ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ಸಾಕ್ಷರತೆ: ಹೂಡಿಕೆ ಹೆಸರಲ್ಲಿ ವಂಚನೆ ಹೇಗೆ?

Published : 29 ಸೆಪ್ಟೆಂಬರ್ 2024, 23:30 IST
Last Updated : 29 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹೆಸರಿನಲ್ಲಿ ₹2,200 ಕೋಟಿ ವಂಚಿಸಿದ ಆರೋಪದ ಮೇಲೆ ಸೆಪ್ಟೆಂಬರ್‌ನ ಆರಂಭದಲ್ಲಿ ಅಸ್ಸಾಂನಲ್ಲಿ 38 ಜನರನ್ನು ಬಂಧಿಸಲಾಯಿತು. ಅದಕ್ಕೂ ಮೊದಲು ಆಗಸ್ಟ್‌ನಲ್ಲಿ ಅಸ್ಸಾಂ ಪೊಲೀಸರು, ₹7,000 ಕೋಟಿ ಮೌಲ್ಯದ ಸ್ಟಾಕ್ ಟ್ರೇಡಿಂಗ್ ವಂಚನೆ ಪ್ರಕರಣವನ್ನು ಬಯಲಿಗೆಳೆದಿದ್ದರು. ಮೈಸೂರಿನಲ್ಲಿ ನಕಲಿ ಟ್ರೇಡಿಂಗ್ ಆ್ಯಪ್‌ಗಳಿಂದ ₹32 ಕೋಟಿ ಮೊತ್ತದ ವಂಚನೆಯಾಗಿರುವುದು ಆಗಸ್ಟ್‌ನ ಕೊನೆಯಲ್ಲಿ ಬೆಳಕಿಗೆ ಬಂದಿತ್ತು.

ಹೌದು, ಭಾರತದಲ್ಲಿ ಹಾಗೂ ಜಾಗತಿಕವಾಗಿ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಹೆಸರಿನಲ್ಲಿ ಮೋಸ ಮಾಡುವ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಕಳೆದ 6 ವರ್ಷದ ಅಂಕಿ-ಅಂಶವನ್ನು ಅವಲೋಕಿಸಿದರೆ ಹಣಕಾಸಿಗೆ ಸಂಬಂಧಿಸಿದ ವಂಚನೆಗಳು ಗರಿಷ್ಠ ಮಟ್ಟದಲ್ಲಿವೆ.

ಇಂಡಿಯನ್ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್‌ನ ಮಾಹಿತಿ ಪ್ರಕಾರ ಪ್ರಸಕ್ತ ವರ್ಷದ ಜನವರಿಯಿಂದ ಏಪ್ರಿಲ್ ಅವಧಿಯಲ್ಲಿ ಸೈಬರ್ ವಂಚನೆಗಳಿಗೆ ಒಳಗಾಗಿ ಸುಮಾರು ₹1,750 ಕೋಟಿ ಕಳೆದುಕೊಂಡಿದ್ದಾರೆ. ಈ ಪೈಕಿ ಶೇ 80ರಷ್ಟು ವಂಚನೆಗಳು ಹಣಕಾಸಿಗೆ ಸಂಬಂಧಿಸಿದ ಅಪರಾಧಗಳಾಗಿವೆ. ವಂಚಕರು ಹೊಸ ತಂತ್ರ ಬಳಸಿ ಜನರ ದುಡ್ಡಿಗೆ ಕನ್ನ ಹಾಕುತ್ತಿದ್ದಾರೆ.

ಡಿಜಿಟಲ್ ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಮೋಸ ಮಾಡುವ ಜಾಲ ಈಗ ದೊಡ್ಡ ಮಟ್ಟದಲ್ಲಿ ವಿಸ್ತರಿಸಿಕೊಂಡಿದೆ. ವಾಟ್ಸ್‌ಆ್ಯಪ್, ಫೇಸ್‌ಬುಕ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂನಂತಹ ವೇದಿಕೆಗಳನ್ನು ಕದೀಮರು ಗಾಳವಾಗಿ ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ಹಣ ಮತ್ತು ಹೂಡಿಕೆಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಯೋಣ ಬನ್ನಿ.

ಹೂಡಿಕೆ ವಂಚನೆ ಹೇಗೆ ನಡೆಯುತ್ತವೆ?: 

ಡಿಜಿಟಲ್‌ ಮಾಧ್ಯಮಗಳ ಮೂಲಕ ‘ಪಿಗ್‌ ಬುಚ್ಚರಿಂಗ್’ ಅನ್ನೋ ವಂಚನೆ ಈಗ ಚಾಲ್ತಿಯಲ್ಲಿದೆ. ಪಿಗ್ ಬುಚ್ಚರಿಂಗ್ ಎಂದರೆ ನಂಬಿಸಿ ಮೋಸ ಮಾಡುವ ಜಾಲ. ಇಲ್ಲಿ ವಂಚಕರ ಜಾಲಕ್ಕೆ ಬಿದ್ದು ಮೋಸ ಹೋಗುವವರನ್ನು ‘ಪಿಗ್’ ಎಂದು ಕರೆಯಲಾಗುತ್ತದೆ.

ಈ ವಂಚನೆ ಹಲವು ಹಂತಗಳಲ್ಲಿ ನಡೆಯುತ್ತದೆ. ಬೇಗ ಶ್ರೀಮಂತರಾಗಬೇಕು. ಸುಲಭವಾಗಿ ಹೆಚ್ಚು ಹಣ ಗಳಿಸಬೇಕು ಎನ್ನುವ ಮನಸ್ಥಿತಿ ಇರುವವರನ್ನು ಹುಡುಕಿ ಅವರಲ್ಲಿ ನಂಬಿಕೆ ಬರುವಂತೆ ನಡೆದುಕೊಂಡು ನಂತರ
ವ್ಯವಸ್ಥಿತವಾಗಿ ವಂಚನೆ ಮಾಡುವ ತಂತ್ರಗಾರಿಕೆ ಇಲ್ಲಿ ಕೆಲಸ ಮಾಡುತ್ತದೆ. ಫೇಸ್‌ಬುಕ್, ವಾಟ್ಸ್‌ಆ್ಯಪ್ ಅಥವಾ ಇನ್‌ಸ್ಟಾಗ್ರಾಂನಲ್ಲಿ ದೊಡ್ಡ ಸ್ಟಾಕ್ ಬ್ರೋಕಿಂಗ್ ಕಂಪನಿಯ ಹೆಸರಿನಲ್ಲಿ, ಖ್ಯಾತ ಹಣಕಾಸು ಸಲಹೆಗಾರರ ಹೆಸರಿನಲ್ಲಿ ಹಣಕಾಸು ಸಲಹೆಗಳು ಹರಿದಾಡುವುದನ್ನು ನೋಡಿರಬಹುದು.

ಈ ಷೇರು ಶೇ 30ರಷ್ಟು ಏರಿಕೆಯಾಗುತ್ತದೆ. ಆ ಮ್ಯೂಚುವಲ್ ಫಂಡ್ ಶೇ 25ರಷ್ಟು ಗಳಿಕೆ ಒದಗಿಸುತ್ತದೆ. ಕೂಡಲೇ, ಈ ಮೊಬೈಲ್ ನಂಬರ್‌ನ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿ ಎಂಬಿತ್ಯಾದಿ ಜಾಹೀರಾತುಗಳನ್ನು ಗಮನಿಸಿರಬಹುದು.

ಅಸಲಿಗೆ ಈ ಜಾಹೀರಾತುಗಳು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ನಿರ್ದಿಷ್ಟ ಕಂಪನಿಗಳಾಗಲಿ, ಹಣಕಾಸು ಸಲಹೆಗಾರರಾಗಲಿ ನೀಡಿರುವುದೇ ಇಲ್ಲ. ಖ್ಯಾತನಾಮ ಬ್ರೋಕಿಂಗ್ ಕಂಪನಿಗಳು ಮತ್ತು ಹಣಕಾಸು ಸಲಹೆಗಾರರ ಹೆಸರು ಬಳಸಿಕೊಂಡು ವಂಚಕರು ಮೋಸ ಮಾಡಲು ಗಾಳ ಹಾಕಿರುತ್ತಾರೆ.

ಹೆಸರಾಂತ ವ್ಯಕ್ತಿಗಳು, ಕಂಪನಿಗಳ ಸೋಗಿನಲ್ಲಿ ಹೋದಾಗ ನಂಬಿಕೆ ಗಳಿಸಿಕೊಳ್ಳುವುದು ಸುಲಭ ಎನ್ನುವುದು ವಂಚಕರ ಲೆಕ್ಕಾಚಾರ. ಒಮ್ಮೆ ಆ ಜಾಹೀರಾತಿನ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ನಿಮ್ಮನ್ನು ವಾಟ್ಸ್‌ಆ್ಯಪ್ ಅಥವಾ ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಲಾಗುತ್ತದೆ. ಗ್ರೂಪ್‌ಗೆ ಸೇರಿಸಿದ ಮೇಲೆ ನಿಮಗೆ ನಂಬಿಕೆ ಹುಟ್ಟಿಸುವಂತಹ ವ್ಯವಸ್ಥಿತ ಪ್ರಯತ್ನ ಹಂತ ಹಂತವಾಗಿ ಜರುಗುತ್ತದೆ. ಗ್ರೂಪ್‌ಗೆ ಸೇರಿದ ವ್ಯಕ್ತಿಗೆ ವಿಶ್ವಾಸ ಬರುವಂತೆ ಮಾಡಲು ವಂಚಕರು ವಾರಗಟ್ಟಲೆ ತಿಂಗಳುಗಟ್ಟಲೆ ಪ್ರಯತ್ನಿಸುತ್ತಾರೆ.

ನಿಮಗೂ ಆತನ ಮೇಲೆ ವಿಶ್ವಾಸ ಮೂಡಿದೆ ಅನಿಸಿದ ಮೇಲೆ ಆತ ನಿಮಗೆ ಹೂಡಿಕೆ ಅವಕಾಶವೊಂದರ ಬಗ್ಗೆ ತಿಳಿಸುತ್ತಾನೆ. ನಮ್ಮ ಬಳಿ ಇನ್‌ಸೈಡರ್ ಟ್ರೇಡಿಂಗ್ ಸಲಹೆ ಇವೆ. ಈ ಷೇರಿನಲ್ಲಿ ಹಣ ಹಾಕಿದರೆ ಪಕ್ಕಾ ಶೇ 40ರಷ್ಟು ಲಾಭ ಸಿಗಲಿದೆ ಎಂದು ತಿಳಿಸುತ್ತಾರೆ.

ಗಳಿಕೆಯ ಬಗ್ಗೆ ನಂಬಿಕೆ ಬರುವಂತೆ ಮಾಡಲು ವಾಟ್ಸ್‌ಆ್ಯಪ್‌ಗೆ ತಮ್ಮ ಹೂಡಿಕೆ ಪೋರ್ಟ್ ಫೋಲಿಯೊದ ಸ್ಕ್ರೀನ್ ಶಾಟ್ ಹಾಕುತ್ತಾರೆ. ಇದರ ಜೊತೆ ಜೊತೆಗೆ ಗ್ರೂಪ್‌ನಲ್ಲಿರುವ ಇನ್ನಿತರ ವಂಚಕರು ಮುಂದೆ ಬರುವ ಈ ಷೇರಿನಲ್ಲಿ ಶೇ 35ರಷ್ಟು ಲಾಭ ಪಕ್ಕಾ, ಖಂಡಿತ ಈ ಷೇರು ಖರೀದಿ ತಪ್ಪಿಸಬಾರದು. ಬರುವ ತಿಂಗಳು ಜರುಗುವ ಐಪಿಒವೊಂದರಲ್ಲಿ ಹೂಡಿದರೆ ಶೇ 100ರಷ್ಟು ಲಿಸ್ಟಿಂಗ್ ಗೇನ್ಸ್ (ನೋಂದಾಯಿತ ಗಳಿಕೆ) ಗ್ಯಾರಂಟಿ ಎಂಬಿತ್ಯಾದಿ ಸಂಭಾಷಣೆ ನಡೆಸುತ್ತಾರೆ.

ಗ್ರೂಪ್‌ಗೆ ಸೇರಿರುವವರನ್ನು ಹೂಡುವಂತೆ ಪ್ರೇರೇಪಿಸುತ್ತಾರೆ. ಈ ಅವಕಾಶ ಮುಂದೆಂದೂ ಸಿಗುವುದಿಲ್ಲ ಎಂಬ ಭ್ರಮೆ ಹುಟ್ಟಿಸುತ್ತಾರೆ. ಹೂಡಿಕೆ ಮಾಡಲು ನೀವು ತಯಾರಿದ್ದೀರಿ ಎಂದು ತಿಳಿದ ತಕ್ಷಣ ಹಣ ಪಾವತಿಸುವ ಲಿಂಕ್ ಕಳುಹಿಸುತ್ತಾರೆ. ಹಣ ಹೂಡಿಕೆ ಮಾಡಿದ ಕೆಲ ದಿನಗಳ ಬಳಿಕ ನಿಮ್ಮ ಪೋರ್ಟ್ ಫೋಲಿಯಯೊ ಉತ್ತಮ ಲಾಭ ಗಳಿಸಿದೆ ಎಂದು ತೋರಿಸುತ್ತಾರೆ. ನಂಬಿಕೆ ಬರುವಂತೆ ಮಾಡಲು ಲಾಭ ಎಂದು ಹೇಳಿಕೊಂಡು ಒಂದಷ್ಟು ಮೊತ್ತವನ್ನು ನಿಮಗೆ ಕೊಡುತ್ತಾರೆ. ಲಾಭ ಸಿಕ್ಕಿದ ಕೂಡಲೇ ನಿಮಗೆ ನಂಬಿಕೆ ಹೆಚ್ಚಾಗುತ್ತದೆ. ಆಗ ದೊಡ್ಡ ಮೊತ್ತವನ್ನು ನೀವು ಹೂಡಿಕೆ ಮಾಡುತ್ತೀರಿ. ದೊಡ್ಡ ಮೊತ್ತ ಹೂಡಿಕೆ ಮಾಡುತ್ತಿದ್ದಂತೆ ಅವರು ನಿಮ್ಮ ಕೈಗೆ ಸಿಗುವುದಿಲ್ಲ. ನಾಪತ್ತೆಯಾಗುತ್ತಾರೆ.

ವಂಚನೆಯಿಂದ ಪಾರಾಗುವುದು ಹೇಗೆ?: 

ಯಾರಾದರೂ ಅಲ್ಪಕಾಲದಲ್ಲಿ ನಿಮಗೆ ದುಡ್ಡು ಡಬಲ್ ಮಾಡಿಕೊಡುತ್ತೇವೆ. ಶೇ 30ರಷ್ಟು ಲಾಭಾಂಶ ಕೊಡುತ್ತೇವೆ ಎಂದು ಹೇಳಿದರೆ ಅವರನ್ನು ಅನುಮಾನದಿಂದಲೇ ನೋಡಬೇಕು. ವಂಚಕರು ಸಾಮಾನ್ಯವಾಗಿ ಮೋಸ ಮಾಡಲು ಬಳಸುವ ತಂತ್ರಗಾರಿಕೆಗಳು ಇವು. ಬ್ಯಾಂಕ್ ನಿಶ್ಚಿತ ಠೇವಣಿ/ ಸರ್ಕಾರದ ಗ್ಯಾರಂಟಿ ಇರುವ ಹೂಡಿಕೆಗಳಿಗಿಂತ ಯಾರಾದರೂ ಅತಿಯಾದ ಲಾಭಾಂಶವನ್ನು ನಿಮಗೆ ಒದಗಿಸಿಕೊಡುತ್ತೇವೆ ಎಂದು ಹೇಳಿದರೆ ಅದೊಂದು ಹಣ ವಂಚಿಸುವ ಜಾಲವಾಗಿರಬಹುದು ಹುಷಾರ್.

ಯಾವುದೋ ಗೊತ್ತಿಲ್ಲದ ವಾಟ್ಸ್‌ಆ್ಯ‍ಪ್‌ನಿಂದ ಟ್ರೇಡಿಂಗ್ ಗುಂಪಿಗೆ ಸೇರುವಂತೆ ಲಿಂಕ್ ಬಂದರೆ ಬಹಳ ಎಚ್ಚರವಾಗಿರಿ. ಷೇರು ಹೂಡಿಕೆ ಮಾಡಲು ಸಾಕಷ್ಟು ಅಧ್ಯಯನ ಮತ್ತು ತಿಳಿವಳಿಕೆ ಬೇಕು. ಯಾರೋ ಏಕೆ ಉಚಿತವಾಗಿ ಟ್ರೇಡಿಂಗ್ ಸಲಹೆ ಕೊಟ್ಟು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತಾರೆ ಅಲ್ಲವೇ? ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿರುವ ಗೊತ್ತುಗಿರಿಯಿಲ್ಲದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಕೆಲವು ಬಾರಿ ಗೊತ್ತಿಲ್ಲದೆ ಲಿಂಕ್ ಕ್ಲಿಕ್ ಮಾಡಿದಾಗ ಫೇಕ್ ಅಪ್ಲಿಕೇಷನ್‌ಗಳು ನಿಮ್ಮ ಮೊಬೈಲ್‌ನ ಮಾಹಿತಿ ಕದಿಯುವ ಸಾಧ್ಯತೆ ಇರುತ್ತದೆ. ವಂಚಕರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಖಾತೆಗೆ ಹಣ ಹಾಕುವಂತೆ ಮನವೊಲಿಸುವ
ಪ್ರಯತ್ನ ಮಾಡುತ್ತಾರೆ. ಈ ಬಗ್ಗೆ ಜಾಗೃತಿವಹಿಸಿ.

ಮೋಸ ಹೋಗಿದ್ದರೆ ಏನು ಮಾಡಬೇಕು?:

ಈಗಾಗಲೇ, ಇಂತಹ ವಂಚನೆಗಳಿಗೆ ಒಳಗಾಗಿದ್ದರೆ ಸೈಬರ್ ಪೊಲೀಸರಿಗೆ ಇಲ್ಲವೇ ಆರ್ಥಿಕ ಅಪರಾಧಗಳ ವಿಭಾಗಕ್ಕೆ ದೂರು ಕೊಡಿ. ಹಣಕಾಸಿನ ಅಪರಾಧ ಯಾವ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಅರಿತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ), ಆರ್‌ಬಿಐಗೆ ದೂರು ಸಲ್ಲಿಸಿ. ಪೂರಕ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗೆ ನೀಡಿ ತನಿಖೆಗೆ ಸಹಕರಿಸಿ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಸೆಪ್ಟೆಂಬರ್ ಕೊನೆಯಲ್ಲೂ ಜಿಗಿದ ಷೇರುಪೇಟೆ

ಸೆಪ್ಟೆಂಬರ್ 27ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 85571 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.22ರಷ್ಟು ಗಳಿಸಿಕೊಂಡಿದೆ. 26178 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 1.5ರಷ್ಟು ಜಿಗಿದಿದೆ. ಚೀನಾ ಆರ್ಥಿಕ ಪ್ರಗತಿಯ ನಿಗದಿತ ಗುರಿ ಮುಟ್ಟಲಿದೆ ಎಂಬ ವಿಶ್ವಾಸ ಅಮೆರಿಕದ ಜಿಡಿಪಿ ದತ್ತಾಂಶ ಸೇರಿ ಹಲವು ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಎಫ್‌ಎಂಸಿಜಿ ಹೊರತುಪಡಿಸಿ ಇನ್ನುಳಿದ ಸೂಚ್ಯಂಕಗಳು ಜಿಗಿತ ಕಂಡಿವೆ.

ಲೋಹ ವಲಯ ಶೇ 6.82 ಅನಿಲ ಮತ್ತು ತೈಲ ಶೇ 4.72 ವಾಹನ ಶೇ 4.51 ಎನರ್ಜಿ ಶೇ 3.88 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.05 ಮಾಧ್ಯಮ ಶೇ 2.32 ಫಾರ್ಮಾ ಶೇ 2.29 ರಿಯಲ್ ಎಸ್ಟೇಟ್ ಶೇ 1.75 ಫೈನಾನ್ಸ್ ಶೇ 0.52 ಮಾಹಿತಿ ತಂತ್ರಜ್ಞಾನ ಶೇ 0.28 ಮತ್ತು ಬ್ಯಾಂಕ್ ಸೂಚ್ಯಂಕಗಳು ಶೇ 0.08ರಷ್ಟು ಗಳಿಸಿಕೊಂಡಿವೆ. ಎಫ್ಎಂಸಿಜಿ ವಲಯ ಶೇ 0.11ರಷ್ಟು ಕುಸಿದಿದೆ. ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಬಿಪಿಸಿಎಲ್ ಶೇ 10.8 ಟಾಟಾ ಸ್ಟೀಲ್ ಶೇ 9.5 ಮಹೀಂದ್ರ ಆ್ಯಂಡ್‌ ಮಹೀಂದ್ರ ಶೇ 7.78 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 7.63 ಮಾರುತಿ ಸುಜುಕಿ ಶೇ 6.77 ಬಜಾಜ್ ಆಟೊ ಶೇ 5.8 ಕೋಲ್ ಇಂಡಿಯಾ ಶೇ 5.05 ಸನ್ ಫಾರ್ಮಾ ಶೇ 4.58 ಬಜಾಜ್ ಫಿನ್‌ಸರ್ವ್ ಶೇ 4.55 ಮತ್ತು ಅದಾನಿ ಎಂಟರ್ ಪ್ರೈಸಸ್ ಶೇ 4.08ರಷ್ಟು ಗಳಿಸಿಕೊಂಡಿವೆ. ಎಲ್‌ಟಿಐ ಮೈಂಡ್ ಟ್ರೀ ಶೇ 3.72 ಐಸಿಐಸಿಐ ಬ್ಯಾಂಕ್ ಶೇ 2.52 ಎಲ್ ಆ್ಯಂಡ್‌ ಟಿ ಶೇ 2.36 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 1.73 ಟೆಕ್ ಮಹೀಂದ್ರ ಶೇ 1.27 ಟಾಟಾ ಕನ್ಸ್ಯೂಮರ್ ಶೇ 1.26 ಇಂಡಸ್‌ಇಂಡ್ ಬ್ಯಾಂಕ್ ಶೇ 1.16 ಹೀರೊ ಮೋಟೊಕಾರ್ಪ್ ಶೇ 0.99 ಹಿಂದುಸ್ತಾನ್‌ ಯುನಿಲಿವರ್ ಶೇ 0.21ರಷ್ಟು ಕುಸಿದಿವೆ.

ಮುನ್ನೋಟ:

ಅಕ್ಟೋಬರ್ 7ರಿಂದ 9ರ ವರೆಗೆ ಆರ್‌ಬಿಐ ಹಣಕಾಸು ಸಮಿತಿ ಸಭೆ ನಡೆಯಲಿದೆ. ಬಡ್ಡಿದರ ಇಳಿಕೆ ಬಗ್ಗೆ ಆರ್‌ಬಿಐ ನಿಲುವೇನು ಎನ್ನುವ ಬಗ್ಗೆ ಈ ಸಭೆಯಲ್ಲಿ ಸ್ಪಷ್ಟತೆ ಸಿಗಲಿದೆ. ಉಳಿದಂತೆ ಅಕ್ಟೋಬರ್ 2ನೇ ವಾರದ ಬಳಿಕಕಂಪನಿಗಳ ಎರಡನೇ ತ್ರೈಮಾಸಿಕ ಸಾಧನೆಯ ವರದಿಗಳು ಬಿಡುಗಡೆಯಾಗಲಿದ್ದು ಹೂಡಿಕೆದಾರರು ಅದರತ್ತ ದೃಷ್ಟಿ ಹರಿಸಿದ್ದಾರೆ. ಜಾಗತಿಕ ವಿದ್ಯಮಾನಗಳು ಮತ್ತು ದೇಶೀಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT