ಗುರುವಾರ , ಮೇ 13, 2021
18 °C

ಸಗಟು ಹಣದುಬ್ಬರ: ಮಾರ್ಚ್‌ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಗಟು ದರ ಆಧರಿಸಿದ ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡ 7.39ಕ್ಕೆ ಏರಿಕೆ ಆಗಿದೆ. ಇದು ಎಂಟು ವರ್ಷಗಳ ಗರಿಷ್ಠ ಮಟ್ಟವಾಗಿದೆ. ಈ ಹಿಂದೆ 2012ರ ಅಕ್ಟೋಬರ್‌ ತಿಂಗಳಿನಲ್ಲಿ ಸಗಟು ಹಣದುಬ್ಬರ ಶೇ 7.4ಕ್ಕೆ ತಲುಪಿತ್ತು.

ಕಚ್ಚಾ ತೈಲ ಮತ್ತು ಲೋಹ ದರ ಏರಿಕೆಯಿಂದಾಗಿ ಸಗಟು ಹಣದುಬ್ಬರ ಈ ಪ್ರಮಾಣದ ಏರಿಕೆ ಕಂಡಿದೆ. 2020ರ ಮಾರ್ಚ್‌ನಲ್ಲಿ ಸಗಟು ಹಣದುಬ್ಬರವು ಶೇ 0.42ರಷ್ಟಿತ್ತು. ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಸತತ ಮೂರನೇ ತಿಂಗಳಿನಲ್ಲಿಯೂ ಏರಿಕೆ ಕಂಡಂತಾಗಿದೆ.

ಬೇಳೆಕಾಳು, ಹಣ್ಣು ಮತ್ತು ಭತ್ತದ ದರ ಏರಿಕೆಯಿಂದಾಗಿ ಆಹಾರ ಉತ್ಪನ್ನಗಳ ಹಣದುಬ್ಬರ ಮಾರ್ಚ್‌ನಲ್ಲಿ ಶೇ 3.24ರಷ್ಟಾಗಿದೆ. ತರಕಾರಿ ದರ ಏರಿಕೆಯು ಫೆಬ್ರುವರಿ ತಿಂಗಳಲ್ಲಿ ಇದ್ದ ಶೇ (–) 2.90ಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ ಶೇ (–) 5.19ರಷ್ಟಾಗಿದೆ. ಬೇಳೆಕಾಳು ಹಣದುಬ್ಬರವು ಶೇ 13.14ರಷ್ಟಿದ್ದರೆ ಹಣ್ಣುಗಳ ಹಣದುಬ್ಬರವು ಶೇ 16.33ರಷ್ಟಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಿಂದಾಗಿ ಇಂಧನ ಮತ್ತು ವಿದ್ಯುತ್‌ ದರ ಏರಿಕೆಯು ಶೇ 10.25ರಷ್ಟಾಗಿದೆ. ಇದು ಫೆಬ್ರುವರಿಯಲ್ಲಿ ಶೇ 0.58ರಷ್ಟಿತ್ತು.

ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಲೋಹಗಳ ಬೆಲೆಯು 2020ರ ಮಾರ್ಚ್‌ಗೆ ಹೋಲಿಸಿದರೆ 2021ರ ಮಾರ್ಚ್‌ನಲ್ಲಿ ಏರಿಕೆ ಆಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ 2020ರ ಮಾರ್ಚ್‌ನಲ್ಲಿ ಡಬ್ಲ್ಯುಪಿಐ ಸೂಚ್ಯಂಕವನ್ನು ತುಲನಾತ್ಮಕವಾಗಿ ಕಡಿಮೆ ಪ್ರತಿಕ್ರಿಯೆ ದರದೊಂದಿಗೆ ಲೆಕ್ಕಹಾಕಲಾಗಿದೆ ಎಂದು ವಾಣಿಜ್ಯ ಸಚಿವಾಲಯವು ಹೇಳಿದೆ.

ಕೋವಿಡ್‌–19 ಸಾಂಕ್ರಾಮಿಕ ನಿಯಂತ್ರಿಸಲು ಲಸಿಕೆ ನೀಡುವ ಕಾರ್ಯಕ್ರಮ ಜಾರಿಯಾಗುತ್ತಿದ್ದಂತೆಯೇ ಜಾಗತಿಕವಾಗಿ ಲೋಹ, ಜವಳಿ, ರಾಸಾಯನಿಕ ಮತ್ತು ರಬ್ಬರ್‌ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಗಣನೀಯ ಏರಿಕೆ ಕಾಣುತ್ತಿವೆ. ಈ ಕಾರಣಕ್ಕಾಗಿ ಡಬ್ಲ್ಯುಪಿಐ ಹಣದುಬ್ಬರ ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಇದೆ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆಗೆ ವಿತ್ತೀಯ ಮತ್ತು ಹಣಕಾಸಿನ ಬೆಂಬಲಗಳೆರಡರ ಅಗತ್ಯವೂ ಇದೆ. 2021–22ರ ಬಹುಪಾಲು ಅವಧಿಯವರೆಗೆ ಬಡ್ಡಿದರಗಳು ಈಗಿರುವಂತೆಯೇ ಕನಿಷ್ಠ ಮಟ್ಟದಲ್ಲಿಯೇ ಇರಬೇಕು ಹಾಗೂ ಸಾಕಷ್ಟು ನಗದು ಲಭ್ಯವಿರಬೇಕು ಎಂಬುದು ನಮ್ಮ ನಿರೀಕ್ಷೆ’ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ನ ಮುಖ್ಯ ಆರ್ಥಿಕ ತಜ್ಞ ದೇವೇಂದ್ರ ಕುಮಾರ್‌ ಪಂತ್‌ ಅಭಿಪ್ರಾಯಟ್ಟಿದ್ದಾರೆ.

ಈಚೆಗೆ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 5.52ರಷ್ಟಾಗಿದ್ದು ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು