ಶುಕ್ರವಾರ, ಆಗಸ್ಟ್ 6, 2021
22 °C
2019 ವರ್ಷ: ನೈಟ್‌ಫ್ರ್ಯಾಂಕ್‌ ಇಂಡಿಯಾ ವರದಿ

ಮಂದಗತಿ ಆರ್ಥಿಕತೆ: ಉಗ್ರಾಣ ಬೇಡಿಕೆ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಂದಗತಿಯ ಆರ್ಥಿಕತೆಯ ಕಾರಣಕ್ಕೆ ಹಿಂದಿನ ಹಣಕಾಸು ವರ್ಷದಲ್ಲಿ (2019) ಉಗ್ರಾಣಗಳ ಬೇಡಿಕೆಯು ಶೇ 41.3ರಷ್ಟು ಕುಸಿತ ಕಂಡಿದೆ ಎಂದು ಆಸ್ತಿ ಸಲಹಾ ಸಂಸ್ಥೆ ನೈಟ್‌ಫ್ರ್ಯಾಂಕ್‌ ಇಂಡಿಯಾ ತಿಳಿಸಿದೆ.

ದೇಶದ 8 ಮಹಾನಗರಗಳಲ್ಲಿ 2018–19ರಲ್ಲಿಅಲ್ಪ ಪ್ರಮಾಣದಲ್ಲಿ ತಯಾರಿಕೆಗೆ ಸ್ಥಳಾವಕಾಶವೂ ಸೇರಿದಂತೆ ಗೋದಾಮುಗಳ ಬೇಡಿಕೆಯು 4.64 ಕೋಟಿ ಚದರ ಅಡಿಗಳಷ್ಟಿತ್ತು ಎಂದು ಕಂಪನಿಯು ತನ್ನ ’ಭಾರತದ ಉಗ್ರಾಣ ಮಾರುಕಟ್ಟೆ ವರದಿ’ಯಲ್ಲಿ ತಿಳಿಸಿದೆ.

ಬೆಂಗಳೂರು, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್‌), ಕೋಲ್ಕತ್ತ, ಪುಣೆ, ಕೋಲ್ಕತ್ತ, ಚೆನ್ನೈ ಮತ್ತು ಹೈದರಾಬಾದ್‌ ನಗರಗಳಲ್ಲಿ ಉಗ್ರಾಣಗಳ ಬೇಡಿಕೆ ಕುಸಿದಿದ್ದರೂ ’ಎ’ ದರ್ಜೆಯ ಉಗ್ರಾಣಗಳ ಬಾಡಿಗೆ ದರವು ಶೇ 4 ರಿಂದ ಶೇ 7ರಷ್ಟು ಏರಿಕೆ ದಾಖಲಿಸಿದೆ.

ಎಂಟು ಮಹಾ ನಗರಗಳಲ್ಲಿ ಸದ್ಯಕ್ಕೆ 30 ಕೋಟಿ ಚದರ ಅಡಿಗಳಷ್ಟು ಉಗ್ರಾಣ ಸ್ಥಳಾವಕಾಶದ ಲಭ್ಯತೆ ಇದೆ ಎಂದು ಕಂಪನಿ ಅಂದಾಜಿಸಿದೆ.

ಮುಂಬೈ ಮತ್ತು ಅಹ್ಮದಾಬಾದ್‌ ನಗರಗಳಲ್ಲಿ ಉಗ್ರಾಣಗಳಿಗೆ ಬೇಡಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಶೇ 23ರಷ್ಟುಸೇರಿದಂತೆ ಉಳಿದ 6 ನಗರಗಳಲ್ಲಿ ಬೇಡಿಕೆ ಕುಸಿದಿದೆ.

‘ಮಂದಗತಿಯ ಆರ್ಥಿಕ ಪ್ರಗತಿಯ ಕಾರಣಕ್ಕೆ ಹಿಂದಿನ ಹಣಕಾಸು ವರ್ಷದಲ್ಲಿ ಉಗ್ರಾಣಗಳ ಬೇಡಿಕೆ ಸಾಧಾರಣ ಮಟ್ಟದಲ್ಲಿ ಇದೆ’ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಿಶಿರ್‌ ಬೈಜಲ್‌ ಹೇಳಿದ್ದಾರೆ.

‘ಕೋವಿಡ್ ಪಿಡುಗಿನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ಉಗ್ರಾಣಗಳ ಬೇಡಿಕೆ ತಗ್ಗುವ ಸಾಧ್ಯತೆ ಇದೆ. ಮಂದಗತಿಯ ಆರ್ಥಿಕ ಪ್ರಗತಿಯ ಹೊರತಾಗಿಯೂ ಸರಕು ಸಾಗಾಣಿಕೆ, ಇ–ಕಾಮರ್ಸ್‌, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ಮತ್ತು ಔಷಧಿ ವಲಯಗಳಿಂದ ಉತ್ತಮ ಬೇಡಿಕೆ  ಕಂಡು ಬರಲಿದೆ’ ಎಂಬುದು ಅವರ ನಿರೀಕ್ಷೆಯಾಗಿದೆ.

ಜಿಡಿಪಿ ವೃದ್ಧಿ, ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳದ ಕಾರಣಕ್ಕೆ ಉಗ್ರಾಣಗಳ ನಿರ್ಮಾಣದಲ್ಲಿ ಬಂಡವಾಳ ಹೂಡಿಕೆ ಹೆಚ್ಚುತ್ತಿದೆ. ಎರಡು ಮತ್ತು ಮೂರನೇ ಹಂತದ 11 ನಗರಗಳಲ್ಲಿ ಉಗ್ರಾಣಗಳ ಬೇಡಿಕೆಯು 64 ಲಕ್ಷ ಚದರ ಅಡಿಗಳಿಗೆ ಹೆಚ್ಚಳಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು