ಮಂಗಳವಾರ, ಮಾರ್ಚ್ 21, 2023
23 °C

ಹಣಕಾಸು ಸಾಕ್ಷರತೆ | ಸಾಲದ ಸುಳಿ: ಪಾರಾಗುವುದು ಹೇಗೆ?

ರಾಜೇಶ್ ಕುಮಾರ್ ಟಿ.ಆರ್. Updated:

ಅಕ್ಷರ ಗಾತ್ರ : | |

‘ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ - ಕಿಬ್ಬದಿಯ ಕೀಲು ಮುರಿದಂತೆ’ ಎನ್ನುತ್ತಾನೆ ಸರ್ವಜ್ಞ. ಹೌದು, ಸಾಲ ಎಂಬುದು ಪಡೆಯುವಾಗ ಸಿಹಿ, ಹಿಂದಿರುಗಿಸುವಾಗ ಕಹಿ. ಅದರಲ್ಲೂ ಮೈತುಂಬಾ ಸಾಲ ಮಾಡಿಕೊಂಡಿದ್ದರಂತೂ ಮುಗಿದೇ ಹೊಯಿತು! ಸಾಲ ಕೊಟ್ಟವರು ಮನೆ ಬಾಗಿಲಿಗೇ ಬಂದು ನಿಮ್ಮ ನೆಮ್ಮದಿ ಕಿತ್ತುಕೊಳ್ಳುತ್ತಾರೆ. ಹಾಗಾದರೆ, ಕೆಟ್ಟ ಸಾಲಗಳಿಂದ ಪಾರಾಗಿ, ಸಾಲದ ಸುಳಿಯಿಂದ ಬಚಾವಾಗುವುದು ಹೇಗೆ? ಇದರ ಬಗ್ಗೆ ಒಮ್ಮೆ ಗಮನ ಹರಿಸೋಣ.

1. ಸಾಲಗಳ ಪಟ್ಟಿ ಮಾಡಿ, ಯಾವ ಸಾಲ ಮೊದಲು ಪಾವತಿಸಬೇಕು ಎಂಬುದನ್ನು ಅರಿಯಿರಿ: ವಾಹನ ಸಾಲ, ವೈಯಕ್ತಿಕ ಸಾಲ, ಚಿನ್ನದ ಮೇಲೆ ಸಾಲ, ಗೃಹ ಸಾಲ, ಕ್ರೆಡಿಟ್ ಕಾರ್ಡ್ ಸಾಲ, ಉದ್ಯಮ ಸಾಲ, ಹೀಗೆ ಕೆಲವರು ಎಲ್ಲ ಬಗೆಯ ಸಾಲಗಳನ್ನು ಪಡೆದು ಸಾಲದ ಸುಳಿಗೆ ಸಿಲುಕಿರುತ್ತಾರೆ. ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಸಾಲ ತೀರಿಸಲು ಮತ್ತೊಂದು, ಅದನ್ನು ಸರಿದೂಗಿಸಲು ಇನ್ನೊಂದು ಸಾಲ ಮಾಡುತ್ತಲೇ ಹೋಗುತ್ತಾರೆ.

ಹೀಗೆ ಮಾಡುವುದರಿಂದ ಸಮಸ್ಯೆ ಪರಿಹಾರವಾಗದು. ಮೊದಲನೆಯದಾಗಿ, ಸಾಲಗಳ ಒಂದು ಪಟ್ಟಿಯನ್ನು ಮಾಡಿಕೊಂಡು ಹೆಚ್ಚು ಬಡ್ಡಿ ದರವಿರುವ ಸಾಲಗಳನ್ನು ಬೇಗನೆ ತೀರಿಸಲು ಪ್ರಯತ್ನಿಸಬೇಕು. ಉದಾಹರಣೆಗೆ, ನೀವು ವೈಯಕ್ತಿಕ ಸಾಲ, ವಾಹನ ಸಾಲ ಮತ್ತು ಗೃಹ ಸಾಲ ಪಡೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ಹೀಗಿದ್ದಾಗ ಮೊದಲು ವೈಯಕ್ತಿಕ ಸಾಲ ತೀರಿಸಿ. ಏಕೆಂದರೆ, ವೈಯಕ್ತಿಕ ಸಾಲದ ಬಡ್ಡಿ ದರ ಶೇ 13ರಿಂದ ಶೇ 18ರವರೆಗೂ ಇರುತ್ತದೆ. ವಾಹನ ಸಾಲದ ಬಡ್ಡಿ ದರ ಶೇ 10ರಿಂದ ಶೇ 12ರವರೆಗೆ ಇರುವುದರಿಂದ ಈ ಸಾಲ ತೀರಿಸಲು ಎರಡನೆಯ ಆದ್ಯತೆ ನೀಡಿ.

ಗೃಹ ಸಾಲದ ಬಡ್ಡಿ ದರ ಶೇ 7.5ರಿಂದ ಶೇ 8.5ರವರೆಗೆ ಇರುವುದರಿಂದ ಮತ್ತು ಇದು ದೀರ್ಘಾವಧಿ ಅಡಮಾನ ಸಾಲವಾಗಿರುವುದರಿಂದ ಗೃಹ ಸಾಲದ ಮರುಪಾವತಿಗೆ ಮೂರನೆಯ ಆದ್ಯತೆ ಕೊಡಿ.

2. ಸಾಲದ ಅವಧಿಯನ್ನು ತಾತ್ಕಾಲಿಕವಾಗಿ ಹೆಚ್ಚಿಸಿಕೊಳ್ಳಿ: ಗೃಹ ಸಾಲದಂತಹ ದೀರ್ಘಾವಧಿಯ ಸಾಲಗಳು ಅಥವಾ ಇನ್ಯಾವುದೇ ಮಾದರಿಯ ದೀರ್ಘಾವಧಿ ಸಾಲಗಳನ್ನು ಮಾಡಿದ್ದಲ್ಲಿ ಸಾಲದ ಹೊರೆಯನ್ನು ತಾತ್ಕಾಲಿಕವಾಗಿ ಇಳಿಸಿಕೊಳ್ಳುವ ದೃಷ್ಟಿಯಿಂದ ಪ್ರತಿ ತಿಂಗಳು ಪಾವತಿಸುವ ಮಾಸಿಕ ಕಂತು (ಇಎಂಐ ಮೊತ್ತ) ಕಡಿಮೆ ಮಾಡಿಕೊಳ್ಳಿ. ಗೃಹ ಸಾಲವಾಗಿದ್ದ ಪಕ್ಷದಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ ಅವಧಿ ಹೆಚ್ಚಿಸಿಕೊಂಡು ಇಎಂಐ ಮೊತ್ತ ತಗ್ಗಿಸಿಕೊಳ್ಳಿ.

ಕೈಸಾಲ ಪಡೆದಿದ್ದರೆ ಅದನ್ನು ಕೊಟ್ಟ ವ್ಯಕ್ತಿಯ ಜೊತೆ ಮಾತನಾಡಿ ಸಾಲದ ಮರುಪಾವತಿಗೆ ಹೆಚ್ಚು ಸಮಯ ಕೇಳಿಕೊಳ್ಳುವ ಜೊತೆಗೆ ಪ್ರತಿ ತಿಂಗಳು ಇಂತಿಷ್ಟು ಮೊತ್ತ ನೀಡುವೆ ಎಂದು ಮಾತು ಕೊಡಿ. ಹೀಗೆ ಮಾಡಿದಾಗ ತಾತ್ಕಾಲಿಕವಾಗಿ ಸಾಲದ ಹೊರೆಯಿಂದ ಒಂದಿಷ್ಟು ನೆಮ್ಮದಿ ಪಡೆಯಬಹುದು. ಆದರೆ ನೆನಪಿರಲಿ, ಸಾಲದ ಅವಧಿ ಹೆಚ್ಚಿಸಿಕೊಳ್ಳುವುದರಿಂದ ನೀವು ಕಟ್ಟುವ ಬಡ್ಡಿಯ ಪ್ರಮಾಣ ಹೆಚ್ಚುತ್ತದೆ. ಆದ್ದರಿಂದ ತೀರಾ ಅನಿವಾರ್ಯ ಎನ್ನುವ ಸಂದರ್ಭದಲ್ಲಿ ಮಾತ್ರ ಈ ಅನುಕೂಲ ಪಡೆದುಕೊಳ್ಳಿ.

3. ದೀರ್ಘಾವಧಿ ಸಾಲಗಳ ಬಡ್ಡಿ ಕಡಿಮೆ ಮಾಡಿಕೊಳ್ಳಿ: ಇಎಂಐ ಹೆಚ್ಚಿಸುವುದರಿಂದ ಸಾಲದ ಅಸಲಿನ ಮೊತ್ತವನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಒಟ್ಟಾರೆ ಪಾವತಿಸುವ ಬಡ್ಡಿಯ ಪ್ರಮಾಣ ಇಳಿಕೆ ಮಾಡಿಕೊಳ್ಳಬಹುದು ಎನ್ನುವುದನ್ನು ಉದಾಹರಣೆ ಸಮೇತ ನೋಡೋಣ.

25 ವರ್ಷಗಳ ಅವಧಿಗೆ ಶೇ 8ರ ಬಡ್ಡಿ ದರದಲ್ಲಿ ₹ 50 ಲಕ್ಷ ಸಾಲ ಪಡೆದಿದ್ದೀರಿ ಎಂದುಕೊಳ್ಳಿ. ಇದಕ್ಕೆ ₹ 38,591 ಮಾಸಿಕ ಕಂತಿನ ರೂಪದಲ್ಲಿ ಪಾವತಿಸಬೇಕಾಗುತ್ತದೆ. 25ನೆಯ ವರ್ಷದ ಕೊನೆಯಲ್ಲಿ ಸಾಲದ ಅಸಲು ಮೊತ್ತ ₹ 50 ಲಕ್ಷದ ಜೊತೆಗೆ ಅದಕ್ಕೆ ಬಡ್ಡಿಯಾಗಿ ನೀವು ₹ 65 ಲಕ್ಷ ಕಟ್ಟಬೇಕಾಗುತ್ತದೆ. ₹ 50 ಲಕ್ಷ ಸಾಲಕ್ಕೆ ₹ 65 ಲಕ್ಷ ಬಡ್ಡಿ ಪಾವತಿಸುವುದು ದೊಡ್ಡ ಹೊರೆ.

ಈ ದೊಡ್ಡ ಮೊತ್ತದ ಬಡ್ಡಿಯ ಹೊರೆ ಇಳಿಸಿಕೊಳ್ಳಬೇಕು ಅಂದರೆ ಅದಕ್ಕೆ ಎರಡು ಮಾರ್ಗಗಳಿವೆ. ಒಂದನೆಯದ್ದು, ಪ್ರತಿ ವರ್ಷ ಒಂದು ಇಎಂಐ ಅನ್ನು ಹೆಚ್ಚುವರಿಯಾಗಿ ಪಾವತಿಸುವುದು. ಮತ್ತೊಂದು, ಪ್ರತಿ ವರ್ಷ ಇಎಂಐ ಮೊತ್ತವನ್ನು ಶೇ 10ರಷ್ಟು ಹೆಚ್ಚಳ ಮಾಡುವುದು. ಅಂದರೆ ₹ 38,591 ಇದ್ದ ಇಎಂಐ ಮೊತ್ತವನ್ನು ಮುಂದಿನ ವರ್ಷ ₹42,450ಕ್ಕೆ ಏರಿಸುವುದು. ಹಾಗೆಯೇ, ಅದರ ಮುಂದಿನ ವರ್ಷ ₹ 46,695ಕ್ಕೆ ಹೆಚ್ಚಳ ಮಾಡುವುದು.

ಇದರ ಜೊತೆಗೆ ಪ್ರತಿ ವರ್ಷ ಒಂದು ಹೆಚ್ಚುವರಿ ಇಎಂಐ, ಅಂದರೆ ವರ್ಷಕ್ಕೆ 12 ಕಂತುಗಳನ್ನು ಕಟ್ಟುವ ಬದಲಿಗೆ 13 ಕಂತುಗಳನ್ನು, ಪಾವತಿಸಬೇಕು. ಹೀಗೆ ಮಾಡಿದಾಗ ₹ 65 ಲಕ್ಷ ಬಡ್ಡಿ ಕಟ್ಟುವ ಬದಲಿಗೆ ಒಟ್ಟು ಸಾಲಕ್ಕೆ ನೀವು ₹ 26,82,514 ರೂಪಾಯಿ ಮಾತ್ರ ಬಡ್ಡಿಯ ರೂಪದಲ್ಲಿ ಪಾವತಿಸುತ್ತೀರಿ.

4. ಹೆಚ್ಚು ಬಡ್ಡಿ ಇರುವ ಸಾಲ ತೀರಿಸಲು ಕಡಿಮೆ ಬಡ್ಡಿಯ ಸಾಲ ಪಡೆಯಿರಿ: ಹೆಚ್ಚು ಬಡ್ಡಿಯ ಸಾಲ ತೀರಿಸಲು ಕಡಿಮೆ ಬಡ್ಡಿಯ ಸಾಲ ಪಡೆದರೆ ತಪ್ಪಿಲ್ಲ. ಉದಾಹರಣೆಗೆ ನೀವು ₹ 1 ಲಕ್ಷ ಕ್ರೆಡಿಟ್ ಕಾರ್ಡ್ ಸಾಲ ಪಾವತಿಸಬೇಕು ಎಂದಿಟ್ಟುಕೊಳ್ಳಿ. ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದಿದ್ದರೆ ವಾರ್ಷಿಕ ಶೇ 35ರಿಂದ ಶೇ 45ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ.‌

ಆಗ ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು ಶೇ 13ರಿಂದ ಶೇ 16ರ ಬಡ್ಡಿ ದರದಲ್ಲಿ ಸಿಗುವ ವೈಯಕ್ತಿಕ ಸಾಲವನ್ನು ಪಡೆಯಬಹುದು. ಇದರಿಂದ ನಿಮಗೆ ಬಡ್ಡಿ ಹೊರೆ ಕಡಿಮೆಯಾಗುತ್ತದೆ. ಶೇ 35ರಿಂದ ಶೇ 45ರಷ್ಟು ಬಡ್ಡಿ ಕಟ್ಟುವ ಬದಲು ವೈಯಕ್ತಿಕ ಸಾಲಕ್ಕೆ ಶೇ 13ರಿಂದ ಶೇ 16ರ ಬಡ್ಡಿ ದರ ಪಾವತಿಸಬೇಕಾಗುತ್ತದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು