ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Digital Currency| ಡಿಜಿಟಲ್ ಕರೆನ್ಸಿ ಆದೀತೇ ಮತ್ತೊಂದು ಯುಪಿಐ?

Last Updated 10 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಈಚಿನ ವರ್ಷಗಳಲ್ಲಿ ಜನರ ಬದುಕನ್ನು ಬಹುವಾಗಿ ಪ್ರಭಾವಿಸಿದ ಹಣಕಾಸು ತಂತ್ರಜ್ಞಾನ ಜಗತ್ತಿನ ಆವಿಷ್ಕಾರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಏಕೀಕೃತ ಪಾವತಿ ವ್ಯವಸ್ಥೆ – ಅಥವಾ ಚುಟುಕಾಗಿ ಕರೆಯುವ ಯುಪಿಐ ವ್ಯವಸ್ಥೆ. ಬ್ಯಾಂಕ್‌ ಖಾತೆ ಹೊಂದಿರುವ ವ್ಯಕ್ತಿಗೆ ಸ್ಮಾರ್ಟ್‌ಫೋನ್‌, ನಂಬಿಕೊಳ್ಳಬಹುದಾದ ಇಂಟರ್ನೆಟ್ ಸಂಪರ್ಕ ಇದ್ದರೆ ಸಾಕು, ಈ ವ್ಯವಸ್ಥೆಯನ್ನು ಬಳಸಿ ಕ್ಷಣಾರ್ಧದಲ್ಲಿ ಹಣ ಪಾವತಿಸಬಹುದು. ಇಂಟರ್ನೆಟ್‌ ಬ್ಯಾಂಕಿಂಗ್‌ನ ಅ, ಆ, ಇ, ಈ ಗೊತ್ತಿಲ್ಲದವರು ಕೂಡ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಯುಪಿಐ ಆ್ಯಪ್‌ ಹಾಕಿಕೊಂಡು, ದೈನಂದಿನ ಬದುಕಿಗೆ ಅಗತ್ಯವಿರುವ ಎಲ್ಲ ಬಗೆಯ ಪಾವತಿಗಳನ್ನೂ ಅದರ ಮೂಲಕವೇ ಮಾಡುವುದು ಸಾಧ್ಯ. ನಗದು ರಹಿತವಾಗಿ ಹಣಕಾಸಿನ ವಹಿವಾಟು ನಡೆಸುವುದನ್ನು ಜನಸಾಮಾನ್ಯರಿಗೆ ಸಾಧ್ಯವಾಗಿಸುವಲ್ಲಿ ಯುಪಿಐ ವ್ಯವಸ್ಥೆಗೆ ಬೇರೆ ಯಾವುದೂ ಸಾಟಿಯಲ್ಲ.

ಯುಪಿಐ ಜನಪ್ರಿಯತೆಯನ್ನು ಅಂಕಿ–ಅಂಶಗಳ ಮೂಲಕ ಹೇಳಬೇಕು ಎಂದಾದರೆ: ನವೆಂಬರ್ ತಿಂಗಳಲ್ಲಿ ಯುಪಿಐ ವ್ಯವಸ್ಥೆಯನ್ನು ಬಳಸಿ ದೇಶದಲ್ಲಿ ಒಟ್ಟು ₹ 11.90 ಲಕ್ಷ ಕೋಟಿ ಮೌಲ್ಯದ ವಹಿವಾಟುಗಳು ನಡೆದಿವೆ. ನವೆಂಬರ್‌ ವೇಳೆಗೆ ದೇಶದ ಒಟ್ಟು 376 ದೊಡ್ಡ, ಸಣ್ಣ, ಪುಟ್ಟ ಬ್ಯಾಂಕ್‌ಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ನಗರ, ಪಟ್ಟಣಗಳ ಚಹಾ ಅಂಗಡಿಗಳಲ್ಲಿ ಬೈಟೂ ಚಹಾ ಕುಡಿದ ನಂತರ ಎಂಟು ರೂಪಾಯಿ ಅಥವಾ ಹತ್ತು ರೂಪಾಯಿ ಪಾವತಿಸುವುದರಿಂದ ಆರಂಭಿಸಿ, ದಿನಸಿ ಖರೀದಿಗೆ ಹಣ ಪಾವತಿಸುವುದರಿಂದ ತೊಡಗಿ, ಷೇರುಗಳ ಖರೀದಿಗೆ ಟ್ರೇಡಿಂಗ್ ಖಾತೆ ಹಣ ವರ್ಗಾವಣೆ ಮಾಡಿಕೊಳ್ಳುವಲ್ಲಿಯವರೆಗೆ ಯುಪಿಐ ವ್ಯವಸ್ಥೆಯು ನಮ್ಮ ಬದುಕಿನ ಭಾಗವಾಗಿದೆ. ದೇಶದಲ್ಲಿ ಯುಪಿಐ ಜನಪ್ರಿಯವಾಗುತ್ತ ಸಾಗಿದ ಅವಧಿಯಲ್ಲಿಯೇ ಷೇರು ಮಾರುಕಟ್ಟೆಗಳಲ್ಲಿ ಹಣ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚುತ್ತ ಸಾಗಿದೆ. 2016ರ ಸೆಪ್ಟೆಂಬರ್‌ ತಿಂಗಳಲ್ಲಿ ಒಟ್ಟು 25 ಬ್ಯಾಂಕ್‌ಗಳು ಯುಪಿಐ ವ್ಯವಸ್ಥೆಯ ಭಾಗವಾಗಿದ್ದವು, ಆ ತಿಂಗಳಲ್ಲಿ ಯುಪಿಐ ಬಳಸಿ ಒಟ್ಟು ₹ 32.64 ಕೋಟಿ ಮೌಲ್ಯದ ವಹಿವಾಟು ನಡೆದಿತ್ತು. ಅದೇ ತಿಂಗಳಲ್ಲಿ ಮ್ಯೂಚುವಲ್‌ ಫಂಡ್‌ ಖಾತೆಗಳ ಒಟ್ಟು ಸಂಖ್ಯೆ 5.06 ಕೋಟಿ ಇತ್ತು. ಈಗ ಚಾಲ್ತಿಯಲ್ಲಿರುವ ಮ್ಯೂಚುವಲ್‌ ಫಂಡ್ ಖಾತೆಗಳ ಒಟ್ಟು ಸಂಖ್ಯೆ 13.81 ಕೋಟಿ. ಯುಪಿಐ ಈಗ ಬೆಳೆದಿರುವ ಪ್ರಮಾಣವನ್ನು ಈಗಾಗಲೇ ವಿವರಿಸಲಾಗಿದೆ. ಯುಪಿಐ ಮೂಲಕ, ಯಾವುದೇ ಶುಲ್ಕವಿಲ್ಲದೆ ಅತ್ಯಂತ ಸಣ್ಣ ಮೊತ್ತವನ್ನೂ ಮ್ಯೂಚುವಲ್‌ ಫಂಡ್ ಖಾತೆಗಳಿಗೆ ವರ್ಗಾವಣೆ ಮಾಡಲು ಸಾಧ್ಯವಾಗಿರುವುದು ಹಾಗೂ ಮ್ಯೂಚುವಲ್ ಫಂಡ್‌ ಕಂಪನಿಗಳು ಸಣ್ಣ ಮೊತ್ತ ಬಳಸಿ ಹೂಡಿಕೆ ಮಾಡುವುದನ್ನು ಸಾಧ್ಯವಾಗಿಸಿರುವುದು ಒಂದಕ್ಕೊಂದು ಪೂರಕವಾಗಿವೆ ಎಂಬ ಮಾತನ್ನು ತಜ್ಞರು ಹೇಳಿದ್ದಾರೆ.

ಯಾವ ಪ್ರಭುತ್ವದ ಬೆಂಬಲವೂ ಇಲ್ಲದ, ತಮ್ಮದೇ ಆದ ಯಾವ ಮೌಲ್ಯವೂ ಇಲ್ಲದ ಕ್ರಿಪ್ಟೊಕರೆನ್ಸಿಗಳ ಮೇಲೆ ಜನ ಹೂಡಿಕೆ ಮಾಡುವುದು ಈಚಿನ ವರ್ಷಗಳಲ್ಲಿ ಹೆಚ್ಚತೊಡಗಿತು. ಅವರು ಹೂಡಿಕೆ ಮಾಡಿದ್ದಾರೆ ಎಂದು ಇವರು ಹೂಡಿಕೆ ಮಾಡುವುದು, ಇವರು ಮಾಡಿದ್ದಾರೆ ಎಂದು ಅವರು ಹೂಡಿಕೆ ಮಾಡುವುದು ಶುರುವಾಯಿತು. ಕ್ರಿಪ್ಟೊಕರೆನ್ಸಿಗಳ ‘ಮೌಲ್ಯ’ ಹೆಚ್ಚಾಗತೊಡಗಿತು. ಹಣಕಾಸು ವ್ಯವಸ್ಥೆಯನ್ನು ರೂಪಿಸಿರುವುದು ಪ್ರಭುತ್ವ. ಆದರೆ, ಪ್ರಭುತ್ವದ ಬೆಂಬಲವೇ ಇಲ್ಲದ ಕ್ರಿಪ್ಟೊಕರೆನ್ಸಿಗಳು ದೇಶದ ಹಣಕಾಸು ವ್ಯವಸ್ಥೆಗೆ ಅಪಾಯ ಎಂಬುದರಲ್ಲಿ ಎರಡನೆಯ ಮಾತೇ ಇಲ್ಲ. ಬಹುಶಃ, ಕ್ರಿಪ್ಟೊಕರೆನ್ಸಿಗಳ ಮಾಯಾಲೋಕದಲ್ಲಿ ಸಾರ್ವಜನಿಕರು ಮೋಸಹೋಗದಿರಲಿ ಎಂದೂ, ಹಣವನ್ನು ಡಿಜಿಟಲ್ ರೂಪದಲ್ಲಿ ವಹಿವಾಟಿಗೆ ಬಳಸುವ ಅನುಭವ ಸಿಗಲಿ ಎಂದೂ ಕೇಂದ್ರೀಯ ಬ್ಯಾಂಕ್‌ (ಆರ್‌ಬಿಐ) ತಾನೂ ಒಂದು ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತರುವುದಾಗಿ ಹೇಳಿದ್ದಿರಬಹುದು. ಈಗ ಆರ್‌ಬಿಐ, ಡಿಜಿಟಲ್ ರೂಪಾಯಿಯ ಸಗಟು ಹಾಗೂ ಚಿಲ್ಲರೆ ವಹಿವಾಟುಗಳನ್ನು ಪ್ರಾಯೋಗಿಕವಾಗಿ ಶುರುಮಾಡಿದೆ.

ಡಿಜಿಟಲ್ ಕರೆನ್ಸಿಯು ಕ್ರಿಪ್ಟೊಕರೆನ್ಸಿ ಅಲ್ಲ. ಇದು ಹೂಡಿಕೆಯ ಉತ್ಪನ್ನವಲ್ಲ. ಇದರಲ್ಲಿ ಹಣ ಹೂಡಿಕೆ ಮಾಡಲು ಆಗುವುದಿಲ್ಲ. ಏಕೆಂದರೆ, ಇದೇ ಹಣ. ಇದನ್ನು ಬಳಸಿ ಬೇರೆ ಹೂಡಿಕೆ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಮುಂದೆ ಅವಕಾಶ ಸಿಗಬಹುದು. ಆರ್‌ಬಿಐ ಹೇಳಿರುವಂತೆ, ‘ಖಾಸಗಿ ಕ್ರಿಪ್ಟೊಕರೆನ್ಸಿಗಳಲ್ಲಿ ಇರುವ ಅಪಾಯಗಳು ಇಲ್ಲದ ಡಿಜಿಟಲ್ ಕರೆನ್ಸಿಯನ್ನು ನಾಗರಿಕರಿಗೆ ಒದಗಿಸುವುದು ಕೇಂದ್ರೀಯ ಬ್ಯಾಂಕ್‌ನ ಜವಾಬ್ದಾರಿ ಕೂಡ ಹೌದು. ಈ ಡಿಜಿಟಲ್ ಕರೆನ್ಸಿಯು ನಗದು ಹಣವನ್ನು ಡಿಜಿಟಲ್ ರೂಪದಲ್ಲಿ ಬಳಸುವ ಅನುಭವವನ್ನೇ ನೀಡುತ್ತದೆ’.

ಆರ್‌ಬಿಐ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತರುವುದಾಗಿ ಹೇಳಿದಾಗಿನಿಂದ ಕುತೂಹಲಿಗರು ಕೇಳುತ್ತಿರುವ ಪ್ರಶ್ನೆ, ‘ಇದಕ್ಕೂ ಯುಪಿಐಗೂ ಇರುವ ವ್ಯತ್ಯಾಸ ಏನು?’ ಡಿಜಿಟಲ್ ಕರೆನ್ಸಿಯನ್ನು ಯುಪಿಐ ಜೊತೆಗೇ ಹೊಲಿಸಿ ಪ್ರಶ್ನೆ ಕೇಳುತ್ತಿರುವುದಕ್ಕೆ, ಬೇರೆ ಪಾವತಿ ವ್ಯವಸ್ಥೆಗಳ ಜೊತೆ ಅಷ್ಟಾಗಿ ಹೋಲಿಸದೆ ಇರುವುದಕ್ಕೆ ಕಾರಣ ಯುಪಿಐ ಈವರೆಗೆ ಪಡೆದಿರುವ ಜನಪ್ರಿಯತೆ. ಇವೆರಡರ ನಡುವಿನ ವ್ಯತ್ಯಾಸ ಇಷ್ಟು: ಯುಪಿಐ ವ್ಯವಸ್ಥೆಯಡಿ ಹಣವನ್ನು ಪಾವತಿಸಲು ಬ್ಯಾಂಕ್‌ ನೆರವು ಬೇಕೇಬೇಕು. ಪಾವತಿ ಮಾಡುವ ವ್ಯಕ್ತಿ ಇಂತಿಷ್ಟು ಹಣವನ್ನು, ಇಂತಹ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಬೇಕು ಎಂಬ ಸೂಚನೆಯನ್ನು ತಾನು ಖಾತೆ ಹೊಂದಿರುವ ಬ್ಯಾಂಕ್‌ಗೆ ಸ್ಮಾರ್ಟ್‌ಫೋನ್‌ ಮೂಲಕ ನೀಡುತ್ತಾನೆ. ಸೂಚನೆ ಸ್ವೀಕರಿಸಿದ ಬ್ಯಾಂಕ್‌, ಆ ಮೊತ್ತವನ್ನು ಹಣ ಸ್ವೀಕರಿಸುವ ವ್ಯಕ್ತಿಯ ಬ್ಯಾಂಕ್‌ ಖಾತೆಗೆ ರವಾನೆ ಮಾಡುತ್ತದೆ. ಇದು ಯುಪಿಐ ವ್ಯವಸ್ಥೆ. ಆದರೆ ಡಿಜಿಟಲ್ ಕರೆನ್ಸಿ ಬಳಸುವ ವ್ಯಕ್ತಿಯು, ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಡಿಜಿಟಲ್ ಕರೆನ್ಸಿ ವಾಲೆಟ್‌ನಲ್ಲಿನ ಡಿಜಿಟಲ್ ಹಣವನ್ನು ಇನ್ನೊಬ್ಬ ವ್ಯಕ್ತಿಯ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಡಿಜಿಟಲ್ ವಾಲೆಟ್‌ಗೆ ನೇರವಾಗಿ ವರ್ಗಾವಣೆ ಮಾಡುತ್ತಾನೆ. ಇಲ್ಲಿ ಒಬ್ಬನಿಂದ ಇನ್ನೊಬ್ಬನಿಗೆ ಆಗುವ ಹಣದ ವರ್ಗಾವಣೆಯಲ್ಲಿ ಬ್ಯಾಂಕ್‌ಗೆ ಯಾವ ಪಾತ್ರವೂ ಇರುವುದಿಲ್ಲ. ಆದರೆ ವಾಲೆಟ್‌ ಸೇವೆಯನ್ನು ಆರ್‌ಬಿಐ ಸೂಚಿಸಿರುವ ಬ್ಯಾಂಕ್‌ಗಳೇ ನೀಡಬಹುದು. ವ್ಯಕ್ತಿಯೊಬ್ಬ ತನ್ನ ಭೌತಿಕ ವಾಲೆಟ್‌ನಿಂದ ನಗದನ್ನು ತೆಗೆದು, ಇನ್ನೊಬ್ಬನಿಗೆ ನೇರವಾಗಿ ನೀಡುವಂತೆಯೇ ಇದು. ನಗದು ರೂಪದ ಹಣದ ಹರಿವು ಮೂರನೆಯ ವ್ಯಕ್ತಿಗೆ ಗೊತ್ತಾಗಲು ಅವಕಾಶವಿಲ್ಲ. ಅದೇ ರೀತಿಯಲ್ಲಿ ಡಿಜಿಟಲ್ ಕರೆನ್ಸಿಯ ಹರಿವು ಕೂಡ ಮೂರನೆಯ ವ್ಯಕ್ತಿಗೆ ಗೊತ್ತಾಗುವುದಿಲ್ಲ. ಆದರೆ, ಯುಪಿಐ ವ್ಯವಸ್ಥೆಯಲ್ಲಿ ಒಂದೊಂದು ರೂಪಾಯಿ ವಹಿವಾಟು ಕೂಡ ಬ್ಯಾಂಕ್‌ ದಾಖಲೆಗಳಲ್ಲಿ ನಮೂದಾಗುತ್ತದೆ.

ಯುಪಿಐ ಬಳಕೆದಾರ ತನ್ನ ಹಣವನ್ನು ಬ್ಯಾಂಕ್‌ನಲ್ಲಿ ಇರಿಸಿರುತ್ತಾನೆ. ಹಾಗಾಗಿ ಆತನಿಗೆ ಬಡ್ಡಿ ಸಿಗುತ್ತಿರುತ್ತದೆ. ಆದರೆ ಡಿಜಿಟಲ್ ಕರೆನ್ಸಿಯನ್ನು ಬಳಸುವ ಹಣವನ್ನು ವಾಲೆಟ್‌ನಲ್ಲಿ ಇರಿಸಬೇಕಾಗುತ್ತದೆ. ಅದಕ್ಕೆ ಬಡ್ಡಿ ಸಿಗುವುದಿಲ್ಲ. ಬಳಕೆದಾರನ ಅನುಭವದ ದೃಷ್ಟಿಯಿಂದ ಹೇಳುವುದಾದರೆ, ಡಿಜಿಟಲ್ ಕರೆನ್ಸಿ ಮೂಲಕ 50 ರೂಪಾಯಿ ಪಾವತಿಸುವುದೂ ಯುಪಿಐ ವ್ಯವಸ್ಥೆ ಮೂಲಕ ಅಷ್ಟೇ ಹಣವನ್ನು ಪಾವತಿಸುವುದೂ ಒಂದೇ ಆಗಬಹುದು. ಆದರೆ, ತಾಂತ್ರಿಕವಾಗಿ ಇವೆರಡು ಕೂಡ ಭಿನ್ನವಾಗಿಯೇ ನಿಲ್ಲುತ್ತವೆ. ಯುಪಿಐ ವಹಿವಾಟಿಗೆ ದಿನದ ಮಿತಿ ಇದೆ. ದಿನವೊಂದರಲ್ಲಿ ಇಷ್ಟು ಮಾತ್ರ ಹಣವನ್ನು ಯುಪಿಐ ಮೂಲಕ ವರ್ಗಾವಣೆ ಮಾಡಬಹುದು ಎಂಬ ಮಿತಿ ವಿಧಿಸಲಾಗಿದೆ. ಹಾಗೆಯೇ, ಇಂತಿಷ್ಟು ಸಂಖ್ಯೆಯ ವಹಿವಾಟುಗಳನ್ನು ಮಾತ್ರ ನಡೆಸಬಹುದು ಎಂದು ಕೂಡ ಕೆಲವು ಬ್ಯಾಂಕ್‌ಗಳು ಮಿತಿ ಹಾಕಿವೆ. ಈ ಬಗೆಯ ಮಿತಿಯು ಡಿಜಿಟಲ್ ಕರೆನ್ಸಿಗೆ ಇರಲಿಕ್ಕಿಲ್ಲ. ಭೌತಿಕ ವಾಲೆಟ್‌ನಿಂದ ಹಣವನ್ನು ಇಂತಿಷ್ಟು ಬಾರಿ ಮಾತ್ರ ತೆಗೆದು ಕೊಡಬಹುದು ಎಂಬ ಮಿತಿ ಎಲ್ಲಿಯೂ ಇಲ್ಲವಲ್ಲ!

ಕಾನೂನಿನ ದೃಷ್ಟಿಯಲ್ಲಿ ಡಿಜಿಟಲ್ ಕರೆನ್ಸಿ ಹಾಗೂ ನಗದು ರೂಪದ ಕರೆನ್ಸಿ ಒಂದೇ ಎಂಬುದನ್ನು ಆರ್‌ಬಿಐ ಹೇಳಿದೆ. ಹಾಗಾಗಿ, ಕರೆನ್ಸಿಯನ್ನು ನಗದು ರೂಪದಲ್ಲಿ ಬಳಸಿ ನಡೆಸುವ ವಹಿವಾಟುಗಳಿಗೆ ಅನ್ವಯವಾಗುವ ಕಾನೂನುಗಳು ಅದನ್ನು ಡಿಜಿಟಲ್ ರೂಪದಲ್ಲಿ ಬಳಸುವಾಗಲೂ ಅನ್ವಯವಾಗುತ್ತದೆ. ಕ್ರಿಪ್ಟೊಕರೆನ್ಸಿಗಳಲ್ಲಿ ವಹಿವಾಟುಗಳಲ್ಲಿ ಇದೆ ಎಂದು ಹೇಳಲಾಗುವ ಗೋಪ್ಯತೆ ಡಿಜಿಟಲ್ ಕರೆನ್ಸಿ ವಹಿವಾಟುಗಳಿಗೆ ಇರುವುದಿಲ್ಲ. ಆದರೂ, ಸ್ವತಃ ಆರ್‌ಬಿಐ ಹೇಳಿರುವಂತೆ ಒಂದು ಹಂತದವರೆಗಿನ ಗೋಪ್ಯತೆ ಮಾತ್ರ ಡಿಜಿಟಲ್ ಕರೆನ್ಸಿಗಳಿಗೆ ಇರುತ್ತದೆ. ಸಾರ್ವಜನಿಕರು ನಡೆಸುವ ಎಲ್ಲ ಚಟುವಟಿಕೆಗಳು ತನಗೂ ಗೊತ್ತಾಗಬೇಕು ಎಂದು ಪ್ರಭುತ್ವಗಳು ಬಯಸುತ್ತಿರುವ ಈ ಹೊತ್ತಿನಲ್ಲಿ, ಡಿಜಿಟಲ್ ಕರೆನ್ಸಿಯ ವಹಿವಾಟುಗಳು ಪ್ರಭುತ್ವಕ್ಕೆ ಗೊತ್ತೇ ಆಗದಂತೆ ನಡೆಯುವವೇ?! ಸದ್ಯಕ್ಕೆ ಇದೊಂದು ಪ್ರಶ್ನೆ ಮಾತ್ರ. ಗೋಪ್ಯತೆಯು ಯಾವ ಹಂತದವರೆಗೆ, ಎಷ್ಟು ಮೊತ್ತದವರೆಗಿನ ವಹಿವಾಟುಗಳಿಗೆ ಎಂಬುದರ ಸ್ಪಷ್ಟ ಚಿತ್ರಣವನ್ನು ಆರ್‌ಬಿಐ ಮಾತ್ರ ನೀಡಬಲ್ಲದು.

ಯುಪಿಐ ಹಾಗೂ ಡಿಜಿಟಲ್ ಕರೆನ್ಸಿ ನಡುವೆ ಎಷ್ಟೇ ಭಿನ್ನತೆ, ಸಾಮ್ಯತೆಗಳು ಇದ್ದರೂ, ಜನರ ಬದುಕಿನಲ್ಲಿ ಯುಪಿಐ ತಂದಂತಹ ಬದಲಾವಣೆಗಳನ್ನು ಡಿಜಿಟಲ್ ಕರೆನ್ಸಿ ಕೂಡ ತರಬಲ್ಲದೇ? ನಗದು ರಹಿತವಾಗಿ ಹಣ ಪಾವತಿಸುವುದು ಒಂದು ಖುಷಿಯ ಕೆಲಸ ಎಂಬಂತಹ ಪರಿವರ್ತನೆಯನ್ನು ಡಿಜಿಟಲ್ ಕರೆನ್ಸಿ ತಂದೀತೇ? ಈ ಪ್ರಶ್ನೆಗಳಿಗೆ ಆರ್‌ಬಿಐ ಅಲ್ಲ, ಕಾಲ ಮಾತ್ರ ಉತ್ತರಿಸಬಹುದೇನೋ...

ಕ್ರಿಪ್ಟೊಕರೆನ್ಸಿಗಳ ಉಗಮ, ಅವುಗಳು ಜನಪ್ರಿಯತೆ ಪಡೆದುಕೊಂಡಿದ್ದು, ಆ ಜನಪ್ರಿಯತೆಯ ಕಾರಣದಿಂದಾಗಿಯೇ ನಾವು ಕಟ್ಟಿರುವ ಹಣಕಾಸು ವ್ಯವಸ್ಥೆಗೆ ಅಪಾಯ ಆಗಬಹುದು ಎಂದು ನೀತಿ‌ನಿರೂಪಕರಿಗೆ ಅನಿಸಿದ್ದು... ಬಹುಶಃ, ಇವೆಲ್ಲ ಆಗದೇ ಇದ್ದಿದ್ದರೆ ಡಿಜಿಟಲ್ ಕರೆನ್ಸಿ ಬಗ್ಗೆ ಕೇಂದ್ರೀಯ ಬ್ಯಾಂಕ್ ಆಲೋಚನೆ ಮಾಡುತ್ತಿರಲಿಲ್ಲವೇನೋ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT