ಮಂಗಳವಾರ, ಜೂನ್ 2, 2020
27 °C

ಮುಂದೂಡಿಕೆಯ ಲಾಭ, ನಷ್ಟ

ಡಿಪಿಶ್ರೀ ದೈತೋಟ Updated:

ಅಕ್ಷರ ಗಾತ್ರ : | |

ಜಾಗತಿಕ ಮಟ್ಟದಲ್ಲಿ ಜನರ ಜೀವನವನ್ನು ತಲ್ಲಣಗೊಳಿಸಿರುವ ಸಾಂಕ್ರಾಮಿಕ ರೋಗ ’ಕೊರೊನಾ’ ವೈದ್ಯಕೀಯ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಂದ ಇತ್ತೀಚಿನ ಕೆಲವು ವಾರಗಳಿಂದ ಅತ್ಯಂತ ಮಹತ್ವ ಪಡೆದುಕೊಂಡಿದೆ.

ದಿನಗೂಲಿ ನೌಕರರಿಂದ ಹಿಡಿದು, ಪ್ರತಿದಿನ ಕೋಟಿಗಟ್ಟಲೆ ವ್ಯವಹಾರ ಮಾಡುವ ಸಾವಿರಾರು ಸಂಸ್ಥೆಗಳ ಮೇಲೆ ಇದು ಹಣಕಾಸು  ಹಾಗೂ ಹಣಕಾಸುಯೇತರ ನೆಲೆಗಟ್ಟಿನಲ್ಲಿ ಅನೇಕ ಅಡ್ಡ ಪರಿಣಾಮಗಳನ್ನು ಬೀರುವಂತೆ ಮಾಡಿದೆ. ಸಾಮಾನ್ಯ ಜನರ ಕೈಯಲ್ಲಿ ಹೆಚ್ಚುಕಮ್ಮಿ ಒಂದು ತಿಂಗಳ ಕಾಲ ಬಿಡಿಗಾಸೂ  ಓಡಾಡದಂತೆ ಮಾಡಿದ ’ಲಾಕ್ ಡೌನ್’ ಎಂಬ ವೈರಾಣು ಶಮನ ಸೂತ್ರವು ದೇಶದ ಆರ್ಥಿಕತೆಯ ನಾಡಿಮಿಡಿತವನ್ನು ತುಂಬ ಏರುಪೇರು ಮಾಡಿದೆ.  ಸರ್ಕಾರದ ಈ ಕ್ರಮಕ್ಕೆ ಅನುಗುಣವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡಾ ಆರ್ಥಿಕ ಸಂಕಷ್ಟದ ಈ ಹಂತದಲ್ಲಿ ಜನರು, ಉದ್ಯಮ ಸಂಸ್ಥೆಗಳು ಚಕಾರ ಎತ್ತುವ ಮೊದಲೇ ವಿವಿಧ ಬಗೆಯ ಸಾಲ ಮರುಪಾವತಿ ಮುಂದೂಡುವ ಪರಿಹಾರ ಕೊಡುಗೆ ಘೋಷಿಸಿದೆ.

ಆರ್‌ಬಿಐ ನಿರ್ದೇಶನಗಳೇನು?

ಸಾಲಗಾರರ ತಾತ್ಕಾಲಿಕ ಹಣಕಾಸು ಬಿಕ್ಕಟ್ಟು ಪರಿಹರಿಸುವ ಉದ್ದೇಶದಿಂದ ಆರ್‌ಬಿಐ ಮಾರ್ಚ್ 27 ರಂದು ಎಲ್ಲ ಬ್ಯಾಂಕಿಂಗ್, ಬ್ಯಾಂಕೇತರ ಹಣಕಾಸು ಸಂಸ್ಥೆ, ಸಹಕಾರಿ ಬ್ಯಾಂಕ್‍, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಗೃಹ ಸಾಲ ಸಂಸ್ಥೆ ಇತ್ಯಾದಿ ಹಣಕಾಸು ಸಂಸ್ಥೆಗಳಿಗೆ ತಮ್ಮ ಗ್ರಾಹಕರು ಪಾವತಿಸಬೇಕಾಗಿರುವ ಸಾಲದ ಕಂತುಗಳನ್ನು ಮರುಪಾವತಿಯಿಂದ ಮೂರು ತಿಂಗಳ ಅವಧಿಗೆ ವಿನಾಯಿತಿ ನೀಡುವಂತೆ ತನ್ನ ನಿರ್ದೇಶನದಲ್ಲಿ ತಿಳಿಸಿದೆ. ಇದರಂತೆ ಮಾರ್ಚ್ 1 ರಿಂದ ಮೇ 31 ರ ಅವಧಿಯಲ್ಲಿ ಪಾವತಿಗೆ ಬರುವ ಎಲ್ಲ ಅವಧಿ ಸಾಲಗಳ ಕಂತುಗಳಿಗೆ ಈ ನಿರ್ದೇಶನ ಅನ್ವಯಿಸುತ್ತದೆ. ಇದರಂತೆ, ಅಸಲು ಹಾಗೂ ಸಾಲದ ಮೇಲಿನ ಬಡ್ಡಿಯನ್ನು ಈ ಮೂರು ತಿಂಗಳ ಅವಧಿಯಲ್ಲಿ ಪಾವತಿಸದಿರುವ ಅವಕಾಶ ಸಾಲಗಾರರಿಗೆ ಇದೆ. ಕ್ರೆಡಿಟ್ ಕಾರ್ಡ್ ಪಾವತಿ, ಸಾಲದ ಅವಧಿಯ ಕೊನೆಯಲ್ಲಿ ದೊಡ್ಡ ಮೊತ್ತ ಪಾವತಿಸುವ ಬುಲೆಟ್‌ ಸಾಲ (Bullet Loan)  ಮರುಪಾವತಿ ಹಾಗೂ ಮಾಸಿಕ ಸಮಾನ ಕಂತುಗಳ (ಇಎಂಐ) ಕಂತುಗಳ ಪಾವತಿಗಳನ್ನೂ ವಿಸ್ತರಿಸುವ ಅವಕಾಶವನ್ನು ಇದರಲ್ಲಿ ಕಲ್ಪಿಸಿ ಕೊಡಲಾಗಿದೆ. ಇಷ್ಟೇ ಅಲ್ಲದೆ ಓವರ್ ಡ್ರಾಫ್ಟ್ , ನಗದು ಸಾಲಗಳ ಮೇಲೆ ಬರುವ ಬಡ್ಡಿಯನ್ನೂ ಮೇ 31 ರ ತನಕ ವಸೂಲು ಮಾಡದಂತೆ ಎಲ್ಲ ಬ್ಯಾಂಕಗಳಿಗೆ ನಿರ್ದೇಶಿಸಲಾಗಿದೆ.

ಕೊರೊನಾ ಬಾಧೆಯ ಈ ಅವಧಿಯಲ್ಲಿ ಹಣಕಾಸು ವ್ಯವಹಾರ ಕುಂಠಿತಗೊಂಡಿರುವುದರಿಂದ ’ಡ್ರಾವಿಂಗ್ ಪವರ್’ (Drawing power) ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳನ್ನು ಮನಗಂಡು ಆರ್‌ಬಿಐ ಅಂತಹ ಸಾಲಗಳನ್ನು ಬ್ಯಾಂಕ್‍ಗಳು ತಮ್ಮ ವಿವೇಚನಾತ್ಮಕ ಪರಿಶೀಲನೆಗೆ ಒಳಪಡಿಸಿ ವರ್ಗೀಕರಿಸುವ ಅವಕಾಶವನ್ನೂ ಕೊಟ್ಟಿದೆ. ಆದರೆ, ಸಾಲ ಮುಂದೂಡುವ ಅವಕಾಶವನ್ನು ಪಡೆದುಕೊಂಡವರು ತಮ್ಮ ಖಾತೆಯು ವಸೂಲಾಗದ ಸಾಲ (ಎನ್‌ಪಿಎ) ಖಾತೆಯಾಗಿ ಮಾರ್ಪಾಡಾಗುವ ಬಗ್ಗೆ ಆತಂಕಪಡಬೇಕಾಗಿಲ್ಲ. ಈ ವಿಷಯದಲ್ಲಿ ಗ್ರಾಹಕರ ಹಿತ ಕಾಯ್ದುಕೊಳ್ಳುವಂತೆ ಹಾಗೂ ಖಾತೆಯ ಗುಣಮಟ್ಟದ ಮೇಲೆ ಅಡ್ಡ ಪರಿಣಾಮ ಬೀರದಂತೆ ನೋಡಿಕೊಳ್ಳುವ ಭರವಸೆಯನ್ನು ಆರ್‌ಬಿಐ ನೀಡಿದೆ.  ಯಾವುದೇ ಗ್ರಾಹಕ ತನ್ನ ಖಾತೆ ಇರುವ ಬ್ಯಾಂಕನ್ನು ಸಂಪರ್ಕಿಸಿ ಸಾಲದ ಕಂತುಗಳ ಪಾವತಿಯನ್ನು ಮುಂದೂಡುವ ಅವಕಾಶವನ್ನು ಕೇಳಿದಾಗ ಅದನ್ನು ತಳ್ಳಿಹಾಕುವ ಅವಕಾಶ ಬ್ಯಾಂಕ್‍ಗಳಿಗೆ ಕೊಟ್ಟಿಲ್ಲ. ಹೀಗಾಗಿ ಇದೊಂದು ಗ್ರಾಹಕರ ಪರವಾಗಿರುವ ಹಕ್ಕು ಎಂದೇ ಪರಿಗಣಿಸಬಹುದು. ಈ ಅವಧಿಯಲ್ಲಿ ಸಾಲ ಮುಂದೂಡಿಕೆಗೆ ಸಂಬಂಧಿಸಿದಂತೆ ಯಾವುದೇ ಶುಲ್ಕ ಅಥವಾ ಹೆಚ್ಚುವರಿ ಬಡ್ಡಿ ದರ, ದಂಡವನ್ನೂ ವಿಧಿಸುವಂತಿಲ್ಲ.

ಸಾಲಗಾರರ ಮೇಲಿನ ಪರಿಣಾಮಗಳೇನು?

ಆರ್‌ಬಿಐ ನಿರ್ದೇಶನದಂತೆ ಎಲ್ಲಾ ಬ್ಯಾಂಕ್‍ಗಳು ತಮ್ಮ ಗ್ರಾಹಕರಿಗೆ ಸಾಲ ಮರುಪಾವತಿಸುವ ಆವಧಿಯನ್ನು ಮುಂದೂಡಿವೆ. ಇದು ಕೇವಲ ತಾತ್ಕಾಲಿಕ ಹಣಕಾಸು ಬಿಕ್ಕಟ್ಟು ಶಮನ ವ್ಯವಸ್ಥೆಯಷ್ಟೇ ಹೊರತು ಸಾಲ ಮನ್ನಾ ಅಥವಾ ಬಡ್ಡಿ ಕಡಿತವಲ್ಲ ಎಂಬುದನ್ನು ಮೊದಲು ಅರಿಯಬೇಕು. ಉದಾಹರಣೆಗೆ, ನೀವು ಶೇಕಡಾ 9 ರ ದರದಲ್ಲಿ ₹ 30 ಲಕ್ಷ ಮೊತ್ತದ  ಸಾಲವನ್ನು 20 ವರ್ಷಗಳ ಅವಧಿಗೆ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. ಇದರ ಪ್ರಕಾರ ನಿಮ್ಮ ಇಎಂಐ ಮೊತ್ತ ₹ 26,992 ಇರಲಿದೆ. ನೀವು ಮೊದಲ ಐದು ವರ್ಷ ಸಾಲದ ಕಂತುಗಳನ್ನು ಈಗಾಗಲೇ ಪಾವತಿಸಿದ್ದು ಹದಿನೈದು ವರ್ಷಗಳ ಪಾವತಿ ಬಾಕಿ ಇದ್ದಾಗ ಸಾಲ ಪಾವತಿಯನ್ನು ಮೂರು ತಿಂಗಳ ಮಟ್ಟಿಗೆ ಮುಂದೂಡಿದಾಗ ಆಗುವ ಒಟ್ಟು ಆರ್ಥಿಕ ಪರಿಣಾಮ ಬಹಳ ದೊಡ್ಡದು. ಇದರಿಂದ ಸುಮಾರು ಒಂಬತ್ತು ಇಎಂಐ ಕಂತುಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಅರ್ಥಾತ್ ಹೆಚ್ಚುವರಿ ತೆರಬೇಕಾಗುವ ₹ 1.82 ಲಕ್ಷ ಬಡ್ಡಿ ಮೊತ್ತಕ್ಕೆ ಈ ಕಂತುಗಳು ಪಾವತಿಯಾಗುತ್ತವೆ.

ಈ ಮೂರೂ ತಿಂಗಳ ಅವಧಿಯಲ್ಲಿ ವೃದ್ದಿಸುವ ಬಡ್ಡಿ ಮೊತ್ತವನ್ನು ಪ್ರತಿ ತಿಂಗಳು ಬಾಕಿ ಇದ್ದ ಅಸಲು ಮೊತ್ತಕ್ಕೆ ಸೇರಿಸಲಾಗುತ್ತದೆ. ಇದರ ಪರಿಣಾಮವಾಗಿ ಬಡ್ಡಿಯ ಮೇಲೆ ಬಡ್ಡಿ ಲೆಕ್ಕ ಹಾಕಿ ಮೂರನೇ ತಿಂಗಳ ಕೊನೆಗೆ ಹೊಸ ಅಸಲು ಮೊತ್ತವಾಗಿ ಪರಿಗಣಿಸಲಾಗುತ್ತದೆ. ಪಾವತಿಗೆ ಬಾಕಿ ಉಳಿದಿರುವ ಕಂತುಗಳು ದೀರ್ಘವಿದ್ದಷ್ಟೂ ಸಾಲ ಮುಂದೂಡಿಕೆಯಿಂದ  (moratorium) ಗ್ರಾಹಕರು ಹೆಚ್ಚುವರಿ ಕಂತುಗಳನ್ನು ಪಾವತಿಸಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನಿಜವಾಗಿಯೂ ಹಣಕಾಸು ಸಮಸ್ಯೆ ಇಲ್ಲದವರು, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಈ ಸೌಲಭ್ಯವನ್ನು ಪಡೆಯದಿರುವುದೇ ಒಳ್ಳೆಯದು. ಇಷ್ಟೇ ಅಲ್ಲದೆ ಕ್ರೆಡಿಟ್ ಕಾರ್ಡ್ ಮೊತ್ತವನ್ನು ಮುಂದೂಡುವ ಯೋಜನೆ ಹಾಕಿದ್ದರೆ, ಬಡ್ಡಿಯ ಮೇಲೆ ಶೇಕಡಾ 18 ರ ಜಿಎಸ್‌ಟಿ ಮೊತ್ತವನ್ನೂ ಪಾವತಿಸಬೇಕಾಗುತ್ತದೆ.

ಯಾವೆಲ್ಲ ಸಂಸ್ಥೆಗಳು ಹೇಗೆ ಸ್ಪಂದಿಸಿವೆ?

‘ಕೋವಿಡ್–19’ ರ ಆರ್ಥಿಕ ಸಂಕಷ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ದೃಷ್ಟಿಯಿಂದ ಪ್ರಮುಖ ಬ್ಯಾಂಕ್‍ಗಳು ಆರ್‌ಬಿಐ ನಿರ್ದೇಶನದಂತೆ ತಮ್ಮ ಅಂತರ್ಜಾಲ ತಾಣದಲ್ಲಿ ನೀತಿ ನಿಯಮಾವಳಿಗಳನ್ನು ಪ್ರಕಟಿಸಿವೆ. ಸಾಲ ಪಾವತಿಯನ್ನು ಮುಂದೂಡ ಬಯಸುವ ಗ್ರಾಹಕರು ಆಯಾ ಬ್ಯಾಂಕ್‍ಗಳ ಗ್ರಾಹಕ ಸೇವಾ ವಿಭಾಗಕ್ಕೆ ಫೋನ್ ಮುಖಾಂತರ, ಎಸ್‌ಎಂಎಸ್‌  ಅಥವಾ ಇ–ಮೈಲ್ ಮುಖಾಂತರ ಸಾಲ ಮರುಪಾವತಿ ಮುಂದೂಡುವ ಉದ್ದೇಶವನ್ನು ತಮ್ಮ ಎಲ್ಲ ವಿವರಗಳೊಂದಿಗೆ ತಿಳಿಸಬೇಕು. ಇದೊಂದು ಐಚ್ಚಿಕ ಅವಕಾಶವಾಗಿದ್ದು ಒಂದು ವೇಳೆ ಗ್ರಾಹಕರು ಈ ಬಗ್ಗೆ ತಟಸ್ಥವಾಗಿದ್ದರೆ ನಿಮಗೆ ಸಾಲ ಪಾವತಿ ಮುಂದೂಡುವ ಅವಕಾಶ ಬೇಡದವರೆಂದು ಪರಿಗಣಿಸಿ ನಿಮ್ಮ ಸಾಲದ ಮಾಸಿಕ ಕಂತನ್ನು ಹಿಂದಿನಂತೆ ಬ್ಯಾಂಕ್ ಕಡಿತಗೊಳಿಸುತ್ತದೆ. ಈ ಸಂಬಂಧ ಗ್ರಾಹಕರ ಅನುಕೂಲಕ್ಕಾಗಿ ಸಾಮಾನ್ಯವಾಗಿ ಕೇಳುವ ಪ್ರಶ್ನೋತ್ತರಗಳನ್ನೂ ಆಯಾ ಬ್ಯಾಂಕ್‍ಗಳು ತಮ್ಮ ಅಂತರ್ಜಾಲದಲ್ಲಿ ಪ್ರಕಟಿಸಿವೆ. ಇಷ್ಟೇ ಅಲ್ಲದೆ, ಆರ್‌ಬಿಐ ಪ್ರಕಟಣೆ ಬಂದ ನಂತರದ ಅವಧಿಯಲ್ಲಿ ಕಡಿತಗೊಳಿಸಿದ ಸಾಲದ ಮೊತ್ತವನ್ನು ಪುನಃ ಗ್ರಾಹಕರಿಗೆ ಕೋರಿಕೆಯ ಮೇರೆಗೆ ಮರುಪಾವತಿಸುವ ಅವಕಾಶಗಳನ್ನೂ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು