ಬುಧವಾರ, ಫೆಬ್ರವರಿ 26, 2020
19 °C

ಗೃಹ ಸಾಲ ನೀಡಲು ಯಾವುದು ಆಧಾರ?

ಡಿ. ಶಂಕರ್‌ ತ್ರಿಪಾಠಿ Updated:

ಅಕ್ಷರ ಗಾತ್ರ : | |

Prajavani

ಗೃಹ ಸಾಲ ಮಂಜೂರು ಮಾಡಲು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಅನುಸರಿಸುವ ವಿವಿಧ ಮಾನದಂಡಗಳನ್ನು ಇಲ್ಲಿ ವಿವರಿಸಲಾಗಿದೆ.

ಮನೆ ಖರೀದಿಗೆ ಮುಂದಾಗುವವರು ಗೃಹ ಸಾಲಗಳನ್ನು ಬ್ಯಾಂಕ್‌ಗಳಿಂದ ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆಯುತ್ತಾರೆ. ಆದರೆ, ಈ ಎರಡೂ ಭಿನ್ನ ಮೂಲಗಳು ಸಾಲವನ್ನು ನೀಡುವಾಗ ಯಾವ ಮಾನದಂಡಗಳನ್ನು ಅನುಸರಿಸಬಹುದು. ಈ ಪ್ರಶ್ನೆಯು ಗೃಹ ಸಾಲ ಪಡೆಯುವವರನ್ನು ಕಾಡುತ್ತಿರುತ್ತದೆ.

ಸರ್ಕಾರಿ ಸ್ವಾಮ್ಯದ ಬಹುತೇಕ ಅಥವಾ ಖಾಸಗಿ ವಲಯದ ಬ್ಯಾಂಕ್‌ಗಳು ಗೃಹ ಸಾಲಗಳನ್ನು ನೀಡುವುದು ಅವುಗಳ ಸಾಮಾನ್ಯ ಕಾರ್ಯಗಳಲ್ಲಿ ಒಂದಾಗಿದೆ. ಸಾಲ ಮಂಜೂರಾತಿಯಲ್ಲಿ ಸಾಲ ಪಡೆಯುವವರ ಆಸ್ತಿ ಸಂಬಂಧಿತ ದಾಖಲೆಗಳು ಮತ್ತು ಅವರು ತೆರಿಗೆ ಪಾವತಿದಾರರಾಗಿರುವುದು ಮುಖ್ಯವಾಗುತ್ತವೆ. ಇವೆರಡನ್ನು ಆಧಾರವಾಗಿಟ್ಟುಕೊಂಡು ಬ್ಯಾಂಕುಗಳು ಅಳೆದು– ತೂಗಿ ಸಾಲ ನೀಡುತ್ತವೆ. ಬ್ಯಾಂಕ್‌ಗಳಿಗೆ ಗ್ರಾಹಕರ ಆದಾಯ ಎಷ್ಟು ಮುಖ್ಯವೋ, ಅವನ ಆಸ್ತಿಯು ಅಷ್ಟೇ ಪ್ರಮುಖವಾಗುತ್ತದೆ. ಸಾಮಾನ್ಯವಾಗಿ ಶೇ 8.4ರಿಂದ ಶೇ 9ರವರೆಗೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತವೆ.  

ಅದೇ, ವಸತಿ ಹಣಕಾಸು ಕಂಪನಿಗಳ (Housing Finance Companies) ವಿಚಾರಕ್ಕೆ ಬಂದರೆ, ಗೃಹ ಸಾಲಗಳನ್ನು ನೀಡುವುದೇ ಇವುಗಳ ಪ್ರಮುಖ ಕಾರ್ಯವಾಗಿರುವುದರಿಂದ ಇವು ಗ್ರಾಹಕರ ಆಶಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತವೆ. ಅಲ್ಲದೆ, ಗೃಹ ಸಾಲಗಳನ್ನು ಸಾಧಾರಣ ಬಡ್ಡಿ ದರದಲ್ಲಿ ಕೈಗೆಟುಕುವಂತೆ ನೀಡುತ್ತವೆ. ಒಂದು ವೇಳೆ ಗ್ರಾಹಕ, ಮಧ್ಯಮ ಆದಾಯ (ಎಂಐಜಿ) ವರ್ಗಕ್ಕೆ ಸೇರಿದ್ದೇ ಆಗಿದ್ದಲ್ಲಿ, ₹25ರಿಂದ ₹50 ಲಕ್ಷವರೆಗೆ ಸಾಲ ಪಡೆಯಬಹುದು. ಈ ಮಾದರಿಯಲ್ಲಿ ಗ್ರಾಹಕರ ಆಸ್ತಿ ದಾಖಲೆಗಳು ಮುಖ್ಯವಾಗುತ್ತವೆಯೇ ಹೊರತು ಅವನ ಆದಾಯ ಮುಖ್ಯವಾಗುವುದಿಲ್ಲ. ಆದ್ದರಿಂದಲೇ ಸುಲಭವಾಗಿ ಸಾಲವನ್ನು ಪಡೆಯಬಹುದು. ಬ್ಯಾಂಕ್‌ಗಳು ವಿಧಿಸುವ ಬಡ್ಡಿ ದರದಲ್ಲಿಯೇ (ಹೆಚ್ಚು– ಕಡಿಮೆ) ಸಾಲವನ್ನು ನೀಡುತ್ತವೆ. ಹೆಚ್ಚೆಂದರೆ 10– 15 ಪೈಸೆಯಷ್ಟು ವ್ಯತ್ಯಾಸವಿರಬಹುದು. ಈ ಕಂಪನಿಗಳು ಗ್ರಾಹಕರ ಕುರಿತು ವೇಗವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವುದಲ್ಲದೇ, ಅಷ್ಟೇ ತ್ವರಿತವಾಗಿ ಸಾಲವನ್ನು ಒದಗಿಸುತ್ತವೆ.

ಇನ್ನು ಮೂರನೇ ಮಾದರಿಯ ಗೃಹ ಸಾಲ ನೀಡುವ ಕಂಪನಿಗಳ ವಿಚಾರಕ್ಕೆ ಬಂದರೆ, ಇವು ಕಡಿಮೆ ಬಡ್ಡಿದರದಲ್ಲಿ ಕಡಿಮೆ ಆದಾಯವಿರುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವರ್ಗಕ್ಕೆ ನೀಡುತ್ತವೆ. ಇವುಗಳಿಗೆ ಸವಾಲು ಇರುವುದು ದಾಖಲೆಗಳ ಕುರಿತು. ಆದಾಯ ದಾಖಲೆಗಳು ಆರ್ಥಿಕವಾಗಿ ಹಿಂದುಳಿದ ವರ್ಗದ ಬಳಿ ಇರುವುದಿಲ್ಲ. ಕಡಿಮೆ ಆದಾಯ ಹಾಗೂ  ಸ್ಥಿರ ಆದಾಯದ ಕೊರತೆಯೇ ಈ ವರ್ಗ ಎದುರಿಸುತ್ತಿರುವ ಪ್ರಮುಖ ಸವಾಲು ಆಗಿರುತ್ತದೆ. ಇದು ಸಾಮಾನ್ಯವಾಗಿ ಗೃಹ ಬಳಕೆದಾರರು ಮತ್ತು ವಸತಿ ಕೊರತೆ ಅನುಭವಿಸುತ್ತಿರುವವರ ಬಹುದೊಡ್ಡ ಸಮಸ್ಯೆಯೂ ಹೌದು. ‌

ಕೈಗೆಟುಕುವ ದರದಲ್ಲಿ ಸೂರು ಹೊಂದಲು ನೆರವಾಗುವ ಹಣಕಾಸು ಕಂಪನಿಗಳು ಸಾಲವನ್ನು ಸುಲಭವಾಗಿ, ಸರಳವಾಗಿ ಒದಗಿಸಿ ಉತ್ತಮ ಕಾರ್ಯವನ್ನು ಮಾಡುತ್ತಿವೆ. ಮುಖ್ಯ ಬ್ಯಾಂಕಿಂಗ್‌ ವ್ಯವಸ್ಥೆ ಮತ್ತು ‘ಎಚ್‌ಎಫ್‌ಸಿ’ಗಳನ್ನು ಪ್ರವೇಶಿಸಲು ಹಿಂದೆ ಬೀಳುವ ಈ ವರ್ಗಕ್ಕೆ ಮನೆ ಹೊಂದುವುದು ಕಷ್ಟವಾಗುತ್ತಿತ್ತು. ಆದರೆ, ಈ ಮಾದರಿಯಲ್ಲಿ ಹಣಕಾಸು ಕಂಪನಿಗಳು ತುಸು ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತವೆ. ಇವುಗಳ ಬಡ್ಡಿದರ ಶೇ 11ರಿಂದ 13ರವರೆಗೆ ಇದೆ. ಇವುಗಳ ಸಾಲ ಮಿತಿಯೂ ₹5 ಲಕ್ಷದಿಂದ 15 ಲಕ್ಷಗಳವರೆಗೆ ಇರುತ್ತದೆ. ಸಾಲ ಪಡೆಯುವ ಉಳಿದ ಇನ್ನೆರಡು ಮಾದರಿಗೆ ಹೋಲಿಸಿದರೆ ಇದರ ಬಡ್ಡಿದರ ಶೇ 1ರಿಂದ 2ರವರೆಗೆ ಹೆಚ್ಚಿದೆ. ಈ ವರ್ಗಕ್ಕೆ ಬಡ್ಡಿ ದರಕ್ಕಿಂತ ಸಾಲ ಪಡೆಯುವುದೇ ಹೆಚ್ಚು ಮುಖ್ಯವಾಗಿರುತ್ತದೆ.

ಈ ಮೂರೂ ಮಾದರಿಗಳನ್ನು ಗಮನಿಸಿದರೆ ಮೊದಲ ಮಾದರಿಯಲ್ಲಿ ಜವಾಬ್ದಾರಿ ಕಡಿಮೆ ಅಲ್ಲದೇ ಬಡ್ಡಿ ದರವೂ ಕಡಿಮೆ. ಮಧ್ಯಮ ಮಾದರಿಯಲ್ಲಿ ಆದಾಯ ಪ್ರಮಾಣದ ಜೊತೆಗೆ ಆಸ್ತಿ ದಾಖಲೆಗಳೂ ಇರಬೇಕು. ಇದರಲ್ಲಿನ ಬಡ್ಡಿದರವು ಪ್ರಾಥಮಿಕ ಮಾದರಿಗೆ ಹೋಲಿಸಿದರೆ ಶೇ 1ರಿಂದ 1.5ರಷ್ಟು ಹೆಚ್ಚು. ಮೂರನೇ ಮಾದರಿಯು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದೆ. ಗ್ರಾಹಕರೊಂದಿಗೆ ವಿವರವಾಗಿ ಚರ್ಚಿಸಿದ ನಂತರವೇ ಸಾಲ ನೀಡಲಾಗುತ್ತದೆ. ಇಲ್ಲಿ ಬಡ್ಡಿ ದರವು ಬ್ಯಾಂಕುಗಳಿಗಿಂತ ಶೇ 2.5ರಷ್ಟು ಹೆಚ್ಚಿಗೆ ಇರುತ್ತದೆ.

ಮೂರು ವಲಯ

1. ಪ್ರಮುಖ ವಲಯ: ನಷ್ಟ ಸಾಧ್ಯತೆ ತೀರ ಕಡಿಮೆ. ಕಡಿಮೆ ಬಡ್ಡಿ ದರ ನಿಗದಿ

2. ಮಧ್ಯಮ ವಲಯ: ಆದಾಯದ ಸಾಕ್ಷ್ಯ ಲಭ್ಯವಿದ್ದರೂ ಆಸ್ತಿಯ ಒಡೆತನಕ್ಕೆ ಸಂಬಂಧಿಸಿದ ಕಾರಣಗಳಿಗಾಗಿ ಬಡ್ಡಿ ದರವು ಪ್ರಮುಖ ವಲಯಕ್ಕಿಂತ ಶೇ 1ರಿಂದ ಶೇ 1.5 ತುಟ್ಟಿಯಾಗಿರುತ್ತದೆ

3. ಆರ್ಥಿಕವಾಗಿ ದುರ್ಬಲರಾದ ಮತ್ತು ಕಡಿಮೆ ವರಮಾನದ ವರ್ಗ: ಸಾಮಾನ್ಯ ಬ್ಯಾಂಕಿಂಗ್ ಬಡ್ಡಿ ದರಗಳಿಗಿಂತ ಸಾಲದ ಬಡ್ಡಿ ದರ ಶೇ 2.5ರಷ್ಟು ತುಟ್ಟಿ 

(ಲೇಖಕ: ಆಧಾರ್‌ ಹೌಸಿಂಗ್‌ ಫೈನಾನ್ಸ್‌ ಸಿಇಒ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು