ಶುಕ್ರವಾರ, ಅಕ್ಟೋಬರ್ 7, 2022
24 °C

ದಾಖಲೆ ಮಟ್ಟಕ್ಕೆ ಕುಸಿದ ಜೊಮಾಟೊ ಷೇರು ಮೌಲ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಹಾರ ವಸ್ತುಗಳನ್ನು ರೆಸ್ಟಾರೆಂಟ್‌ಗಳಿಂದ ಮನೆ ಬಾಗಿಲಿಗೆ ತಲುಪಿಸುವ ಜೊಮಾಟೊ ಕಂಪನಿಯ ಷೇರು ಮೌಲ್ಯವು ಸೋಮವಾರ ಶೇಕಡ 11ರಷ್ಟಕ್ಕಿಂತ ಹೆಚ್ಚು ಕುಸಿದಿದೆ. ಅಲ್ಲದೆ, ದಿನದ ವಹಿವಾಟಿನ ನಡುವಿನಲ್ಲಿ ಜೊಮಾಟೊ ಷೇರು ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟವನ್ನೂ ತಲುಪಿತ್ತು.

ಐಪಿಒ ಪ್ರಕ್ರಿಯೆಗೂ ಮೊದಲೇ ಜೊಮಾಟೊ ಷೇರುಗಳನ್ನು ಹೊಂದಿದ್ದವರು ಷೇರುಗಳನ್ನು ಮಾರಾಟ ಮಾಡಲು ಇದ್ದ ನಿರ್ಬಂಧವು ಸೋಮವಾರಕ್ಕೆ ಕೊನೆಗೊಂಡಿದೆ. ಇದಾದ ನಂತರದಲ್ಲಿ ಷೇರು ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಸ್ವಸ್ತಿಕಾ ಇನ್ವೆಸ್ಟ್‌ಮೆಂಟ್‌ ಲಿಮಿಟೆಡ್‌ನ ಈಕ್ವಿಟಿ ಸಂಶೋಧನಾ ವಿಶ್ಲೇಷಕ ಪುನೀತ್ ಪತ್ನಿ ಹೇಳಿದ್ದಾರೆ.

‘ಈ ರೀತಿ ನಿರ್ಬಂಧ ಕೊನೆಯಾಗುವ ದಿನ ಷೇರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತವೆ. ಹೀಗಾಗಿ ಬೆಲೆ ಕುಸಿಯುತ್ತದೆ’ ಎಂದು ಅವರು ಹೇಳಿದ್ದಾರೆ.

ಸೋಮವಾರದ ವಹಿವಾಟಿನ ಕೊನೆಯಲ್ಲಿ ಷೇರು ಮೌಲ್ಯವು ಬಿಎಸ್‌ಇಯಲ್ಲಿ ಶೇ 11.37ರಷ್ಟು ಕುಸಿದು ₹ 47.55ಕ್ಕೆ ತಲುಪಿದೆ. ಎನ್‌ಎಸ್‌ಇಯಲ್ಲಿ ಷೇರು ಮೌಲ್ಯವು ₹ 47.60 ಆಗಿದೆ.

‘ಜೊಮಾಟೊ ಕಂಪನಿಯ ಷೇರುಗಳು ಮಾರುಕಟ್ಟೆ ಪ್ರವೇಶಿಸಿದ ನಂತರದಲ್ಲಿ ತಲುಪಿದ್ದ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಈಗ ಶೇ 71ರಷ್ಟು ಕುಸಿದಿವೆ. ಜಗತ್ತಿನಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಿಸಲು ಆರಂಭಿಸಿದ ನಂತರದಲ್ಲಿ ಹೂಡಿಕೆದಾರರು ಜೊಮಾಟೊ ಷೇರುಗಳ ಮಾರಾಟಕ್ಕೆ ಗಮನ ಹರಿಸಿದ್ದಾರೆ’ ಎಂದು ಪತ್ನಿ ವಿವರಿಸಿದರು.

ಷೇರು ಮೌಲ್ಯವು 2021ರ ನವೆಂಬರ್‌ನಲ್ಲಿ ಗರಿಷ್ಠ ಮಟ್ಟ ತಲುಪಿದ್ದಾಗ ಜೊಮಾಟೊ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 1.29 ಲಕ್ಷ ಕೋಟಿ ಆಗಿತ್ತು. ಆದರೆ ಈಗ ಕಂಪನಿಯ ಮಾರುಕಟ್ಟೆ ಮೌಲ್ಯವು ಸರಿಸುಮಾರು ₹ 36 ಸಾವಿರ ಕೋಟಿಗೆ ಇಳಿಕೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು