ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್ ಮನಿ ಅಂದ್ರೆ...

Last Updated 18 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಅರ್ಥವ್ಯವಸ್ಥೆ ತೀರಾ ಮಂದಗತಿಗೆ ತಿರುಗಿದಾಗ ಅಥವಾ ಹಿಂಜರಿತದ ತೆಕ್ಕೆಗೆ ಸಿಲುಕಿದಾಗ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರಗಳು ‘ಹೆಲಿಕಾಪ್ಟರ್ ಮನಿ’ ತಂತ್ರದ ಮೊರೆ ಹೋಗಬಹುದು. ಅಂದಹಾಗೆ, ‘ಹೆಲಿಕಾಪ್ಟರ್ ಮನಿ’ ಅಂದರೆ ಒಂದು ಹೆಲಿಕಾಪ್ಟರ್ ಮೂಲಕ ಹಣದ ಕಂತೆಗಳನ್ನು ತಂದು, ಜನವಸತಿ ಪ್ರದೇಶಗಳ ಮೇಲೆ ಅದನ್ನು ಎಸೆಯುವುದು ಎಂದು ಅರ್ಥ ಮಾಡಿಕೊಳ್ಳಬೇಡಿ. ‘ಹೆಲಿಕಾಪ್ಟರ್ ಮನಿ’ ಎನ್ನುವುದು ಆರ್ಥಿಕತೆಯಲ್ಲಿ ತುಸು ಅಸಾಂಪ್ರದಾಯಿಕ ಮಾರ್ಗ. ಈ ಎರಡು ಪದಗಳನ್ನು 1969ರಲ್ಲಿ ಮೊದಲು ಬಳಸಿದ್ದು ಅಮೆರಿಕದ ಅರ್ಥಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ಮನ್. ಇವರು 1976ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದರು.

ಹೆಲಿಕಾಪ್ಟರ್ ಮನಿ ತಂತ್ರವನ್ನು ಸರ್ಕಾರಗಳು ಕೊನೆಯ ಅಸ್ತ್ರವೆಂಬಂತೆ ಪ್ರಯೋಗಿಸಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಈ ತಂತ್ರವನ್ನು ಪ್ರಯೋಗಿಸುವುದು ಅಂದರೆ, ಜನರ ಕೈಯಲ್ಲಿ ಹೆಚ್ಚು ಹೆಚ್ಚು ಹಣ ಚಲಾವಣೆ ಆಗುವಂತೆ ಮಾಡುವುದು. ಸರ್ಕಾರವು ತನ್ನ ವೆಚ್ಚಗಳನ್ನು ಹೆಚ್ಚಿಸುವ ಮೂಲಕ ಅಥವಾ ತೆರಿಗೆಗಳನ್ನು ಕಡಿತಗೊಳಿಸುವ ಮೂಲಕ ಜನರ ಕೈಯಲ್ಲಿ ಹೆಚ್ಚು ಹಣ ಸಿಗುವಂತೆ ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ಹಣವನ್ನು ಮುದ್ರಿಸಿ, ಸಾರ್ವಜನಿಕರಿಗೆ ಅದನ್ನು ಹಂಚಬಹುದು. ಹಣವನ್ನು ಸಾರ್ವಜನಿಕರ ಖಾತೆಗೆ ನೇರವಾಗಿ ಜಮಾ ಮಾಡುವ ಕೆಲಸವನ್ನೂ ಮಾಡಬಹುದು.

ಯಾವುದೇ ದೇಶ ತನ್ನ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡಲು ಈ ತಂತ್ರದ ಮೊರೆ ಹೋಗುವ ತೀರ್ಮಾನ ಕೈಗೊಂಡಾಗ, ಆ ದೇಶದ ಕೇಂದ್ರೀಯ ಬ್ಯಾಂಕ್‌ (ನಮ್ಮಲ್ಲಿ ರಿಸರ್ವ್‌ ಬ್ಯಾಂಕ್‌ ಇದೆಯಲ್ಲ? ಅದೇ ರೀತಿಯಲ್ಲಿ ಆಯಾ ದೇಶಗಳು ಹೊಂದಿರುವ ಬ್ಯಾಂಕ್‌) ಅಲ್ಲಿನ ಸರ್ಕಾರಕ್ಕೆ ಹಣ ವರ್ಗಾವಣೆ ಮಾಡುತ್ತವೆ. ಈ ಹಣವನ್ನು ಸರ್ಕಾರಗಳು ಕೇಂದ್ರೀಯ ಬ್ಯಾಂಕ್‌ಗೆ ಹಿಂದಿರುಗಿಸಬೇಕಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ಹಣವನ್ನು ಮುದ್ರಿಸಿ, ಆ ಹಣವು ಜನರ ಕೈಗೆ ಸಿಗುವಂತೆ ಮಾಡಿ, ಜನ ಆ ಹಣ ಬಳಸಿ ಹೆಚ್ಚೆಚ್ಚುಖರ್ಚು ಮಾಡುವಂತೆ, ವಸ್ತುಗಳನ್ನು ಕೊಳ್ಳುವಂತೆ ಮಾಡುವುದು ಸರ್ಕಾರಗಳ ಉದ್ದೇಶ ಆಗಿರುತ್ತದೆ. ಹೀಗೆ ಮಾಡುವ ಮೂಲಕ, ಮಂದ ಗತಿಯ ಆರ್ಥಿಕತೆಯನ್ನು ಪುನಃ ಚೇತರಿಕೆಯ ಹಳಿಗೆ ತರಬಹುದು ಎಂಬುದು ‘ಹೆಲಿಕಾಪ್ಟರ್ ಮನಿ’ ಪರ ವಾದ ಮಾಡುವವರ ನಿಲುವು.

ಇದರಿಂದ ಹಣದುಬ್ಬರ ಏರಿಕೆಯಾಗಬಹುದು. ಆದರೆ ಜನರ ಹಾಹಾಕಾರವನ್ನು ತಾತ್ಕಾಲಿಕವಾಗಿ ತಪ್ಪಿಸಲು ಇದೊಂದು ದಾರಿ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.

(ಆಧಾರ: ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT