ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ಸಾಕ್ಷರತೆ: ಅತಿಯಾದ ಸಾಲ; ಬದುಕಿಗೆ ಶೂಲ

Published 27 ಮೇ 2024, 9:38 IST
Last Updated 27 ಮೇ 2024, 9:38 IST
ಅಕ್ಷರ ಗಾತ್ರ

ಸಾಲ ಮಾಡಿ ಸಂಪತ್ತು ಸೃಷ್ಟಿಸಲು ಮುಂದಾದರೆ ಸಮಸ್ಯೆಯಿಲ್ಲ. ಆದರೆ, ಸಾಲ ಮಾಡಿ ತುಪ್ಪ ತಿನ್ನಲು ಹೋದರೆ ಬೆಪ್ಪರಾಗೋದು ಖಚಿತ.

ಹೌದು. ಸಾಲ ಎರಡು ಅಲಗಿನ ಕತ್ತಿ ಇದ್ದಂತೆ. ಎಷ್ಟು ಎಚ್ಚರಿಕೆಯಿಂದ ಅದನ್ನು ಬಳಸುತ್ತೇವೆಯೋ ಅಷ್ಟು ಅನುಕೂಲವಾಗುತ್ತದೆ. ಎಚ್ಚರ ತಪ್ಪಿದರೆ ಅದೇ ಶೂಲವಾಗುತ್ತದೆ. ಬನ್ನಿ, ಸಾಲದ ಸುಳಿಗೆ ಸಿಲುಕಲು ಕಾರಣವೇನು? ಅದರಿಂದ ಪಾರಾಗಲು ಏನು ಮಾಡಬೇಕು? ಸಾಲ ನಿರ್ವಹಣೆಯಲ್ಲಿ ಮರುಪಾವತಿ ಸಾಮರ್ಥ್ಯ ಎಷ್ಟು ಮುಖ್ಯವಾಗುತ್ತದೆ ಎನ್ನುವ ಬಗ್ಗೆ ವಿವರವಾಗಿ ತಿಳಿಯೋಣ.

ಸಾಲದ ಸುಳಿಗೆ ಸಿಲುಕಲು ಕಾರಣವೇನು?: ‘ಹಾಸಿಗೆ ಇದ್ದಷ್ಟು ಕಾಲು ಚಾಚಿ’ ಎನ್ನುವುದು ಹಿರಿಯರು ಹೇಳಿದ ಮಾತು. ಆದಾಯ ಎಷ್ಟಿದೆಯೋ ಅದನ್ನು ಮೀರಿ ಜೀವನ ನಡೆಸಬಾರದು ಎನ್ನುವುದು ಈ ಮಾತಿನ ಸಂದೇಶ. ಆದರೆ, ಬಹುಪಾಲು ಜನರು ಮೈ ತುಂಬಾ ಸಾಲ ಮಾಡಿಕೊಂಡಿರುತ್ತಾರೆ. ತಮಗೆ ಎಷ್ಟು ಸಾಲ ಸಿಗುತ್ತದೆ ಎನ್ನುವುದರ ಅಂದಾಜಿನ ಮೇಲೆ ಹಣಕಾಸಿನ ತೀರ್ಮಾನಗಳನ್ನು ಮಾಡುತ್ತಾರೆ.

ವಾರ್ಷಿಕ ಆದಾಯದ ಮೂರ್ನಾಲ್ಕು ಪಟ್ಟು ಬೆಲೆ ಬಾಳುವ ಕಾರು ಖರೀದಿ ಮಾಡುವುದು, ಸಾಲ ಮಾಡಿ ವಿದೇಶ ಪ್ರವಾಸಕ್ಕೆ ತೆರಳುವುದು, ಇಎಂಐ ಮೂಲಕ ಬಟ್ಟೆ ಖರೀದಿಸುವುದು ಹೀಗೆ ಅಳತೆ ಅಂದಾಜಿಲ್ಲದೆ ಹಣ ಪೋಲು ಮಾಡಿ ಅವರ ಆರ್ಥಿಕ ಸ್ಥಿತಿಯನ್ನು ಅವರೇ ಅಧಃಪತನಕ್ಕೆ ಕೊಂಡೊಯ್ಯುತ್ತಾರೆ.

ತೋರಿಕೆಯ ಶ್ರೀಮಂತಿಕೆ ಅಥವಾ ಮೋಜಿಗಾಗಿ ಅನೇಕರು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಕೆಲವರಂತೂ ಹತ್ತಾರು ಕ್ರೆಡಿಟ್ ಕಾರ್ಡ್‌ ಇಟ್ಟುಕೊಂಡು ಒಂದು ಸಾಲ ತೀರಿಸಲು ಮತ್ತೊಂದು, ಆ ಸಾಲ ತೀರಿಸಲು ಇನ್ನೊಂದು ಸಾಲ ಎಂಬಂತೆ ಮುಂದುವರಿದು ಸಾಲದ
ವಿಷವರ್ತುಲದಲ್ಲೇ ಜೀವನ ಸಾಗಿಸುತ್ತಾರೆ.

ಕ್ರೆಡಿಟ್ ಕಾರ್ಡ್ ಸಾಲಕ್ಕೆ ಶೇ 45ರಿಂದ
ಶೇ 50ರಷ್ಟು ಬಡ್ಡಿ ಇದೆ ಎಂಬುದನ್ನೂ ಮರೆತು ಮುಂದುವರಿಯುತ್ತಾರೆ. ವಾಸ್ತವದಲ್ಲಿ ಹೀಗೆ ಮಾಡಿದಾಗ ಯಾವುದೇ ವ್ಯಕ್ತಿ ಆರ್ಥಿಕವಾಗಿ ಸಬಲವಾಗಲು ಸಾಧ್ಯವೇ ಇಲ್ಲ. ಸಾಲದ ಚಕ್ರದಡಿ ವ್ಯಕ್ತಿ ಸಿಲುಕುವುದರಿಂದ ಮನೆ ಖರೀದಿ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಜೀವನಕ್ಕೆ ಉಳಿತಾಯದಂತಹ ಮಹತ್ವದ ಹಣಕಾಸಿನ ಗುರಿ ಗಳನ್ನು ತಲುಪಲು ಆತನಿಗೆ ಸಾಧ್ಯವಾಗುವುದಿಲ್ಲ.

ಹಳೆ ಸಾಲ ತೀರಿಸಲು ಹೊಸ ಸಾಲ ಮಾಡುವುದು, ಸಂಬಂಧಿಕರು, ಸ್ನೇಹಿತರು ಮತ್ತು ಸಹಪಾಠಿಗಳಿಂದ ಸಾಲ ಪಡೆಯುವುದು, ಸಾಲ ತೀರಿಸಲಾಗದೆ ಸಂಬಂಧಗಳನ್ನು
ಕೆಡಿಸಿಕೊಳ್ಳುವುದು, ಸಾಮಾಜಿಕ ಬಹಿಷ್ಕಾರ ದಂತಹ ಸನ್ನಿವೇಶ ಎದುರಿಸುವುದು, ಕುಟುಂಬದಿಂದ ದೂರವಾಗುವುದು ಹೀಗೆ ಸಾಲದ ಅತಿಯಾದ ಹೊರೆಯಿಂದ ಉಂಟಾಗುವ ತೊಂದರೆಗಳು ಒಂದೆರಡಲ್ಲ.

ಈ ಲೇಖನ ಓದುತ್ತಿರುವ ಹಲವರು ಈಗಾಗಲೇ ಇಂತಹ ಸಮಸ್ಯೆಗೆ ಸಿಲುಕಿರಬಹುದು. ಒಂದೊಮ್ಮೆ ಸಿಲುಕಿದ್ದರೆ ನಿಮ್ಮ ಹಣಕಾಸಿನ ತೀರ್ಮಾನಗಳನ್ನು ನೀವೇ ಪ್ರಶ್ನೆ ಮಾಡಿಕೊಳ್ಳಬೇಕು. ನಿಮ್ಮ ನಿರ್ಧಾರ ಗಳನ್ನು ಪುನರ್‌ಮನನ ಮಾಡಿ ಸಾಲದ ಸುಳಿಯಿಂದ ಪಾರಾಗುವ ದಾರಿಗಳನ್ನು ಹುಡುಕಬೇಕು.

ಸಾಲದ ಸುಳಿಯಿಂದ ಪಾರಾಗುವುದು ಹೇಗೆ?: ಹಣಕಾಸು ನಿರ್ವಹಣೆಯಲ್ಲಿ ಎಡವಿ ಸಾಲದ ಸುಳಿಗೆ ಸಿಲುಕುವಂತಹ ತಪ್ಪುಗಳು ಕೆಲವೊಮ್ಮೆ ನಡೆದು ಹೋಗಿರುತ್ತವೆ. ಆ ತಪ್ಪುಗಳನ್ನು ಅರಿತು ಸರಿದಾರಿಯಲ್ಲಿ ಮುನ್ನಡೆಯುವ ಪ್ರಯತ್ನ ಮಾಡಬೇಕು. ಒಂದೊಮ್ಮೆ ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದರೆ ಮೊದಲು ಆ ವಿಚಾರವನ್ನು ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಗಮನಕ್ಕೆ ತನ್ನಿ. ಎಷ್ಟು ಸಾಲ ಮಾಡಿದ್ದೀರಿ ಎನ್ನುವ ಸಂಪೂರ್ಣ ವಿವರವನ್ನು ನೀಡಿ. ಮತ್ತೆ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕದಂತೆ ಎಚ್ಚರವಹಿಸುತ್ತೇನೆ ಎಂದು ಮಾತು ಕೊಡಿ.

ಮಾಡಿರುವ ಎಲ್ಲ ಸಾಲಗಳ ಪಟ್ಟಿ ಮಾಡಿಕೊಂಡು ಸಾಲಕ್ಕೆ ಪಾವತಿಸುತ್ತಿರುವ ಬಡ್ಡಿ ಎಷ್ಟು ಎನ್ನುವುದರ ಲೆಕ್ಕಾಚಾರ ಮಾಡಿ. ಯಾವ ಸಾಲದ ಬಡ್ಡಿ ಜಾಸ್ತಿ ಇದೆಯೋ ಅದನ್ನು ಮೊದಲು ತೀರಿಸಲು ಪ್ರಯತ್ನಿಸಿ. ನಿಮ್ಮ ಕುಟುಂಬದವರ ಬಳಿ ಇರುವ ಉಳಿತಾಯದ ಹಣವನ್ನು ಸಾಲ ಮರುಪಾವತಿಗೆ ಕೊಡುವಂತೆ ಕೋರಿಕೊಳ್ಳಿ. ನಿಮ್ಮ ಬಳಿ ಕೂಡಿಟ್ಟ ಮೊತ್ತವಿದ್ದರೆ ಅದನ್ನು ಸಾಲ ತೀರಿಸಲು ಬಳಸಿ. ಸಾಲವನ್ನು ಬೇಗ ತೀರಿಸಲು ಈಗಾಗಲೇ ಇರುವ ಉದ್ಯೋಗದ ಜೊತೆಗೆ ಪಾರ್ಟ್ ಟೈಂ ಉದ್ಯೋಗ ಮಾಡಬಹುದೇ ನೋಡಿ.

ಕಾರು ಇದ್ದರೆ ಅದನ್ನು ಮಾರಾಟ ಮಾಡಿ ಒಂದಷ್ಟು ಸಾಲದ ಹೊರೆಯನ್ನು ಇಳಿಸಿಕೊಳ್ಳಿ. ಗೃಹ ಸಾಲವಿದ್ದರೆ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ ಸಾಲದ ಅವಧಿಯನ್ನು ತಾತ್ಕಾಲಿಕವಾಗಿ ಹೆಚ್ಚಿಸಿಕೊಂಡು ಮಾಸಿಕ ಕಂತಿನ ಮೊತ್ತವನ್ನು ತಗ್ಗಿಸಿಕೊಳ್ಳಿ. ಕೈಸಾಲಗಳಿದ್ದರೆ ಕೊಟ್ಟ ವ್ಯಕ್ತಿಯ ಜೊತೆ ಮಾತನಾಡಿ ಮರುಪಾವತಿಗೆ ಹೆಚ್ಚಿನ ಸಮಯ ಕೇಳಿ. ಸಾಧ್ಯವಾದರೆ ಈಗಿರುವ ಸಾಲದ ಬಡ್ಡಿದರಕ್ಕಿಂತ ಕಡಿಮೆ ಬಡ್ಡಿದರಕ್ಕೆ ಸಾಲ ಸಿಗಬಹುದೇ ನೋಡಿ. ಕಡಿಮೆ ಬಡ್ಡಿದರದ ಸಾಲದಿಂದ ಹೆಚ್ಚಿನ ಬಡ್ಡಿದರದ ಸಾಲ ತೀರಿಸಿಕೊಂಡರೆ ಅನುಕೂಲವಾಗುತ್ತದೆ. ಈ ಕೆಲ ಅಂಶಗಳು ಸಾಲದ ಸುಳಿಯಿಂದ ಪಾರಾಗಲು ನಿಮ್ಮ ನೆರವಿಗೆ ಬರುತ್ತವೆ.

ಆದಾಯಕ್ಕೆ ತಕ್ಕಂತೆ ಎಷ್ಟು ಸಾಲ ಮಾಡಬೇಕು?: ನಮ್ಮ ಎಲ್ಲಾ ಸಾಲಗಳ ಒಟ್ಟು ಮಿತಿ ನಮ್ಮ ಮಾಸಿಕ ನಿವ್ವಳ ಆದಾಯದ ಶೇ 25ರಿಂದ ಶೇ 35ರ ಒಳಗೆ ಇರಬೇಕು. ಆಗ ಸಾಲ ನಿರ್ವಹಣೆಯು ಸುಲಭವಾಗುತ್ತದೆ. ಉದಾಹರಣೆಗೆ ಪ್ರತಿ ತಿಂಗಳು ಕೈ ಸಿಗುವ ಸಂಬಳ ₹1 ಲಕ್ಷ ಎಂದುಕೊಳ್ಳಿ. ಪ್ರತಿ ತಿಂಗಳು ಉಳಿತಾಯಕ್ಕಾಗಿ ಮೀಸಲಿಡುವ ಮೊತ್ತ ₹25 ಸಾವಿರವಾಗಿದ್ದು, ಮಾಸಿಕ ವೆಚ್ಚ ₹35 ಸಾವಿರ ಎಂದುಕೊಳ್ಳಿ. ₹10 ಸಾವಿರ ತುರ್ತು ಅಗತ್ಯಗಳಿಗೆ ಮೀಸಲಿಟ್ಟುಕೊಂಡಿದ್ದೀರಿ ಎಂದು ಭಾವಿಸಿ. ಈ ಲೆಕ್ಕಾಚಾರದಂತೆ ನಿಮ್ಮ ಸಾಲದ ಗರಿಷ್ಠ ಮಾಸಿಕ ಕಂತು ₹30 ಸಾವಿರ ಮೀರಬಾರದು. ನೆನಪಿರಲಿ, ಸಾಲ ಕೆಟ್ಟದ್ದಲ್ಲ. ವಿವೇಚನೆ ಇಲ್ಲದೆ, ವಿವೇಕ ಮರೆತು ಸಾಲ ಮಾಡಬಾರದು ಅಷ್ಟೆ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಷೇರುಪೇಟೆಯಲ್ಲಿ ಗೂಳಿ ಓಟ

ಮೇ 24ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಪುಟಿದೆದ್ದಿವೆ. 75,410 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.90ರಷ್ಟು ಜಿಗಿದಿದೆ. 22,957 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 2.02‌ರಷ್ಟು ಗಳಿಕೆ ಕಂಡಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಹೆಚ್ಚಳ, ರಿಟೇಲ್ ಹೂಡಿಕೆದಾರರಿಂದ ಖರೀದಿ ಭರಾಟೆ, ಕಂಪನಿಗಳ ತ್ರೈಮಾಸಿಕ ಫಲಿತಾಂಶದಲ್ಲಿ ಸಕಾರಾತ್ಮಕ ಸಾಧನೆ, ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ವಿಶ್ವಾಸ ಸೇರಿ ಹಲವು ಅಂಶಗಳು ಮಾರುಕಟ್ಟೆ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಎಲ್ಲಾ 12 ಸೂಚ್ಯಂಕಗಳು ಗಳಿಕೆ ದಾಖಲಿಸಿವೆ. ನಿಫ್ಟಿ ಮಾಧ್ಯಮ
ಶೇ 4.7, ಲೋಹ ಶೇ 3.88, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.51, ಎನರ್ಜಿ ಶೇ 3.31, ಅನಿಲ ಮತ್ತು ತೈಲ ಶೇ 2.99, ರಿಯಲ್ ಎಸ್ಟೇಟ್ ಶೇ 2.66, ಆಟೊ ಶೇ 2.6, ನಿಫ್ಟಿ ಬ್ಯಾಂಕ್ ಶೇ 1.78, ಫೈನಾನ್ಸ್ ಶೇ 1.74, ಮಾಹಿತಿ ತಂತ್ರಜ್ಞಾನ ಶೇ 1.33, ಫಾರ್ಮಾ ಶೇ 0.73ರಷ್ಟು ಹಾಗೂ ಎಫ್‌ಎಂಸಿಜಿ ಶೇ 0.7ರಷ್ಟು ಗಳಿಕೆ ಕಂಡಿವೆ.

ಏರಿಕೆ–ಇಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಹಿಂದೂಸ್ತಾನ್‌ ಜಿಂಕ್, ಭಾರತ್ ಎಲೆಕ್ಟ್ರಾನಿಕ್ಸ್, ಅದಾನಿ ಪವರ್, ಅದಾನಿ ಎಂಟರ್‌ಪ್ರೈಸಸ್, ಹಿಂದೂಸ್ತಾನ್‌ ಏರೋನಾಟಿಕ್ಸ್, ಅದಾನಿ ಟೋಟಲ್ ಗ್ಯಾಸ್, ಕೋಲ್ ಇಂಡಿಯಾ ಮತ್ತು ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ 6ರಿಂದ
ಶೇ 20ರಷ್ಟು ಗಳಿಕೆ ಕಂಡಿವೆ.

ಜೊಮಾಟೊ, ನೈಕಾ, ಶ್ರೀ ಸಿಮೆಂಟ್ಸ್, ಸನ್ ಫಾರ್ಮಾ, ಬಜಾಜ್ ಹೋಲ್ಡಿಂಗ್ಸ್ ಆ್ಯಂಡ್ ಇನ್ವೆಸ್ಟ್‌ಮೆಂಟ್ಸ್, ಜ್ಯೈಡಸ್ ಲೈಫ್ ಸೈನ್ಸಸ್ ಮತ್ತು ಇಂಟರ್ ಗ್ಲೋಬ್ ಏವಿಯೇಷನ್ ಇಳಿಕೆಯಾಗಿವೆ.

ಮುನ್ನೋಟ: ಈ ವಾರ ಐಆರ್‌ಸಿಟಿಸಿ, ಎಲ್‌ಐಸಿ, ಟಾಟಾ ಸ್ಟೀಲ್, ಎನ್‌ಎಂಡಿಸಿ, ಎನ್‌ಎಂಡಿಸಿ ಸ್ಟೀಲ್, ಆರ್ ಆರ್ ಕೇಬಲ್, ಟಿಟಿಕೆ ಪ್ರೆಸ್ಟೀಜ್, ಮುತ್ತೂಟ್ ಫೈನಾನ್ಸ್, ಆಲ್ಕೆಮ್ ಲ್ಯಾಬೊರೇಟರೀಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.

ಅಲ್ಲದೆ, 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದ ಜಿಡಿಪಿ ದತ್ತಾಂಶ ಹೊರಬೀಳಲಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT