ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಕಡಿತಕ್ಕೆ ಆರ್‌ಬಿಐ ಸದಸ್ಯರ ಧ್ವನಿ: ಯಥಾಸ್ಥಿತಿಗೆ ಹೆಚ್ಚಿನ ಬೆಂಬಲ

Published 7 ಜೂನ್ 2024, 11:42 IST
Last Updated 7 ಜೂನ್ 2024, 11:42 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯೊಳಗೆ ಕನಿಷ್ಠ 25 ಪೈಸೆ ಬಡ್ಡಿ ದರ ಕಡಿತಕ್ಕೆ ಸದಸ್ಯರು ಬೇಡಿಕೆ ಇಟ್ಟಿದ್ದರೂ, ಬಹುಮತದ ಆಧಾರದಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಸಮಿತಿಯ ಸದಸ್ಯರಾದ ಜಯಂತ್ ಆರ್. ವರ್ಮಾ ಹಾಗೂ ಆಶಿಮಾ ಗೋಯಲ್ ಅವರು ಬಡ್ಡಿದರ ಕಡಿತಗೊಳಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆದರೆ ಸಮಿತಿಯಲ್ಲಿದ್ದ ಇತರ ನಾಲ್ವರು ಸದಸ್ಯರಾದ ಡಾ. ಶಶಾಂಕ ಭಿಡೆ, ಡಾ. ರಾಜೀವ್ ರಂಜನ್, ಡಾ. ಮಿಷೆಲ್‌ ದೇವವ್ರತ ಪಾತ್ರಾ ಹಾಗೂ ಶಕ್ತಿಕಾಂತ ದಾಸ್ ಅವರು ಯಥಾಸ್ಥಿತಿ ಕಾಯ್ದುಕೊಳ್ಳುವ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ರೆಪೊ ದರ ಯಾವುದೇ ಬದಲಾವಣೆ ಇಲ್ಲದೆ ಶೇ 6.5ಕ್ಕೆ ನಿಂತುಕೊಂಡಿತು.

ಮುಂದುವರಿದ ಆರ್ಥಿಕ ರಾಷ್ಟ್ರಗಳಾದ ಸ್ವಿಟ್ಲರ್ಲೆಂಡ್‌, ಸ್ವೀಡನ್‌, ಕೆನಡಾ ಹಾಗೂ ಐರೋಪ್ಯ ರಾಷ್ಟ್ರಗಳು 2024ರಲ್ಲಿ ಬಡ್ಡಿ ದರದಲ್ಲಿ ಸಾಕಷ್ಟು ರಿಯಾಯಿತಿ ನೀಡಿದೆ. ಹೀಗಾಗಿ ಭಾರತದ ಕೇಂದ್ರ ಬ್ಯಾಂಕ್‌ ಕೂಡಾ ಇದೇ ನೀತಿಯನ್ನು ಅನುಸರಿಸಬೇಕು ಎಂದು ಈ ಇಬ್ಬರು ಸದಸ್ಯರು ಅಭಿಪ್ರಾಯಪಟ್ಟಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಗವರ್ನರ್ ಶಕ್ತಿಕಾಂತ ದಾಸ್‌, ‘ಮಾರುಕಟ್ಟೆಯ ಸ್ಥಿತಿಗೆ ತಕ್ಕಂತೆ ಮಾರ್ಗಸೂಚಿ ಪ್ರಕಟಿಸುವ ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿದೆ. ದೂರದ ಆಗಸದಲ್ಲಿ ಮೋಡ ಕವಿದಿದೆಯೇ ಅಥವಾ ತಿಳಿಯಾಗಿದೆ ಎಂಬುದನ್ನು ಅರಿತು, ಅದಕ್ಕೆ ತಕ್ಕಂತೆ ಇಲ್ಲಿ ಯೋಜನೆ ರೂಪಿಸಬೇಕಿದೆ’ ಎಂದಿದ್ದಾರೆ.

‘ಜಾಗತಿಕ ಬೆಳವಣಿಗೆ ಆಧರಿಸಿ ಕ್ರಮ ಕೈಗೊಳ್ಳುವುದಾದರೆ, ದೇಶೀಯ ಮಾರುಕಟ್ಟೆಯಲ್ಲಿ ಹಣದುಬ್ಬರ ಬೆಳವಣಿಗೆ ಹಾಗೂ ಅದರ ಪರಿಣಾಮಗಳನ್ನು ಅನುಸರಿಸುತ್ತದೆ’ ಎಂದಿದ್ದಾರೆ.

ರಿಸರ್ವ್‌ ಬ್ಯಾಂಕ್‌ ತನ್ನ ಬಡ್ಡಿ ದರ (ರೆಪೊ) 2023ರ ಫೆಬ್ರುವರಿಯಿಂದ ಶೇ 6.5 ಅನ್ನೇ ಕಾಯ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT