ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ತಿದಾರರ ₹ 68 ಸಾವಿರ ಕೋಟಿ ವಜಾ: ಪಟ್ಟಿಯಲ್ಲಿ ಮೆಹುಲ್‌ ಚೋಕ್ಸಿ, ವಿಜಯ್‌ ಮಲ್ಯ

Last Updated 28 ಏಪ್ರಿಲ್ 2020, 21:28 IST
ಅಕ್ಷರ ಗಾತ್ರ

ನವದೆಹಲಿ: ಉದ್ದೇಶಪೂರ್ವಕ 50 ಮಂದಿ ಸುಸ್ತಿದಾರರು ಪಾವತಿಸಬೇಕಾಗಿರುವ ₹ 68,607 ಕೋಟಿ ಮೊತ್ತವನ್ನು ಬ್ಯಾಂಕ್‌ಗಳು ತಾಂತ್ರಿಕವಾಗಿ ವಜಾ ಮಾಡಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌, ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಕೇಳಿದ ಪ್ರಶ್ನೆಗೆ ಉತ್ತರ ನೀಡಿದೆ.

ಈ ಸುಸ್ತಿದಾರರಲ್ಲಿ ತಲೆಮರೆಸಿಕೊಂಡಿರುವ ವಜ್ರಾಭರಣ ವ್ಯಾಪಾರಿ ಮೆಹುಲ್‌ ಚೋಕ್ಸಿ, ಲಂಡನ್‌ಗೆ ಪಲಾಯನಗೈದು ವಿಚಾರಣೆ ಎದುರಿಸುತ್ತಿರುವ ವಿಜಯ್‌ ಮಲ್ಯ ಮತ್ತಿತರ ಉದ್ಯಮ ಪ್ರಮುಖರು ಇದ್ದಾರೆ. ಚೋಕ್ಸಿ ಒಡೆತನದ ಗೀತಾಂಜಲಿ ಜೆಮ್ಸ್‌ ಸುಸ್ತಿದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇದೆ. ನಂತರದ ಸ್ಥಾನದಲ್ಲಿ ಆರ್‌ಇಐ ಅಗ್ರೊ ಮತ್ತು ವಿನ್‌ಸಮ್‌ ಡೈಮಂಡ್ಸ್‌ ಇವೆ. ವಿಕ್ರಂ ಕೊಠಾರಿ ಅವರ ರೊಟೊಮ್ಯಾಕ್‌ ನಾಲ್ಕನೇ ಸ್ಥಾನದಲ್ಲಿ ಇದೆ.

ಇತ್ತೀಚೆಗೆ ಬಾಬಾ ರಾಮದೇವ್‌ ಅವರ ಪತಂಜಲಿ ಕಂಪನಿಯ ಒಡೆತನಕ್ಕೆ ಒಳಪಟ್ಟಿರುವ ರುಚಿ ಸೋಯಾ ಇಂಡಸ್ಟ್ರೀಸ್‌ ಲಿಮಿಟೆಡ್‌ ಕೂಡ ಸುಸ್ತಿದಾರರ ಪಟ್ಟಿಯಲ್ಲಿ ಇದೆ. ವಿಜಯ್‌ ಮಲ್ಯ ಅವರ ಕಿಂಗ್‌ಫಿಷರ್‌ ಏರ್‌ಲೈನ್ಸ್‌ 9ನೇ ಸ್ಥಾನದಲ್ಲಿದೆ.

ಹಿಂದಿನ ವರ್ಷದ ಸೆಪ್ಟೆಂಬರ್‌ 30ರವರೆಗೆ ಈ ಮೊತ್ತದ ಸಾಲವನ್ನು ವಜಾ ಮಾಡಲಾಗಿದೆ ಎಂದು ಆರ್‌ಬಿಐ ಲಿಖಿತ ಉತ್ತರದಲ್ಲಿ ತಿಳಿಸಿದೆ. ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಅವರು ಸುಸ್ತಿದಾರರ ವಿವರ ಒದಗಿಸಲು ಫೆಬ್ರುವರಿ 16ರಂದು ಅರ್ಜಿ ಸಲ್ಲಿಸಿದ್ದರು.

ಬ್ಯಾಂಕ್‌ಗಳು ತಮ್ಮ ಬ್ಯಾಲನ್ಸ್‌ಶೀಟ್‌ ಕ್ರಮಬದ್ಧಗೊಳಿಸಲು ನಿಯಮಿತವಾಗಿ ವಸೂಲಾಗದ ಸಾಲದಲ್ಲಿನ ಕೆಲ ಮೊತ್ತವನ್ನು ವಜಾ ಮಾಡಲಾಗಿದೆ ಎಂದು ದಾಖಲಿಸುತ್ತವೆ. ಹೀಗೆ ವಜಾ ಮಾಡಿದ ಸಾಲದ ಫಲಾನುಭವಿಗಳು ಮರುಪಾವತಿಗೆ ಬದ್ಧರಾಗಿರಬೇಕಾಗುತ್ತದೆ.

ಸಾಲ ವಜಾ ಪ್ರಶ್ನಿಸಿದ ಕಾಂಗ್ರೆಸ್
ನವದೆಹಲಿ (ಪಿಟಿಐ):
ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ 50 ಮಂದಿ ಬ್ಯಾಂಕ್ ಸುಸ್ತಿದಾರ ಉದ್ಯಮಿಗಳ ₹68,607 ಕೋಟಿ ಸಾಲವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮನ್ನಾ ಮಾಡಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.

ಕೇಂದ್ರ ಸರ್ಕಾರವು 2014ರಿಂದ 2019ರ ಸೆಪ್ಟೆಂಬರ್‌ವರೆಗೆ ಒಟ್ಟು ₹6.66 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದೂ ದೂರಿದೆ.

ಸುಸ್ತಿದಾರ ಉದ್ಯಮಿಗಳ ಹೆಸರುಗಳನ್ನು ಸಂಸತ್ತಿನಲ್ಲಿ ಪ್ರಕಟಿಸದ ಹಣಕಾಸು ಸಚಿವರ ನಡೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

‘ದೇಶದ 50 ಮಂದಿ ಬ್ಯಾಂಕ್ ಸುಸ್ತಿದಾರರ ಹೆಸರು ಪ್ರಕಟಿಸುವಂತೆ ಸಂಸತ್ತಿನಲ್ಲಿ ಒತ್ತಾಯಿಸಿದ್ದೆ. ಆದರೆ ಹಣಕಾಸು ಸಚಿವರು ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ಇದೀಗ ಆರ್‌ಬಿಐ ಪಟ್ಟಿಯಲ್ಲಿ ನೀರವ್ ಮೋದಿ, ಚೋಕ್ಸಿ ಸೇರಿದಂತೆ ‘ಬಿಜೆಪಿಯ ಹಲವು ಸ್ನೇಹಿತರು’ ಇದ್ದಾರೆ. ಇದೇ ಕಾರಣಕ್ಕೆ ಸಂಸತ್ತಿನಲ್ಲಿ ಈ ವಿಷಯವನ್ನು ತಡೆಹಿಡಿಯಲಾಗಿತ್ತು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದು ಏಕೆ ಎಂಬ ‍ಪ್ರಶ್ನೆಗೆ ಮೋದಿ ಅವರು ಉತ್ತರಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ. ‌

ಕೇಂದ್ರ ಸರ್ಕಾರದ ‘ವಂಚಿಸು, ದೇಶದಿಂದ ನಿರ್ಗಮಿಸು’ ಎಂಬ ನೀತಿಗೆ ಇದು ಅತ್ಯುತ್ತಮ ಉದಾಹರಣೆಯಾಗಿದೆ. ಇದನ್ನು ಬಹುಕಾಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೋದಿ ಅವರು ಇದಕ್ಕೆ ಉತ್ತರ ನೀಡಲೇಬೇಕು’ ಎಂದು ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಈ ನಡೆಯು ಕೇಂದ್ರ ಸರ್ಕಾರದ ಅಪ್ರಾಮಾಣಿಕ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದೂ ಅವರು ಆರೋಪಿಸಿದ್ದಾರೆ.

***
ಕೊರೊನಾ ವಿರುದ್ಧದ ಹೋರಾಟಕ್ಕೆ ರಾಜ್ಯಗಳಿಗೆ ನೀಡಲು ಕೇಂದ್ರ ಸರ್ಕಾರದ ಬಳಿ ದುಡ್ಡಿಲ್ಲ. ಆದರೆ ಸುಸ್ತಿ ದಾರರ ಸಾಲ ಮನ್ನಾ ಮಾಡಲು ಇದೆ.
-ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT