತದ ಜೊತೆ ಹೆಚ್ಚಿನ ವಹಿವಾಟು ನಡೆಸಿಲ್ಲ. ಏಕೆಂದರೆ, ಭಾರತದಲ್ಲಿನ ಸುಂಕವು ಬಹಳ ಹೆಚ್ಚಿನ ಮಟ್ಟದಲ್ಲಿದೆ. ಅದು ಜಗತ್ತಿನಲ್ಲಿ ಅತಿಹೆಚ್ಚಿನ ಸುಂಕ ಇರುವ ದೇಶಗಳ ಪೈಕಿ ಒಂದಾಗಿದೆ. ಭಾರತವು ಇತರ ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣವಾದ ಹಾಗೂ ಅಸಹ್ಯಕರವಾದ ಹಣಕಾಸೇತರ ವಾಣಿಜ್ಯ ತಡೆಗೋಡೆಗಳನ್ನು ಹೊಂದಿದೆ’ ಎಂದು ಟ್ರಂಪ್ ಅವರು ಟ್ರುತ್ ಸೋಷಿಯಲ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

‘ಅವರು ತಮಗೆ ಬೇಕಿರುವ ಮಿಲಿಟರಿ ಉಪಕರಣಗಳ ಪೈಕಿ ಬಹಳಷ್ಟನ್ನು ಯಾವಾಗಲೂ ರಷ್ಯಾದಿಂದ ಖರೀದಿಸಿದ್ದಾರೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ರಷ್ಯಾ ನಿಲ್ಲಿಸಬೇಕು ಎಂದು ಎಲ್ಲರೂ ಬಯಸುತ್ತಿರುವ ಹೊತ್ತಿನಲ್ಲಿ ಚೀನಾ ಜೊತೆ ಭಾರತವು ರಷ್ಯಾದಿಂದ ಅತಿದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿಸುತ್ತಿದೆ. ಇವೆಲ್ಲವೂ ಒಳ್ಳೆಯದಲ್ಲ’ ಎಂದು ಟ್ರಂಪ್ ದೂರಿದ್ದಾರೆ.

ಟ್ರಂಪ್ ಅವರ ಘೋಷಣೆಯ ಪರಿಣಾಮಗಳ ಬಗ್ಗೆ ಅಧ್ಯಯನ ನಡೆದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸುಂಕದ ಪರಿಣಾಮಗಳ ಬಗ್ಗೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಭಾರತದಿಂದ ಅಮೆರಿಕ ಪ್ರವೇಶಿಸುವ ಬಹುತೇಕ ಸರಕುಗಳ ಮೇಲೆ ಶೇ 10ರಷ್ಟು ಮೂಲಸುಂಕ ವಿಧಿಸಲಾಗುತ್ತಿದೆ. ಈಗ ಘೋಷಿಸಿರುವ ಶೇ 25ರಷ್ಟು ಸುಂಕವು ಈ ಮೂಲಸುಂಕಕ್ಕೆ ಹೆಚ್ಚುವರಿಯಾಗಿ ಇರಲಿದೆಯೇ ಎಂಬುದು ಇನ್ನೂ ಗೊತ್ತಾಗಿಲ್ಲ.

ಟ್ರಂಪ್ ಅವರು ಘೋಷಿಸಿರುವ ಈ ಸುಂಕವು ಭಾರತದಿಂದ ಅಮೆರಿಕಕ್ಕೆ ಆಗುವ 87 ಬಿಲಿಯನ್ ಡಾಲರ್ (ಅಂದಾಜು ₹7.63 ಲಕ್ಷ ಕೋಟಿ) ಮೌಲ್ಯದ ಸರಕುಗಳ ರಫ್ತಿನ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳಲ್ಲಿ ಜವಳಿ, ಔಷಧ, ಮುತ್ತು ಮತ್ತು ಆಭರಣ, ಪೆಟ್ರೊಕೆಮಿಕಲ್ಸ್ ಪ್ರಮುಖವಾಗಿವೆ.

ಅಮೆರಿಕದಿಂದ ಭಾರತಕ್ಕೆ ಆಮದಾಗುವ ತಯಾರಿಕಾ ವಲಯದ ಉತ್ಪನ್ನಗಳ ಮೌಲ್ಯವು ಅಂದಾಜು 42 ಬಿಲಿಯನ್ ಡಾಲರ್ (ಸರಿಸುಮಾರು ₹ 3.68 ಲಕ್ಷ ಕೋಟಿ) ಆಗಿದೆ. ಅಮೆರಿಕವು ಭಾರತಕ್ಕೆ ದ್ರವೀಕೃತ ನೈಸರ್ಗಿಕ ಅನಿಲ, ಕಚ್ಚಾ ತೈಲ, ಕಲ್ಲಿದ್ದಲನ್ನು ಸಹ ರಫ್ತು ಮಾಡುತ್ತದೆ.

ಟ್ರಂಪ್ ಅವರು ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಪ್ರತಿಸುಂಕ ಹೇರುವುದಾಗಿ ಏಪ್ರಿಲ್ 2ರಂದು ಘೋಷಿಸಿದರು. ಆಗ ಭಾರತದ ಮೇಲೆ ಅವರು ಶೇ 26ರಷ್ಟು ಸುಂಕ ಹೇರಿದ್ದರು. ಆದರೆ, ಬೇರೆ ಬೇರೆ ದೇಶಗಳ ಜೊತೆ ಅಮೆರಿಕವು ವಾಣಿಜ್ಯ ಒಪ್ಪಂದದ ಬಗ್ಗೆ ಮಾತುಕತೆ ಆರಂಭಿಸಿದ ಕಾರಣಕ್ಕೆ ಪ್ರತಿಸುಂಕ ಕ್ರಮವನ್ನು 90 ದಿನಗಳವರೆಗೆ ಅಮಾನತಿನಲ್ಲಿ ಇರಿಸಲಾಯಿತು. ನಂತರ ಅಮಾನತನ್ನು ಆಗಸ್ಟ್ 1ರವರೆಗೆ ವಿಸ್ತರಿಸಲಾಯಿತು. ಆದರೆ ಶೇ 10ರಷ್ಟು ಮೂಲಸುಂಕವು ಜಾರಿಯಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.