ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ಸಾಕ್ಷರತೆ | ಆರೋಗ್ಯ ವಿಮೆ: 7 ಅಂಶ ಗಮನಿಸಿ

Published : 26 ಡಿಸೆಂಬರ್ 2022, 0:00 IST
ಫಾಲೋ ಮಾಡಿ
Comments

ದುಡಿಯೋ ದುಡ್ಡನ್ನೆಲ್ಲಾ ಆಸ್ಪತ್ರೆಗೆ ಕಟ್ಟೋ ಬದಲು, ಅದರಲ್ಲಿ ಸ್ವಲ್ಪ ಹಣ ಆರೋಗ್ಯ ವಿಮೆಗೆ ಅಂತ ಮೀಸಲಿಟ್ರೆ ಒಳ್ಳೇದಲ್ವಾ..? ಹೌದು ಆರೋಗ್ಯ ವಿಮೆ ಪ್ರತಿಯೊಂದು ಕುಟುಂಬದ ಆಪ್ತಮಿತ್ರ. ಆದರೆ ಅನೇಕರಿಗೆ ಸರಿಯಾದ ವಿಮೆ ಮಾಡಿಸುವುದು ಹೇಗೆ ಎನ್ನುವುದು ತಿಳಿದಿಲ್ಲ. ಆರೋಗ್ಯ ವಿಮೆ ಮಾಡಿಸುವಾಗ ಪ್ರತಿಯೊಬ್ಬರೂ ಗಮನಿಸಿಕೊಳ್ಳಬೇಕಾದ 7 ಅಂಶಗಳ ಬಗ್ಗೆ ವಿವರವಾದ ಮಾಹಿತಿ ತಿಳಿಯೋಣ.

1. ಕೋ-ಪೇ ನಿಯಮ ಗೊತ್ತಿರಲಿ: ಆರೋಗ್ಯ ವಿಮೆ ಪಡೆದುಕೊಳ್ಳುವಾಗ ಸಾಧ್ಯವಾದಷ್ಟು ಕೋ-ಪೇ ನಿಯಮ (co-pay clause) ಇಲ್ಲದ ಇನ್ಶೂರೆನ್ಸ್ ಖರೀದಿಸುವುದು ಸೂಕ್ತ. ಕೋ-ಪೇ ನಿಯಮ ಇರುವ ಇನ್ಶೂರೆನ್ಸ್ ಖರೀದಿಸಿದರೆ ಕ್ಲೇಮ್‌ನ ಸಂದರ್ಭದಲ್ಲಿ ನಿಮ್ಮ ಜೇಬಿಗೆ ಹೊರೆಯಾಗುತ್ತದೆ. ಕೋ-ಪೇ ಅಂದ್ರೆ ಕನ್ನಡದಲ್ಲಿ ಸಹಪಾವತಿ ಎಂದರ್ಥ. ಇನ್ಶೂರೆನ್ಸ್ ಕ್ಲೇಮ್ ಮಾಡುವ ಸಂದರ್ಭದಲ್ಲಿ ವಿಮೆ ಕಂಪನಿಯ ಜೊತೆಗೆ ನೀವು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತೆ ಎಂದು ಈ ನಿಯಮ ಹೇಳುತ್ತದೆ. ಉದಾಹರಣೆಗೆ, ವ್ಯಕ್ತಿಯೊಬ್ಬರು ಇನ್ಶೂರೆನ್ಸ್ ಕಂಪನಿಯೊಂದರಿಂದ ಕೋ-ಪೇ ನಿಯಮದಡಿ ವಿಮೆ ಪಡೆದಿದ್ದು, ಆನಾರೋಗ್ಯದ ಕಾರಣ ಕ್ಲೇಮ್ ಗಾಗಿ ಅರ್ಜಿಸಲ್ಲಿಸಿದ್ದಾರೆ ಎಂದು ಭಾವಿಸಿಕೊಳ್ಳಿ. ಒಟ್ಟು ಕ್ಲೇಮ್ ಮೊತ್ತ ₹ 1 ಲಕ್ಷ ಆಗಿದ್ದು ಕೋ-ಪೇ ನಿಯಮದಂತೆ ಇನ್ಶೂರೆನ್ಸ್ ಪಡೆಯುವ ವೇಳೆ ಶೇ 80 ರಷ್ಟನ್ನು ಕಂಪನಿ, ಶೇ 20 ರಷ್ಟು ನೀವು ಪಾವತಿಸುತ್ತೇವೆ ಎಂದು ಒಪ್ಪಿದ್ದೀರಿ ಎಂದುಕೊಳ್ಳಿ. ಹೀಗಾದಾಗ 80 ಸಾವಿರವನ್ನು ಇನ್ಶೂರೆನ್ಸ್ ಕಂಪನಿ ಕಟ್ಟುತ್ತದೆ, ಇನ್ನುಳಿದ ₹ 20 ಸಾವಿರ ಕ್ಲೇಮ್ ಮೊತ್ತವನ್ನು ನೀವು ಪಾವತಿಸಬೇಕಾಗುತ್ತದೆ.

2. ಜೋನಲ್ ಕೋ-ಪೇ ನಿಯಮ ತಿಳಿದಿರಿ: ನಿರ್ದಿಷ್ಟ ವಲಯದಿಂದ ಹೊರಗೆ ಚಿಕಿತ್ಸೆ ಪಡೆದರೆ ಸಹಪಾವತಿ ಅಂದರೆ, ಕೋ-ಪೇ ಮಾಡಬೇಕಾಗುತ್ತದೆ ಎಂದು ಈ ನಿಯಮ ಹೇಳುತ್ತದೆ. ಉದಾಹರಣೆಗೆ ವಿಮೆ ಪಡೆಯುವಾಗ ಮೈಸೂರಿನ ವ್ಯಾಪ್ತಿಯಲ್ಲಿ ಮಾತ್ರ ಚಿಕಿತ್ಸೆಗೆ ಪೂರ್ತಿ ಕ್ಲೇಮ್ ಹಣ ನೀಡುವುದಾಗಿ ಇನ್ಶೂರೆನ್ಸ್ ಕಂಪನಿ ಹೇಳಿರುತ್ತದೆ. ಅದಕ್ಕೆ ನೀವು ಒಪ್ಪಿಗೆ ಸೂಚಿಸಿ ಇನ್ಶೂರೆನ್ಸ್ ಪಡೆದಿರುತ್ತೀರಿ. ಹೀಗಿರುವಾಗ ಬೆಂಗಳೂರಿನಲ್ಲಿ ನೀವು ಚಿಕಿತ್ಸೆ ಪಡೆಯುವ ಸಂದರ್ಭ ಬಂದರೆ ಕೋ-ಪೇ ನಿಯಮ ಜಾರಿಗೆ ಬರುತ್ತದೆ. ಒಟ್ಟು ಕ್ಲೇಮ್ ಮೊತ್ತದಲ್ಲಿ ಶೇ 15 , ಶೇ 20 ಅಥವಾ ಶೇ 30 ರಷ್ಟನ್ನು (ನಿಮ್ಮ ಪಾಲಿಸಿಯಲ್ಲಿರುವಂತೆ) ನೀವು ಪಾವತಿಸಬೇಕಾಗುತ್ತದೆ. ಕೆಲ ಪಾಲಿಸಿಗಳಲ್ಲಿ ಈ ನಿಯಮ ಇರುತ್ತದೆ, ಕೆಲ ಪಾಲಿಸಿಗಳಲ್ಲಿ ಇರುವುದಿಲ್ಲ.

3. ಪರಿಗಣಿಸದ ಅಂಶಗಳ ಬಗ್ಗೆ ಗಮನಹರಿಸಿ: ಆರೋಗ್ಯ ವಿಮೆಯಲ್ಲಿ ಪರಿಗಣಿಸದ ಅಂಶಗಳು ಎಂದರೆ ಇನ್ಶೂರೆನ್ಸ್‌ನ ವ್ಯಾಪ್ತಿಗೆ ಒಳಪಡದ ಅಂಶಗಳು ಎಂದರ್ಥ. ಇನ್ಶೂರೆನ್ಸ್ ಆಯ್ಕೆ ಮಾಡಿಕೊಳ್ಳುವಾಗ ಸಾಮಾನ್ಯವಾಗಿ ಪರಿಗಣಿಸದ ಅಂಶಗಳ ಬಗ್ಗೆ (Common Exclusions) ಸರಿಯಾದ ಮಾಹಿತಿ ಪಡೆದು ಮುನ್ನಡೆಯಬೇಕು. ಇಲ್ಲವಾದಲ್ಲಿ ಪರಿಹಾರ ಮೊತ್ತ (ಕ್ಲೇಮ್‌ ಸೆಟಲ್ಮೆಂಟ್) ಪಡೆಯುವಾಗ ಸಮಸ್ಯೆಯಾಗುತ್ತದೆ. ಮದ್ಯಪಾನ, ಧೂಮಪಾನ, ಡ್ರಗ್ಸ್ ಸೇವನೆಯಿಂದ ಬರುವ ಜೀವನಶೈಲಿ ಕಾಯಿಲೆಗಳಿಗೆ ಇನ್ಶೂರೆನ್ಸ್ ಕವರೇಜ್ ಸಿಗುವುದಿಲ್ಲ. ಕೆಲ ಕಂಪನಿಗಳು ಇನ್ಶೂರೆನ್ಸ್ ಕವರೇಜ್ ನೀಡುತ್ತವೆ ಆದರೆ ಪ್ರೀಮಿಯಂ ಜಾಸ್ತಿ ಇರುತ್ತದೆ. ಅಪಘಾತದ ಸಂದರ್ಭ ಹೊರತುಪಡಿಸಿ ಇನ್ನುಳಿದ ಸಂದರ್ಭಗಳಲ್ಲಿ ಕಾಸ್ಮೆಟಿಕ್ ಸರ್ಜರಿ, ಡೆಂಟಲ್ ಸರ್ಜರಿಗಳಿಗೆ ಇನ್ಶೂರೆನ್ಸ್ ಅನುಕೂಲ ಸಿಗುವುದಿಲ್ಲ. ಸಾಹಸ ಕ್ರೀಡೆಯಿಂದಾಗುವ ಅಪಘಾತ, ಯುದ್ಧದಲ್ಲಿ ಗಾಯಗೊಳ್ಳುವುದು, ಉದ್ದೇಪೂರ್ವಕವಾಗಿ ಗಾಯಗಳನ್ನು ಮಾಡಿಕೊಳ್ಳುವುದು, ಹುಟ್ಟಿನಿಂದಲೇ ಇರುವ ಕಾಯಿಲೆ, ಅಂಗವೈಕಲ್ಯ, ಎಚ್‌ಐವಿ ಸೇರಿದಂತೆ ಇನ್ನು ಕೆಲ ಸಮಸ್ಯೆಗಳನ್ನು ಇನ್ಶೂರೆನ್ಸ್ ಕಂಪನಿಗಳು ಪರಿಗಣಿಸುವುದಿಲ್ಲ.

4. ಕಾಯುವಿಕೆ ಅವಧಿ (Waiting Period): ವ್ಯಕ್ತಿಯು ಆರೋಗ್ಯ ವಿಮೆ ಪಡೆದ ಬಳಿಕ ಕೆಲ ಚಿಕಿತ್ಸೆಗಳಿಗೆ ಹಣಕಾಸಿನ ನೆರವು ಪಡೆಯಲು ಕಾಲಮಿತಿ ನಿಗದಿಪಡಿಸಲಾಗುತ್ತದೆ. ಇದಕ್ಕೆ ಇನ್ಶೂರೆನ್ಸ್ ಪರಿಭಾಷೆಯಲ್ಲಿ ವೇಯ್ಟಿಂಗ್ ಪೀರಿಯಡ್ ಎನ್ನುತ್ತಾರೆ. ಉದಾಹರಣೆಗೆ ನೀವು ಇಂದು ಇನ್ಶೂರೆನ್ಸ್ ಪಡೆದುಕೊಂಡಿದ್ದು ಐದು ದಿನಗಳ ನಂತರ ಅಸ್ತಮಾ ಇರುವುದು ಗೊತ್ತಾಗುತ್ತದೆ. ಹೀಗಿದ್ದಾಗ ನಿಮಗೆ ತಕ್ಷಣಕ್ಕೆ ಅಸ್ತಮಾ ಚಿಕಿತ್ಸೆಗೆ ವಿಮೆ ಸಿಗುವುದಿಲ್ಲ. ಚಿಕಿತ್ಸೆ ಕೊಡಲು ಕನಿಷ್ಠ 30 ರಿಂದ 60 ದಿನಗಳ ವೇಯ್ಟಿಂಗ್ ಪೀರಿಯಡ್ ಇರುತ್ತದೆ. ಕೆಲ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಒಂದು ವರ್ಷದಿಂದ ಎರಡು ವರ್ಷಗಳ ವೇಯ್ಟಿಂಗ್ ಪೀರಿಯಡ್ ಅನ್ವಯಿಸುತ್ತದೆ.

5. ಮಿತಿಗಳಿಲ್ಲದ ವಿಮೆ ಪಡೆಯಿರಿ: ನೀವು ಪಡೆದಿರುವ ಇನ್ಶೂರೆನ್ಸ್ ಕವರೇಜ್ ಮೊತ್ತ ಆಧರಿಸಿ ಆಸ್ಪತ್ರೆ ವೆಚ್ಚಗಳಾದ ರೂಮ್‌ ಬಾಡಿಗೆ, ನರ್ಸಿಂಗ್ ಚಾರ್ಚ್, ಡಾಕ್ಟರ್ ಫೀಸ್, ಆಂಬ್ಯುಲೆನ್ಸ್ ಶುಲ್ಕಕ್ಕೆ ಇನ್ಶೂರೆನ್ಸ್ ಕಂಪನಿ ಇಂತಿಷ್ಟು ಹಣ ಎಂದು ನಿಗದಿ ಮಾಡುತ್ತದೆ. ಆ ನಿಗದಿತ ಹಣಕ್ಕಿಂತ ಹೆಚ್ಚು ಮೊತ್ತದ ಸೇವೆ ಬೇಕು ಎಂದು ನೀವು ಬಯಸಿದಲ್ಲಿ ಅದಕ್ಕೆ ನೀವೇ ಹಣ ಪಾವತಿಸಬೇಕಾಗುತ್ತದೆ. ಹಾಗಾಗಿ ಈ ರೀತಿಯ ಮಿತಿಗಳನ್ನು ಹೇರದ ವಿಮೆ ಪಡೆಯುವುದು ಸೂಕ್ತ.

6. ನಗದು ರಹಿತ ಕ್ಲೇಮ್ ವ್ಯವಸ್ಥೆ: ಚಿಕಿತ್ಸೆಯ ಖರ್ಚು ವೆಚ್ಚಗಳನ್ನು ಇನ್ಶೂರೆನ್ಸ್ ಕಂಪನಿ ನೇರವಾಗಿ ಆಸ್ಪತ್ರೆಗೆ ಪಾವತಿಸುತ್ತದೆ. ಇಲ್ಲಿ ನೀವು ಆಸ್ಪತ್ರೆಗೆ ಮೊದಲು ಹಣ ಕಟ್ಟಿ ನಂತರ ಇನ್ಶೂರೆನ್ಸ್ ಕಂಪನಿಯಿಂದ ಆ ಹಣ ಹಿಂಪಡೆಯುವ ಅಗತ್ಯವಿರುವುದಿಲ್ಲ. ಈ ವ್ಯವಸ್ಥೆ ಬೇಕಾದಲ್ಲಿ ನೀವು ಆರೋಗ್ಯ ಸೇವೆ ಒದಗಿಸಲು ಇನ್ಶೂರೆನ್ಸ್ ಕಂಪನಿ ಒಡಂಬಡಿಕೆ ಮಾಡಿಕೊಂಡಿರುವ ನೆಟ್ ವರ್ಕ್ ಆಸ್ಪತ್ರೆಗೆ ದಾಖಲಾಗಬೇಕು. ಇಂತಹ ಸಂದರ್ಭದಲ್ಲಿ ಕ್ಲೇಮ್ ಸೆಟಲ್ಮೆಂಟ್ ತುರ್ತಾಗಿ ಆಗುತ್ತದೆ.

7. ಮರುಪಾವತಿ ಕ್ಲೇಮ್ ವ್ಯವಸ್ಥೆ: ನೀವು ಆಸ್ಪತ್ರೆಗೆ ದಾಖಲಾಗಿ ಖರ್ಚು ವೆಚ್ಚಗಳಿಗೆ ನಿಮ್ಮ ಕೈಯಿಂದಲೇ ಹಣ ನೀಡಿ ಬಳಿಕ ಆ ಖರ್ಚಿಗೆ ಪೂರಕ ದಾಖಲೆಗಳನ್ನು ಒದಗಿಸಿ 40 ದಿನಗಳ ಒಳಗಾಗಿ ಹಣವನ್ನು ಇನ್ಶೂರೆನ್ಸ್ ಕಂಪನಿಯಿಂದ ಹಿಂಪಡೆದುಕೊಳ್ಳುವ ಪದ್ಧತಿಗೆ ಮರು ಪಾವತಿ ಎಂದು ಕರೆಯಲಾಗುತ್ತದೆ. ಇಲ್ಲಿ ನಿಮಗಿಷ್ಟವಾದ ಆಸ್ಪತ್ರೆಗೆ ನೀವು ದಾಖಲಾಗಬಹುದು. ಆದರೆ ಕ್ಲೇಮ್ ಸೆಟಲ್ಮೆಂಟ್ ಪ್ರಕ್ರಿಯೆ ಕೊಂಚ ತಡವಾಗುತ್ತದೆ.

ಸತತ ಮೂರನೇ ವಾರವೂ ಕುಸಿತ

ಭಾರತೀಯ ಷೇರುಪೇಟೆ ಸೂಚ್ಯಂಕಗಳು ಸತತ ಮೂರನೇ ವಾರ ಕುಸಿತ ದಾಖಲಿಸಿವೆ. ಡಿಸೆಂಬರ್ 23ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ. ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.43 ರಷ್ಟು ಇಳಿಕೆಯಾಗಿದೆ. ನಿಫ್ಟಿ ಶೇ 2.52 ರಷ್ಟು ತಗ್ಗಿದೆ. ಇನ್ನು ಡಿಸೆಂಬರ್ ತಿಂಗಳನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಎರಡೂ ಸೂಚ್ಯಂಕಗಳು ಈವರೆಗೆ ತಲಾ ಶೇ 5 ರಷ್ಟು ಕುಸಿತ ಕಂಡಿವೆ. ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ, ಆರ್ಥಿಕ ಹಿಂಜರಿತದ ಭೀತಿ ಸೇರಿ ಹಲವು ಅಂಶಗಳು ಷೇರುಪೇಟೆ ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 10 ರಷ್ಟು ಕುಸಿದಿದೆ. ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 9, ರಿಯಲ್ ಎಸ್ಟೇಟ್ ಶೇ 7, ಲೋಹ ಸೂಚ್ಯಂಕ ಶೇ 6.4 ರಷ್ಟು ಕುಸಿದಿವೆ. ಆದರೆ ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 15 ರಷ್ಟು ಜಿಗಿದಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 979.48 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 8,545.06 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್‌ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ವಿಲ್ಮರ್, ಅದಾನಿ ಟ್ರಾನ್ಸ್‌ಮಿಷನ್, ನೈಕಾ, ಜೊಮಾಟೊ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಟಾಟಾ ಮೋಟರ್ಸ್–ಡಿವಿಆರ್, ಅದಾನಿ ಗ್ರೀನ್ ಎನರ್ಜಿ, ಅಂಬುಜಾ ಸಿಮೆಂಟ್ಸ್ ಮತ್ತು ಟಾಟಾ ಮೋಟರ್ಸ್ ಶೇ 10 ರಿಂದ ಶೇ 21 ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಜಾಗತಿಕವಾಗಿ ಮತ್ತು ಭಾರತದಲ್ಲಿ ಕೋವಿಡ್ ಯಾವ ಸ್ವರೂಪ ಪಡೆಯಲಿದೆ ಎನ್ನುವುದು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿದೆ. ಉಳಿದಂತೆ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಗತಿ ನಿರ್ಧರಿಸಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT