ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಲ್ಲಿ ವೆಜ್‌ ಥಾಲಿ ದರ ಏರಿಕೆ; ಚಿಕನ್‌ ಥಾಲಿ ಇಳಿಕೆ: ಕಾರಣ ಏನು?

Published 8 ಮೇ 2024, 11:34 IST
Last Updated 8 ಮೇ 2024, 11:34 IST
ಅಕ್ಷರ ಗಾತ್ರ

ಮುಂಬೈ: ಟೊಮೆಟೊ ಹಾಗೂ ಈರುಳ್ಳಿ ದರ ಏರಿಕೆಯಿಂದಾಗಿ ಏಪ್ರಿಲ್‌ ತಿಂಗಳಿನಲ್ಲಿ ‘ವೆಜ್‌ ಥಾಲಿ’ಯ (ಸಸ್ಯಾಹಾರಿ ತಟ್ಟೆ ಊಟ) ದರ ಸರಾಸರಿ ಶೇ 8ರಷ್ಟು ಏರಿಕೆಯಾಗಿದೆ ಎಂದು ಕ್ರಿಸಿಲ್‌ ಮಾರುಕಟ್ಟೆ ಮಾಹಿತಿ ಮತ್ತು ವಿಶ್ಲೇಷಣೆಯ ‘ರೋಟಿ ರೈಸ್ ರೇಟ್’ನ ಮಾಸಿಕ ವರದಿ ಹೇಳಿದೆ.

ಆದರೆ ಬ್ರಾಯ್ಲರ್‌ ಕೋಳಿಯ ದರ ಇಳಿಕೆಯಿಂದಾಗಿ ‘ಚಿಕನ್‌ ಥಾಲಿ’ (ಕೋಳಿ ತಟ್ಟೆ ಊಟ)ಯ ದರ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಈರುಳ್ಳಿ, ಟೊಮೆಟೊ ಹಾಗೂ ಆಲೂಗಡ್ಡೆ ಮುಂತಾದ ತರಕಾರಿಗಳು, ಬೇಳೆ, ಅನ್ನ, ಮೊಸರು, ಸಲಾಡ್‌ ಇರುವ ವೆಜ್‌ ಥಾಲಿ ದರ ಕಳೆದ ವರ್ಷ ಏಪ್ರಿಲ್‌ನಲ್ಲಿ ಸರಾಸರಿ ₹25.4 ಇದ್ದರೆ, ಈ ವರ್ಷ ಅದು ₹27.4ಕ್ಕೆ ಏರಿಕೆಯಾಗಿದೆ. ಈ ವರ್ಷ ಮಾರ್ಚ್‌ನಲ್ಲಿ ಅದರ ದರ ₹27.3 ಇತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಈರುಳ್ಳಿ ದರ ಶೇ 41, ಟೊಮೆಟೊ ದರ ಶೇ 40, ಆಲೂಗಡ್ಡೆ ದರ ಶೇ 30, ಅಕ್ಕಿ ದರ ಶೇ 14 ಹಾಗೂ ಕಾಳುಗಳ ದರದಲ್ಲಿ ಶೇ 20ರಷ್ಟು ಏರಿಕೆಯಾಗಿದ್ದರಿಂದ ವೆಜ್‌ ಥಾಲಿ ದರದಲ್ಲಿ ಏರಿಕೆ ಕಂಡಿದೆ.

ಜೀರಿಗೆ, ಮೆಣಸಿನಕಾಯಿ ಮತ್ತು ಎಣ್ಣೆ ದರದಲ್ಲಿ ಕ್ರಮವಾಗಿ ಶೇ 40, ಶೇ 31 ಹಾಗೂ ಶೇ 10ರಷ್ಟು ಇಳಿಕೆಯಾಗಿದ್ದರಿಂದ, ವೆಜ್‌ ಥಾಲಿ ದರ ಇನ್ನಷ್ಟು ಏರಿಕೆಯಾಗುವುದು ತಪ್ಪಿತು ಎಂದು ವರದಿ ಅಭಿಪ್ರಾಯಪಟ್ಟಿದೆ.

ಚಿಕನ್‌ ಥಾಲಿಯಲ್ಲೂ ಇವೇ ಪದಾರ್ಥಗಳು ಬಳಸಿದರೂ, ಬೇಳೆಯ ಬದಲಿಗೆ ಕೋಳಿ ಬಳಸಲಾಗುತ್ತದೆ. 2023ರ ಏಪ್ರಿಲ್‌ಗೆ ಹೋಲಿಸಿದರೆ ಚಿಕನ್‌ ಥಾಲಿ ದರ ಸರಾಸರಿ ₹58.9ರಿಂದ ₹ 56.3ಗೆ ಇಳಿಕೆಯಾಗಿದೆ. ಇದು ಈ ವರ್ಷ ಮಾರ್ಚ್‌ನಲ್ಲಿ ₹54.9 ಇತ್ತು.

ಇಡೀ ಥಾಲಿಯ ದರದಲ್ಲಿ ಶೇ 50ರಷ್ಟು ಪಾಲಿರುವ ಬ್ರಾಯ್ಲರ್‌ ಕೋಳಿ ದರ ಶೇ 12ರಷ್ಟು ಇಳಿಕೆಯಾಗಿರುವುದೇ, ಥಾಲಿಯ ವೆಚ್ಚ ಇಳಿಕೆಗೆ ಕಾರಣ ಎಂದು ಸಂಸ್ಥೆ ಹೇಳಿದೆ.

ಮಾರ್ಚ್‌ಗೆ ಹೋಲಿಕೆ ಮಾಡಿದರೆ ಬ್ರಾಯ್ಲರ್‌ಗಳ ದರ ಶೇ 4ರಷ್ಟು ಏರಿಕೆಯಾಗಿದೆ. ಹೀಗಾಗಿ ಏಪ್ರಿಲ್‌ನಲ್ಲಿ ಥಾಲಿ ದರ ಶೇ 3ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಹೆಚ್ಚಿದ ಬೇಡಿಕೆ ಹಾಗೂ ಇನ್‌ಪುಟ್‌ ವೆಚ್ಚ ಏರಿಕೆಯಾಗಿರುವುದರಿಂದ ಒಂದು ತಿಂಗಳ ಅವಧಿಯಲ್ಲಿ ಬ್ರಾಯ್ಲರ್‌ ತುಟ್ಟಿಯಾಗಿದೆ ಎನ್ನುವುದು ವರದಿಯ ಸಾರಾಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT